Wednesday, July 6, 2022

ಇವಳೇಕೆ ಸಪೂರ… ಯೌವ್ವನದ ಪ್ರಶ್ನೆಗಳಿಗೆ ಸಿಕ್ಕಿತಾ ಉತ್ತರ?

Follow Us

ನಾನೇನಾದ್ರೂ ಬರೆಯಬಹುದು ಅನ್ನೋ ಕಲ್ಪನೆ ಆಗ ಇರದಿದ್ದರೂ ಹುಚ್ಚು ಯೋಚನೆಗಳು ಆಗಲೇ ಬರತಿತ್ತು. ‘ಮೋಹಿನಿಯ ಮೋಹ ಮುಗಿದ ಮೇಲೆ ಹೇಗೆ..? ಕಾಮಾಕ್ಷಿಗೆ (ಕಾ)ಮ ಯಾವಾಗಲೂ ಇರುತ್ತಾ? ಬಡ ಹುಡುಗಿ ಲಕ್ಷ್ಮಿಗೆ ಅಂತಸ್ತು ಸಿಗಬಹುದಾ? ಅನ್ನೋ ಭಾವಗಳು… ಹೇಳಿರಲಿಲ್ಲ ಅಷ್ಟೆ. ಮಕ್ಕಳಾಟದ ಮನಸು…’

 

♦ ನಂದಿನಿ ವಿಶ್ವನಾಥ ಹೆದ್ದುರ್ಗ (ವೇದಾವತಿ ಎಚ್ ಎಮ್)
newsics.com@gmail.com


  ತ್ತದೆ ಇಳಿಸಂಜೆ, ಮಳೆ ಮೋಡ, ಜೀರುಂಡೆ ಗಾನ..
ಮಳೆ ಬಾರದ ಮೇಲೆ ಮೋಡ ಒಗ್ಗೂಡುವುದಾದರೂ ಯಾತಕ್ಕೋ.?
ಆರು ತಿಂಗಳು ಒಣಗಿ ಹುಪ್ಪಟೆಯಾಗುವ ಈ ಜೀರುಂಡೆ ಹುಟ್ಟಿದಾಗ ಗಂಟಲಿಗೆ ಕೈಹಾಕಿದ ಪುಣ್ಯಾತಗಿತ್ತಿ ನರ್ಸಮ್ಮ ಯಾರಿರಬಹುದೋ.?
ಜೋರು ಬೀಸಿದ ಗಾಳಿಗೆ ತುಂತುರು ಹಾರಿ ಬಟ್ಟೆಯೆಲ್ಲ ಒದ್ದೆಮುದ್ದೆ…
ತಿಂಗಳು ಮೊದಲೇ ಮುಂಗಾರು ಬಂದಿದೆ.
ಮುಸುರೆ ಜತೆಗೆಸೆದ ಸೋರೆ, ಕುಂಬಳ, ಹೆಳ್ಳಿ, ನೆಲ್ಲಿಗಳು ಹದ ಮಳೆಗೆ ಮೊಳಕೆಯೊಡೆಯುತಿವೆ…
ಮುಂದಿನ ವರಾಂಡದಲಿ ಮುಗಿಲು ನೋಡುತ ಕುಳಿತವಳ ಮನಸು ಹೀಗೆ ಹೀಗೆ ಹಿಂದೆ ಸಾಗಿ ಮುವ್ವತ್ತು ವರ್ಷ ವಾಪಸು ಹೋಯಿತು. ಆಗಲೂ ಇಂಥದ್ದೇ ಮಳೆಗಾಲಗಳು. ಬೇಸಿಗೆ ರಜ ಕಳೆದು ಬೇಡದ ಮನಸಿನಲಿ ಮತ್ತೆ ಬೋರ್ಡಿಂಗ್ ವಾಸಕ್ಕೆ ಹೊರಡುವ ಘಳಿಗೆಗಳು. ಸಕಲೇಶಪುರವೆಂದ ಮೇಲೆ ಸುರಿವ ಮಳೆಗೆ ಕೊರತೆಯೇ.
ಮೂರು ದಶಕದ ಹಿಂದೆ, ಮುಂಗಾರು ಚಂದ ನಡೆಸುತ್ತಿದ್ದಾಗ ಮಳೆಯಾರ್ಭಟ ಇನ್ನೂ ಜೋರೆ.
ಮೊದಲ ದಿನದ ಬೋರ್ಡಿಂಗ್ ‌ವಾಸದ ನೆನಪಾದರೆ ಈಗಲೂ ಮೈ ನಡುಗುತ್ತದೆ. ಅಮ್ಮನಿಗೆ ನನ್ನ ಮೇಲೆ ಮುದ್ದಿರದಿದ್ದರೂ ನನ್ನಲ್ಲಿರದ ಆತ್ಮವಿಶ್ವಾಸದಿಂದಾಗಿ ಎಲ್ಲಿಗೆ ಹೋದರೂ ಅಮ್ಮನ‌ ಸೆರಗೊಳಗೆ.
ಅಮ್ಮ ಬಾಯಿ ತುಂಬಾ ಬೈದರೂ ವರ್ಷಕ್ಕೆ ಒಂದೋ ಎರಡೋ ಬಾರಿ ಹೊರ ಹೊರಡುವ ಸಂಭ್ರಮಕೆ ಅಮ್ಮನಿರದೆ ಗೊತ್ತೇ ಇಲ್ಲ.
ಇಂತಿಪ್ಪ ನಾನು ತೀರಾ ಅಪರಿಚಿತ ವಾತಾವರಣದಲ್ಲಿ ಅಪರಿಚಿತರೊಡನೆ ಬೋರ್ಡಿಂಗಿನಲ್ಲಿ.
ಅಪ್ಪ ಹನ್ನೊಂದಕ್ಕೆಲ್ಲಾ ಟ್ರಂಕು, ಬಕೆಟ್ಟು, ಬೆಡ್ಡು ಇಟ್ಟು ಬಿಟ್ಟು ಹೊರಟಾಗ ಜಗದೆಲ್ಲ ಬಾಗಿಲುಗಳು ನನ್ನ ಪಾಲಿಗೆ ಮುಚ್ಚಿಹೋದ ಹಾಗೆ.
ಎಷ್ಟು ಹರಿದರೂ ಬತ್ತದ ನಮ್ಮೂರ ಚಿಲುಮೆಯ ಹಾಗೆ ನನ್ನ ಕಣ್ಣ ಧಾರೆ…
ಅತ್ತು ಅತ್ತು ಸುಸ್ತಾಗಿ ಮಧ್ಯಾಹ್ನ ಊಟಕ್ಕೆ ಬೋರ್ಡಿಂಗ್ ಗೆ ಹೋದಾಗ ಬದನೆಕಾಯಿ ಸಾರು. ಬಟರ್ ಮಿಲ್ಕು ಎನ್ನುವ ಬಿಳಿ ದ್ರವದೊಳಗೆ ತೇಲುತ್ತಿದ್ದ ಜಿರಲೆಯದೆನಬಹುದಾದ ಕಾಲು… ವಾಕರಿಕೆ ಉಕ್ಕಿ ಬಡಿಸಿಕೊಂಡಿದ್ದನ್ನ ಮೊದಲ ಬಾರಿಗೆ ಬಕೆಟ್ಟಿಗೆ ಸುರಿಯ ಹೋದಾಗ ಅಲ್ಲಿಯೇ ಇದ್ದ ‘ಅನಸ್ಟೆಲ್ಲ’ ಸಿಸ್ಟರು “ಬಿಸಾಡಬಾರದು ಊಟ, ಹೋಗಿ ಮುಗಿಸಿ ಬಾ” ಅಂತ ಗದರಿದಾಗ ಹೆದರಿಕೆಯಿಂದಲೆ ಅವರೆಡೆಗೆ ನೋಡಿ ಇಳಿಯದ ಅನ್ನಕ್ಕೆ ಸಾರು ಸುರುವಿ ಕುಡಿಯಲೆತ್ನಿಸಿದಾಗ ಅದೇ ಸಿಸ್ಟರು ಬಂದು ‘ಏನು ಮೀನು ಹಿಡಿತಿದ್ದೀಯಾ ಹುಡುಗಿ’ ಎಂದಾಗ ನನ್ನ ಕೈಕಾಲು ನಡುಗಿ ಕಣ್ಣು ಕತ್ತಲೆ ಬಂದದ್ದು ಈಗಷ್ಟೇ ನಡೆದಂತೆ ನೆನಪು.
ಬೋರ್ಡಿಂಗ್’ನಲ್ಲಿ ಐದೂವರೆಗೇ ಏಳುವಾಗ ಅಮ್ಮ ತೀವ್ರವಾಗಿ ಕಾಡುತ್ತಿದ್ದಳಾದರೂ, ಓದು, ಹೋಮ್ ವರ್ಕು, ಸರ್ವಿಸು, ಪ್ರೆಯರ್ರುಗಳ ಮದ್ಯೆ ಅವಳು ದಿನಗಳೆದಂತೆ ಮರೆಮರೆಗೆ ಹೋಗುತ್ತಿದ್ದಳು.
ಹದಿನೈದು ದಿನ ಕಳೆದಿರಬಹುದು..
ಒಂದು ರಾತ್ರಿ.. .,
ಅಷ್ಟೊತ್ತಿಗಾಗಲೇ ನಾನು ಚಂದ ಓದುತ್ತೀನೆಂಬ ನಂಬಿಕೆ ಸಿಸ್ಟರಿಗೆ ಮೂಡಿತ್ತು.!
ಮಲಗಲು‌ ಬೆಲ್ಲಾಗುತ್ತಿದ್ದದ್ದು ಹತ್ತಕ್ಕೆ. ಹತ್ತಾಗುವಷ್ಟರಲ್ಲಿ ಅಮ್ಮ, ಮನೆ, ಅಣ್ಣ ಎಲ್ಲಾ ಯಾಕೋ ಅತಿಯಾಗಿ ನೆನಪಾಗಿ ಸ್ಟಡಿ ಟೇಬಲ್ಲಿನ ಕೆಳಕೂತು ಪಕ್ಕದವರಿಗಷ್ಟೇ ಗೊತ್ತಾಗುವಂತೆ ಅತ್ತುಅತ್ತು ಸುಸ್ತಾಗಿ ಡೆಸ್ಕಿನ ಕಾಲಿಗೊರಗಿ ನಿದ್ದೆ ಹೋಗಿದ್ದೆ..
ಕೈಯಲ್ಲಿ ವಿಜ್ಞಾನ ಪುಸ್ತಕ ವಿತ್ತು..
ಮಾಮೂಲು ರೌಂಡ್ಸಿಗೆ ಬಂದ ಸಿಸ್ಟರು ಹತ್ತಕ್ಕೆ ಮುಂಚೆಯೇ ಸ್ಟಡಿ ಟೈಮಲ್ಲಿ ಮಲಗಿದ್ದ ನನ್ನ ನೋಡಿ ಅತಿ ಸಿಟ್ಟಿನಲಿ ಗದರಿದ್ದರು..ಬೀಸೋ ದೊಣ್ಣೆಯಿಂದ ತಪ್ಪಿಸಿಕ್ಕೊಳ್ಳೊ ಬುದ್ದಿಯೇ ಗೊತ್ತಿರದಿದ್ದವಳು’ಓದಿದ್ದು ನೆನಪಿಸಿಕೊಳ್ಳುತ್ತಿದ್ದೆ ಸಿಸ್ಟರ್,ಬೇಕಿದ್ರೆ ಪ್ರಶ್ನೆ ಕೇಳಿ ‘ಎಂದೆ.
ಆಗ ಅವರಿಗೆ ಹುಟ್ಟಿದ ನಂಬಿಕೆ
ಬಹುಶ ನಾನು ಬೋರ್ಡಿಂಗ್ ಬಿಡುವವರೆಗೂ ಓದದವರಿಗೆ ಅವರು ಆಗಾಗ ಉದಾಹರಣೆಗಳಲ್ಲಿ ಈ ಪ್ರಸಂಗ ಹೇಳುವಷ್ಟು ಆಪ್ತವಾಗಿತ್ತು..
ಶಾಲೆ, ಬೋರ್ಡಿಂಗ್ ಚಂದವಾಗಿಯೇ ಸಾಗಿತ್ತು..
ಗುರುವಾರ ಭಾನುವಾರ ನಾನ್ ವೆಜ್ಜಿನವರಿಗೆ ಕೊಡುತ್ತಿದ್ದ ಮೊಟ್ಟೆ ಚಿಕ್ಕನ್ನುಗಳ ದಿನಗಳ ಹೊರತಾಗಿ ಖುಷಿಯಲ್ಲೆ ಇದ್ದೆ..
ನಾನ್ ವೆಜ್ಜ್ ಇದ್ದ ದಿನ‌ ಮಾತ್ರ ಹುಟ್ಟಿದ ದಿನ ಕಂಡಷ್ಟು ವಿಪರೀತ..
ವಾಕರಿಕೆ ವಾಂತಿ ಮಾಡಿಕೊಳ್ಳದ ಗುರುವಾರ ಭಾನುವಾರಗಳೇ ಇಲ್ಲವೇನೋ…
ಒಂದು ಭಾನುವಾರ ನನ್ನ ತಟ್ಟೆಗೆ ಮಾಂಸ ಬಡಿಸಿದರೆಂಬ ಕಾರಣಕೆ ತಟ್ಟೆ ತಿಪ್ಪೆಗೆ ಎಸೆದು ಬಂದು ಬೈಸಿಕೊಂಡಿದ್ದೆ…
ಇದೆಲ್ಲದರ ಹೊರತಾಗಿ ಇನ್ನೊಂದು ಭಯದ ನೆನಪಾಗುವುದು, ಜಗನ್ನಾಥ ಮೇಷ್ಟ್ರು ಹೇಳಿಕೊಡುತ್ತಿದ್ದ ಗಣಿತ. ಪಿರಿಯಡ್ಡು ಬರುವಾಗಲೇ ಎದೆ ಢವಢವ..
ಎಲ್ಲದರಲ್ಲೂ ಸಣ್ಣಗೆ ಜಾಣೆಯಾಗಿದ್ದ ನನಗೆ ಗಣಿತ ಮಾತ್ರ ಅನ್ನದೊಳಗಿನ ನೆಲ್ಲು..
ಅರಗಿಸಹೋದಷ್ಟೂ ಅಜೀರ್ಣವೇ ಆಗುತಿತ್ತು.
ಆಗೆಲ್ಲಾ ನನಗೆ ಹೊಟ್ಟೆಕಿಚ್ಚಾಗುತ್ತಿದ್ದದ್ದು ಸವಿತಾ ಕೆ ಎಸ್ ಮೇಲೆ.. ಶಕುಂತಲಾ ದೇವಿಯ ಮರಿಮಗಳೋ ಎನುವ ಹಾಗೆ ಕೊಟ್ಟ ಎಲ್ಲಾ ಲೆಕ್ಕವನ್ನು ಊರಿಗೆ ಮೊದಲೇ ಮುಗಿಸಿ ಬೇಷ್ ಎನಿಸಿಕೊಳುತ್ತಿದ್ದಳು..
ನಾನು ಮಾತ್ರ ಪ್ಲಸ್ ಈ ಕಡೆ ಬಂದಾಗ ಮೈನಸ್ ಯಾಕಾಗ್ತದೆ ಅಂತಲೇ ತಲೆಕೆಡಿಸಿಕೊಂಡು, ಪ್ರಮೇಯದಲಿ
ಬರುತ್ತಿದ್ದ ದತ್ತ ನಿಜವಾಗಿಯೂ ದಡ್ಡರಿಗೆ ಅರ್ಥವಾಗದ ವಿಚಾರ ಅಂತೆಲ್ಲ ಕಲ್ಪಿಸಿ ತಲೆಕೆಡಿಸಿಕೊಳುತ್ತಿದ್ದೆ..
ದಿಗ್ಬ್ರಮೆ ಮೂಡಿಸುತ್ತಿದ್ದ ಮತ್ತೊಬ್ಬಳೆಂದರೆ ರೂಪ ಡಿ. ಮತ್ತವಳ ಇಂಗ್ಲೀಷು.. ಬುದ್ಧಿವಂತಿಕೆಯ ಪ್ರತಿರೂಪವಾಗಿದ್ದ ಅವಳ ಕಣ್ಣುಗಳು,
ಜತೆಗೆ ಹೊಳೆಹೊಳೆವ ಕೆನ್ನೆ, ಕೂದಲು …
ನೀಟಾಗಿ ಐರನ್ ಆಗಿ ಧರಿಸುತ್ತಿದ್ದ ಅವಳ ಯೂನಿಫಾರ್ಮ್ ಎಲ್ಲವೂ ಆಗಿನ ನನಗೆ ವಿಶೇಷವೇ. ಮತ್ತೆ ಮತ್ತೆ ಅವಳನ್ನೇ ನೋಡುತ್ತಿದ್ದೆ..
ಮತ್ತೊಬ್ಬ ಮರೆಯಲಾಗದ ಹುಡುಗಿಯೆಂದರೆ ಹೇಮಾಮಾಲಿನಿ.. ಭಾಷಣ, ಚರ್ಚೆ, ಪ್ರಬಂಧ, ಆಟ, ಹಾಡು ಯಾವ ಸ್ಪರ್ಧೆಗೆ ಹೋದರೂ ಜಯದ ಮಾಲೆಯೊಂದಿಗೆ ವಾಪಸಾಗುತ್ತಿದ್ದವಳು..ಅವಳ ಆತ್ಮವಿಶ್ವಾಸ ಮೆಚ್ಚುಗೆ ಎನಿಸುತ್ತಿತ್ತು.. ಫರ್ಸ್ಟ್ rankಇಂದಿರಾ ನ ಮರೆಯೋದು ಹೇಗೆ. ಸಣ್ಣಗೆ ಕುಳ್ಳಗೆ ಬೆಳ್ಳಗೆ ಇದ್ದ ಇಂದಿರಾ ತನ್ನ ಪುಟ್ಟ ತಲೆಯಲ್ಲಿ ಅದು ಹೇಗೆ ಅಷ್ಟೊಂದೆಲ್ಲ ತುಂಬಿದ್ದಳು ಅನ್ನೋದು ಈಗಲೂ ಅಚ್ಚರಿಯೆ.!
ಕೆ. ಹೊಸಕೋಟೆ ಎನ್ನುವ ನನ್ನ ಊರಿಗೆ ‘ಹೂಸುಕೋಟೆ’ ಅಂತ ಹಂಗಿಸಿ ನನ್ನ ಗೋಳಾಡಿಸುತ್ತಿದ್ದ ಆಶಾಲತ ಮೇಲೆ ನಂಗೆ ಆಗ ಇನ್ನಿಲ್ಲದ ಸಿಟ್ಟು. ಅವಳಿಗೇನು ಗೊತ್ತು‌. ಬೋರ್ಡಿಂಗಿನ ಕೆಟ್ಟ ಊಟ ತಿಂದು ಎರಡು ದಿನವಾದರೂ ಕರೆ (?)ಬಾರದೆ ಕಿಕಿರಿಯಾಗುತ್ತಿದ್ದ ಕಷ್ಟ.
ಅನುಭವಿಸಿದವರಷ್ಟೇ ಹೇಳಬಹುದು..
‘ಸ’ ಅಕ್ಷರವನ್ನು ಒತ್ತರಿಸಿ ಉಚ್ಚರಿಸುತ್ತಿದ್ದ ಪ್ರೇಮ ಡಿಮೆಲ್ಲೋ, ತುಸು ಕಿವಿ ಬಾಯಿ ಲೋಪವಿದ್ದ ನೇತ್ರಾವತಿ, ಮತ್ತವಳ ಹಿಯರಿಂಗ ಎಯ್ಡ್..ಓದು ದಕ್ಕಿಸಿಕೊಳುವುದಕ್ಕೆ ಅವಳು ಮಾಡುತ್ತಿದ್ದ ಶತಪ್ರಯತ್ನ, ಚರ್ಚು ಕಡೆಯಿಂದ ಬರುತ್ತಿದ್ದ ನಂದ, ಮುಟ್ಟಿನ ಸಮಯದಲ್ಲಿ ಹೊಟ್ಟೆ ಹಿಡಿದು ನರಳುತ್ತಿದ್ದ ಸಾಜನ್, ಇನ್ನೂ ದೊಡ್ಡವಳಾಗದಿರುವುದು ದೊಡ್ಡ ಅಪರಾಧವೆಂದುಕೊಳುತ್ತಿದ್ದ ನಾನು, ಕುಳ್ಳಿ ಶಾಹೀನ್ ಎಲ್ಲರೂ ಹಚ್ಚ ಹಸಿರು.
ಎದೆ ಮೇಲೆ ‌ಮುದ್ದಾಗಿ ಉಬ್ಬು ಮೂಡಿದ್ದ ರಾಧಿಕಾ, ರೇಖಾ, ಸುಧಾ ಇವರನ್ನು ನೋಡುತ್ತ ನಾನು ನನ್ನ ಸಪಾಟು ಎದೆ ನೋಡಿಕೊಂಡು ನೋಯುವ ಘಳಿಗೆಯಲ್ಲೇ ಬೋರ್ಡಿಂಗ್’ನಲ್ಲಿ ಇಬ್ಬಿಬ್ಬರು ಒಟ್ಟಿಗೆ ಸ್ನಾನ ಮಾಡಬೇಕಿದ್ದ ವ್ಯವಸ್ಥೆಯಿಂದಾಗಿ ಮೇಘನಳ ಚಪ್ಪಟೆ ಮೈಕಟ್ಟು ನೋಡಿ ಸಮಾಧಾನ ಮಾಡಿಕೊಳ್ಳುತ್ತಿದ್ದೆ..!
ಆಗಾಗ ಕೈ ತುಂಬ ಮೆಹಂದಿ ಹಚ್ಚಿ ಬರುತ್ತಿದ್ದ ಮಾರ್ವಾಡಿ ಹುಡುಗಿಯರು ಸುಧಾ, ರೇಖಾ, ಸಂಗೀತ…
ಟಿ ಸುಧಾಳ ಚೆಲುವು, ಸಂಗೀತ ತರುತ್ತಿದ್ದ ‘ಪುಡಿ’ ಎಂಬ ಹಪ್ಪಳದ ಮುರುಕಗಳಂಥ ತಿಂಡಿ.. ನಿತ್ಯ ಗಂಭೀರೆ ಶಶಿಕಲಾ, ದಾಕ್ಷಾಯಿಣಿ, ಹಾರ್ಲೆಯಿಂದ ಬರುತ್ತಿದ್ದ ಸುಪ್ರೀತ, ಪಕ್ಕದ ಸೆಕ್ಷನ್ನಿನ ಗುಂಗುರು ಕೂದಲ ಬಾಬಕಟ್ ಹುಡುಗಿ ವೆಲೆಂಟಿನಾ ಮತ್ತವಳ ಸಪೂರ ಮೈಕಟ್ಟು, ಸ್ಟೈಲಿಷ್ ಭಾಮಾ, ಉದ್ದ ಜಡೆ ದಪ್ಪ ಧ್ವನಿಯ ಕೆನ್ನೆಗೆ ಅರಿಷಿಣ ಹಚ್ಚಿ ಬರುತ್ತಿದ್ದ ರೂಪಶ್ರೀ..(ರಾಜೇಶ್ವರಿ ಟೀಚರ್ ಪಕ್ಕದ ಮನೆಯವಳು ಅಂತ ಜಂಭ ಹೊಡಿತಿದ್ದಳು ಅಥವಾ ಹಾಗೆ ನಾ ಅನಕೊಂಡಿದ್ದೆ) ಉದ್ದ ಜಡೆ ವೀಣಾ, ಎಮ್‌ಸಿ ವೀಣಾ, ಬರಿ ವೀಣಾ.. ಚಂಪಕನಗರದ ಪ್ರೀತಿ.. ಅವಳ ಚೆಲುವು, ಜ್ಯೂಲಿ, ಲಿಲ್ಲಿ, ರಾಧಿಕಾ, ಸಪ್ನಳ ಚಂದ, ನೇತ್ರ ಅನ್ನಪೂರ್ಣ, ಪಕ್ಕದ ಸೆಕ್ಷನ್ನಿನ ರಶ್ಮಿ, ಬಿಳಿ ಪ್ರಮೀಳಾ….ಅಬ್ಬಾಬ್ಬಾ.. ಎಷ್ಟೊಂದು ವಿಶೇಷವಾಗಿದ್ದರು ಒಬ್ಬೊಬ್ಬರು ಅನಿಸುತ್ತೆ ಈಗ..
ಇನ್ನೂ ಗೀತಾಮಣಿ(ಕುಳ್ಳಿ ಗೀತಾ)ಬಿಡಿಸ್ತಿದ್ದ ಬಾತುಕೋಳಿಯಂತೂ ಇನ್ನೇನು ಡ್ರಾಯಿಂಗ್ ಬುಕ್ಕಿಂದ ಈಜಿ ಹೊರ ಬಂದು ಕ್ಲಾಸ್ ರೂಮಿನ ಕಬೋರ್ಡಿನೊಳಗೆ ಪ್ರತ್ಯಕ್ಷವಾಗುತ್ತೇನೋ ಅನುವಷ್ಟು ನೈಜ.. ಡ್ರಾಯಿಂಗ್ ಮಾತ್ರ ಅಲ್ಲ ಸೈನ್ಸಿನ ಫಿಗರ್ರುಗಳು, ಹೊಲಿಗೆಯಂತ ಕಲೆಯ ಎಲ್ಲ ಚಟುವಟಿಕೆಯಲ್ಲೂ ಅವಳು ಮುಂದು..
ಥ್ರೋಬಾಲ್ ಆಡುವಾಗ ಅಷ್ಟು ಕುಳ್ಳಿ ಎಲ್ಲಿಂದ ಶಕ್ತಿ ತಂದು ಆಡತಿದ್ಳು ಅನ್ನೋದೆ ಆಶ್ಚರ್ಯ..
ನಿಮ್ ಕಾಲದ ಮಾತು ಬಿಡಮ್ಮಾ ಅಂತ ಮಗಳು ಹೇಳುವಾಗೆಲ್ಲಾ ಜ್ಯೂಲಿಯದ್ದೋ ವೆಲೆಂಟಿನಾದ್ದೋ, ರಾಧಿಕದ್ದೋ ಫೋಟೋ ತೋರ್ಸಿ ನೋಡು ಹೇಗಿದಾರೆ ಅಂತ ಹೇಳಬೇಕು ಅನ್ಸತ್ತೆ.
ಹೀಗೆ ನಾನೇನಾದ್ರೂ ಬರೆಯಬಹುದು ಅನ್ನೋ ಕಲ್ಪನೆ ಆಗ ಇರದಿದ್ದರೂ ಹುಚ್ಚು ಯೋಚನೆಗಳು ಆಗಲೇ ಬರತಿತ್ತು.
‘ಮೋಹಿನಿಯ ಮೋಹ ಮುಗಿದ ಮೇಲೆ ಹೇಗೆ..?
ಕಾಮಾಕ್ಷಿಗೆ (ಕಾ)ಮ ಯಾವಾಗಲೂ ಇರುತ್ತಾ?
ಬಡ ಹುಡುಗಿ ಲಕ್ಷ್ಮಿಗೆ ಅಂತಸ್ತು ಸಿಗಬಹುದಾ?
ಅನ್ನೋ ಭಾವಗಳು…
ಹೇಳಿರಲಿಲ್ಲ ಅಷ್ಟೆ. ಮಕ್ಕಳಾಟದ ಮನಸು..’
ಮತ್ತದೇ ಮಕ್ಕಳಾಗುವ ಹುಚ್ಚಾಟಕ್ಕೆ ಬಿದ್ದು ಮುವ್ವತ್ತು ವರ್ಷದ ಮೇಲೆ ಭೇಟಿಯಾಗುತ್ತಿದ್ದೇವೆ..
ಎಂಥೆಂತಾ ಚಂದುಳ್ಳಿ ಚೆಲುವೆಯರಾಗಿದ್ದಾರೆ ಒಬ್ಬೊಬ್ಬರೂ..
‘ಮಾಡೆಲ್ ವೀಣಾನ ನೋಡಿ ಯಾರೂ ಹೊಟ್ಟೆ ಉರಕೊಳದಿದ್ರೆ ಸಾಕು..’
ಫೋನಲ್ಲಿ ಎಲ್ಲರ ಜತೆಗೆ ಮಾತಾಡುವಾಗ
45ಕ್ಕೆ ತಕ್ಕಂತೆ ಪ್ರಬುದ್ಧ ಮಾತು.
ಮಾತು ಮುಗಿದ ‌ಮೇಲೆ ‌ನನಗೆ ಅಳುಕು.
ನಾನ್ಯಕಿನ್ನೂ ಗಂಭೀರವಾಗಿ, ಜವಾಬ್ದಾರಿಯಾಗಿ ಮಾತಾಡಲು ಕಲಿತೇ ಇಲ್ಲ ಅನ್ನೋ ಚಿಂತೆ(ಸುಳ್ಳು)..
ಮೊನ್ನೆ ಮೊನ್ನೆಯಿನ್ನೂ ಇಪ್ಪತೈದರ ಮಗನ ಹತ್ತಿರ ಬೈಯಿಸಿಕೊಂಡಿದ್ದೇನೆ.. ‘ಇನ್ನಾದರೂ ಅಮ್ಮನ ಥರ ಆಗುವುದ ಕಲಿ’
ಅದೆಲ್ಲಾ ಹೇಗೆ ಕಲಿಯೋದು ಅಂತ ಗೊತ್ತಾಗ್ತಾನೇ ಇಲ್ಲ.
ಪ್ರೆಸಿಲ್ಲಾ ಟೀಚರಿಗೂ ನಮಗೆ ಪಾಠ ಮಾಡೋ ‌ಸಮಯದಲ್ಲಿ ನನ್ನ ಈಗಿನಷ್ಟೆ ವಯಸಿತ್ತಲ್ವಾ..?
ಅವರೆಷ್ಟು ಗಂಭೀರವಾಗಿರ್ತಿದ್ರು.
ರಾಜೇಶ್ವರಿ ಟೀಚರ್ ಅಂತೂ ನಲ್ವತ್ತರ ನಂತರ ಮದುವೆ ಆಗಿದ್ದು…ಆದರೂ ಅದೆಂಥ ಗಾಂಭೀರ್ಯ.
ಸುರೇಶ ಮಾಸ್ಟ್ರು ಸೀತೆ ಪಾಠ ಮಾಡೋವಾಗ’ ಲಕ್ಷ್ಮಣನು ಶೂರ್ಪನಖಿಯ ಮೂಗು ಮೊಲೆಗಳನ್ನು ಕತ್ತರಿಸಿದ’ ಅನ್ನುವುದನ್ನು ಓದುವಾಗ ಅದ್ಯಾಕಷ್ಟು ಮುಸಿಮುಸಿ ಅಂತ ನಗ್ತಿದ್ರು ಅನ್ನೋದೆ ಗೊತ್ತಿಲ್ಲ. ಗ್ರೀಸಿ ಸಿಸ್ಟರು ವಿಜ್ಞಾನ ಪಿರಿಯಡ್ಡಿಗೆ ಮೊದಲು ‘ವಿಜ್ಞಾನ ಸುಲಭ’ ಅಂತ ಹತ್ತು ಸಾರಿ ಹೇಳಿಸಿ ಪಾಠ ಶುರು ಮಾಡ್ತಿದ್ದದ್ದು ಎಂತಹ ಅದ್ಭುತ ಅನಿಸುತ್ತೆ.. ಸಿದ್ದೇಗೌಡ ಮಾಸ್ಟರರ ಎತ್ತರ ಅವರ ಪರೀಕ್ಷಕ ಕಣ್ಣುಗಳನ್ನು ನೋಡುವಾಗಲೇ ನಂಗೆ ಒಂಥರಾ ಹೆದರಿಕೆ. (ಅಥವಾ ಒಂದು ವರ್ಷ ಅವರೂ ಗಣಿತ ಹೇಳಿಕೊಟ್ಟಿದ್ರು ಅಂತಲೂ ಇರಬಹುದು).
ಹೈಸ್ಕೂಲಿನ ಮೂರು ವರ್ಷ ಮುಗಿದು ಸೆಂಡ್ ಆಫ್ ದಿನ ಅತ್ತ ನೆನಪು..ಕೊನೆಯ ಪರೀಕ್ಷೆಗೆ ಅದ್ಭುತವಾಗೇ ತಯಾರಾಗಿದ್ದೆ. ವಿಜ್ಞಾನ ಪರೀಕ್ಷೆ ಗೆ ಹೋಗುವ ಐದು ನಿಮಿಷ ಮೊದಲು ಆರ್ಕಿಡ್ ನಲ್ಲಿರೋ ಬೇರುಗಳಿಗೆ ಏನಂತಾರೆ ಅಂತ ಫರ್ಸ್ಟ್ rank ಇಂದಿರಾ ಕೇಳಿದಾಗ ‘ಸ್ಪಾಂಜಿನ್ ಅಥವಾ ಹೀರು ಬೇರು’ ಅಂತ ಹೇಳಿಕೊಟ್ಟ ಹೆಮ್ಮೆ. ಬದಲಿಗೆ ಅವಳಿಂದ ರಸಾಯನಶಾಸ್ತ್ರದ ಫಾರ್ಮುಲಾ ಒಂದನ್ನು ಹೇಳಿಸಿಕೊಂಡಿದ್ದೆ.
ಅದೇನೇ ಇದ್ದರೂ ಮಾತಿಗೂ ಮೊದಲೇ ‌ಮುಸಿಮುಸಿ ಅಳುತ್ತಿದ್ದವಳು ನಾನು. ಈಗಲೂ ನನಗೆ ಗಂಗ-ಕಾವೇರಿ ಬೇಗ ಪ್ರತ್ಯಕ್ಷ ಆಗ್ತಾಳೆ..
ನೆನಪುಗಳೇ ಹಾಗೆ ತಾನೆ..?
ಸಿಹಿ ಕಹಿ ಎರಡೂ ನಗು ಮುಡಿದೇ ಬರುತ್ತವೆ.
ಮಳೆ ಜೋರಾಗ್ತಿದೆ. ಒಳಗಡೆ ಹೋಗ್ತೀನಿ..
ಶನಿವಾರದ ಭೇಟಿಗೆ ಕಾಯೋದು ಈಗ ಕೊನೆಕ್ಷಣದ ಖುಷಿ.. ಮಾತು, ನಗು ಹರಟೆ ಮತ್ತಷ್ಟು ನೆನಪು. ಈಗ ಮಾತುಗಳ ಧಾಟಿ ಬದಲಾಗುವ ಭಯ..
ಮಕ್ಕಳು, ಮನೆ, ಅತ್ತೆ, ವ್ಯವಹಾರ…!
ಜೋರು ಮಿಂಚ್ತಾ ಇದೆ.. ಭಯ ಅಗುತ್ತೆ.. ಹೊರಟೆ.

ಮತ್ತಷ್ಟು ಸುದ್ದಿಗಳು

vertical

Latest News

ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ; ಅಭಿನಂದಿಸಿದ ಪ್ರಧಾನಿ ಮೋದಿ

newsics.com ನವದೆಹಲಿ; ರಾಜ್ಯಸಭೆಗೆ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಗೀತ ಮಾಂತ್ರಿಕ ಇಳಯರಾಜ, ಅಥ್ಲೀಟ್​ ಪಿಟಿ ಉಷಾ ಹಾಗೂ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್  ನಾಮ ನಿರ್ದೇಶನಗೊಂಡಿದ್ದಾರೆ. https://twitter.com/narendramodi/status/1544693793240322049?t=2u64d_ttEmETQgNsb5Joxg&s=19 ನಾಲ್ವರ ಫೋಟೋ...

ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿಗಳ ಕಾರು ಅಪಘಾತ

newsics.com ಧಾರವಾಡ; ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿಗಳ ಕಾರು ಅಪಘಾತವಾಗಿದೆ. ನಿಡಸೋಶಿಗೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಸ್ವಾಮೀಜಿಗಳು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ತಾಲೂಕಿನ ತೇಗೂರ ಬಳಿ ಕಾರು...

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್ ನಾಯಕ

newsics.com ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಶಿಖರ್...
- Advertisement -
error: Content is protected !!