Saturday, December 2, 2023

ಬಗ್ಗೋದೆಂದರೆ ಎಲ್ಲೀತನಕ… ಭೂಮಿತನಕ…

Follow Us

ಸಂವೇದನಾಶೀಲ ಕವಿ, ಬಂಡಾಯ ಸಾಹಿತಿ, ದಲಿತರ ದನಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲ. ಆದರೆ, ಅವರ ಕವಿತೆಗಳು ಸಮಾಜಕ್ಕೆ ದಾರಿದೀಪವಾಗಲು ನಮ್ಮೊಂದಿಗಿವೆ. ಸಮಾನತೆಯನ್ನು ಸದಾಕಾಲ ಪ್ರತಿಪಾದಿಸುತ್ತಿದ್ದ ಸಂವೇದನಾಶೀಲ ಕವಿ ಸಿದ್ದಲಿಂಗಯ್ಯ ಅವರ ಆಶಯಗಳ ಹಾದಿಯಲ್ಲಿ ಸಮಾಜ ಸಾಗಬೇಕಿದೆ.

– ಇಕ್ರಲಾ… ಹೊಡೀರ್ಲಾ… ಎಂದಿದ್ದ ದಲಿತರ ದನಿ ಡಾ.ಸಿದ್ದಲಿಂಗಯ್ಯ

ನುಡಿನಮನ

newsics.com

‘ಕವಿಯಾಗಬೇಕೆಂದು ಕವಿತೆ ಬರೆದಿದ್ದಲ್ಲ, ನನ್ನೊಳಗಿನ ಭಾವನೆ, ಕಿಚ್ಚು, ಅವಮಾನ, ರೋಷಕ್ಕೊಂದು ಅಕ್ಷರ ರೂಪ ನೀಡಿದೆ’ ಎಂದು ತಾವು ಕವಿಯಾದ ಬಗೆಯನ್ನು ಸಾಮಾನ್ಯ ರೂಪಕ್ಕಿಳಿಸಿ ಹೇಳಿಕೊಂಡಿದ್ದವರು ದಲಿತ ಕವಿ ಎಂದೇ ಖ್ಯಾತರಾಗಿದ್ದ ಡಾ.ಸಿದ್ದಲಿಂಗಯ್ಯ.

ಸ್ಮಶಾನದಲ್ಲಿ ಕುಳಿತು ಹೆಚ್ಚಿನ ಕವಿತೆಗಳನ್ನು ಬರೆದವರು ಡಾ.ಸಿದ್ದಲಿಂಗಯ್ಯ. ಈ ಕುರಿತು ಅವರೇ ಒಮ್ಮೆ ಹೇಳಿಕೊಂಡಿದ್ದರು. ಅವರು ಕೆಳವರ್ಗ, ದಲಿತ ವರ್ಗ ಅನುಭವಿಸಿದ ಅವಮಾನಕ್ಕೆ ದನಿಯಾದವರು. ‘ಬಗ್ಗೋದೆಂದರೆ, ಎಲ್ಲೀತನಕ…ಭೂಮಿತನಕ’ ಎಂದು ದಲಿತರ ನೋವನ್ನು, ಸಿಟ್ಟನ್ನು, ಅಸಹಾಯಕತೆಯನ್ನು ಕಟ್ಟಿಕೊಟ್ಟವರು.

ಇಕ್ರಲಾ… ಹೊಡೀರ್ಲಾ…

ಅವರ ಮೊದಲ ಕವನ ಸಂಕಲನ ‘ಹೊಲೆ ಮಾದಿಗರ ಹಾಡು’ ಪ್ರಕಟವಾಗಿದ್ದು 1975ರಲ್ಲಿ. ಅದರಲ್ಲಿ ಮೇಲ್ವರ್ಗದ ವಿರುದ್ಧ ಮೂಡಿದ ‘ಇಕ್ರಲಾ…ಹೊಡೀರ್ಲಾ…’ ಸಾಲುಗಳು ದಲಿತ ಯುವಕರನ್ನು ಬಡಿದೆಬ್ಬಿಸಿದವು. ಮೇಲ್ವರ್ಗದವರು ಸಿಟ್ಟಿನಿಂದಲೂ, ತಳವರ್ಗದವರು ತಮ್ಮ ದನಿಯಾಗಲು ಒಬ್ಬರು ಸಿಕ್ಕರೆಂದೂ ನೋಡಿದರು. ಒಟ್ಟಿನಲ್ಲಿ ಸಿದ್ದಲಿಂಗಯ್ಯ ಅವರ ಕಡೆಗೆ ಸಮಾಜ ನೋಡಿತು.

‘ಹೊಲೆ ಮಾದಿಗರ ಹಾಡು’ ಪ್ರಕಟವಾಗುವಲ್ಲಿ ಕಿ.ರಂ.ನಾಗರಾಜ್, ಶೂದ್ರ ಶ್ರೀನಿವಾಸ್, ಕಾಳೇಗೌಡ ನಾಗವಾರ, ಡಿ.ಆರ್.ನಾಗರಾಜ್ ಅವರೆಲ್ಲರ ಕಾಣಿಕೆಯಿತ್ತು. ಬಡತನ, ಶೋಷಣೆ, ವೈಚಾರಿಕತೆ, ಬುದ್ಧ, ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್ ಬಗೆಗೆ ಬರೆದರು. ತಮ್ಮೆಲ್ಲ ವಿಚಾರಧಾರೆಯನ್ನೂ ಕವಿತೆ ಮೂಲಕ ಅಭಿವ್ಯಕ್ತಿಸಿದರು.

ಡಾ.ಸಿದ್ದಲಿಂಗಯ್ಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ವೆಂಕಮ್ಮ. ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಪ್ರಾಥಮಿಕ ಶಿಕ್ಷಣ ಓದುವಾಗಲೇ ಕವಿತೆ ಬರೆಯುತ್ತಿದ್ದರು. ಉತ್ತಮ ಭಾಷಣಕಾರರೂ ಆಗಿದ್ದರು. ಕಾಲೇಜು ಓದುವ ದಿನಗಳಲ್ಲಿ ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮುಂತಾದವರ ಸಿದ್ಧಾಂತಗಳಿಂದ ಆಕರ್ಷಿತರಾಗಿ ತಮ್ಮ ವೈಚಾರಿಕ ದೃಷ್ಟಿಕೋನವನ್ನು ಖಚಿತಪಡಿಸಿಕೊಂಡಿದ್ದರು.

ಅಧ್ಯಾಪಕ, ಪ್ರಾಧ್ಯಾಪಕ, ಕವಿ, ಹೋರಾಟಗಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಗುರುತಿಸಿಕೊಂಡ ಮಾನವೀಯ ವ್ಯಕ್ತಿ. ಆತ್ಮಕಥನ, ವಿಚಾರ-ವಿಮರ್ಶೆ, ಕವಿತೆಗಳನ್ನು ಬರೆದು ಜನಮಾನಸಕ್ಕೆ ಸಮೀಪರಾದರು.

8 ಕವನ ಸಂಕಲನ ಪ್ರಕಟಿಸಿದ್ದರು. ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದ ಕವಿತೆಗಳು, ಅಲ್ಲೆಕುಂತವರೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಸಮಕಾಲೀನ ಕನ್ನಡ ಕವಿತೆ ಭಾಗ-3, 4 (ಸಂಪಾದನೆ) ಮಾಡಿದ್ದರು.

ಅವರ ಆತ್ಮಕತೆ ‘ಊರುಕೇರಿ’. ಇದರ ನಾಲ್ಕನೇ ಭಾಗ ಸದ್ಯದಲ್ಲೇ ಪ್ರಕಟವಾಗುವುದಿತ್ತು.

ವಿಮರ್ಶಾ ಕೃತಿಗಳು:
ಹಕ್ಕಿ ನೋಟ, ರಸಗಳಿಗೆಗಳು, ಎಡಬಲ, ಉರಿಕಂಡಾಯ. ಕೆಲವು ನಾಟಕಗಳನ್ನೂ ಬರೆದಿದ್ದಾರೆ. ಅವು, ಏಕಲವ್ಯ, ನೆಲಸಮ, ಪಂಚಮ.

ಚಲನಚಿತ್ರ ಗೀತೆ ರಚನೆಗಾಗಿ ರಾಜ್ಯ ಸರ್ಕಾರದ ಪ್ರಶಸ್ತಿ, ರಾಜ್ಯೋತ್ಸವ, ನೃಪತುಂಗ, ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿ-ಗೌರವಗಳಿಗೆ ಪಾತ್ರರಾಗಿದ್ದರು. 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ರಾಜ್ಯದಲ್ಲಿ ಕನ್ನಡ ಬಳಸುವ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಬೇಕು ಎನ್ನುವುದು ಅವರ ಆಳವಾದ ನಂಬುಗೆಯಾಗಿತ್ತು. ಕೀಳರಿಮೆ ಮತ್ತು ಇಂಗ್ಲಿಷ್ ಭಾಷಾ ವ್ಯಾಮೋಹ ಕನ್ನಡಿಗರಿಗೆ ಹೆಚ್ಚು ಎನ್ನುತ್ತಿದ್ದರು. ಶಿಕ್ಷಣ, ಆಡಳಿತ, ನ್ಯಾಯಾಂಗದಲ್ಲಿ ಕನ್ನಡ ಬಳಕೆಯಾಗುವಂತಾಗಲು ಆಳುವವರೂ ಕನ್ನಡ ಭಾಷೆಯ ಅನುಷ್ಠಾನದಲ್ಲಿ ಆಸಕ್ತಿ ಹೊಂದಿರಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಸಮಾಜದಲ್ಲಿ ಬಲವಾಗಿ ಬೇರೂರಿರುವ ಮೌಢ್ಯ ನಾಶವಾಗಲು ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆನ್ನುವುದು ಅವರ ಆಶಯವಾಗಿತ್ತು.

ಇಂದು ಸಿದ್ದಲಿಂಗಯ್ಯ ನಮ್ಮೊಂದಿಗಿಲ್ಲ. ಆದರೆ, ದಾರಿದೀಪವಾಗಿ ಅವರ ಕವಿತೆಗಳಿವೆ.

ಗಾಯನ: ಶ್ರೀ ರಾಘವೇಂದ್ರ ಬೀಜಾಡಿ

ಮತ್ತಷ್ಟು ಸುದ್ದಿಗಳು

vertical

Latest News

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ: ಟ್ರಕ್‌’ಗೆ ತಾವೇ ಲಗೇಜ್‌ ಲೋಡ್‌ ಮಾಡಿದ ಆಟಗಾರರು

newsics.com ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ತುಂಬುತ್ತಿರುವ ವಿಡಿಯೋವೊಂದು ವೈರಲ್...

ರಾಜ್ಯದ 36 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್

newsics.com ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿರುವ ಅಥವಾ ಹೆಸರು ನಕಲು ಮಾಡಿರುವ 36 ಲಕ್ಷ ಮತದಾರರಿಗೆ ರಾಜ್ಯ ಚುನಾವಣಾ ಆಯೋಗವು ಭಾರತೀಯ ಅಂಚೆ ಮೂಲಕ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಹೆಚ್ಚುವರಿಯಾಗಿ, ಮುಂದಿನ...

ಅಸಲಿ ಚಿನ್ನದ ಜಾಗದಲ್ಲಿ ನಕಲಿ ಬಂಗಾರವಿಟ್ಟು ಗ್ರಾಹಕರಿಗೆ ವಂಚಸಿದ ಬ್ಯಾಂಕ್ ಸಿಬ್ಬಂದಿ

newsics.com ಚಿಕ್ಕಮಗಳೂರು: ಗ್ರಾಹಕರಿಗೆ ಬ್ಯಾಂಕ್‌ ಸಿಬ್ಬಂದಿ ಕೋಟ್ಯಂತರ ರೂಪಾಯಿ ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ. 6 ಕೋಟಿಗೂ ಅಧಿಕ ಹಣ ದುರುಪಯೋಗದ ಆರೋಪ...
- Advertisement -
error: Content is protected !!