Sunday, May 29, 2022

ನನ್ನ ದೊಡ್ಡ… ಅಪ್ಪನನ್ನು ದೇವರು ಸುಖವಾಗಿ ಕರೆಸಿಕೊಳ್ಳಬೇಕಿತ್ತು…

Follow Us

ಪ್ರಾರ್ಥನೆಯಲ್ಲಿ ತುಂಬ ಶಕ್ತಿ ಇರುತ್ತೆ ಅಂತ ಚಿಕ್ಕಂದಿನಿಂದಲೂ ಕೇಳಿಕೊಂಡು ಬೆಳೆದಿದ್ದೆ. ಅದರಲ್ಲೂ ಲಕ್ಷಾಂತರ, ಕೋಟ್ಯಂತರ ಜನರ ಪ್ರಾರ್ಥನೆ ಈಗ ಯಾಕೆ ಫಲಿಸಲಿಲ್ಲ ಎನ್ನುವುದೊಂದು ಪ್ರಶ್ನೆ ದೊಡ್ಡದಾಗಿದೆ. ದೇವರಿದ್ದಾನಾ, ಇರೋದು ಸುಳ್ಳಾ ಎನ್ನುವ ಜಿಜ್ಞಾಸೆಗೆ ಮನಸ್ಸು ಬಿದ್ದುಬಿಟ್ಟಿದೆ. ಲಕ್ಷಾಂತರ, ಕೋಟ್ಯಂತರ ಪ್ರಪಂಚದಾದ್ಯಂತ ಇರೋ ಜನರಿಗೆ ತಮ್ಮ ಸಂಗೀತದ ಮೂಲಕ, ತಮ್ಮ ಸ್ನೇಹಮಯಿ ಮನೋಭಾವ, ಸಹಾಯದ ಮನೋಭಾವದ ಮೂಲಕ ಅವರಿಗೆ ಸಂತೋಷ, ನೆಮ್ಮದಿ ಕೊಟ್ಟಂತಹ ನನ್ನ ‘ದೊಡ್ಡ ಅಪ್ಪ’ ದೇವತಾಪುರುಷನಿಗೆ ಈ ರೀತಿಯ ನೋವು, ಈ ರೀತಿಯ ಸಾವು ಬರಬಾರದಿತ್ತು ಎನ್ನುವುದೊಂದು ಕೊರಗು ಉಳಿದುಬಿಟ್ಟಿದೆ. ಸುಖವಾಗಿ ಕರೆದುಕೊಳ್ಳಬೇಕಿತ್ತು.
(ಗಾನ ಗಾರುಡಿಗ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಗೂ ಗಾಯಕಿ ಅರ್ಚನಾ ಉಡುಪ ಅವರದು ಅಪ್ಪ-ಮಗಳ ಬಂಧ. ಎಸ್ಪಿಬಿಯವರನ್ನು ದೊಡ್ಡಪ್ಪ ಎಂದೇ ಕರೆಯುತ್ತಿದ್ದ ಅರ್ಚನಾ ಉಡುಪ ಅವರ ಅಂತರಾಳದ ನುಡಿ ಇಲ್ಲಿದೆ.)

♦ ಅರ್ಚನಾ ಉಡುಪ

ಗಾಯಕಿ
newsics.com@gmail.com


 ಎ ಲ್ಲರೂ ಒಂದಲ್ಲ ಒಂದು ದಿನ ಹೋಗಬೇಕು ಅದು ನಿಜ. ಆದರೆ, ಇಂಥ ದೇವರಂಥ ಮನುಷ್ಯನನ್ನು ತುಂಬ ಸುಖವಾಗಿ ದೇವರು ಕರೆದುಕೊಳ್ಳಬೇಕಿತ್ತು. ಆದೆ, ಇವರು 52 ದಿನ ಒದ್ದಾಡಿಬಿಟ್ರಲ್ಲ, ಅದನ್ನು ನೋಡಿದ್ಮೇಲೆ ನನಗೆ ತರ್ಕಗಳೆಲ್ಲ ಬುಡಮೇಲು ಆದ ಹಾಗೆ ಅನ್ನಿಸಿಬಿಟ್ಟಿದೆ. ಅವರು ಸ್ವಲ್ಪ ಕ್ರಿಟಿಕಲ್ ಇದಾರೆ ಅಂತ ಗೊತ್ತಾದ ದಿನದಿಂದಲೂ ನಮ್ಮೂರಿನಲ್ಲಿರುವ ನೀಲಕಂಠೇಶ್ವರ ದೇವಸ್ಥಾನಕ್ಕೆ ದಿನವೂ ಬೆಳಗ್ಗೆ ರುದ್ರಾಭಿಷೇಕ ಮಾಡಿಸ್ತಾ ಇದ್ದೆ. ಅವರು ತೀರಿಕೊಂಡ ಮೇಲೆ ದೇವರಿಗೆ ದೀಪ ಕೂಡ ಹಚ್ಚಿಲ್ಲ. ದೇವರಿಲ್ಲ ಅನ್ನೋದು ಪದೇ ಪದೆ ಮನಸ್ಸಿಗೆ ಖಾತ್ರಿಯಾಗ್ತಾ ಇದೆ. ದೇವರಿಲ್ಲದೆ ಇರೋದೆ ನಿಜ ಅಂತ ಅನಿಸ್ತಾ ಇದೆ.
ಮುಗ್ಧ ನಗುವಿಲ್ಲ…
ಬಾಯ್ತುಂಬ “ಮಗಳೇ’ ಅಂತ ಕರೀತಾ ಇದ್ದಂಥ ಧ್ವನಿ ಇನ್ನು ಇಲ್ವಲ್ಲ, ಇನ್ನು ಅದನ್ನು ಕೇಳೋದಕ್ಕೆ ಸಿಗೋದಿಲ್ವಲ್ಲ, ಆ ಮುಗ್ಧ ಮುಖ, ಮಗುವಿನಂಥ ನಗುವನ್ನು ನೋಡೋಕೆ ಸಿಗೋದಿಲ್ವಲ್ಲ ಅಂತ. ಅವರಿಗೆ ಹಾಡೋಕಾಗ್ದೆ ಇದ್ರೂ ಪರವಾಗಿರಲಿಲ್ಲ, ನಮಗೆಲ್ಲ ಸ್ಫೂರ್ತಿಯಾಗಿ, ಆಶೀರ್ವಾದ ಮಾಡ್ಕೊಂಡು, ಕಣ್ಣೆದುರು ಇದ್ದಿದ್ರೆ ಸಾಕಾಗಿತ್ತು. ಬಟ್, ಅವರು “ನನಗೆ ಹಾಡೋಕ್ಕಾಗ್ದೆ ಇದ್ರೆ ನಾನು ಸತ್ತೋಗ್ತೀನಿ’ ಅಂತ ಹೇಳ್ತಾ ಇದ್ರಂತೆ. ಬಹುಶಃ ಎರಡೂ ಶ್ವಾಸಕೋಶ ವಿಫಲವಾಗಿರುವುದು ಅವರಿಗೆ ತಿಳಿಯಿತು ಅನಿಸುತ್ತೆ. ಇನ್ನು ಹಾಡೋಕಾಗಲ್ಲ ಅನ್ನುವ ಕೆಟ್ಟ ಕಹಿಸತ್ಯ ಅವರಿಗೆ ಗೊತ್ತಾಗಿರಬಹುದು. “ಇಲ್ಲ, ನಾನಿನ್ನು ಇರಕೂಡದು’ ಅಂತ ಅಂದ್ಕೊಂಡಿರಬಹುದು ಎಂದು ನನಗೆ ಅನಿಸುತ್ತದೆ.
ತುಂಬ ವಿಲ್ ಪವರ್ ಅವರಿಗೆ. ಆದರೆ ಈಗ ಯಾಕೆ ದೊಡ್ಡಪ್ಪ ಸೋತುಬಿಟ್ರಿ? ನೀವು ಇನ್ನೊಂದ್ ಸ್ವಲ್ಪ ಫೈಟ್ ಮಾಡಬೇಕಿತ್ತು ಅಂತ ಅವರನ್ನು ಸಾವಿರ ಸಲ ಕೇಳಿದೀನಿ, ಕೋಪ ಮಾಡ್ಕೊಂಡಿದೀನಿ.
ಸಾವಿನ ಬಗ್ಗೆ ಮಾತಾಡೋಕೆ ನೀನಿನ್ನೂ ಚಿಕ್ಕವಳು…
ಹಿಂದೆ ಒಂದು ಸಂದರ್ಶನದಲ್ಲಿ ಹೇಳಿದ್ದೆ, ನಾನು ಬದುಕಿರುವವರೆಗೂ ಹಾಡ್ತಾ ಇರಬೇಕು, ಯಾವುದಾದರೂ ವೇದಿಕೆ ಮೇಲೆ ಹಾಡ್ತಾ ಹಾಡ್ತಾನೇ ಕೊನೆ ಉಸಿರೆಳೆಯಬೇಕು ಎಂದು ಹೇಳಿದ್ದೆ. ಅದನ್ನವರು ನೋಡಿ, ಫೋನ್ ಮಾಡಿಕೊಂಡು ಕಾಲು ಗಂಟೆ ಬೈದಿರಬಹುದು, “ನೀನು ಚಿಕ್ಕವಳು, ಏನ್ ನೀನು ಸಾವಿನ ಬಗ್ಗೆ ಮಾತಾಡೋದು, ನಾವೆಲ್ಲ ಇದೀವಿ ನಿನ್ನ ಕಣ್ಣೆದುರು. ಸಾವಿನ ಬಗ್ಗೆ ಮಾತಾಡೋಕೆ ನಿಂಗೆ ಎಷ್ಟು ಧೈರ್ಯ?’ ಅಂತೆಲ್ಲ ಬೈದರು. “ಅಯ್ಯೋ, ದೊಡ್ಡಪ್ಪ, ಹುಟ್ಟಿನಷ್ಟೇ ಸಾವೂ ಪರಮಸತ್ಯ ಅಲ್ವಾ? ಹೀಗೆಲ್ಲ ಬಾಳಬೇಕು ಅಂತ ಆಸೆ ಮಾಡೋ ನಾವು ಈ ರೀತಿಯಲ್ಲಿ ಹೋಗಬೇಕು ಅಂತ ಆಸೆ ಇಟ್ಕೊಳೋದು ತಪ್ಪಾ? ಅದು ನ್ಯಾಚುರಲ್ ಅಲ್ವಾ”? ಅಂತ ಹೇಳೋಣ ಅಂದ್ಕೊಂಡೆ. ಆದರೆ, ಅವರಿಗೆ ಅಗೌರವ ತೋರಿಸಬಾರದು ಎಂದು “ಸಾರಿ’ ಎಂದು ಸುಮ್ಮನಾದೆ. ನಮಗೆಲ್ಲ ಹಾಗೆ ಬೈದೋರು ಈಗ ನಮ್ಮನ್ನು ಬಿಟ್ಟು ಹೊರಟು ಹೋಗಿದ್ದಾರೆ.
ಧೈರ್ಯ ತುಂಬಿದ್ರು…
ನಂಗೆ ವೋಕಲ್ ಕಾರ್ಡ್ಸ್ ನಲ್ಲಿ ತೊಂದರೆಯಾಗಿ, ಇಡೀ ವರ್ಷ ಹಾಡೋಕಾಗದೆ ಇರೋ ಪರಿಸ್ಥಿತಿಯಲ್ಲಿ ಅವರು ನನಗೆ ಅದೆಷ್ಟು ಮಾನಸಿಕವಾಗಿ ಧೈರ್ಯ ತುಂಬಿದ್ದರು ಎಂದು ಹೇಳೋಕಾಗಲ್ಲ. ಯಾವಾಗ ಏನು ನೋವಾದರೂ, ನನ್ನದೇನಾದರೂ ಖಾಸಗಿ ಸಮಸ್ಯೆ ಇದ್ದು, ಏನಾದರೂ ತೊಂದರೆ ಇದ್ದರೆ, ನೊಂದಿರುವಾಗ ಅವರಲ್ಲಿ ಹೇಳಿಕೊಳ್ತಾ ಇದ್ದೆ. ಶೂಟಿಂಗ್ ಗೆ ಬಿಡುವು ಇದ್ದಾಗ ಮಧ್ಯಾಹ್ನ ಫೋನ್ ಮಾಡ್ತಾ ಇದ್ರು. ಮಾತನಾಡಿ ವಿಚಾರಿಸ್ತಾ ಇದ್ರು, ಧೈರ್ಯ ತುಂಬ್ತಾ ಇದ್ರು.
ಅಪ್ಪನಿಗೆ ಬೈಪಾಸ್ ಸರ್ಜರಿ ಆಗಬೇಕಿದ್ದಾಗ ನಾನು ತುಂಬ ಹೆದ್ರಿಕೊಂಡಿದ್ದೆ. ಆಗಲೂ ನನಗೆ ಫೋನ್ ಮಾಡಿ ಧೈರ್ಯ ತುಂಬಿದ್ರು. “ಹೆದ್ರಿಕೊಳ್ಳಬೇಡ, ಸರ್ಜರಿ ಆಗ್ತಾ ಇದ್ದ ಹಾಗೆ ಅವರು ಕಾಲೇಜು ಹುಡುಗನ ಹಾಗೆ ಆಗಿಬಿಡ್ತಾರೆ. ಏನೂ ಆಗಲ್ಲ, ಅದೊಂಥರ ಒಳ್ಳೇದೆ’ ಅಂತೆಲ್ಲ ಹೇಳಿದ್ರು. ಹೀಗೆ ಸಾವಿರಾರು ಜನಕ್ಕೆ ಧೈರ್ಯ ತುಂಬಿರುವ ಶಕ್ತಿನೇ ಈಗ ನಮ್ಮ ನಡುವೆ ಇಲ್ಲ.
ಮಹಮ್ಮದ್ ರಫಿ ಎಂದರೆ ಪ್ರಾಣ…
ಅವರಿಗೆ ಮಹಮ್ಮದ್ ರಫಿ ಅಂದರೆ ಪಂಚಪ್ರಾಣ. “ರಫಿ ಸಾಹೇಬ್ ನನ್ನ ದೇವರು’ ಅಂತ ಹೇಳೋರು. ಅವರ ಗಾಯನಶೈಲಿ, ಜೀವನಶೈಲಿ ಎರಡನ್ನೂ ಅಳವಡಿಸಿಕೊಂಡಿದ್ರು. ಯಾವಾಗ್ಲೂ ಹೇಳೋರು, ಒಬ್ಬ ಒಳ್ಳೆಯ ಆರ್ಟಿಸ್ಟ್ ಆಗೋದು ಇಂಪಾರ್ಟೆಂಟ್ ಅಲ್ಲ, ಒಬ್ಬ ಒಳ್ಳೆ ಹ್ಯೂಮನ್ ಬೀಯಿಂಗ್ ಆಗಬೇಕು, ಇನ್ನೊಬ್ಬರನ್ನು ಮೆಚ್ಚಿಕೊಳ್ಳಬೇಕು, ವೈರಿಯನ್ನಾದರೂ ಮೆಚ್ಚಿಕೊಳ್ಳಬೇಕು. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು. ಇವರು ಬೇರೆಯವರ ಕಷ್ಟಕ್ಕೆ ಸ್ಪಂದಿಸಿ ತಮ್ಮ ಜೀವವನ್ನೇ ಕಳೆದುಕೊಂಡ್ರು. ಅವರು ಇನ್ನೊಬ್ಬರಿಗೆ ಸಹಾಯ ಮಾಡೋಕೆ ಹೆಚ್ಚಿನ ಪ್ರಯತ್ನ ಮಾಡೋರು. ಇವರ ಹತ್ತಿರಕ್ಕೆ ಬಂದಂಥ ಯಾವುದೇ ಮನುಷ್ಯರಿಗೆ ಕೂಡ ಇವರ ಒಳ್ಳೆಯತನ ಪ್ರಭಾವಿಸದೆ ಹೋಗಿಲ್ಲ. ಅಜಾತಶತ್ರು ಆಗಿದ್ರು. ಎಲ್ಲರ ಬಾಯಲ್ಲೂ ಒಳ್ಳೆಯ ಮಾತುಗಳನ್ನು ಕೇಳಿಸಿಕೊಳ್ಳೋದು ಇದೆಯಲ್ಲ, ಅದು ಗ್ರೇಟ್. ಕೆಲವರು ಒಳ್ಳೆಯವರೆಂದು ತೋರಿಸಿಕೊಳ್ಳೋಕೆ ಪ್ರಯತ್ನ ಮಾಡ್ತಾರೆ. ಒಳ್ಳೆಯ ಹೆಸರು ತಗೊಳೋಕೆ ತಮ್ಮದಲ್ಲದ ಗುಣ ಪ್ರದರ್ಶನ ಮಾಡ್ತಾರೆ. ಆದ್ರೆ, ಒಮ್ಮೆಯಾದರೂ ನಿಜವಾದ ಗುಣ, ವ್ಯಕ್ತಿತ್ವ ಆಚೆಗೆ ಬರುತ್ತದೆ. ಕೃತಕತೆ ಹೆಚ್ಚು ದಿನ ಬಾಳೋದಿಲ್ಲ. ಆದರೆ, ಈ ಮನುಷ್ಯ ಮಾತ್ರ ಜೀವನದುದ್ದಕ್ಕೂ ಏನೂ ಪ್ರಯತ್ನ ಪಡೋದೇ ಬೇಡ, ಇದ್ದಿದ್ದೇ ಹಾಗೆ.
ಸಿಹಿ ಪ್ರಿಯ…
“ಚಿಕ್ಕೆಜಮಾನ್ರು’ ಚಿತ್ರದಲ್ಲಿ “ಪ್ರೇಮದ ಹೂಗಾರ’ ಎನ್ನುವ ಹಾಡನ್ನು ಹಂಸಲೇಖ ಬರೆದಿದ್ದಾರೆ. ಬಾಲು ಸರ್ ಅದನ್ನು ಹಾಡಿದ್ದಾರೆ. ಅದರ ಸಾಲುಗಳನ್ನು ಕೇಳಿ, ಅದನ್ನು ಕೇಳಿ ಕೇಳಿ ಕಣ್ಣೀರಾಕ್ತೀನಿ ನಾನು. ಆ ಸಾಲುಗಳನ್ನು ಇವರಿಗೋಸ್ಕರನೇ ಬರೆದಿದಾರೇನೋ ಅನಿಸುತ್ತದೆ. ಪ್ರತಿಯೊಂದು ಪದವೂ ಬಾಲು ಸರ್ ಹೇಗೆ ಬದುಕಿದ್ರು, ಎಂಥ ವ್ಯಕ್ತಿತ್ವ ಎನ್ನುವುದನ್ನು ತೋರಿಸುವ ಹಾಗಿದೆ. ಈ ಹಾಡಿನ ಸಾಲುಗಳಂತೆ ಬದುಕಿದ್ರು. ಅವರಿಗೆ ಸ್ವೀಟ್ ಅಂದ್ರೆ ತುಂಬ ಇಷ್ಟ. ಬೇಸಿಕಲಿ, ಅವರು ಆಹಾರಪ್ರಿಯರು. ರುಚಿರುಚಿಯಾದ ಆಹಾರ ಸೇವಿಸೋಕೆ ಇಷ್ಟ. ನಾನು ಕೆಲವು ಕಾರ್ಯಕ್ರಮಗಳಿದ್ದಾಗ ಅವರಿಗೆ ಬೀಟ್ ರೂಟ್ ಹಲ್ವಾ, ಕ್ಯಾರೆಟ್ ಹಲ್ವಾ ಮಾಡಿ ಡಬ್ಬಿಯಲ್ಲಿ ತೆಗೆದುಕೊಂಡು ಹೋಗಿ ತಿನ್ನೋಕೆ ಕೊಡ್ತಿದ್ದೆ. “ನಾನು ಮೊದಲೇ ದೊಡ್ಡಪ್ಪ, ದೊಡ್ ಅಪ್ಪ..ಸ್ವೀಟ್ ತಿನ್ನಿಸಿ ನನ್ನನ್ನು ಇನ್ನೂ ದೊಡ್ಡ ಮಾಡ್ತೀಯಾ ನೀನು. ಇನ್ನೂ ಡುಮ್ಮ ಮಾಡ್ತೀಯಾ?’ ಅಂತ ಹುಸಿ ಕೋಪ ಮಾಡಿಕೊಂಡು ತಿನ್ನೋರು. “ಚೆನ್ನಾಗಿದೆ ಮಗಳೇ’ ಅಂತ ಹೇಳೋರು.
ಬರ್ತೀನಿ ಅಂದೆನಲ್ವಾ? ಬರ್ತೀನಿ…
ಅವರದ್ದೆಷ್ಟು ಉದಾತ್ತವಾದ ಮನಸ್ಸು ಅಂದ್ರೆ, ಅದಕ್ಕೇ ದೊಡ್ಡ ಮನುಷ್ಯರು, ದೊಡ್ಡ ಗುಣ ಅಂತ ಹೇಳೋದು ಅನ್ಸುತ್ತೆ. ನನ್ನದೆಲ್ಲ ಪ್ರಯತ್ನಗಳಿಗೆ ಅವರು ನನ್ನ ಜೊತೆ ಇದಾರೆ, ಬೆಂಬಲವಾಗಿದ್ರು. ಗಾಂಧಾರ ಅಂತ ಸಂಸ್ಥೆ ಹುಟ್ಟುಹಾಕಿ, “ದೊಡ್ಡಪ್ಪ, ನೀವು ಬರಬೇಕು, ಉದ್ಘಾಟನೆ ಮಾಡಿಕೊಡಬೇಕು’ ಎಂದಾಗ ಅವರೇನೂ ಹಿಂದೆ ಮುಂದೆ ಯೋಚನೆ ಮಾಡಲಿಲ್ಲ. ಸೀದಾ ಬಂದಿದ್ರು. ದೊಡ್ಡಪ್ಪ ನಿಂಗೆ ಯಾವ ಹೋಟೆಲ್ ನಲ್ಲಿ ಉಳಿದುಕೊಳ್ಳೋಕೆ ರೂಮ್ ಬುಕ್ ಮಾಡ್ಲಿ? ಯಾವ ಏರ್ ಲೈನ್ ಬುಕ್ ಮಾಡ್ಲಿ?’ ಎಂದು ಕೇಳಿದರೆ, “ನಿಂಗೆ ಬೇರೆ ಬೇಕಾದಷ್ಟು ನೂರಾರು ಕೆಲಸ ಇರುತ್ತದೆ. ನನ್ನ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಾನು ಬರ್ತೀನಿ ಅಂತ ಹೇಳಿದ್ನಲ್ವಾ, ಬರ್ತೀನಿ’ ಅಂದ್ರು. ಬಂದ್ರು, ಇಡೀ ಕಾರ್ಯಕ್ರಮ ಕೂತಿದ್ರು. ಪಾಪ, ಅವತ್ತು ಅವರಿಗೆ ಹುಷಾರೂ ಇರಲಿಲ್ಲ. ಸಣ್ಣದಾಗಿ ಕೆಮ್ಮು ಸಹ ಇತ್ತು. “ಒಂದು ಹಾಡು ಹಾಡ್ತೀರಾ? ತೊಂದ್ರೆ ಇಲ್ವಾ?’ ಅಂದೆ. “ಒಂದೇನು? ಎರಡು ಹಾಡು ಹಾಡ್ತೀನಿ’ ಅಂದ್ರು. ಎರಡು ಹಾಡು ಹಾಡಿದ್ರು. ತುಂಬ ಚೆಂದದ ಮಾತುಗಳನ್ನಾಡಿದ್ರು, ಆಶೀರ್ವಾದ ಮಾಡಿದ್ರು. ಎರಡು ಸಿನಿಮಾಗಳಲ್ಲಿ ಹಾಡಿದ ಕೂಡಲೇ ಈಗಿನ ಎಷ್ಟೋ ಗಾಯಕರಿಗೆ ಕಾಲು ನೆಲದ ಮೇಲೆ ನಿಲ್ಲಲ್ಲ. ಆದರೆ, 50 ವರ್ಷಗಳ ಕಾಲ, 40 ಸಾವಿರ ಹಾಡುಗಳನ್ನು ಹಾಡಿದ ಇಂಥ ಮಹಾನ್ ವ್ಯಕ್ತಿಗೆ ಒಂದೂ ಸಾಸಿವೆ ಕಾಳಿನಷ್ಟೂ ಅಹಂಕಾರವಾಗಲೀ, ಈಗೋವಾಗಲೀ ಇರಲಿಲ್ಲ. ಅವರು ಯೋಗಿಯೇ. ಒಂಥರಾ ಕೆಟ್ಟ ಗುಣಗಳನ್ನು ದೇವರು ಅವರಿಗೆ ಕೊಡಲೇ ಇಲ್ಲ. ಕೋಪ ಇಲ್ಲ, ಅಸೂಯೆ ಇಲ್ಲ. ಅದು ಹೇಗೆ ಆ ಥರ ಇರೋಕೆ ಸಾಧ್ಯ ಎಂದು ಆಶ್ಚರ್ಯ ಆಗುತ್ತದೆ. ಗಾಯನದಲ್ಲಷ್ಟೇ ಅಲ್ಲ, ನಡವಳಿಕೆಯಲ್ಲೂ ಅವರು ಎಲ್ಲರಿಗೂ ಮಾದರಿ. ಅವರೊಂದು ವಿಶ್ವವಿದ್ಯಾಲಯ ಇದ್ದ ಹಾಗೆ. ಅವರನ್ನು ನೋಡಿ ಕಲಿತಷ್ಟೂ ಇದೆ.
ಮಗಳಿಗಾಗಿ ಹಾಡ್ತೀನಿ…
ಇನ್ನೊಮ್ಮೆ ನಾನು ಇಳಯರಾಜಾ ಅವರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೆ. ಅದಕ್ಕೆ “ದೊಡ್ಡಪ್ಪ, ಬಂದು ಹಾಡಬೇಕು’ ಎಂದು ಕೇಳಿದ್ದೆ. “ಖಂಡಿತ ಬಂದು ಹಾಡ್ತೀನಿ’ ಎಂದು ತಕ್ಷಣ ಒಪ್ಕೊಂಡು. ಇದು ಕೇವಲ ಗೆಸ್ಟ್ ಆಗಿ ಬರೋ ಕಾರ್ಯಕ್ರಮ ಅಲ್ಲ, ನಿಮ್ಮದೇ ಕಾರ್ಯಕ್ರಮ. ಹೀಗಾಗಿ, ಗೌರವಧನ ಹೇಳಿ’ ಎಂದರೆ, “ನೀ ನನಗೆ ಒಂದು ರೂಪಾಯಿ ಕೊಟ್ರೂ ತಗೊಳ್ತೀನಿ. ನೀನು ನನಗೆ ಏನು ಕೊಡದಿದ್ರೂ ಪರವಾಗಿಲ್ಲ. ನನಗೆ ಗೊತ್ತು, ನೀನೆಲ್ಲ ನಿನ್ನ ಕೈಯಿಂದ ವೆಚ್ಚ ಮಾಡ್ತೀಯ ಅಂತ. ನೀನು ಮೊದ್ಲು ಬೇರೆ ಎಲ್ಲ ಖರ್ಚುಗಳನ್ನು ನೋಡಿಕೊ. ನನಗೆ ಉಳಿದರೆ ಕೊಡು, ಇಲ್ಲ ಅಂದ್ರೆ ಬೇಡ ನನಗೆ, ತೊಂದರೆ ಇಲ್ಲ. ನನ್ನ ಮಗಳಿಗೋಸ್ಕರ ಬಂದು ಹಾಡ್ತೀನಿ’ ಅಂದಿದ್ರು. ಬಂದು, ನಾನೇನು ಹಾಡುಗಳ ಲಿಸ್ಟ್ ಅವರಿಗೆ ಕಳಿಸಿದ್ನೋ ಅವುಗಳನ್ನೆಲ್ಲವನ್ನೂ ಹಾಡಿದ್ರು. ಜತೆಗೆ, ತಮಗಿಷ್ಟವಾದ ಒಂದೆರಡು ಹಾಡುಗಳನ್ನೂ ನನಗೆ ಕಳಿಸಿ “ಈ ಹಾಡುಗಳು ನನಗೆ ತುಂಬ ಇಷ್ಟ. ಇವುಗಳನ್ನೂ ಲಿಸ್ಟ್ ಮಾಡಿಕೊಳ್ತೀಯಾ?’ ಅಂತ ಹೇಳಿದ್ರು. ಹಾಗೆಯೇ ಹಾಡಿದ್ರು. ಇಂಥ ಮನುಷ್ಯರು ಇರೋದಕ್ಕೆ ಹೇಗೆ ಸಾಧ್ಯ ಅಂತ ಅನಿಸುತ್ತದೆ.
ಭೈರವಿ ರಾಗ ತುಂಬ ಇಷ್ಟ…
ನಾನು “ಎದೆತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಅವರ ಜತೆ ಗೆಸ್ಟ್ ಆಗಿ ಅವರ ಪಕ್ಕ ಕೂತಿದ್ದೆ. ಕಾರ್ಯಕ್ರಮ ಮುಗಿದ ಬಳಿಕ ನಾವೊಂದು ಹಾಡು ಹೇಳಬೇಕಾಗಿತ್ತು. ಆಗ ಭೈರವಿ ರಾಗದಲ್ಲಿ ನಾನೇ ಕಂಪೋಸ್ ಮಾಡಿದ್ದ ಹಾಡನ್ನು ಹಾಡಿದೆ. ಅವರಿಗೆ ಭೈರವಿ ರಾಗ ತುಂಬ ಇಷ್ಟ ಎಂದು ನನಗೆ ಆನಂತರ ತಿಳಿಯಿತು. ಹಾಡಿನ ನಂತರ ಹತ್ತಿರ ಬಂದು “ತುಂಬ ಚೆನ್ನಾಗಿ ಮಾಡಿದೀಯ ಮಗಳೇ, ಪ್ರತಿಯೊಂದು ಪದಕ್ಕೂ ಸರಿಯಾಗಿ ಸಂಗೀತ ನೀಡಿದ್ದೀಯ’ ಎಂದರು. ನನಗೆ ತಕ್ಷಣ ಆಲೋಚನೆ ಬಂದು, “ದೊಡ್ಡಪ್ಪ, ಇದನ್ನು ರೆಕಾರ್ಡ್ ಮಾಡಿದರೆ ನೀವು ದನಿ ಕೊಡ್ತೀರಾ? ಹಾಡ್ತೀರ?. ನೀವು ಹಾಡಿದರೆ ನನ್ನ ಸೌಭಾಗ್ಯ’ ಎಂದೆ. ಕೂಡಲೇ ಹಿಂದೆ ಮುಂದೆ ಯೋಚನೆನೇ ಮಾಡಲಿಲ್ಲ, “ಟ್ರ್ಯಾಕ್ ಕಳಿಸು, ಹಾಡ್ತೀನಿ’ ಅಂದ್ರು. ನಾನು ಚೆನ್ನೈಗೆ ಟ್ರ್ಯಾಕ್ ಕಳಿಸಿದೆ, ಅದ್ಭುತವಾಗಿ ಹಾಡಿ ಅದಕ್ಕೆ ಜೀವ ತುಂಬಿ ವಾಪಸ್ ಕಳಿಸಿದ್ರು. ನಾನು ಸ್ಟುಡಿಯೋದಿಂದಲೇ ಫೋನ್ ಮಾಡಿದೆ, “ದೊಡ್ಡಪ್ಪ, ಎಷ್ಟು ಚೆನ್ನಾಗಿ ಹಾಡಿದ್ದೀರಿ, ನಿಜಕ್ಕೂ ನನ್ನ ಜೀವನ ಸಾರ್ಥಕವಾಯಿತು’ ಎಂದೆ. ಅದಕ್ಕೆ “ನೋಡಮ್ಮ, ನಾನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಂತ ನೀನು ನೋಡಬಾರದು. ಇನ್ನೂ ಏನಾದರೂ ಬೆಟರ್ ಮಾಡೋಕೆ ಸಾಧ್ಯವಾದರೆ ಹೇಳು, ನಾನು ಹಾಡಿರೋದು ಸರಿಯಾಗಲಿಲ್ಲ ಅಂದ್ರೆ ಹೇಳು, ನಿನ್ನ ತಲೆಯಲ್ಲಿರೋದನ್ನು ನಾನು ಹಾಡಲಿಲ್ಲ ಅಂದ್ರೆ ಹೇಳು, ಕರೆಕ್ಷನ್ ಇದ್ರೆ ಹೇಳು, ಮಾಡಿ ಕಳಿಸ್ತೀನಿ’ ಅಂದ್ರು. ಅಪರೂಪದ ಗುಣ, ವ್ಯಕ್ತಿತ್ವ. “ಈ ಹಾಡಿಗೆ ಪೇಮೆಂಟ್?’ ಅಂತ ಕೇಳಿದ್ರೆ “ನಿಂಗೆ ಏಟು ಬೇಕಾ? ಪೇಮೆಂಟ್ ಅಂತೆಲ್ಲ ಮಾತನಾಡಿದರೆ ನಾನು ಫೋನ್ ಕಟ್ ಮಾಡಿಬಿಡ್ತೀನಿ ನೋಡು. ತಲೆಹರಟೆ ಮಾತನಾಡಬಾರದು’ ಎಂದು ಬೈದುಬಿಟ್ರು. ಇಷ್ಟು ಅಕ್ಕರೆ, ಸಪೋರ್ಟ್ ಮಾಡುವ ಗುಣ.
ಅವರು ನುಡಿದಂತೆ ನಡೆದವರು ಅವರು. “ಉದಯೋನ್ಮುಖ ಗಾಯಕರಾದರೂ ಪರವಾಗಿಲ್ಲ, ಅವರೇನೋ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಎಂದಾದರೆ, ಬಿಗುಮಾನ, ಈಗೋ ಎಲ್ಲ ಬಿಟ್ಟು “ಒಳ್ಳೆಯ ಕೆಲಸ ಮಾಡ್ತಿದ್ದೀರಿ’ ಅಂತ ಒಂದ್ ಮಾತು ಹೇಳಿ ನೋಡಿ. ಅವರಿಗೆ ಅದೆಷ್ಟು ಖುಷಿ ಕೊಡುತ್ತೆ, ಅವರು ನಿಮ್ಮನ್ನು ಎಷ್ಟು ಪ್ರೀತಿಸ್ತಾರೆ ಅಂತ ಗೊತ್ತಾಗುತ್ತೆ’ ಅಂತ ಯಾವಾಗಲೂ ಹೇಳೋರು. ಅವರು ಯಾವತ್ತೂ ಹಾಗೆಯೇ ಇದ್ದವರು.
ಫೋನ್’ನಲ್ಲಿ ಅವರ ಧ್ವನಿ ಕೇಳಿ ಅತ್ತೇ ಬಿಟ್ಟೆ…
ನಾನು ಬಹುಶಃ ಪಿಯುಸಿಯಲ್ಲಿದ್ದೆ. ಜಿ.ವಿ.ಅತ್ರಿಯವರ ಒಂದು ಧ್ವನಿಸುರುಳಿಯಲ್ಲಿ ಬೇಂದ್ರೆಯವರ ಒಂದು ಹಾಡನ್ನು ಹಾಡಿದ್ದೆ. ಅದೇ ಧ್ವನಿಸುರುಳಿಯಲ್ಲಿ ದೊಡ್ಡಪ್ಪನೂ ಒಂದು ಹಾಡು ಹಾಡಿದ್ರು. “ಎರಡೇ ದಿನ ಬಾಳಿದರೂ ಗರುಡನಂತೆ ಬಾಳಬೇಕು, ಗಗನದಗಲ ಹಾರಬೇಕು, ರೆಕ್ಕೆ ಬೀಸುತ, ಕಂಡವರು ಬೆರಗುಗೊಂಡು ಏನು ಚೆಂದ ಎನ್ನಬೇಕು…’ ಎನ್ನುವ ಹಾಡದು. ಅದರಂತೆಯೇ ಅವರು ಬದುಕಿದರು. ಗರುಡದಂತೆ, ಸಿಂಹದಂತೆ ಬದುಕಿದರು. ಅದೇ ಧ್ವನಿಸುರುಳಿಯಲ್ಲಿ “ದೇಹವೊಂದು ದೇವವೀಣೆ’ ಎನ್ನುವ ಹಾಡನ್ನು ಹಾಡಿದ್ದೆ. ಬಿಡುಗಡೆಯಾದ ಬಳಿಕ ಇವರಿಗೊಂದು ಪ್ರತಿ ಕೊಟ್ಟಿದ್ದರು. ಇವರು ಎಂಥ ಮನುಷ್ಯ ಅಂದ್ರೆ, ನಾವಾದ್ರೆ ಬಹುಶಃ ನಮ್ಮ ಹಾಡು ಕೇಳಿ ಸುಮ್ಮನಾಗ್ತೀವಿ, ಆದರೆ, ಇವರು ಎಲ್ಲ ಹಾಡುಗಳನ್ನೂ ಕೇಳಿದ್ದರು. ಅವರ ಆಪ್ತಸ್ನೇಹಿತ ಓಬಯ್ಯ ಅನ್ನುವವರಿದ್ದಾರೆ. ಬಂದಾಗ ಅವರನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ. ಅವರು ನಮ್ಮ ಕುಟುಂಬಕ್ಕೂ ಬೇಕಾದವರು. ಹಾಗೆ ಓಬಯ್ಯನೋರ ಮನೆಯಲ್ಲಿ ಮಾತನಾಡುತ್ತಿರುವಾಗ “ಓ, ಗೊತ್ತು ಆ ಹುಡುಗಿ, ತುಂಬ ಚೆನ್ನಾಗಿ ಹಾಡಿದ್ಲು, ನಾನು ಹಾಡಿರೋ ಆಲ್ಬಮ್ ನಲ್ಲಿಯೇ ಆಕೆಯೂ ಹಾಡಿದ್ದಾಳೆ. ಫೋನ್ ಮಾಡಿಕೊಡಿ, ನಾನೂ ಮಾತಾಡ್ತೀನಿ’ ಅಂದ್ರಂತೆ. ಓಬಯ್ಯನೋರಿಗೆ ನನಗೆ ಇವರನ್ನು ಕಂಡರೆ ತುಂಬ ಇಷ್ಟವೆಂದು ಗೊತ್ತು. ನಾನು ಅವರ ಕಾಲುಗುರಿಗೂ ಸಮನಾಗಿಲ್ಲದ ಚಿಕ್ಕ ಕಲಾವಿದೆ. ಅವರು ಆಗ ಓಬಯ್ಯನೋರ ಬಳಿ ಫೋನ್ ಮಾಡಿಸಿ “ಅಮ್ಮಾ, ತುಂಬ ಚೆನ್ನಾಗಿ ಹಾಡಿದೆಯಮ್ಮ, ನಂಗೆ ತುಂಬ ಖುಷಿಯಾಯ್ತು. ನಿಮ್ಮ ಧ್ವನಿಯಲ್ಲಿ ಎಸ್. ಜಾನಕಿಯವರ ಝಲಕ್ ಕಾಣಿಸುತ್ತದೆ’ ಎಂದರು. ನನಗೆ ಎಸ್ಪಿಬಿಯವರು ಫೋನ್ ಮಾಡಿದ್ದಾರೆ ಎಂದಾಗಲೇ “ಯಾರಾದ್ರೂ ತಮಾಷೆ ಮಾಡ್ತಿದ್ದಾರಾ?’ ಅನಿಸಿತ್ತು, ಬಳಿಕ ಕೈಕಾಲೆಲ್ಲ ಗಡಗಡ ಅಂತಿತ್ತು. ಫೋನಲ್ಲಿ ಅವರ ಆಳವಾದ ಧ್ವನಿ ಕೇಳಿಸ್ತಾ ಇದ್ರೆ, ಅವರು ಮಾತಾಡ್ತಾ ಇದ್ರೆ ನನಗೆ ಜೋರಾಗಿ ಅಳು ಬರ್ತಾ ಇತ್ತು. ಅಬ್ಬಾ, ಅದನ್ನು ನನಗೆ ಇವತ್ತಿಗೂ ಮರೆಯೋಕೆ ಆಗಲ್ಲ. “ಯಾಕಮ್ಮ, ಮಾತಾಡ್ತಾ ಇಲ್ಲ?’ ಅಂದ್ರು. ಬಿಕ್ಕುತ್ತಲೇ “ನನಗೆ ನಂಬೋಕೆ ಆಗ್ತಾ ಇಲ್ಲ’ಎಂದೆ. “ನಾನೇ ಅಮ್ಮ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ನಿನ್ನ ಅಳಿಸೋಕೆ ಅಂತ ಫೋನ್ ಮಾಡಿದ್ನೇನಮ್ಮ, ನಂಗೆ ಹೆದರಿಕೆ ಆಗುತ್ತೆ. ಹುಡುಗಿ ಅಳಿಸ್ಬಿಟ್ನಲ್ಲ ಅಂತ’ ತಮಾಷೆ ಮಾಡಿದ್ರು. “ಒಂದು ಕಾರ್ಯಕ್ರಮ ಪ್ಲಾನ್ ಮಾಡ್ತಿದ್ದೇವೆ, ಅದರಲ್ಲಿ ನಿನ್ನನ್ನು ಭಾಗಿಯಾಗಿಸಿಕೊಳ್ತೀವಿ’ ಅಂದ್ರು. ಅದು ಮೊದಲು ಬರ್ತಾ ಇದ್ದ “ಎದೆತುಂಬಿ ಹಾಡುವೆನು’ ಕಾರ್ಯಕ್ರಮ. ಅದರಲ್ಲಿ ಹಲವಾರು ಹಾಡುಗಳನ್ನು ಹಾಡಿದ್ದೆ.
ಖಾಸಗಿಯಾಗಿ ನಷ್ಟವಾಯ್ತು…
ಅದಾದ ಬಳಿಕ, ನನ್ನ ಮದುವೆಗೆ ಬಂದ್ರು, ನನ್ನ ಮಕ್ಕಳನ್ನು ಎತ್ತಿ ಆಡಿಸಿದಾರೆ. ನನ್ನ ತಮ್ಮನ ಮದುವೆಗೂ ಬಂದ್ರು. ಹೀಗಾಗಿ, ನನಗೆ ಖಾಸಗಿಯಾಗಿ ತುಂಬ ನಷ್ಟವಾಗಿದೆ. ನನಗೆ ಎರಡನೇ ತಂದೆ ಇವರು, ನನ್ನ ದೊಡ್ಡ ಅಪ್ಪ. ಈಗ ಅವರನ್ನು ಕಳೆದುಕೊಂಡುಬಿಟ್ಟೆ. ಮುಂದೆ ಅಸಂಖ್ಯಾತ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ಹಾಡಿದೆ. ಖುಷಿಯಾದರೆ ತಲೆ ಸವರೋದು, ತುಂಬ ಖುಷಿಯಾದ್ರೆ ಮೈಕ್ ತಗೊಂಡು ತಲೆ ಮೇಲೆ ಹೊಡೆಯೋದು, ಕೀಟಲೆ ಮಾಡೋದು, ಅವರೇನೋ ಹಾಡು ಹೇಳಿದಾಗ ಖುಷಿಯಾಗಿ ನಾನು ಸೀಟಿ ಹೊಡೆಯದು, ಇನ್ನೊಮ್ಮೆ ಅದೇ ಹಾಡು ಅವರು ಹೇಳಿದಾಗ ನಾನು ಸೀಟಿ ಹೊಡೆಯಲಿಲ್ಲ ಎಂದರೆ, ಹಿಂದೆ ತಿರುಗಿ “ಸೀಟಿ ಯಾಕೆ ಹೊಡೀತಾ ಇಲ್ಲ, ಹೊಡಿ’ ಅನ್ನೋದು…ಎಲ್ಲ ಕಳೆದುಕೊಂಡುಬಿಟ್ಟೆ. “ದೊಡ್ಡಪ್ಪ, ನಾನು ನಿಮ್ಮನ್ನು ಗಟ್ಟಿಯಾಗಿ ಹಗ್ ಮಾಡಬೇಕು’ ಎಂದರೆ, “ಅದು ನಿನ್ನತ್ರ ಆಗಲ್ಲ, ನಾನು ತುಂಬ ದೊಡ್ಡ ಅಪ್ಪ, ತುಂಬ ದಪ್ಪ ಇದೀನಿ’ ಅಂತ ತಮಾಷೆ ಮಾಡ್ತಿದ್ರು. “ಇವ ಗಾಜನೂರಿನ ಗಂಡು ಕಾಣಮ್ಮೋ, ಸೀರೆ ಮೇಲೆ ಯಾಕೆ ಕಣ್ಣಮ್ಮೋ’ ಅಂತ ಹಾಡ್ತಾ ಇದ್ರೆ ಸೀರೆ ಸೆರಗು ಹಿಡ್ಕೊಳ್ಳೋರು… ಇವೆಲ್ಲ ಇನ್ನೆಲ್ಲಿ ಸಿಗುತ್ತೆ? ನನ್ನ ಭಾಗ್ಯದಲ್ಲಿ ಇಷ್ಟೇ ಬರೆದಿತ್ತು.
ಮಾನಸಪುತ್ರಿಯಾದೆ…
ಇದೇ ಥರ ಒಂದು ಕಾರ್ಯಕ್ರಮ. ಹುಬ್ಬಳ್ಳಿಯಲ್ಲಿ ಒಂದು ದೊಡ್ಡ ಕಾರ್ಯಕ್ರಮ. ಅಲ್ಲಿ ಹರಿಹರನ್ ಇದ್ರು, ಶಂಕರ್ ಮಹಾದೇವನ್, ಚಿತ್ರಾ, ಉಷಾ ಉತ್ತುಪ್ ಎಲ್ಲ ಇದ್ರು. ಎಲ್ಲರನ್ನೂ ನೋಡಿದ್ರೆ ಈ ಥರದ ಭಾವನೆ ಬರೋದಿಲ್ಲ. ಅವರೆಲ್ಲರ ಜತೆ ನಾನು ಹಾಡಿದೆ ಅವತ್ತು. ನಾನು, ಅವರು ಹೀಗೆ ಏನೋ ಕ್ಯಾಷುವಲ್ ಆಗಿ ಹರಟೆ ಹೊಡೆಯುತ್ತಿರಬೇಕಾದರೆ ನಂಗೆ ಅವತ್ತು ಅದೇನೆನ್ನಿಸಿತೋ ಗೊತ್ತಿಲ್ಲ, “ನಿಮ್ಮನ್ನು ದೊಡ್ಡಪ್ಪ ಅಂತ ಕರೀಬಹುದಾ ನಾನು?’ ಅಂತ ಕೇಳಿದೆ. ಆಗ ಸುಮ್ಮನೆ ಒಂದೆರಡು ಘಳಿಗೆ ನನ್ನ ನೋಡಿದರು. ಬಳಿಕ ತಮ್ಮೆದೆ ಮೇಲೆ ಕೈಯಿಟ್ಟುಕೊಂಡು “ನೀನು ಸರಿಯಾದ ತಂತಿಯನ್ನು ಮೀಟಿದೆ ಮಗಳೇ, ತುಂಬ ಸಂತೋಷ, ಹಾಗೆಯೇ ಕರಿ’ ಎಂದರು. ಆಮೇಲೆ ಎಲ್ಲೇ ಹೋದರೂ, ವೇದಿಕೆ ಮೇಲೆ ಕೂಡ “ನನ್ನ ಮಾನಸಪುತ್ರಿ, ನನ್ನ ಮಗಳು’ ಎನ್ನೋರು.
ಕ್ಯಾಮರಾ ಎದುರೂ ದೊಡ್ಡಪ್ಪನೇ…
ಒಮ್ಮೆ ಯಾವಾಗಲೋ ನಾನು ಅವರ ಸಂದರ್ಶನ ಮಾಡುವಾಗ ಕ್ಯಾಮರಾ ಎದುರಿಗೆ ದೊಡ್ಡಪ್ಪ ಅಂತೆಲ್ಲ ಕರೆಯೋದು ಬೇಡ, ವೃತ್ತಿಪರತೆ ಅಲ್ಲ ಅಂತ ಅಂದ್ಕೊಂಡು “ಸರ್’ ಎಂದು ಕರೆದು ಮಾತನಾಡಿದೆ. ಎರಡು ಪ್ರಶ್ನೆ ಕೇಳಿದೆ, ಉತ್ತರಿಸಿದರು. ಬಳಿಕ, ನಿಲ್ಲಿಸಿ, “ನೀನು ನನ್ನನ್ನ ಏನಂತ ಕರೆಯೋದು, ಯಾಕೆ ಸರ್ ಅಂತ ಇದೀಯಾ?’ ಅಂದ್ರು. “ಕ್ಯಾಮರಾ ಎದುರಿಗೆ, ನೋಡಿದೋರು ಏನಂದ್ಕೊತಾರೋ’ ಅಂದೆ. “ಏನಂದ್ಕೊತಾರೆ, ನೀನು ನಂಗೆ ದೊಡ್ಡಪ್ಪ ಅಂತ ಕರೀತಿಯಾ, ಹಾಗೆಯೇ ಕರೀಬೇಕು’ ಎಂದು ಜೋರು ಮಾಡಿದ್ರು. ಇದು ಯಾವ ಜನ್ಮದ ಋಣವೋ, ಸೌಭಾಗ್ಯವೋ ಅರ್ಥವಾಗಲ್ಲ. ಅವರು ಹೀಗೆ ಹೋಗಬಾರದಿತ್ತು ಅನ್ನೋದೊಂದೇ ನನ್ನ ಕಂಪ್ಲೇಂಟು.
ನಾನಿದ್ದೇನಲ್ಲ, ಭಯ ಬೇಡ…
ಒಮ್ಮೆ ಚೆನ್ನೈ ಗೆ ಹೋದಾಗಿನ ಘಟನೆ. ನವರಾತ್ರಿಗೆ ಜ್ಯೂಲಿ ಲಕ್ಷ್ಮೀ ಅವರ ಮನೆಗೆ ಹೋಗಬೇಕಾಗಿತ್ತು. ಆಗ ನನಗೆ ಗೊತ್ತಾಗದೇ ಏರ್ ಪೋರ್ಟ್ ನಲ್ಲಿ ಯಾವುದೇ ಎಕ್ಸಿಟ್ ಗೆ ಪ್ರವೇಶವಾದೆ. ಅಲ್ಲಿಂದ ನನ್ನನ್ನು ವಾಪಸ್ ಹೋಗೋಕೂ ಬಿಡಲಿಲ್ಲ, ಆಚೆ ಹೋಗೋಕೂ ಬಿಡಲಿಲ್ಲ. ನಾನು ಕಂಗಾಲಾಗಿ ದೊಡ್ಡಪ್ಪನಿಗೆ ಫೋನ್ ಮಾಡಿದೆ. ಅವರು ಅದೃಷ್ಟವಶಾತ್ ಹೈದ್ರಾಬಾದ್ ಗೋ ಎಲ್ಲಿಗೋ ಹೋಗಲೆಂದು ಏರ್ ಪೋರ್ಟಿಗೇ ಬರ್ತಾ ಇದ್ರು. ಅವರು ಸೀದಾ ಅಲ್ಲಿಗೇ ಬಂದರು. ಡ್ರೈವರ್ ನ್ನು ಕಳಿಸಲಿಲ್ಲ ನೋಡಿ. ಅದು ಅವರು ಹೋಗೋ ದಾರಿ ಆಗಿರಲಿಲ್ಲ. ಸುತ್ತಿ ಬಳಸಿ ಅಲ್ಲಿಗೆ ಬಂದು, ಅಲ್ಲಿ ಸೆಕ್ಯುರಿಟಿ ಬಳಿ ಮಾತನಾಡಿ, ರಿಕ್ವೆಸ್ಟ್ ಮಾಡಿ, ಕರೆತಂದ್ರು, “ಯಾಕೆ ಹೆದರಿಕೊಳ್ತೀಯ, ನಾನಿದೀನಲ್ಲ?’ ಎಂದ್ರು. ಅವರ ಕಾರಿನಲ್ಲೇ ನನ್ನನ್ನು ಕಳಿಸಿಕೊಟ್ರು.
ಎಸ್.ಪಿ. ಅಂದ್ರೆ ಸ್ಟೀಟೆಸ್ಟ್ ಪರ್ಸನ್…
ನಾನೊಮ್ಮೆ “ಯು ಆರ್ ದ ಸ್ವೀಟೆಸ್ಟ್ ಪರ್ಸನ್ ದೊಡ್ಡಪ್ಪ’ ಎಂದಿದ್ದೆ. “ಇಟ್ ಇಸ್ ಇನ್ ಮೈ ನೇಮ್’ ಅಂತ ಹೇಳಿ ನಗ್ತಾ ಇದ್ರು. ಏನು ಅಂದ್ರೆ ಎಸ್.ಪಿ. ಅಂದ್ರೆ ಸ್ವೀಟೆಸ್ಟ್ ಪರ್ಸನ್ ಅಂತೆ. “ಸ್ವೀಟೆಸ್ಟ್ ಪರ್ಸನ್ ಬಾಲಸುಬ್ರಹ್ಮಣ್ಯಂ’ ಅಂದ್ರು. ತಮಗೆ ಏನೇ ಅನಾರೋಗ್ಯ ಇರಲಿ, ಒತ್ತಡ ಇರಲಿ, ಯಾರ ಮೇಲೆಯೂ ಕೋಪ ಮಾಡಿಕೊಳ್ತಾ ಇರಲಿಲ್ಲ. ಎಲ್ಲರನ್ನೂ ನಗಿಸೋದು, ಸಹಕಲಾವಿದರಿಗೆ ಹೇಗೆ ಗೌರವ ಕೊಡಬೇಕು ಅನ್ನೋದನ್ನು ಅವರನ್ನು ನೋಡಿ ಕಲಿತುಕೊಳ್ಳಬೇಕು. ಎಲ್ಲರೂ ವೇದಿಕೆಗೆ ಬಂದಾಗ ಎಲ್ಲರಿಗೂ ಕುಳಿತುಕೊಳ್ಳೋಕೆ ವ್ಯವಸ್ಥೆ ಇದೆಯಾ ಎಂದು ನೋಡೋರು. ಇಲ್ಲವಾದರೆ, ಚೇರ್ ಕೊಡಪ್ಪ ಎಂದು ತರಿಸಿ ತಾವು ಕುಳಿತುಕೊಳ್ಳೋರು. ಮೈಯಲ್ಲಿ ಜ್ವರ ಇದ್ದಾಗಲೂ ಯಾರಾದರೂ “ಸೆಲ್ಫಿ’ ಎಂದು ಬಂದರೆ ಚೂರೂ ಕೋಪಿಸಿಕೊಳ್ಳದೆ “ನಂಗೆ ಆರೋಗ್ಯ ಸರಿಯಿಲ್ಲಪ್ಪ, ದಯವಿಟ್ಟು ಸ್ವಲ್ಪ ದಾರಿಬಿಡಿ’ ಎಂದು ವಿನಯವಾಗಿ ಕೇಳಿಕೊಳ್ಳೋರು. ಹೀಗೆ… ಹೇಳ್ತಾ ಹೋದ್ರೆ ಮುಗಿಯೋದಿಲ್ಲ.

ಮತ್ತಷ್ಟು ಸುದ್ದಿಗಳು

Latest News

ದೇಶದಲ್ಲಿ 2,828 ಕೋವಿಡ್ ಪ್ರಕರಣ ಪತ್ತೆ: 14 ಮಂದಿ ಸಾವು

newsics.com ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,828 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 4,31,53,043 ಏರಿಕೆಯಾಗಿದೆ. ಇದುವರೆಗೆ 4,26,11,370 ಮಂದಿ...

ರಸ್ತೆ ಅಪಘಾತ: ಅಯೋಧ್ಯೆಗೆ ತೆರಳುತ್ತಿದ್ದ ಕರ್ನಾಟಕದ 7 ಮಂದಿ ಸಾವು, 10 ಜನಕ್ಕೆ ಗಂಭೀರ ಗಾಯ

newsics.com ಉತ್ತರಪ್ರದೇಶ: ಕರ್ನಾಟಕದಿಂದ ಅಯೋಧ್ಯೆಗೆ ತೆರಳುತ್ತಿದ್ದ ಭಕ್ತರಿದ್ದ ಟೆಂಪೋ ಟ್ರಾವೆಲರ್​ ಹಾಗೂ ಟ್ರಕ್‌ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 7 ಜನರು ಸಾವನ್ನಪ್ಪಿ, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಪ್ರದೇಶದ ಮೋತಿಪುರ್ ಪ್ರದೇಶದ ಲಖಿಂಪುರ-ಬಹ್ರೈಚ್ ರಾಜ್ಯ...

ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್‌ಗೆ ಗುಡ್ ಬೈ

newsics.com ಬೆಂಗಳೂರು: ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಗೆ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಜನಸೇವೆ ಮಾಡುವ ಉದ್ದೇಶದಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೆ....
- Advertisement -
error: Content is protected !!