Sunday, March 26, 2023

ಸ್ವರಾರ್ಣವನಿಗೊಂದು ಪದನಮನ

Follow Us

ಎಸ್ಪಿಬಿಯವರ ಶರೀರ ಇಂದಿಲ್ಲವಾದರೂ ಅವರ ಶಾರೀರ, ಶಾರೀರದಿಂದ ಹೊರಬಂದ ಗಾನಸುಧೆ ನಮ್ಮನ್ನು ಕಾಲಾತೀತವಾಗಿ ಕಾಡುತ್ತವೆ. ಅವರಿಗೆ ಅವರೇ ಸಾಟಿ… ಸದಾ ಹಸನ್ಮುಖಿಯಾಗಿ, ಸುಸಂಸ್ಕೃತ ಹಾಗೂ ಸರಳ ಜೀವನ ಶೈಲಿಯಿಂದಲೇ ಜನರ ಗಮನ ಸೆಳೆದವರು. ನಿಜ ಅರ್ಥದಲ್ಲಿ, ತಾನೂ ಬೆಳಗಿ ಇತರರನ್ನೂ ಬೆಳಗಿಸಿದ ‘ಸಂಗೀತ ಲೋಕದ ದಿಲೀಪ’ ಎಸ್ಪಿಬಿ.

     ನುಡಿನಮನ     


♦ ಸುಮಾವೀಣಾ ಹಾಸನ
newsics.com@gmail.com


“ನಿಂ ತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲ ಕ್ಷಣಿಕ ಕಣೋ” ಎಸ್ ಪಿ.ಬಿ.ಯವರೇ ಹಾಡಿದ ಹಾಡು. ಭೂಮಿ ಅನ್ನುವ ಬಣ್ಣದ ಬುಗುರಿ ಬಿಟ್ಟು, ಬಾಳು ಅನ್ನುವ ಸುಂದರ ನಗರಿ ಬಿಟ್ಟು ತೆರಳಿದ ಸ್ವರಾರ್ಣವ ಬಾಲು ಸರ್ ನೀವು ಚಿರಂಜೀವಿಗಳು. ಕೊರೋನಾ ಪಿಡುಗಿನ ಈ ಕಾಲದಲ್ಲಿ ಕೊರೋನಾ ಕುರಿತ ಹಾಡೇ ಇವರ ಕಡೆಯ ಗೀತೆಯಾಗಿದ್ದು ವಿಪರ್ಯಾಸವೇ ಸರಿ. ಸಂಗೀತಕ್ಕೆ ಭಾಷೆ ಇಲ್ಲ ಮಾಧುರ್ಯವೇ ಭಾಷೆ ಎನ್ನುತ್ತಾರೆ. ಆ ಮಾಧುರ್ಯವನ್ನು ಉಸಿರಾಗಿಸಿಕೊಂಡವರು ಎಸ್.ಪಿ.ಬಿ. “ಆಡು ಮುಟ್ಟದ ಸೊಪ್ಪಿಲ್ಲ” ಎಂಬಂತೆ ಇವರು ಹಾಡದೆ ಇರುವ ಸಂಗೀತ ಪ್ರಕಾರವಿಲ್ಲ. ಆಗಿನ ಕಾಲಕ್ಕೆ ಗ್ರಾಮಾಫೋನಿನಲ್ಲಿ ಬರುತ್ತಿದ್ದ ಹಾಡುಗಳನ್ನು ಕೇಳಲೆಂದೇ ಚಹಾದಂಗಡಿ ಪ್ರವೇಶಿಸಿ ಕೇಳುವಿಕೆಯ ಮೂಲಕವೇ ಗಾಯನದ ಬೆಳಕನ್ನು ಕಂಡು ಗಾಯನ ಲೋಕಕ್ಕೆ ಬೆಳಗಾದವರು. ಹದಿನಾರು ಭಾಷೆಗಳಲ್ಲಿ ಹಾಡಿದ ಅಜಾತಶತ್ರು.
ಸಂಗೀತ ದಿಲೀಪ…
ಕವಿಗೆ ಕವಿ ಮಣಿಯುತ್ತಾನೆ ಎಂಬ ಮಾತಿನಂತೆ ಗಾಯಕನೂ ಗಾಯಕನಿಗೆ ಮಣಿಯುತ್ತಾನೆ ಎಂಬುದು ಅನೇಕ ಬಾರಿ ವೇದ್ಯವಾದದ್ದು “ಎದೆ ತುಂಬಿ ಹಾಡುವೆನು” ಕಾರ್ಯಕ್ರಮದ ಮೂಲಕ. ಅಷ್ಟು ಶ್ರೇಷ್ಟ ಗಾಯಕನಾಗಿ ಹೆಸರು ಮಾಡಿದ್ದರೂ ಪುಟ್ಟ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ ಮಕ್ಕಳ ಹಾಡನ್ನು ಮುದ್ದಾಡುತ್ತಿದ್ದ ಇವರ ಭಾವ ನಿಜಕ್ಕೂ ಅನನ್ಯ. ಎಸ್ಪಿಬಿಯವರ ಶರೀರ ಇಂದಿಲ್ಲವಾದರೂ ಅವರ ಶಾರೀರ, ಶಾರೀರದಿಂದ ಹೊರ ಬಂದ ಗಾನಸುಧೆ ನಮ್ಮನ್ನು ಕಾಲಾತೀತವಾಗಿ ಕಾಡುತ್ತವೆ. ಅವರಿಗೆ ಅವರೇ ಸಾಟಿ… ತಮ್ಮ ಗಾಯನ ಎಂಬ ಅದ್ಭುತ ಶಕ್ತಿಯಿಂದಲೇ ಸಂತೋಷ ಅನ್ನುವ ಶಕ್ತಿಯನ್ನು ಪ್ರೇಕ್ಷಕರಲ್ಲಿ ಅನನ್ಯವಾಗಿ ತುಂಬಿದವರು. ಸದಾ ಹಸನ್ಮುಖಿಯಾಗಿ, ಸುಸಂಸ್ಕೃತ ಹಾಗೂ ಸರಳ ಜೀವನ ಶೈಲಿಯಿಂದಲೇ ಸಾಮಾಜಿಕರ ಗಮನ ಸೆಳೆದವರು. ಇವರು ಪಡೆಯದ ಪ್ರಶಸ್ತಿಗಳಿಲ್ಲ, ಸ್ವೀಕರಿಸದ ಗೌರವಗಳಿಲ್ಲ. ನಿಜ ಅರ್ಥದಲ್ಲಿ ಸಂಗೀತ ಕ್ಷೇತ್ರದ ದಿಲೀಪರು. ತಾನೂ ಬೆಳಗಿ ಇತರರನ್ನೂ ಬೆಳಗಿಸಿದವರು.
ಕಾಡುವ ಹಾಡುಗಳು…
ಧ್ವನಿ ವ್ಯತ್ಯಾಸ ಮಾಡಿ ಇವರಂತೆ ಮತ್ತೊಬ್ಬರು ಹಾಡಿದವರಿಲ್ಲ. ಅನುಪಮ ಚಿತ್ರದ “ಬರ್ತಾಳೆ ಕನಸಿನ ರಾಣಿ ಹಾಡನ್ನು ಇಲ್ಲಿ ನೆನಪಿಸಿಕೊಳ್ಳಬಹುದು.1980ರಲ್ಲಿ ತೆರೆಕಂಡ “ಎಲ್ಲಿಂದಲೋ ಬಂದವರು” ಚಲನಚಿತ್ರದ “ಕೆಂಪಾದವೋ ಎಲ್ಲ ಕೆಂಪಾದವೋ” ಎಂಬ ಗೀತೆಯೊಂದಿಗೇ ಪ್ರಸಿದ್ಧ. ಇದು ಪಿ. ಲಂಕೇಶರ ಸುಮಧುರ ಮತ್ತು ಅರ್ಥವತ್ತಾದ ಈ ಗೀತೆ. ಈ ಗೀತೆಯನ್ನು ಸುಮಧುರವಾಗಿ ಹಾಡಿದವರು ಎಸ್.ಪಿ ಬಿಯವರು. “ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡಿದ್ಹಾಂಗೆ ಕೆಂಪಾದವೋ”, “ನುಡಿ ನುಡಿಗೂ ಹೋದಾಗ ಪಚ್ಚೆಯ ತೆನೆಯಂತ ಭೂಮಿಯೂ ಎಲ್ಲಾನೂ ಕೆಂಪಾದವೋ” ಎಂಬ ರಮ್ಯ ಸಾಲುಗಳು ಸಂಗೀತ ರಸಿಕರನ್ನು ನಿತ್ಯ ಕಾಡುತ್ತವೆ. ಮಾಮರವೆಲ್ಲೋ, ಆಸೆಯ ಭಾವ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಶಿಲೆಗಳು ಸಂಗೀತವ ಹಾಡಿವೆ, ಸೇವಂತಿಯೇ, ನಗುವ ಗುಲಾಬಿ ಹೂವೆ. ಅಪರಾಧಿ ನಾನಲ್ಲ… ಮುಂತಾದ ವೈವಿಧ್ಯಮಯ ಹಾಡುಗಳ ಸರದಾರ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಸ್ವರದಲ್ಲಿ ಸದಾ ಇರುತ್ತಾರೆ.
‘ಶ್ರೀನಿವಾಸ ಕಲ್ಯಾಣ’ ಚಿತ್ರದ ಇವರೇ ಹಾಡಿದ ಭಕ್ತಿರಸಗಮ್ಯವಾದ ಹಾಡು “ಪವಡಿಸೂ ಪರಮಾತ್ಮ…” ಅದರೆ ಈ ದಿನ ಬದುಕಿನ ಹಾಡನ್ನು ಮುಗಿಸಿ ಚಿರ ನಿದ್ರೆಗೆ ಜಾರಿದ್ದಾರೆ. ಸರಿ! ಸ್ವರ ಸಂಜೀವಿಗಳೆ ಪವಡಿಸಿ, ಸ್ವರಮಾಂತ್ರಿಕರೆ ಶ್ರೀ ಗಾನಗಂಧರ್ವರೆ… ಬಾಳ ಕಥೆ ಮುಗಿದರೂ ನಿಮ್ಮ ಗಾನ ಬಂಧನ ಎಂದೆಂದಿಗೂ ಸ್ಥಾಯಿ.

ಗಾನ ಗಾರುಡಿಗ ಇನ್ನು ಗಾನ ಲೀನ…

ನನ್ನ ಸಮಾಧಿ ಮೇಲೆ ಈ ಸಾಲುಗಳಿರಲಿ…

ಗಾನಲೋಕದ ಗಾನ ಗಾರುಡಿಗ…

ನಿಮ್ಮ ಹಾಡುಗಳೊಂದಿಗೇ ಬೆಳೆದವರು ನಾವು…

ಮತ್ತಷ್ಟು ಸುದ್ದಿಗಳು

vertical

Latest News

ಇಂದು 36 ಉಪಗ್ರಹಗಳ ಉಡಾವಣೆ: ಕ್ಷಣಗಣನೆ ಆರಂಭ ಎಂದ ಇಸ್ರೋ

newsics.com ಶ್ರೀಹರಿಕೋಟಾ: ಇಸ್ರೊ ಸಹೋದ್ಯೋಗಿಗಳ ಜತೆ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಭಾನುವಾರ ಬೆಳಗ್ಗೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 36 ಉಪಗ್ರಹಗಳನ್ನು ಎಲ್‌ವಿಎಂ3–ಎಂ3/ಒನ್‌ವೆಬ್‌ ಇಂಡಿಯಾ–2 ಮಿಷನ್‌ನಲ್ಲಿ ಉಡಾವಣೆ...

ಸರ್ ಎಂ.ವಿ. ಜನ್ಮಸ್ಥಳಕ್ಕೆ ಬಂದಿರುವುದು ನನ್ನ ಸೌಭಾಗ್ಯ: ಮೋದಿ

newsics.com ಬೆಂಗಳೂರು: ಆಧುನಿಕ ಭಾರತಕ್ಕೆ ಮಾದರಿಯಾಗಿರುವ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಹುಟ್ಟಿದ ಪುಣ್ಯಭೂಮಿ ಚಿಕ್ಕಬಳ್ಳಾಪುರಕ್ಕೆ ಇಂದು ನಾನು ಬಂದಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ...

ಕಾಸರಕೋಡು ಕಡಲತೀರದಲ್ಲಿ ಅಪರೂಪದ ‘ಗಿಟಾರ್ ಫಿಶ್’ ಪತ್ತೆ

newsics.com ಕೇರಳ: ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆಯಾಗಿದೆ. ಕಡಲತೀರದಲ್ಲಿ ಮೀನು ಬಿದ್ದಿರುವುದು ಕಂಡು ಬಂದಿದ್ದು. ಈ ಹಿಂದೆ ಇಂತಹ ಮೀನನನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಕಾಸರಕೋಡಿನ ಇಕೋ ಬೀಚ್‌ನ ವ್ಯವಸ್ಥಾಪಕ ವಿನೋದ್ ಎಸ್...
- Advertisement -
error: Content is protected !!