Monday, March 1, 2021

ಅವನ ತೋಳಬಂದಿಯಲಿ ತೇಲಿದೆ ಮನ…

ಕನಸಿನೂರಲ್ಲಿ ಕಂಡ ಅವನ ಹಸನ್ಮುಖ ಹಗಲಿನಲ್ಲೂ ಕನಸು ಕಾಣುವಂತೆ ಮಾಡಿದೆ. ಅವನಿಗೆ ಹೇಳುವ ಆಸೆಯಂತೂ ಇದೆ… ‘ನಿನ್ನ ಪಾಪಚ್ಚಿ ಮುಖದಲ್ಲಿನ ನಗು ನಿದ್ದೆಗೆಡಿಸಿತ್ತು’ ಎಂದು. ಆದರೇನು ಮಾಡಲಿ, ಹೊತ್ತಲ್ಲದ ಹೊತ್ತಲ್ಲಿ ಲಗ್ಗೆ ಹಾಕುವ ಅವನ ನೆನಪ ಸುಖ, ಹುಣ್ಣಿಮೆಯ ಗೋಲದಂತೆ ಕಾಣುವ ಅವನ ಮುಖ ನೋಡಿದಾಕ್ಷಣ ಹೇಳಬೇಕೆಂದಿದ್ದ ಮಾತುಗಳೆಲ್ಲ ಬೆಚ್ಚಗೆ ನಿದ್ರೆಗೆ ಜಾರಿಬಿಡುತ್ತವೆ…


     ವ್ಯಾಲಂಟೈನ್ಸ್ ಡೇ ವಿಶೇಷ    


♦ ಪವಿತ್ರಾ ಜಿಗಳೇಮನೆ
ಪತ್ರಿಕೋದ್ಯಮ ವಿದ್ಯಾರ್ಥಿನಿ, ಪುತ್ತೂರು
newsics.com@gmail.com


 ಪ್ರೀ ತಿಯೆಂದರೆ ಕೇವಲ ಭಾವವಲ್ಲ. ಹಲವು ಭಾವನೆಗಳ ಮೊತ್ತ. ಸುಳಿ ಸಂದೇಹವ ತೊರೆದು ನಂಬಿಕೆಯ ಅಲೆಯಾಗಿ ಬಂದ ಅವನ ಪ್ರೀತಿಯೂ ಅಂತಹುದೇ.
ಅವನೆಂದರೆ ವಂಚನೆಯಿಲ್ಲದ ಪ್ರೀತಿಯ ಸಾಮ್ರಾಟ, ಕೋಟ್ಯಂತರ ತಾರೆಗಳ ನಡುವೆಯೂ ಚಂದಿರನಂತೆ ಹೊಳೆದು ಗಮನ ಸೆಳೆದವ. ಪ್ರೀತಿ ಪರಿಭಾಷೆಗೆ ಹೊಸ ಅರ್ಥ ಕಲ್ಪಸಿದವ. ನನ್ನೆಲ್ಲಾ ಹುಚ್ಚು ತುಂಟಾಟಕೆ ಮೆಚ್ಚುಗೆ ನೀಡಿ ಸಂಕೋಚವ ಬಿಡಿಸಿದವ. ಮುದ್ದು ಪೆದ್ದು ಆಗಿ ಆಡುವಾಗ ಫೋಟೋ ಕ್ಲಿಕ್ಕಿಸಿದವ. ಅವನೇ ಕನಸಿನ ಹುಡುಗ. ಕುಡಿಮೀಸೆಯಂಚಲ್ಲಿ ನಕ್ಕು ಹೃದಯದ ತಾಳತಪ್ಪಿಸಿದ ಚಿತ್ತ ಚೋರ. ಅವನ ನೆನಪಿನೊಂದಿಗೆ ಹೃದಯ ಬೆರೆತ ಕ್ಷಣಗಳಿಗೆ ಲೆಕ್ಕವಿಲ್ಲ. ನನ್ನೊಳಗೆ ನಾನೇ ಹಾಡಿಕೊಂಡ ಹಾಡುಗಳು, ಅವನಿಗಾಗಿ ಬರೆದ ಸಾಲುಗಳು, ಅವನು ನೆನಪಾದಾಗ ಉದ್ಬವಿಸುವ ಕವನಗಳು ಎಲ್ಲೆ ಮೀರಿವೆ.
ಹಗಲಿನಲ್ಲೂ ಕನಸು…
ಅವನದೇ ರಾಗದಲಿ ತೇಲಿದ ಮನ ತಣ್ಣಗಿನ ಗಾಳಿ ಸೋಕಿ ತನ್ಮಯತೆಯ ಭಾವದಿ ಮೂಕವಾಗಿದೆ. ಕನಸಿನೂರಲ್ಲಿ ಕಂಡ ಅವನ ಹಸನ್ಮುಖ ಹಗಲಿನಲ್ಲೂ ಕನಸು ಕಾಣುವಂತೆ ಮಾಡಿದೆ. ಅವನಿಗೆ ಹೇಳುವ ಆಸೆಯಂತೂ ಇದೆ… ‘ನಿನ್ನ ಪಾಪಚ್ಚಿ ಮುಖದಲ್ಲಿನ ನಗು ನಿದ್ದೆಗೆಡಿಸಿತ್ತು’ ಎಂದು.
ಆದರೇನು ಮಾಡಲಿ, ಹೊತ್ತಲ್ಲದ ಹೊತ್ತಲ್ಲಿ ಲಗ್ಗೆ ಹಾಕುವ ಅವನ ನೆನಪ ಸುಖ, ಹುಣ್ಣಿಮೆಯ ಗೋಲದಂತೆ ಕಾಣುವ ಅವನ ಮುಖ ನೋಡಿದಾಕ್ಷಣ ಹೇಳಬೇಕೆಂದಿದ್ದ ಮಾತುಗಳೆಲ್ಲ ಬೆಚ್ಚಗೆ ನಿದ್ರೆಗೆ ಜಾರಿಬಿಡುತ್ತವೆ. ಆದರೂ ನಂಬಿಕೆಯಿದೆ, ಅವನ ಪ್ರೇಮದ ಓಂಕಾರದಲಿ ತೇಲಿ, ಬಿಸಿಯುಸಿರ ನಡುವಲ್ಲಿ ಜಾರಿ ಕೆನ್ನೆ ಹಿಂಡಿ, ಕುಡಿಮೀಸೆಯ ತಿರುಗಿಸುವೆನೆಂದು.
ಕಾಲು ಮುಟ್ಟಿ ಓಡಿಹೋಗುವ ಸಮುದ್ರದಲ್ಲೂ ಅವನ ಹೆಜ್ಜೆಯೊಂದಿಗೆ ನನ್ನ ಹೆಜ್ಜೆ ಬೆಸೆಯಬೇಕು. ಅವನ ಬೊಗಸೆಯಲ್ಲಿ ನನ್ನಿಡೀ ಜೀವನವನು ಒಗಾಯಿಸಿ ನಿರಾಳವಾಗಿ ಬದುಕಿಬಿಡಬೇಕು. ಬದುಕಿನ ಸಾಫಲ್ಯಗಳಿಗೆ ಕಾರಣವಾಗಿ ಎದುರಾಗುವ ಎಡರು ತೊಡರುಗಳ ಭರಿಸಲು ಶಕ್ತಿಯಾಗಿ ಅವನೊಂದಿಗೆ ಇರಬೇಕು. ಅವನೆಲ್ಲಾ ‘ಬೇಕು’ ಎಂಬ ಬೇಡಿಕೆಗಳಿಗೆ, ಸಿದ್ಧ ಉತ್ತರದಂತೆ ‘ಬೇಡ’ ಎಂದು ತಲೆಯಾಡಿಸಿ, ಮನಃಪೂರ್ವಕವಾಗಿ ಗೋಳು ಹೊಯ್ದುಕೊಳ್ಳಬೇಕು.
ಹೇಳಬಾರದೇ ಒಮ್ಮೆ…?
ಅರಳುವ ಹೂವಿನ ನಸುನಗೆ, ಹಸಿರ ರಾಶಿಗೆ ಮುತ್ತಿಡುವ ಇಬ್ಬನಿಯ ಹನಿ, ಚಿಲಿಪಿಲಿ ಹಕ್ಕಿಗಳ ಕಲರವ ಇವೆಲ್ಲವೂ ಪ್ರಕೃತಿಯ ಪ್ರತಿಚರ್ಯೆಯಲ್ಲಿ ನವೀನತೆ ಮೂಡಿಸುತ್ತದೆ. ಅಂತಹದ್ದೇ ಹೊಸತನದ ಬದುಕು ಅವನೊಂದಿಗೆ ಮಾತ್ರ ಸಾಧ್ಯ. ಅದಕ್ಕೆಂದೇ ಜಗವ ಅರಸಿ ಬಂದು ಕಾದಿರುವೆ. ಹೇಳಬಾರದೆ ಒಮ್ಮೆ ನನ್ನೆಲ್ಲ ಸಮಯ ನಿನಗೆ ಮುಡಿಪೆಂದು?
ಹ್ಯಾಪಿ ವ್ಯಾಲಂಟೈನ್ಸ್ ಡೇ…

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!