Thursday, December 7, 2023

ಮರೆತೇನೆಂದರ ಮರೆಯಲಿ ಹ್ಯಾಂಗ..?

Follow Us

ಕಥೆಯನ್ನೇ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡಿದ್ದ ಅಬ್ಬಾಸ್ ಮೇಲಿನಮನಿ ಅವರು ಚರ್ಚೆಗೊಳಪಡಬಲ್ಲ ಮುಸ್ಲಿಂ ಸಂವೇದನೆಯ ಬಹುಮುಖ್ಯ ಕಥೆಗಾರರಲ್ಲಿ ಒಬ್ಬರಾಗಿದ್ದರು. ಅಬ್ಬಾಸ್ ಮೇಲಿನಮನಿ ಅವರು ಇತರರಿಗಿಂತ ಭಿನ್ನವಾದ ವ್ಯಕ್ತಿತ್ವ ಹೊಂದಿದ್ದರು. ಅವರಿಗೆ ಬರಹ ಎನ್ನುವುದು ಲೋಕದ ಕುರಿತಾದ ತಮ್ಮ ತಿಳಿವಳಿಕೆಯನ್ನು ಓದುಗರಿಗೆ ಹಂಚಿಕೊಳ್ಳುವ ಮಾಧ್ಯಮವಾಗಿತ್ತೇ ವಿನಃ ಅದೇ ಎಲ್ಲವೂ ಆಗಿರಲಿಲ್ಲ!

     ಅಕ್ಷರ ನಮನ      

♦ ಕಲ್ಲೇಶ್ ಕುಂಬಾರ್, ಹಾರೂಗೇರಿ
ಕತೆಗಾರರು, ವಿಮರ್ಶಕರು
newsics.com@gmail.com


 ನ
ಮ್ಮ ನಡುವಿನ ಹಿರಿಯ ಕಥೆಗಾರ ಅಬ್ಬಾಸ್ ಮೇಲಿನಮನಿ ಇನ್ನಿಲ್ಲವೆಂಬ ಸುದ್ದಿಯನ್ನು ಕೇಳಿದಾಗಿನಿಂದ ನನ್ನೊಳಗೆ ಇನ್ನಿಲ್ಲದ ನಿರ್ವಾತವೊಂದು ಆವರಿಸಿಕೊಂಡು ಬಿಟ್ಟಿದೆ. ಆ ಕ್ಷಣದಲ್ಲಿಯೇ ನನ್ನ ಕಣ್ಣ ಮುಂದಿನ ಎಲ್ಲವೂ ನಿಧ ನಿಧಾನವಾಗಿ ಕರ ಕರಗಿ ಶೂನ್ಯದೊಳಗೆ ಲೀನವಾಗಿಬಿಡುತ್ತಿದೆಯೇನೋ ಎಂಬ ಭಾವ ಕಾಡುತ್ತಿದೆ. ಈಗ, ಬರೀ ವಾರ ಹತ್ತು ದಿನಗಳ ಹಿಂದಷ್ಟೇ ಗೆಳೆಯ ಮಹಾದೇವ ಬಸರಕೋಡ ಅವರು ಹೊರತರಲಿರುವ ಕೃತಿಯೊಂದಕ್ಕೆ ನಾನು ‘ಬೆನ್ನುಡಿ’ಯನ್ನು ಬರೆದುಕೊಡುವ ವಿಚಾರದ ನೆಪದಲ್ಲಿ ಫೋನ್ ಮಾಡಿದ್ದ ಅಬ್ಬಾಸ್ ಅವರು ಆ ದಿನ ಸುಮಾರು ತಾಸೊತ್ತಿನವರೆಗೂ ನನ್ನೊಂದಿಗೆ ಮಾತನಾಡಿದ್ದರು. ನಮ್ಮಿಬ್ಬರ ಆ ಮಾತುಕತೆಯಲ್ಲಿ ಸಾಹಿತ್ಯಿಕ ವಿಚಾರಕ್ಕಿಂತ ಹೆಚ್ಚಾಗಿ ಬದುಕಿಗೆ ಸಂಬಂಧಿಸಿದ ಖಾಸಗಿ ವಿಚಾರಗಳೇ ತುಂಬಿಕೊಂಡಿದ್ದವು. ಮತ್ತು, ಅವೆಲ್ಲವೂ ಮಾನವೀಯ ನೆಲೆಯ ಮೇಲೆಯೇ ಮಾತನಾಡಿಕೊಂಡ ವಿಷಯಗಳಾಗಿದ್ದವು. ಏಕೆಂದರೆ, ಬರಹಗಾರ ಅಬ್ಬಾಸ್ ಅವರೊಳಗೆ ಮನುಷ್ಯತ್ವ ಸದಾ ಜಾಗೃತವಾಗಿರುತ್ತಿತ್ತು. ಈ ಹೊತ್ತಿನ ದಿನಮಾನಗಳಲ್ಲಿ ಬರಹಗಾರನಿಗೆ ಬರವಣಿಗೆ ಎಂಬುದು ತನ್ನನ್ನು ತಾನು ವಿಜೃಂಭಿಸಿಕೊಳ್ಳುವ ಸಾಧನವಾಗಿರುವಾಗ ಅಂಥ ಬರಹಗಾರರಲ್ಲಿ ಮನುಷ್ಯತ್ವವನ್ನು ಶೋಧಿಸುವುದು ಅಸಾಧ್ಯದ ಮಾತು ಎನ್ನಬೇಕು. ಆದರೆ, ಅಬ್ಬಾಸ್ ಮೇಲಿನಮನಿ ಅವರು ಇತರರಿಗಿಂತ ಭಿನ್ನವಾದ ವ್ಯಕ್ತಿತ್ವ ಹೊಂದಿದ್ದರು. ಅವರಿಗೆ ಬರಹ ಎನ್ನುವುದು ಲೋಕದ ಕುರಿತಾದ ತಮ್ಮ ತಿಳಿವಳಿಕೆಯನ್ನು ಓದುಗರಿಗೆ ಹಂಚಿಕೊಳ್ಳುವ ಮಾಧ್ಯಮವಾಗಿತ್ತೇ ವಿನಃ ಅದೇ ಎಲ್ಲವೂ ಆಗಿರಲಿಲ್ಲ! ಹೀಗಾಗಿ, ಅವರು ಬರಹಗಾರರಾಗಿದ್ದುಕೊಂಡೂ ಮನುಷ್ಯರಾಗಿದ್ದರು! ಅಂತೆಯೇ, ಅವರು ಲೋಕದ ಸಂಗತಿಗಳನ್ನು ಅವಲೋಕಿಸುವುದಷ್ಟೇ ಅಲ್ಲದೇ ವಾಸ್ತವದಲ್ಲಿ ಮನುಷ್ಯತ್ವವನ್ನು ಅಳವಡಿಸಿಕೊಂಡಿದ್ದರು. ಆ ಗುಣವೇ ಅವರನ್ನು ಬರಹ ಮತ್ತು ಖಾಸಗಿ ಬದುಕಿನಲ್ಲಿ ಎತ್ತರೆತ್ತರಕ್ಕೆ ಕೊಂಡೊಯ್ದಿತು ಎಂದರೆ ಅತಿಶಯೋಕ್ತಿಯಾಗಲಾರದೇನೊ!

ಕಥೆಗಾರ ಅಬ್ಬಾಸ್ ಅವರೊಂದಿಗೆ ಕಲ್ಲೇಶ್ ಕುಂಬಾರ್, ಸುರೇಶ್ ರಾಜಮಾನೆ, ನಾಗರಾಜ್ ಕಾಂಬಳೆ ಮತ್ತು ರಾಜಶೇಖರ ಹಳೇಮನಿ.

ಪತ್ರ ಸಂಬಂಧ…
ಕಥೆಗಾರ ಅಬ್ಬಾಸ್ ಮೇಲಿನಮನಿ ಅವರೊಂದಿಗೆ ನನ್ನ ಒಡನಾಟ ಹೇಗೆ ಶುರುವಾಯಿತು ಮತ್ತು ನನ್ನೊಳಗೊಬ್ಬ ಬರಹಗಾರ ಹೇಗೆ ರೂಪಗೊಂಡ ಎಂಬ ಸಂಗತಿಯೇ ನನಗೆ ಅಚ್ಚರಿಯನ್ನುಂಟು ಮಾಡುತ್ತದೆ! ಆದರೆ, ಇದೆಲ್ಲವೂ ಶುರುವಾದದ್ದು ಮಾತ್ರ ಈಗ ಹತ್ತಿಪ್ಪತ್ತು ವರ್ಷಗಳ ಹಿಂದೆ. ನಾನು ಹೈಸ್ಕೂಲ್ ನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಸಾಹಿತ್ಯದ ಓದಿನ ಬಗ್ಗೆ ನನಗೇನೋ ವಿಪರೀತ ಹುಚ್ಚು. ಆಗಲೇ ನಾನು ಅಬ್ಬಾಸ್ ಅವರ ಕಥೆಗಳನ್ನು ಶಾಲಾ ಗ್ರಂಥಾಲಯಕ್ಕೆ ಬರುತ್ತಿದ್ದ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆ ಯ ರವಿವಾರದ ‘ಸಾಪ್ತಾಹಿಕ ಸೌರಭ’ ದಿನಪತ್ರಿಕೆಯಲ್ಲಿ ಓದುತ್ತಿದ್ದೆ. ಆ ಒಂದು ಸಣ್ಣ ಎಳೆ ನಮ್ಮಿಬ್ಬರ ನಡುವಿನ ಸ್ನೇಹ ಸಂಬಂಧ ಬೆಸೆದುಕೊಳ್ಳುವುದಕ್ಕೆ ಕಾರಣವಾಯಿತು. ಆಗಾಗ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಅವರ ಕಥೆಗಳನ್ನು ಓದಿ, ಕಥೆಯ ಕೊನೆಯಲ್ಲಿ ಕೊಡುತ್ತಿದ್ದ ಅವರ ವಿಳಾಸಕ್ಕೆ ಪತ್ರ ಬರೆದು ಅಭಿಪ್ರಾಯವನ್ನು ತಿಳಿಸುವುದನ್ನು ರೂಢಿಸಿಕೊಂಡಿದ್ದೆ. ಅವರೂ ಸಹ ನನಗೆ ಪತ್ರ ಬರೆದು ತಮ್ಮ ಸಂತೋಷವನ್ನು ಹಂಚಿಕೊಳ್ಳುವುದನ್ನು ರೂಢಿಸಿಕೊಂಡಿದ್ದರು! ನಮ್ಮಿಬ್ಬರ ನಡುವಿನ ಈ ಕ್ರಿಯೆಯು ಪರೋಕ್ಷವಾಗಿ ನನ್ನನ್ನು ಬರಹಗಾರನನ್ನಾಗಿ ರೂಪಿಸಿತೇನೊ ಎಂಬ ಭಾವನೆ ಮತ್ತು ನಂಬಿಕೆ ನನ್ನೊಳಗೆ ಈಗಲೂ ಇದೆ. ಆದರೆ, ಕ್ರಮೇಣ ಪತ್ರ ಬರೆಯುವ ಹವ್ಯಾಸ ಕೊನೆಗೊಂಡಿತಾದರೂ ಸ್ನೇಹ ಮಾತ್ರ ಹಾಗೇ ಮುಂದೊರೆದುಕೊಂಡು ಬಂದಿತು. ಅದರಲ್ಲೂ ,ಮುಂದಿನ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಪಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ನಾನು ವರ್ಗಾವಣೆಗೊಂಡು ಜಿಲ್ಲಾ ಕೇಂದ್ರ ಗ್ರಂಥಾಲಯ, ಬಾಗಲಕೋಟೆಗೆ ಬಂದ ಮೇಲಂತೂ ಆ ಸ್ನೇಹ ಗಟ್ಟಿಗೊಂಡಿತು. ಜಿಲ್ಲೆಯಲ್ಲಿ ಆಗಾಗ ಹಮ್ಮಿಕೊಳ್ಳುತ್ತಿದ್ದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭೇಟ್ಟಿಯಾಗುವುದರ ಮೂಲಕ ಒಡನಾಟ ಹೆಚ್ಚಾಯಿತು.ಈ ಥರದ ಒಡನಾಟದ ಮೂಲಕ ಅವರ ಸಂಪರ್ಕದಲ್ಲಿರುವ ಅಸಂಖ್ಯ ಬರಹಗಾರರ ಪರಿಚಯ ನನಗಾಯಿತು. ಅಬ್ಬಾಸ್ ಅವರ ಕುರಿತಾಗಿ ನಾನು ಹೇಳಲೇಬೇಕಾದ ಮಾತೊಂದಿದೆ. ಅದು, ಅವರು ಅದೆಷ್ಟು ಸೂಕ್ಷ್ಮ ಸಂವೇದನೆಗಳ ವ್ಯಕ್ತಿತ್ವವನ್ನು ಹೊಂದಿದ್ದರೆಂದರೆ, ನಾನು ಅದಾವಾಗಲೋ ಅವರ ಕಥೆಗಳ ಕುರಿತಾಗಿ ಬರೆದ ಪತ್ರಗಳ ವಿಚಾರವನ್ನು ಆಗಾಗ ಗೆಳೆಯರ ಮುಂದೆ ನೆನಪಿಸಿಕೊಳ್ಳುತ್ತಿದ್ದರು.
ತಾಯ ಮಮತೆ…
ಬಾಗಲಕೋಟೆ ಜಿಲ್ಲೆಯ ಇನ್ನೊಬ್ಬ ಹಿರಿಯ ಕಥೆಗಾರ ಡಾ.ಬಾಳಾಸಾಹೇಬ ಲೋಕಾಪೂರ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದ ಸಂದರ್ಭದಲ್ಲಿ ಶ್ರವಣಬೆಳಗೊಳದಲ್ಲಿ ವಾರದವರೆಗೆ ಹಮ್ಮಿಕೊಂಡಿದ್ದ ಕಥಾಕಮ್ಮಟಕ್ಕೆ ಲಕ್ಷ್ಮಣ ಬಾದಾಮಿ, ಶಂಕರ ಹೂಗಾರ, ಸಿದ್ಧಲಿಂಗಪ್ಪ ಬೀಳಗಿ ಹಾಗು ನನ್ನನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ಅಬ್ಬಾಸ್ ಅವರು ಸಂಭ್ರಮಿಸಿದ್ದರು. ಈ ಕಮ್ಮಟದ ಮೂಲಕ ನಮ್ಮ ಬಾಗಲಕೋಟೆ ಜಿಲ್ಲೆಗೆ ಹೊಸ ಕಥೆಗಾರರು ದಕ್ಕಿದರು ಎಂದು ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆಯೇ ಹೇಳಿ ನಮ್ಮನ್ನು ಉತ್ತೇಜಿಸಿದ್ದರು. ನಂತರದಲ್ಲಿಯೇ ನಾನು ಮತ್ತು ಗೆಳೆಯ ಲಕ್ಷ್ಮಣ ಬಾದಾಮಿ ಇಬ್ಬರೂ ಗಂಭೀರವಾಗಿ ಕಥೆಗಳನ್ನು ಬರೆಯಲು ಪ್ರಾರಂಭಿಸಿದೆವು ಎನ್ನಬೇಕು. ಹೀಗೆ, ತಾಯ ಮಮತೆಯನ್ನು ಮೈಗೂಡಿಸಿಕೊಂಡಿದ್ದ ಅಬ್ಬಾಸ್ ಅವರು ಯಾವ ಪ್ರಶಸ್ತಿ, ಪುರಸ್ಕಾರಗಳಿಗೂ ಹಪಹಪಿಸದೇ ತಮ್ಮ ಪಾಡಿಗೆ ತಾವು ಕಥೆಗಳನ್ನು ಬರೆಯುತ್ತ ಹೋದರು. ಹಾಗೆಯೇ ಅವರ ಕಥೆಗಳನ್ನು ಓದುಗರು ಅಷ್ಟೇ ಪ್ರೀತಿಯಿಂದ ಓದುತ್ತ ಬಂದರು. ಆ ನಂತರದಲ್ಲಿ ಪ್ರಶಸ್ತಿ, ಪುರಸ್ಕಾರಗಳು ತಮಗೆ ತಾವೇ ಇವರನ್ನು ಅರಸಿಕೊಂಡು ಬಂದವು ಸುಳ್ಳಲ್ಲ. ಅವರು ಕಿರಿಯ ಬರಹಗಾರರ ಮೇಲೆ ಅದೆಷ್ಟು ಭರವಸೆಯನ್ನಿಟ್ಟುಕೊಂಡಿದ್ದರೆಂದರೆ ‘ಮನುಷ್ಯರಾಗುವ ಕ್ಷಣವು’ ಎಂಬ ಸಮಗ್ರ ಕಥಾಸಂಕಲನಕ್ಕೆ ನನ್ನಿಂದ ಒತ್ತಾಯಪೂರ್ವಕವಾಗಿ ’ಬೆನ್ನುಡಿ’ಯನ್ನು ಬರೆಸಿಕೊಂಡಿದ್ದರು. ಇದು ಅವರು ಬರವಣಿಗೆ ವಿಚಾರದಲ್ಲಿ ಅಳವಡಿಸಿಕೊಂಡಿದ್ದ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ!
ಸಂವೇದನೆಯ ಕಥೆಗಾರ…
ಕಥೆಯನ್ನೇ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡಿದ್ದ ಅಬ್ಬಾಸ್ ಮೇಲಿನಮನಿ ಅವರು ಚರ್ಚೆಗೊಳಪಡಬಲ್ಲ ಮುಸ್ಲಿಂ ಸಂವೇದನೆಯ ಬಹುಮುಖ್ಯ ಕಥೆಗಾರರಲ್ಲಿ ಒಬ್ಬರಾಗಿದ್ದರು. ಅವರ ಕಥೆಗಳಲ್ಲಿ ಆ ಸಂದರ್ಭದಲ್ಲಿನ ಆ ಸಮುದಾಯದ ಮತ್ತು ಅದರಿಂದ ಹೊರತಾದ ಬೇರೆ ಸಮುದಾಯಗಳ ವಿಭಿನ್ನವಾದ, ವಿಶಿಷ್ಟವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಹರೆಗಳು ಮುಖಾಮುಖಿಯಾಗುತ್ತಲೇ ಇರುತ್ತವೆ. ಹೀಗಾಗಿ, ತಮ್ಮ ಸಮುದಾಯದ ಮತ್ತು ಅದನ್ನು ಕೇಂದ್ರವಾಗಿಟ್ಟುಕೊಂಡಂತೆ ಇತರೆ ಸಮುದಾಯಗಳ ಲೋಕವನ್ನು ಅನುಭಾವದ ನೆಲೆಯಲ್ಲಿ ಗ್ರಹಿಸಿರುವ ಅಬ್ಬಾಸ್ ರ ಕಥೆಗಳನ್ನು ಓದುವುದೆಂದರೆ, ಅದು ಅನುಭಾವದ ಅನೂಹ್ಯವಾದ ಅನುಭವದೊಂದಿಗೆ ಸ್ವಯಂ ನಾವೇ ಮಾತುಕತೆಗಿಳಿಯುವ ಕ್ರಿಯೆಯೇ ಆಗಿರುತ್ತದೆ!

ಹಿರಿಯ ಸಾಹಿತಿ, ಕಥೆಗಾರ ಅಬ್ಬಾಸ್ ಮೇಲಿನಮನಿ ಇನ್ನಿಲ್ಲ

ತಮ್ಮ ತಮ್ಮ ಲೋಕಾನುಭವದಿಂದ ಒದಗಿ ಬಂದ ಬದುಕಿನ ತಿಳಿವಳಿಕೆಯ ನೆಲೆಯ ಮೇಲೆ ತೀರ ಸಹಜವೆನ್ನುವಂತೆ ಸಹನೆಯಿಂದ ಕಥೆ, ಕಾದಂಬರಿಯನ್ನು ರಚಿಸಿರುವ ಅಬ್ಬಾಸ್ ಅವರು ಆಯ್ದುಕೊಂಡಿರುವ ವಸ್ತು ಕೇವಲ ತನಗೆ ಸಂಬಂಧಿಸಿದ ವಿಷಯಕ್ಕೆ ಮಾತ್ರ ಸೀಮಿತವಾಗಿರದೆ, ಆ ವಿಷಯವನ್ನು ಮೀರಿ ಅಮೂರ್ತದಲ್ಲಿ ಅನೇಕ ವಿಚಾರಗಳನ್ನು ತನ್ನ ಒಡಲೊಳಗೆ ಕಾಪಿಟ್ಟುಕೊಂಡಿರುವುದು ಗಮನಾರ್ಹ! ಭೌತಿಕವಾಗಿ ಕಥೆಗಾರ ಅಬ್ಬಾಸ್ ಮೇಲಿನಮನಿಯವರು ಈ ಹೊತ್ತು ನಮ್ಮೊಂದಿಗೆ ಇಲ್ಲದಿದ್ದರೂ ಅವರ ವಿಶಿಷ್ಟವಾದ ಕಥೆಗಳ ಮೂಲಕ ಶಾಶ್ವತವಾಗಿ ನಮ್ಮೊಂದಿಗೆ ಜೀವಂತವಾಗಿರುತ್ತಾರೆ!

ಮತ್ತಷ್ಟು ಸುದ್ದಿಗಳು

vertical

Latest News

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಪೊಲೀಸ್ ವಶಕ್ಕೆ

Newsics.com ಕಲಬುರಗಿ : ಅಪಘಾತವನ್ನು ಕೊಲೆ ಯತ್ನ ಎಂದು ಕಥೆ ಕಟ್ಟಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ರನ್ನ ನಗರ ಠಾಣೆಯ ಪೊಲೀಸರು ಮತ್ತೆ ವಶಕ್ಕೆ...

ನಂದಿನಿ ಹಾಲಿನ ದರ ಮತ್ತೆ ಏರಿಕೆ..!!

Newsics.com ಬೆಂಗಳೂರು :  ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು, ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ. ಈ ಕುರಿತು ಜನವರಿಯಲ್ಲಿ...

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತ ವೈದ್ಯಳನ್ನು...
- Advertisement -
error: Content is protected !!