Tuesday, March 28, 2023

ತಿರುಮಲೇಶರ ಎರಡು ಕಥೆಗಳ ಎರಡು ಹಕ್ಕಿಗಳು

Follow Us

ಕನ್ನಡದ ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿ, ಬೆಳೆದು, ಉದ್ಯೋಗ ನಿಮಿತ್ತ ಹೊರನಾಡು ಹೈದರಾಬಾದಿನಲ್ಲಿ ನೆಲೆಸಿ, ಯುರೋಪ್ ಮತ್ತು ಅಮೆರಿಕಗಳಲ್ಲಿ ಜೀವನಾನುಭವ ಗಳಿಸಿ, ಬಹುಶ್ರುತರೂ ಭಾಷಾತಜ್ಞರೂ ಪ್ರಾಜ್ಞರೂ ಆಗಿರುವ  ಕೆ.ವಿ.ತಿರುಮಲೇಶರ ಸಾಹಿತ್ಯಕೃಷಿ ಅಪಾರ. ತಿರುಮಲೇಶರು ಕವಿಯೆಂದೇ ಪ್ರಸಿದ್ಧರು. ಕವಿಗಳು ಕಥೆಗಾರರೂ ಆಗಿರುವುದು ವಿರಳ. ಅದರಲ್ಲೂ ಸಮರ್ಥ ಕಥೆಗಾರರಾಗಿರುವುದು ಇನ್ನೂ ವಿರಳ. ಅಂತಹ ವಿರಳಾತಿ ವಿರಳರಲ್ಲಿ ಕೆ.ವಿ.ತಿ.ಯವರೂ ಒಬ್ಬರು. ಅವರ ಕಥೆಗಳು, ನಾಟಕಗಳು, ಭಾಷಾಸಂಬಂಧಿ ಪ್ರಬಂಧಗಳು- ಎಲ್ಲವೂ ಕವಿತೆಗಳಷ್ಟೇ ಪ್ರಭಾವಶಾಲಿಯಾಗಿವೆ. ಇಂತಹ ಮಹಾನ್ ಸಾಹಿತ್ಯೋತ್ತಮ ಕೆ.ವಿ. ತಿರುಮಲೇಶ್ ಅವರ ಜನ್ಮದಿನ ಇಂದು (ಸೆ.12). ಸಾಹಿತ್ಯದಲ್ಲಿ ಅವರ ಪ್ರಯೋಗಶೀಲತೆಯೂ ಅಷ್ಟೇ ಸಮೃದ್ಧ. ಅಂತಹ ಸಮೃದ್ಧ ಸಾಹಿತ್ಯ ಹರಿವಿನಲ್ಲಿ ನನ್ನ ಬೊಗಸೆಗೆ ದಕ್ಕಿದಷ್ಟರಲ್ಲಿ ಎರಡು ಹನಿಯನ್ನಷ್ಟೇ ಸವಿದಿದ್ದೇನೆ. ಅದರನುಭವವನ್ನು ಪದಗಳಲ್ಲಿ ಹಿಡಿದಿಡುವ ಪುಟ್ಟ ಯತ್ನವಿದು.

   ಕವಿ ಕೆ.ವಿ. ತಿರುಮಲೇಶ್ ಜನ್ಮದಿನ ಇಂದು   


♦ ಜ್ಯೋತಿ ಮಹಾದೇವ್, ಮಣಿಪಾಲ

ಕವಯಿತ್ರಿ
newsics.com@gmail.com

ನಟರಾಜ ಉವಾಚ ಮತ್ತು ಇಬ್ಬರು ಹುಚ್ಚರು

‘ನ ಟರಾಜ ಉವಾಚ’ ಎನ್ನುವ ಕಥೆಯಲ್ಲಿ ನಿರೂಪಕ ಒಂದು ನಾಟಕಶಾಲೆಯಲ್ಲಿ ಒಂದು ಪುಟ್ಟ ಪರ್ಯಟನೆ ಮಾಡುತ್ತಾನೆ ಮತ್ತು ಅಲ್ಲಿವನ ಟೂರ್ ಗೈಡ್ ರೀತಿಯಲ್ಲಿ ನಟರಾಜನೆಂಬವನು ಆ ನಾಟಕ ತರಬೇತಿ ಕೇಂದ್ರದ ಎಲ್ಲ ಆಗುಹೋಗುಗಳನ್ನು ವಿವರಿಸುತ್ತಾನೆ. ಕೊನೆಯಲ್ಲಿ ನಿರೂಪಕ ಅಲ್ಲಿಂದ ಹೊರಟುಬಿಡುತ್ತಾನೆ. ಇದಿಷ್ಟು ಅತಿಪುಟ್ಟ ಸಾರಾಂಶ. ನಾಟಕಶಾಲೆಯಲ್ಲಿನ ಎಲ್ಲ ತರಬೇತಿಯ ಚಿತ್ರಣಗಳನ್ನು ವಿವರಿಸುತ್ತ ನಟರಾಜನು ತಾನೇ ಓರ್ವ ನಟನೆಂದೂ ಇಲ್ಲಿರುವವರೆಲ್ಲರೂ ನಟನೆಯಲ್ಲಿಯೇ ತೊಡಗಿರುವವರೆಂದೂ ನಿರೂಪಕನಿಗೆ ತಿಳಿಸುವಾಗ ಕಥೆಯು ಲೌಕಿಕ ನೆಲೆಯ ಕಥನವನ್ನು ಒಂದು ಕ್ಷಣ ಮೀರಿ ಪಾರಮಾರ್ಥಿಕಕ್ಕೇರುತ್ತದೆ. ‘ಈ ಜಗವೊಂದು ನಾಟಕರಂಗ, ನಾವೆಲ್ಲರೂ ಪಾತ್ರಧಾರಿಗಳು. ನಂನಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಟಿಸಿ, ನಡೆಸಿ ಎದ್ದುಕೊಂಡು ಹೋಗುವುದಷ್ಟೇ ನಮ್ಮ ಕರ್ತವ್ಯ’ ಎನ್ನುವುದನ್ನು ಈ ಕಥೆಯಲ್ಲಿ ನಾಟಕೀಯವಾಗಿ, ವ್ಯಂಗ್ಯವಿಲ್ಲದೆಯೂ ಲಲಿತವಾಗಿ ನಿರೂಪಿಸಿದ್ದಾರೆ.
ಸಾಕ್ಷೀಭಾವ…
ನಟನಾ ತರಬೇತಿ ಎನ್ನುತ್ತ ಸಹಜ ಬಾಳಿನಲ್ಲಿ ದೈನಂದಿನ ನಮ್ಮ ಸುತ್ತಮುತ್ತಲಲ್ಲಿ ಆಗುಹೋಗುವ ಅಸಂಗತ-ಅಸಂಬದ್ಧ ಘಟನೆಗಳಿಗೆ ವಿಸಂಗತಿಯ ಚೌಕಟ್ಟನ್ನಿಟ್ಟು ‘ಎಲ್ಲವುದಕ್ಕೂ ಯಾವುದೋ ಕಾರಣವಿದೆ’ ಎನ್ನುವ ತಾತ್ತ್ವಿಕತೆಯನ್ನೂ ಸಣ್ಣಗೆ ಹರಿಬಿಡುವ ನಟರಾಜ ಕಥಾನಿರೂಪಕನ ಗೈಡ್ ಮಾತ್ರವಲ್ಲ ಆತನ ವಿಧಿಯಾಗಿಯೂ ನಿರೂಪಕ ಈ ಜೀವನ ನಾಟಕವನ್ನು ಒಂದು ಹೆಜ್ಜೆ ಹಿಂದೆ ನಿಂತು ನಿರ್ಭಾವುಕನಾಗಿ ಈಕ್ಷಿಸುವ ಬರಿಯ ಸಾಕ್ಷೀಭಾವವಾಗಿಯೂ ಕಂಡುಬರುತ್ತಾರೆ.

ಒಂದು ಹಂತದಲ್ಲಿ ದ್ವಾ ಸುಪರ್ಣಾ (ತಿನ್ನುವ ಹಕ್ಕಿ ಮತ್ತು ನೋಡುವ ಹಕ್ಕಿ) ಇವೆರಡೂ ನಟರಾಜ ಮತ್ತು ನಿರೂಪಕರಾಗಿ ನಿಂತುಬಿಟ್ಟರು. ಅದಕ್ಕೆಂದೇ ಈ ಕಥೆಯ ಶೀರ್ಷಿಕೆ ನಟರಾಜ ಉವಾಚ. ನಾಟಕಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಮ್ಮತನದ ಒಂದು ಹಕ್ಕಿ – ತಿನ್ನುವ ಹಕ್ಕಿ- ನಟರಾಜ. ಇದನ್ನೆಲ್ಲ ನೋಡುತ್ತ, ಯಾವುದೇ ಒತ್ತಡಗಳಿಗೆ ಒಳಗಾಗದೆ ನಿರ್ಭಾವುಕವಾಗಿ ನಟರಾಜನ ಜತೆಜತೆಗೇ ನಟನಶಾಲೆಯ ಚಟುವಟಿಕೆಗಳ ನಡುವೆಯೇ ಒಂದು ಸುತ್ತು ಹಾಕುವ ಒಳಮನೆಯ ಹಕ್ಕಿ – ನೋಡುವ ಹಕ್ಕಿ – ನಿರೂಪಕ. ನಮ್ಮೆಲ್ಲರೊಳಗಿನ ಈ ಎರಡು ಹಕ್ಕಿಗಳನ್ನೂ ಈ ಲೋಕದ ನಟನಶಾಲೆಯಲ್ಲಿ ಅವಲೋಕಿಸಿದ್ದಾರೆ ಕಥೆಗಾರ ತಿರುಮಲೇಶರು.

‘ಇಬ್ಬರು ಹುಚ್ಚರು’ ಕಥೆಯೂ ಸರಿಸುಮಾರು ಇದೇ ತಾತ್ತ್ವಿಕತೆಯನ್ನು, ಆಂತರ್ಯವನ್ನು ಹೊಂದಿದೆಯೆಂದು ನನಗನ್ನಿಸಿದ್ದರಿಂದ ಇದನ್ನು ಆಯ್ದುಕೊಂಡೆ. ಎಲ್ಲವೂ ಸರಿಯಾಗಿದೆ ಎನ್ನಬಹುದಾದ ಸುಂದರ ಬಾಳು ಸದಾಶಿವನದು. ಯಾವುದೇ ಕೊರತೆಯಿರಲಿಲ್ಲ. ಆದರೂ ಸದಾಶಿವನಿಗೆ ಒಂದು ದಿನ ಇದ್ದಕ್ಕಿದ್ದಂತೆ ಹುಚ್ಚು ಹಿಡಿಯುತ್ತದೆ. ಹುಚ್ಚಿನಲ್ಲಿ ಆತ ಸಾಮಾನ್ಯವಾಗಿ ಮನುಷ್ಯನೊಬ್ಬ ಮಾಡಬಾರದ, ಮಾಡಲಾಗದ ಚೇಷ್ಟೆಗಳನ್ನು ಕಾರ್ಯಗಳನ್ನು ಮಾಡುತ್ತಾನೆ ಮತ್ತು ಅದಕ್ಕೆ ಹೊಣೆಗಾರನಾಗುವುದೂ ಇಲ್ಲ. ಅವನ ಹುಚ್ಚುತನ ಅವನಿಗೊಂದು ರಕ್ಷಾಕವಚದಂತೆ ಭಾಸವಾಗುತ್ತದೆ. ಇಲ್ಲಿ ಸದಾಶಿವನನ್ನು ‘ತಿನ್ನುವ ಹಕ್ಕಿ’ಗೆ ಹೋಲಿಸಿದರೆ, ಅವನೊಳಗಿನ ‘ನೋಡುವ ಹಕ್ಕಿ’ ಹುಚ್ಚಿನ ಪರದೆಯೊಳಗೆ ಮೌನವಾಗಿ ಮುದುಡಿದೆ ಅನ್ನಬಹುದು.
ಹೊರಗಣ್ಣಿನ ದೃಷ್ಟಿ…
ಅದೇ ಸಮಯಕ್ಕೆ ಅದೇ ಊರಿನಲ್ಲಿ ಕಂಡುಬರುವ ಇನ್ನೊಬ್ಬ ಹುಚ್ಚ, ಸದಾಶಿವನ ‘ನೋಡುವ ಹಕ್ಕಿ’ಯ ಪ್ರತೀಕವಾಗುತ್ತಾನೆ ಅನ್ನಿಸಿತು. ಅವನ ಇನ್ನೊಂದು ರೀತಿಯ ಹುಚ್ಚು ವರ್ತನೆ- ಅದೂ ಅತ್ಯಂತ ನಿಯಮಿತವಾಗಿ, ನಿಖರವಾಗಿ ನಡೆಯುವ/ ನಡೆಸುವ ವರ್ತನೆ- ಸದಾಶಿವನಿಗೆ ತನ್ನ ಅಸ್ಥಿತ್ವಕ್ಕೆ ತನ್ನ ಹುಚ್ಚುತನಕ್ಕೆ ಧಕ್ಕೆ ತರಬಹುದೆನ್ನುವ ಗುಮಾನಿಯೆದ್ದು ಆ ಇನ್ನೊಬ್ಬ ಹುಚ್ಚನನ್ನು ಎದುರಿಸಿದಾಗ ಆತನ ಮಾತುಗಳು ಸದಾಶಿವನಿಗೆ ಪಾಠವಾಗುವುದು, ಸದಾಶಿವ ನಿಜಕ್ಕೂ ಹುಚ್ಚನಾಗಿರಲಿಲ್ಲ- ಆತ ಯಾವುದೋ ಒತ್ತಡಕ್ಕೆ ಒಳಗಾಗಿಯೋ ಮಣಿದೋ ಹುಚ್ಚನಂತಿದ್ದ ಎನ್ನುವ ಗುಮಾನಿ ಹುಟ್ಟುತ್ತದೆ. ಕೊನೆಯಲ್ಲಿ ಸದಾಶಿವ ಕೆಲಸಮಯ ಕಾಣೆಯಾಗುವುದೂ ಅನಂತರ ಆತ ಹಿಂದಿರುಗಿದಾಗ ಆ ಇನ್ನೊಬ್ಬ ಹುಚ್ಚನೂ ಈ ಊರಿನಿಂದ ಮರೆಯಾಗುವುದೂ ಈ ಸಿದ್ಧಾಂತಕ್ಕೆ ಪೋಷಕವಾಗಿ ತೋರುತ್ತವೆ. ಒಳಗಣ್ಣು ಎಚ್ಚರಾದಾಗ ಹೊರಗಣ್ಣಿನ ದೃಷ್ಟಿಯೂ ಹೆಚ್ಚು ಸ್ಪಷ್ಟವಾಗುತ್ತದೆ.

ಎರಡೂ ಕಥೆಗಳಲ್ಲಿ, ನಟರಾಜ, ನಿರೂಪಕ, ಸದಾಶಿವ ಮತ್ತು ಇನ್ನೊಬ್ಬ ಹುಚ್ಚ – ನಾಲ್ವರಿಗೂ ಪರಸ್ಪರ ಅವಲಂಬನೆಯಿದ್ದೂ ಇಲ್ಲದಂತೆ ಕಥನ ಸಾಗುತ್ತದೆ. ನಟರಾಜ ಇಲ್ಲದಿರುತ್ತಿದ್ದರೂ ನಿರೂಪಕ ನಟನಶಾಲೆಯ ಒಂದು ಪರ್ಯಟನೆ ಮಾಡುತ್ತಿದ್ದ, ಆದರೆ ಅದನ್ನು ಓದುಗರಿಗೆ ತಲುಪಿಸುವಲ್ಲಿ ಅಸಮರ್ಥನಾಗುತ್ತಿದ್ದನೇನೋ! ಹಾಗೇನೇ, ಇನ್ನೊಬ್ಬ ಹುಚ್ಚ ಬಾರದಿರುತ್ತಿದ್ದರೆ, ಸದಾಶಿವ ತನ್ನದೇ ಪುಟ್ಟ ಹುಚ್ಚಿನ ಜಾಲದೊಳಗೆ ಸಿಲುಕಿ ಸದಾ ಅಲ್ಲೇ ಸುಳಿಯುತ್ತ ಉಳಿದುಬಿಡುತ್ತಿದ್ದನೇನೋ! ಇವೆರಡೂ ಸನ್ನಿವೇಶಗಳಲ್ಲಿ ಸಕ್ರಿಯವಾಗಿ ಅಲ್ಲಿ ‘ಇರುವ’ ವ್ಯಕ್ತಿಗೂ ನಿರ್ಭಾವುಕವಾಗಿ ಅದನ್ನೆಲ್ಲ ವೀಕ್ಷಿಸುವ ವ್ಯಕ್ತಿಗೂ ಇರುವ ಮಾನಸಿಕ ದೂರವೇ ಇಂತಹುದೊಂದು ನೆಲೆಗಟ್ಟನ್ನು ಕಂಡುಕೊಳ್ಳಲು ಸಹಾಯಕವಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರ ಶೇ.8.15 ಕ್ಕೆ ಏರಿಕೆ

newscics.com ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನುಬ ಹೆಚ್ಚಿಸಲು ತೀರ್ಮಾನಿಸಿದೆ....

ವಾಯುಮಾಲಿನ್ಯದಿಂದ 1,220 ಜನರು ಸಾವು

newscics.com ಮುಂಬೈ: ಮುಂಬೈನಲ್ಲಿ 2016-2021 ರ ನಡುವೆ 1,220 ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಅಂಕಿಅಂಶಗಳ ಪ್ರಕಾರ, ಮುಂಬೈನಲ್ಲಿ 2016 ಮತ್ತು 2021 ರ ನಡುವೆ 1,220...

ಭಾರತದ ಮೊದಲ ಗೀರ್ ತದ್ರೂಪಿ ತಳಿ ಆಕಳ ಕರು ಜನನ

newsics.com ನವದೆಹಲಿ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.ಈ...
- Advertisement -
error: Content is protected !!