Saturday, November 26, 2022

ಮಳೆಯೆನ್ನುವ ಧ್ಯಾನ!

Follow Us

 ಧಾರೆಯಾಗುವ ಮನಸು  

ಮಳೆಗಾಲ ಭೂಮಿಯ ಒಡಲಿಗೆ ತಂಪೆರೆದರೆ, ಮನುಷ್ಯನ ಸ್ವಾರ್ಥವನ್ನು ಪ್ರಶ್ನಿಸುತ್ತದೆ. ಪ್ರಕೃತಿಯ ಮಡಿಲಲ್ಲಿ ಹಾಯಾಗಿರುವ ಅರ್ಥವನ್ನು ತಿಳಿಸಿಕೊಡುತ್ತದೆ. ಮಲೆನಾಡು ಈಗ ಮಳೆಯ ಸಂಭ್ರಮದಲ್ಲಿ ಮೀಯುತ್ತಿದೆ. ಒಂದೇ ಸಮನೆ ಭೋರೆಂದು ಸುರಿವ ವರ್ಷಧಾರೆಗೆ ಕುದಿ ಮನಸು ಕೂಡ ತಣ್ಣಗಾಗಿ ಧ್ಯಾನಸ್ಥ ಸ್ಥಿತಿಗಿಳಿದಿದೆ.


♦ ಸುಮನಾ ಲಕ್ಷ್ಮೀಶ
newsics.com@gmail.com

ಲೆನಾಡಿನಲ್ಲೀಗ ಮಳೆಗಾಲದ ಸಂಭ್ರಮಕ್ಕೆ ಶ್ರೀಕಾರ ಹಾಕಿಯಾಗಿದೆ. “ಮಳೆ ಶುರುವಾಗೇ ಹೋಯಿತು ಮಾರಾಯ, ಕೆಲಸವಿನ್ನೂ ಮುಗಿದಿಲ್ಲ’ ಎನ್ನುವ ಗಡಿಬಿಡಿ ಹಿರಿಯರಿಗಾದರೆ, ಮಳೆಯಲ್ಲಿ ತೊಯ್ಯುವ ಆಸೆ ಮಕ್ಕಳಿಗೆ. “ಮಳೆಗಾಲದ ಮಳೆಯಿಂದ ಶೀತವಾಗಲ್ಲ, ಮಳೆಗಾಲ ಆರಂಭವಾದ ಮೇಲೆ ತೊಯ್ಯಬಹುದು ಎಂದು ಹೇಳಿದ್ದೆ, ಈಗ ಮಳೆಗೆ ಹೋಗುವುದೇ’ ಎಂದು ಅಮ್ಮನ ಬಳಿ ಹಠ ಬಿದ್ದಿವೆ.
ಹತ್ತಾರು ದಿನಗಳಿಂದ ಮಳೆ ಹೊಯ್ಯುವ ಸೂಚನೆ ಸಿಕ್ಕಿದರೂ ಅಲ್ಲಿಯವರೆಗೆ ಅದೂ ಇದೂ ಕೆಲಸವೆನ್ನುತ್ತ ಆರಾಮಾಗಿದ್ದ ಮಲೆನಾಡಿನ ಮಂದಿ ಮಳೆ ಚುರುಕುಪಡೆಯಲು ತೊಡಗಿದ ತಕ್ಷಣ ತಾವೂ ಚುರುಕಾಗಿದ್ದಾರೆ. ತೋಟದ ಕಾಲುವೆಯ ಬದುಗಳಿಗೆ ಕರಡ, ಹುಲ್ಲು, ಹಾಳೆ ಮುಚ್ಚುವ ಧಾವಂತ ಈಗಿನ್ನೂ ಮುಗಿಯುತ್ತಿದೆ. ಅಡಕೆ ತೋಟಗಳ ಕಳೆಗಳನ್ನು ಕಿತ್ತಾಗಿದೆ. ಗದ್ದೆಯಲ್ಲಿ ನೀರು ಸರಿಯಾಗಿ ಹರಿದುಹೋಗುವಂತೆ ಅನುವು ಮಾಡಿಕೊಟ್ಟಾಗಿದೆ. ಇನ್ನೇನು, ಮನೆಯ ಮಾಡುಗಳ ಕೆಲಸಕ್ಕೆ ಕೈ ಹಾಕಬೇಕಿದೆ. ಹೆಂಚಿನ ಮನೆಗಳ ಅಲ್ಲಲ್ಲಿ ಹನಿಯಿಟ್ಟು ಸುರಿಯುವ ನೀರಿಗೆ ಪಾತ್ರೆಗಳನ್ನಿಡುವ ಕಾಯಕಕ್ಕೆ ಅಂತ್ಯ ಹಾಡಬೇಕಿದೆ. ಆಗಲೇ ಬಾನು ಕಪ್ಪಾಗಿ ಮಳೆಯ ಜೋರು ಎಲ್ಲೆಡೆ ಆವರಿಸುತ್ತಿದೆ. ಮನುಷ್ಯ ಅದೆಷ್ಟು ದ್ರೋಹ ಬಗೆದರೂ ಪ್ರಕೃತಿ ತನ್ನಿಂದಾದ ಕೊಡುಗೆಯನ್ನು ಮಳೆಯ ರೂಪದಲ್ಲಿ ನೀಡುತ್ತಿದೆ.
ಬೇಸಿಗೆಯಲ್ಲಷ್ಟೇ ರಸ್ತೆಗೆ ಹಾಕಿದ ಮಣ್ಣು ಸುರಿವ ಧಾರೆಗೆ ಕಲಸಿ ಕೆಂಪಾಗಿ ಹರಿಯುತ್ತಿದೆ. ಕೆಲವೇ ದಿನ, ಕೆಂಪು ಕರಗಿ ಸ್ವಚ್ಛ ನೀರಿನಲ್ಲಿ ಕಾಲಾಡಿಸುತ್ತ ಸಾಗಲು ಮಕ್ಕಳು ಕಾಯುತ್ತಿವೆ. ಮಳೆಯಲ್ಲಿ ಮನೆಯೊಳಗೇ ಬೆಚ್ಚಗಿರಬೇಕೆಂದು ಹರೆಯದವರ ಮೈಮನಗಳು ಬಯಸುತ್ತಿವೆ.  
ತಿನಿಸುಗಳ ಜೋರು
ತೋಟವನ್ನು ಮಳೆಗಾಲದಿಂದ ರಕ್ಷಿಸಲು ಅಷ್ಟು ದಿನ ದುಡಿದ ದೇಹಕ್ಕೆ ಮಳೆಗಾಲ ತಂಪು ನೀಡುತ್ತದೆ. ಹಲಸಿನಹಣ್ಣಿನ ಬಿಸಿ ಬಿಸಿ ಕಡುಬು, ಮಾವಿನ ಹಣ್ಣಿನ ಪಾಯಸದ ಜತೆಗೆ ಬಿಸಿ ಬಿಸಿ ರೊಟ್ಟಿ ಅಥವಾ ದೋಸೆ ಸವಿಯುತ್ತ ಕೂರುವಂತೆ ಮಾಡುತ್ತದೆ. ಹಲಸಿನಕಾಯಿಯ ಚಿಪ್ಸ್ ತುಂಬಿದ ಡಬ್ಬಗಳು ಅಟ್ಟಕ್ಕೇರುತ್ತವೆ. ಮಳೆಗಾಲದ ಸಂಜೆಯಲ್ಲಿ ಹಲಸಿನಕಾಯಿ ಚಿಪ್ಸ್ ಮೆಲ್ಲುತ್ತ ಕೈಯಲ್ಲಿ ಪುಸ್ತಕ ಹಿಡಿದು ಕುಳಿತರೆ ಕಪ್ಪಾದರೂ ಏಳಲು ಬೇಸರ. ಮಧ್ಯಾಹ್ನದ ಚಹಾ ಸೇವಿಸುವ ಅಜ್ಜ-ಅಜ್ಜಿಯರು ಒಂದು ಬಟ್ಟಲು ಚಿಪ್ಸ್ ಮೆಲ್ಲದೆ ಮೇಲೇಳುವುದಿಲ್ಲ.

ಎಷ್ಟೆಂದರೂ ಮಳೆಯಲ್ಲವೇ? ಒಂದೊಂದು ಧಾರೆಯೂ ಮನಸ್ಸನ್ನು ತುಂಬಿಕೊಳ್ಳುತ್ತದೆ. ಒಮ್ಮೊಮ್ಮೆ ಸುಮ್ಮಸುಮ್ಮನೆ ಕಣ್ಣಾಲಿಗಳು ತುಂಬಿಕೊಳ್ಳುವಂತೆ ಮಾಡುತ್ತವೆ.ಮಳೆ ಮನುಷ್ಯನ ಸಣ್ಣತನಗಳನ್ನು ತೊಳೆಯಬಲ್ಲದು ಎನ್ನುವುದು ನಮ್ಮಂಥವರ ಗಾಢ ನಂಬುಗೆ. ನಿಸ್ವಾರ್ಥದಿಂದ ಭೂಮಿಗೆ ಬೀಳುವ ನೀರು ಹಿಡಿದಿಟ್ಟ ಬಗೆಯಲ್ಲಿ ತಾನಾಗಿರುವುದು. ವರ್ಷವಿಡೀ ಭೂಮಿಗೆ ತಂಪನ್ನೀಯುವುದು.


ಕೈಬೀಸಿ ಕರೆವ ಬೆಟ್ಟ-ಗುಡ್ಡಗಳು…
ಮಳೆಯೆಂದರೆ, ಮತ್ತೆ ಸೀದಾ ಹದಿನೆಂಟಕ್ಕೆ ಹೋಗಿ ನಿಲ್ಲುವ ಆಸೆ. ಮಳೆಯಲ್ಲಿ ಬೆಟ್ಟ-ಗುಡ್ಡಗಳ ಅಲೆಯುತ್ತ ಬಿಕ್ಕೆ, ಚಳ್ಳೆ, ಪಿಳ್ಳೆ, ಹುಳಿಮಜ್ಜಿಗೆ ಹಣ್ಣುಗಳನ್ನು ಸಂಗ್ರಹಿಸುವ ಬಯಕೆ. ಎಷ್ಟು ಅಲೆದರೂ ಇನ್ನಷ್ಟು ಸುತ್ತಬೇಕೆನ್ನುವ ಹುಮ್ಮಸ್ಸಿನ ಬಿಸಿರಕ್ತವನ್ನು ಮಲೆನಾಡಿನ ಬೆಟ್ಟಗುಡ್ಡಗಳು ಕೈಬೀಸಿ ಕರೆಯುತ್ತವೆ. ಕಂಬಳಿ ಕೊಪ್ಪೆ ಹೊದ್ದು ಬೆಟ್ಟವೇರಿದರೆ ಎಂಥ ಮಳೆ ಬಂದರೂ ಭಯವಿಲ್ಲ. ಹಳ್ಳಕೊಳ್ಳಗಳ, ಎರಡು ಬೆಟ್ಟಗಳ ನಡುವೆ ಅಲ್ಲೊಂದು ಇಲ್ಲೊಂದು ಗೋಚರಿಸುವ ಹೆಂಚಿನ ಮಾಡುಗಳ ನಡುವೆ ಹೊಗೆ ಕೊಳವೆಗಳು ಮನುಷ್ಯರ ಅಸ್ತಿತ್ವವನ್ನು ಸಾರುತ್ತವೆ. ಮಂದೆಯಿಂದ ತಪ್ಪಿಸಿಕೊಂಡ ಹಸುವೊಂದು ಸೊಗಸಾಗಿ ಬೆಳೆದಿರುವ ಹುಲ್ಲನ್ನು ತಾನೊಬ್ಬನೇ ಸುಖವಾಗಿ ಮೇಯುವ ನೋಟವೂ ದಕ್ಕಬಹುದು.

ಮಳೆಗೆ ಅಂಜದ ಧೀರರು
ಮಳೆಗೆ ಅಂಜುವವರು ಮಲೆನಾಡಿಗರಲ್ಲ. ಅದೆಂಥದ್ದೇ ಮಳೆಯಿರಲಿ, ತೋಟ-ಗದ್ದೆ, ಬೆಟ್ಟ-ಬಯಲಿಗೆ ಹೋಗದ ಜನರಿಲ್ಲ. ಮಳೆಗೆ ಏನಾದರೂ ಅನಾಹುತವಾಯಿತೇ ಎಂದು ನೋಡಲಾದರೂ ದಿನಕ್ಕೆ ಎರಡು ಬಾರಿ ಸುತ್ತಾಡಿಕೊಂಡು ಬರುತ್ತಾರೆ. “ಇವತ್ತು ನಮ್ಮನೆಯ ಎರಡು ಅಡಕೆ ಮರ ಮುರಿದಿವೆ, ನಾಲ್ಕು ಅಡಕೆ ಮರ ಬಿದ್ದುಹೋಗಿವೆ’ ಎಂದು ಹೇಳುತ್ತಲೇ  ಸಂಜೆಯ ಬಿಸಿಬಿಸಿ ತಿಂಡಿಯನ್ನು ಚಪ್ಪರಿಸುತ್ತಾರೆ. ತೋಟಕ್ಕೆ ಹೋದಾಗಲೆಲ್ಲ ಒಂದಾದರೂ ತಿಗಣೆ ಹತ್ತಿಸಿಕೊಂಡು ಬಂದು ಬಚ್ಚಲೊಲೆಗೆ ಎಸೆಯುತ್ತಾರೆ. ಸುರಿಯುವ ರಕ್ತಕ್ಕೆ ತಂಬಾಕು, ಸುಣ್ಣ ಹಚ್ಚಿ ನಿರುಮ್ಮಳರಾಗುತ್ತಾರೆ. ಕೆಲವೊಮ್ಮೆ ಕೆಲಸವೇನೂ ಇರದಿದ್ದರೆ ಗಂಟೆಗಟ್ಟಲೆ ಎಲೆ-ಅಡಕೆ ಮೆಲ್ಲುತ್ತ, ಮಳೆಯನ್ನೇ ದಿಟ್ಟಿಸಿ ನೋಡುತ್ತ ಧ್ಯಾನ ಮಾಡುತ್ತಾರೆ!


ನನ್ನೂರ ಮಲೆನಾಡಿಗರು ಬಲು ಸೂಕ್ಷ್ಮದ ಜನರು. ಅಂಗಳದ ಸಣ್ಣ ಕೊರಕಲೊಂದು ಮುಂದೊಂದು ದಿನ ಭಾರೀ ಅನಾಹುತ ಸೃಷ್ಟಿಸಬಹುದೆಂದು ಅವರಿಗೆ ತಿಳಿದಿದೆ. ಹೀಗಾಗಿಯೇ, ರಸ್ತೆ, ಮನೆಯ ಅಂಗಳ, ತೋಟ, ಎಲ್ಲೆಂದರಲ್ಲಿ ನೀರು ಹರಿಯುವುದನ್ನು ತಪ್ಪಿಸುತ್ತಾರೆ. ಅಲ್ಲಲ್ಲಿ ಕಿರು ದಾರಿ ನಿರ್ಮಿಸಿಕೊಟ್ಟು ನೀರಿನ ಹರಿವನ್ನು ನಿಧಾನಗೊಳಿಸುತ್ತಾರೆ. ಇದೆಲ್ಲ ಅವರಿಗೆ ಯಾರೋ ಹೇಳಿಕೊಟ್ಟ ವಿದ್ಯೆಯಲ್ಲ. ಸ್ವತಃ ಮಳೆಗಾಲವೇ ತಿಳಿಸಿಕೊಟ್ಟದ್ದು.
ನೆನಪುಗಳ ದಾಳಿಯಲ್ಲಿ…
ನಿನ್ನೆ ರಾತ್ರಿಯಿಡೀ ಸುರಿದ ಮಳೆಯ ತಟಪಟ ಸದ್ದಿಗೆ ಬೆಚ್ಚಗೆ ಹೊದ್ದು ಮಲಗಿದ್ದರೂ ಕಂಗಳು ಮಾತ್ರ ತೆರೆದಿದ್ದವು. ಏನೋ ಕನಸುಗಳು, ಕವನಗಳ ಸಾಲುಗಳು ಬಂದು ಬಂದು ಮುಚ್ಚಿದ ರೆಪ್ಪೆಗಳನ್ನು ತೆರೆಯುವಂತೆ ಮಾಡುತ್ತಿದ್ದವು. ಅದೆಷ್ಟೋ ನೆನಪುಗಳನ್ನು ಹೊತ್ತು ತರುತ್ತಿದ್ದವು. ಅವನೊಂದಿಗೆ ಮಳೆಯಲ್ಲಿ ಹೆಜ್ಜೆ ಹಾಕಿದಂತೆ ಕನವರಿಕೆ. ನೀರಿನಲ್ಲಿ ತೋಯ್ದ ಪಾದಗಳ ಬಿಳುಪನ್ನು ಕಂಡ ಅವನ ಕಂಗಳಲ್ಲಿ ಮೂಡಿದ ಹೊಳಪು ಪದೇ ಪದೆ ಕಾಡಿಸುತ್ತಿದ್ದವು. ಈಗ ಅವನೂ ಎಲ್ಲ ಅಪ್ಪಂದಿರಂತೆ ಆಗಿರಬಹುದು ಎಂದುಕೊಂಡಾಗ ಅರಿಯದೆ ನಗುವೊಂದು ಇಣುಕಿತ್ತು. ಪುಣ್ಯಕ್ಕೆ ಸುತ್ತಲೆಲ್ಲ ಕತ್ತಲಿತ್ತು. ಇಲ್ಲವಾದಲ್ಲಿ, ನಗುವಿಗೆ ಕಾರಣ ನೀಡಬೇಕಿತ್ತು. ಮಳೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅವನೀಗ ಕಾಂಕ್ರೀಟ್ ಕಾಡಿನಲ್ಲಿ ಬಂಧಿಯಾಗಿದ್ದಾನೆ,
ಪಾಪ. ಮಳೆಗಾಲದಲ್ಲಿ ಊರಿಗೆ ಒಮ್ಮೆಯಾದರೂ ಬರುವನೇ, ನಗರದಲ್ಲೇ ಆದರೂ ಮಳೆಯನ್ನು ಆಸ್ವಾದಿಸುವನೇ ಎನ್ನುವ ಪ್ರಶ್ನೆಗಳು ತುಂಬಿಕೊಳ್ಳುತ್ತವೆ. ಅವನೊಮ್ಮೆ ಭೇಟಿಯಾದರೆ ಇದೇ ಪ್ರಶ್ನೆ ಕೇಳುವುದು ದಿಟ.

 

 

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!