Sunday, July 3, 2022

ತವರನ್ನು ಬೆಸೆವ ಪಂಚಮಿ

Follow Us

ನಾಗರಪಂಚಮಿ ನಾಡಿಗೆ ದೊಡ್ಡದು…ನಾರಿಯರೆಲ್ಲ ಬನ್ನೀರೆ… ಎಂದು ಹಾಡುತ್ತ ಸಡಗರ, ಭಕ್ತಿಭಾವಗಳಿಂದ ನಲಿಯುವ ಹಬ್ಬ ನಾಗರಪಂಚಮಿ. ಮದುವೆಯಾದ ಹೆಣ್ಣುಮಕ್ಕಳು ಸಾಮಾನ್ಯವಾಗಿ ತವರಿನಲ್ಲಿ ಈ ಹಬ್ಬ ಆಚರಿಸುತ್ತಾರೆ. ಆದರೆ, ಈ ಬಾರಿ ತವರಿನ ಪಯಣಕ್ಕೆ, ಜೋಕಾಲಿಯ ಸಂಭ್ರಮಕ್ಕೆ ಕೊರೋನಾ ಕರಿನೆರಳು ಚಾಚಿಕೊಂಡಿದೆ. ಇದರ ನಡುವೆಯೂ ಶುದ್ಧ ಮನದಿಂದ, ಸಡಗರದಿಂದ ಹಬ್ಬ ಆಚರಿಸೋಣ.

♦♦♦♦♦♦

♦ ಸುಮನಾ ಲಕ್ಷ್ಮೀಶ 
 response@newsics.com 
 newsics.com@gmail.com 

 

“ಅ ಣ್ಣ-ತಂಗಿಯರ ಹಬ್ಬ’ ಎಂದೇ ಪ್ರಚಲಿತದಲ್ಲಿರುವ ನಾಗಪಂಚಮಿಯ ಸಂಭ್ರಮ ಎಲ್ಲೆಡೆ ಹರಡಿದೆ. ಮಹಿಳಾ ವಿಶೇಷದ ಶ್ರಾವಣ ಮಾಸದಲ್ಲಿ ಇದೊಂದು ವಿಭಿನ್ನ ಹಬ್ಬ. ನಾಗಾರಾಧನೆ ಭಾರತೀಯ ಪರಂಪರೆಯಲ್ಲಿ ಹಿಂದಿನಿಂದಲೂ ಇರುವಂಥದ್ದು. ಇಂದಿಗೂ ನಾಗ ದೇವತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸಿ ದೋಷ ಪರಿಹಾರಕ್ಕೆ ಪ್ರಾರ್ಥಿಸಲಾಗುತ್ತದೆ.

ನಾಗರಪಂಚಮಿ ಮಹಿಳೆಯರ ಹಬ್ಬವಾಗಿ ಖ್ಯಾತಿ ಪಡೆದಿರುವುದಕ್ಕೆ ಒಂದು ಅದ್ಭುತ ಜನಪದ ಕಥೆಯಿದೆ. ಒಮ್ಮೆ, ಒಬ್ಬಳು ಯುವತಿ ನಾಲ್ವರು ಅಣ್ಣಂದಿರ ಜತೆಗೆ ನಾಗಪಂಚಮಿ ಹಬ್ಬ ಆಚರಿಸುತ್ತಿದ್ದಳು. ಅಲ್ಲಿಗೆ ಬಂದ ನಾಗರಹಾವೊಂದು ನಾಲ್ಕೂ ಅಣ್ಣಂದಿರನ್ನು ಕಚ್ಚಿ ಬಲಿ ತೆಗೆದುಕೊಂಡಿತು. ಆಗ ತಂಗಿ ಕಣ್ಣೀರುಗರೆಯುತ್ತ ನಾಗದೇವರಲ್ಲಿ ಬೇಡಿಕೊಂಡಳು. ಒಬ್ಬ ಅಣ್ಣನನ್ನಾದರೂ ಉಳಿಸು ಎಂದು ಕೋರಿದಳು. ಆಗ ನಾಗರಾಜ ಆಕೆಯ ಒಬ್ಬ ಅಣ್ಣನನ್ನು ಬದುಕಿಸಿದ. ಅಂದಿನಿಂದ ನಾಗಪಂಚಮಿ ಅಣ್ಣತಂಗಿಯರ ಹಬ್ಬವಾಯಿತು. ನಾಗಪಂಚಮಿಗೆ ಅಣ್ಣ ಕರೆಯಲು ಬರುವುದನ್ನು ಕಾಯುವುದೇ ಸಹೋದರಿಯರಿಗೆ ಸಂಭ್ರಮವಾಯಿತು. ತವರಿನಲ್ಲಿ ಹಬ್ಬವನ್ನು ಆಚರಿಸುವ ಮೂಲಕ ಇನ್ನಷ್ಟು ಸಂಭ್ರಮ, ಅಭಿಮಾನಗಳನ್ನು ಜೋಳಿಗೆಯಲ್ಲಿ ತುಂಬಿಕೊಂಡು ಪತಿಗೃಹಕ್ಕೆ ನಡೆಯುವ ಅಭ್ಯಾಸ ಬೆಳೆದುಬಂತು.

ಉತ್ತರ ಕರ್ನಾಟಕ ಭಾಗದಲ್ಲಿ ಜನಸಮೂಹದೊಂದಿಗೆ ನಾಗಪಂಚಮಿಯನ್ನು ಆಚರಿಸಿದರೆ, ನಾಗಬನಗಳ ಸಮೂಹವನ್ನೇ ಹೊಂದಿರುವ ಕರಾವಳಿ ಜಿಲ್ಲೆಗಳಲ್ಲಿ ಈ ಹಬ್ಬದ ನೆಪದಲ್ಲಿ ಪ್ರಕೃತಿ ಆರಾಧನೆಯೂ ನಡೆಯುತ್ತದೆ. ಇಲ್ಲಿನ ನಾಗಬನಗಳಿಂದಲೇ ಅದೆಷ್ಟೋ ಅರಣ್ಯಗಳ ಸಂರಕ್ಷಣೆಯಾಗಿದೆ.

ಉಂಡೆಗಳ ಹಬ್ಬ
ನಾಗಪಂಚಮಿಗೆ ಮಾಡುವ ತಿಂಡಿಗಳ ಪಟ್ಟಿಯೂ ದೊಡ್ಡದಿದೆ. ಶೇಂಗಾ ಉಂಡೆ ಸೇರಿದಂತೆ ಹತ್ತಾರು ತರಹದ ಕಾಳುಗಳ ಉಂಡೆಗಳನ್ನು ಮಾಡುವುದು ಈ ಹಬ್ಬದ ವೈಶಿಷ್ಟ್ಯ. ಊದಲು ಹಿಟ್ಟಿನ ತಂಬಿಟ್ಟು ಉಂಡೆ, ಎಳ್ಳುಂಡೆ ಸೇರಿದಂತೆ ಕುಚ್ಚಿನ ಕಡುಬು, ಮಡಕೆ ಕಾಳಿನ ಉಸಳಿಯನ್ನೂ ಮಾಡಲಾಗುತ್ತದೆ.

ಪ್ರಕೃತಿ ಉಪವಾಸ
ನಾಗರಕಲ್ಲಿಗೆ ಹೂರಣದಲ್ಲಿ ತುಪ್ಪದ ದೀಪ ಹಚ್ಚುವುದು, ಅರಿಶಿಣ, ಕಡಲೆಕಾಳುಗಳಿಂದ ಅಲಂಕಾರ ಮಾಡುವುದು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಒಂದೊಂದು ರೀತಿಯ ಆಚರಣೆ ಕಂಡುಬರುತ್ತದೆ. ನಾಗ ಚತುರ್ಥಿಯಂದು ಅಂದರೆ ಹಬ್ಬದ ಮೊದಲ ದಿನ ಕಲ್ಲುನಾಗರಕ್ಕೆ ಹಾಲು ಎರೆದರೆ, ಪಂಚಮಿ ದಿನ ಹುತ್ತದ ನಾಗರಕ್ಕೆ ಹಾಲೆರೆಯುವುದು ಪದ್ಧತಿ. ಮೊದಲ ದಿನ ಎಲ್ಲ ತಿಂಡಿಗಳನ್ನು ಹಸಿಯಾಗಿಯೇ ಮಾಡಲಾಗುತ್ತದೆ. ಹಸಿ ತಂಬಿಟ್ಟು ಸೇರಿದಂತೆ ಎಲ್ಲವನ್ನೂ ಹಸಿಯಾಗಿಯೇ ನೈವೇದ್ಯ ಮಾಡಲಾಗುತ್ತದೆ. ಅಂದು ಉಪವಾಸವನ್ನೂ ಮಾಡುತ್ತಾರೆ. ಅದನ್ನು ಪ್ರಕೃತಿ ಉಪವಾಸ ಎಂದೇ ಕರೆಯುತ್ತಾರೆ. ಪಂಚಮಿಯಂದು ಹಬ್ಬದಡುಗೆಯಾದರೂ ಅಂದು ಕರಿದ, ಹುರಿದ ತಿಂಡಿಗಳು ನಿಷಿದ್ಧ. ಎಲ್ಲವನ್ನೂ ಬೇಯಿಸಿ, ಕುದಿಸಿಯೇ ಮಾಡುತ್ತಾರೆ. ಎರೆಮಣ್ಣು ತಂದು ನಾಗರವನ್ನು ಮಾಡಿ ಹಾಲೆರೆಯುತ್ತಾರೆ.
ಹಾವು ಹಾಲು ಕುಡಿಯುತ್ತದೆಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ, ಧಾರ್ಮಿಕ ನಂಬಿಕೆಯಿಂದ ನಾಗರಪಂಚಮಿಯಂದು ಹುತ್ತಗಳಿಗೆ ಹಾಲೆರೆದು ಹಾವುಗಳನ್ನು ಹಿಂಸಿಸಲಾಗುತ್ತದೆ ಎಂಬ ವಾದವೂ ಇದೆ.

ಹೆಣ್ಣುಮಕ್ಕಳಿಗೆ ಉನ್ನತ ಸ್ಥಾನ
ಪಂಚಮಿ ಹಬ್ಬ ಬಂದೀತವ್ವ, ಅಣ್ಣ ಬರಲಿಲ್ಲ ಕರಿಯಾಕ… ಎಂದು ಅಣ್ಣನನ್ನು ಎದುರು ನೋಡುವಂತೆ ಮಾಡುವ ಪಂಚಮಿ, ಕುಟುಂಬದೊಳಗೆ ಹೆಣ್ಣುಮಕ್ಕಳಿಗೆ ಉನ್ನತ ಸ್ಥಾನ ಕಲ್ಪಿಸಿದೆ. ಮದುವೆಯಾಗಿ ಎಷ್ಟೇ ವರ್ಷವಾಗಿರಲಿ, ತವರಿನವರು ಆಕೆಯನ್ನು ಕರೆದುಕೊಂಡು ಬರುವುದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ. ಅಕಸ್ಮಾತ್ ತವರಿಗೆ ಕರೆದುಕೊಂಡು ಬರುವುದು ಸಾಧ್ಯವಾಗದಿದ್ದರೆ ಉಂಡೆ-ಕುಬ್ಬಸವನ್ನು ಹೆಣ್ಣುಮಕ್ಕಳಿಗೆ ತಲುಪಿಸುವುದನ್ನು ತಪ್ಪಿಸುವುದಿಲ್ಲ. ಈ ಮೂಲಕ, ಹೆಣ್ಣುಮಕ್ಕಳಿಗೆ ತವರಿನ ಬೆಂಬಲವಿದೆ ಎನ್ನುವ ಭರವಸೆ ಮೂಡಿಸಲಾಗುತ್ತದೆ. ಜೋಕಾಲಿ ಆಡೋಣ ಬನ್ನಿ… ಬೇಕಾದ ನಾರಿಯರೆಲ್ಲ ಸಾಕಾಗುವ ತನಕ ಆಡೋಣ… ಎನ್ನುವ ಸಾಲುಗಳು ನಾಡಿನಲ್ಲಿ ಜನಪ್ರಿಯ. ಜಾತಿಯ ತಾರತಮ್ಯವಿಲ್ಲದೆ ಸಾಮೂಹಿಕವಾಗಿ ಜೋಕಾಲಿ ಆಡುವ ಪದ್ಧತಿಯೂ ಸಾಮಾಜಿಕ ಜೀವನಕ್ಕೆ ನೀಡಿದ ಮಹತ್ವದ ಕೊಡುಗೆಯಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

ಕೊರೋನಾ ಕರಿನೆರಳು
ಈ ಬಾರಿಯ ಪಂಚಮಿ ಹಬ್ಬದ ಸಂಭ್ರಮಕ್ಕೆ ಕೊರೋನಾ ಕರಿನೆರಳು ಅಡ್ಡಬಂದಿದೆ. ಸಾಮೂಹಿಕ ಪೂಜೆ ಮತ್ತಿತರ ಆಚರಣೆಗೆ ಸರ್ಕಾರ ನಿಷೇಧ ಹೇರಿದೆ. ಸಾಮೂಹಿಕವಾಗಿ ನಾಗದೇವರಿಗೆ ಹಾಲು, ತುಪ್ಪ ನೈವೇದ್ಯ ಮಾಡಲು, ಉಯ್ಯಾಲೆಯಾಡಲು ಸಹ ಈ ಬಾರಿ ಸಾಧ್ಯವಿಲ್ಲ. ಚಿಂತಿಸಬೇಡಿ, ಮನೆಯಲ್ಲೇ ಸಂತಸ, ಭಕ್ತಿಭಾವಗಳಿಂದ ಆಚರಿಸುವ ಮೂಲಕ, ತವರಿಗೆ, ಅಣ್ಣತಮ್ಮಂದಿರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸೋಣ. ಮುಂದಿನ ವರ್ಷವಾದರೂ ಈ ಎಲ್ಲ ಸಂಭ್ರಮಗಳು ಮರಳಿ ಬರುವಂತಾಗಲಿ ಎಂದು ಆಶಿಸುತ್ತ ಹಬ್ಬದಾಚರಣೆ ಸಂಭ್ರಮಿಸೋಣ.

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!