Thursday, February 2, 2023

ಸರ್ಕಾರಕ್ಕೂ ಶ್ರಾವಣ ಬರಲಿ…

Follow Us

“ಸರ್ಕಾರಿ ಧೋರಣೆ “ಅಂದರೆ ?
ಭ್ರಷ್ಟಾಚಾರ, ಲಂಚಗುಳಿತನ ಇವು ಮಾತ್ರ ತಪ್ಪೇ?
ಕೆಲಸದ ಜವಾಬ್ದಾರಿಯನ್ನೇ ತೆಗೆದುಕೊಳ್ಳದೆ ಇರುವುದು, ಕೆಲಸವನ್ನೇ ಮಾಡದಿರುವುದು ಇವು ಕೂಡ ಧೋರಣೆಗಳೇ ಅಲ್ಲವೇ?
ಅನೇಕ ಬಾರಿ ಸರ್ಕಾರ ಯಾವುದು? ಯಾವ ಪಕ್ಷದ್ದು ? ಕೇಂದ್ರ ಸರ್ಕಾರ ,ರಾಜ್ಯ ಸರ್ಕಾರ, ಅಧಿಕಾರದಲ್ಲಿ ಇದ್ದು ಆಡಳಿತ ಯಂತ್ರ ನಡೆಸುವ ಘನತೆವೆತ್ತ ಎಲ್ಲ ಹಿರಿಯರ ಮೆರವಣಿಗೆಗಳೂ ಮನಸ್ಸಿನಲ್ಲಿ ಸಾಗಿ ಹೋಗುತ್ತದೆ.


♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com

“ಖಾಸಗಿ ಅವರಿಂದ ಬರುವ ಸ್ಪರ್ಧೆಗಳನ್ನು ಎದುರಿಸುತ್ತಾ ಮುನ್ನಡೆಯ ಬೇಕಾದರೆ ನಮ್ಮ ಗುರಿ ಸರಿಯಾಗಿರಬೇಕು. ನಾವು ಗೆಲುವಿನ ಕಡೆ ನಡೆಯಬೇಕಾದರೆ “ಸರ್ಕಾರಿ ಧೋರಣೆ ” ಬಿಟ್ಟು ಸರಿಯಾಗಿ ಕೆಲಸ ಮಾಡಬೇಕು.
” ಧೋರಣೆಗಳನ್ನು ಬಿಟ್ಟು ಸರಿಯಾಗಿ ಕೆಲಸ ಮಾಡಿ. ಕಷ್ಟವಾಗುತ್ತಿದೆ ಎಂದಾದರೆ ಸಂಸ್ಥೆಯಿಂದ ಹೊರ ನಡೆಯಿರಿ. ”
ಇಷ್ಟು ದಿಟ್ಟವಾಗಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದವರು ಟೆಲಿಕಾಂ ಸಚಿವರಾದ ಅಶ್ವಿನಿ ವೈಷ್ಣವ ಅವರು.
ಸುಮಾರು 62 ಸಾವಿರ ಉದ್ಯೋಗಿಗಳು ಬಿ ಎಸ್ ಎನ್ ಎಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿದೆ ಬಿಎಸ್ಎನ್ಎಲ್ .
ಸುಮಾರು 1.64 ಲಕ್ಷ ಕೋಟಿ ಬೃಹತ್ ಪುನರುಜ್ಜೀವನ ಪ್ಯಾಕೇಜ್ ನೀಡಲಾಗಿದೆ.
” ದಯವಿಟ್ಟು ಸರಿಯಾಗಿ ಕೆಲಸ ಮಾಡಿ ,ಇಲ್ಲವಾದರೆ ಗಂಟು ಮೂಟೆ ಕಟ್ಟಿಬಿಡಿ”
ಇದು ಸಚಿವರ ಮನವಿಯೂ ಹೌದು. ಎಚ್ಚರಿಕೆಯೂ ಹೌದು.

ಸಚಿವರು ಹೇಳುವಂತೆ
“ಸರ್ಕಾರಿ ಧೋರಣೆ” ಅಂದರೆ ಏನು ?

ಈ ಪ್ರಶ್ನೆ ಕೇಳಿದಾಗ ನಗು ಬರಬಹುದು.
ಹುಡುಕಾಡಿದರೆ ಸಾವಿರಾರು ಉತ್ತರಗಳು ಕಣ್ಣ ಮುಂದೆ ಸುಳಿದಾಡಬಹುದು.
ಚೋಮನ ದುಡಿ ಚಿತ್ರದಿಂದ ಹಿಡಿದು ಇತ್ತೀಚಿನ Act 78 ಚಿತ್ರಗಳಲ್ಲಿ ಕಂಡ ಪಾತ್ರಗಳು ಬಳಿ ನಿಂತು ಮಾತನಾಡಬಹುದು.
ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳು ನೆನಪಿಗೆ ಬರಬಹುದು.
“ಸರ್ಕಾರಿ ಧೋರಣೆ “ಅಂದರೆ ?
ಭ್ರಷ್ಟಾಚಾರ, ಲಂಚಗುಳಿತನ ಇವು ಮಾತ್ರ ತಪ್ಪೇ?
ಕೆಲಸದ ಜವಾಬ್ದಾರಿಯನ್ನೇ ತೆಗೆದುಕೊಳ್ಳದೆ ಇರುವುದು, ಕೆಲಸವನ್ನೇ ಮಾಡದಿರುವುದು ಇವು ಕೂಡ ಧೋರಣೆಗಳೇ ಅಲ್ಲವೇ?
ಅನೇಕ ಬಾರಿ ಸರ್ಕಾರ ಯಾವುದು? ಯಾವ ಪಕ್ಷದ್ದು ? ಕೇಂದ್ರ ಸರ್ಕಾರ ,ರಾಜ್ಯ ಸರ್ಕಾರ, ಅಧಿಕಾರದಲ್ಲಿ ಇದ್ದು ಆಡಳಿತ ಯಂತ್ರ ನಡೆಸುವ ಘನತೆವೆತ್ತ ಎಲ್ಲ ಹಿರಿಯರ ಮೆರವಣಿಗೆಗಳೂ ಮನಸ್ಸಿನಲ್ಲಿ ಸಾಗಿ ಹೋಗುತ್ತದೆ.
” ಅವನಿಗೇನಪ್ಪ ! ಸರ್ಕಾರಿ ಕೆಲಸ!”
ಆರಾಮಾಗಿ ಇದ್ದಾನೆ. ಎಂಬ ಭಾವ. ಅದೇಕೋ ಅದು ಹೇಗೋ ಎಲ್ಲರಲ್ಲೂ ಮನೆ ಮಾಡಿದೆ.
ಒಬ್ಬ ಸರ್ಕಾರಿ ನೌಕರ ಎಂದರೆ ಆತನಿಗೆ ಕೆಲಸದ ಭದ್ರತೆ ಇದೆ .ಕಾಲಕಾಲಕ್ಕೆ ಭಡ್ತಿ ಸಿಗುತ್ತದೆ. ಸಂಬಳ ಏರಿಕೆ, ಡಿಎ ಮುಂತಾದ ಭತ್ಯೆ ಎಲ್ಲವೂ ಇದೆ. ಆತ ನೆಮ್ಮದಿಯಿಂದ ಇರುತ್ತಾನೆ ಎಂಬುದು ಒಂದು ಸಾಮಾನ್ಯ ನಂಬಿಕೆ.
“ಸರ್ಕಾರಿ ಕೆಲಸ ,ದೇವರ ಕೆಲಸ” ಎಂದು ಘನತೆಯಿಂದ ಹೇಳುವುದು ಒಂದೆಡೆ ಆದರೆ ಸರ್ಕಾರಿ ಕೆಲಸವನ್ನು ನೌಕರರು ಅಧಿಕಾರಿಗಳು ಮಾಡಿಕೊಡುವುದಿಲ್ಲ ಅದು ದೇವರ ಕೆಲಸ , ದೇವರೇ ಮಾಡಬೇಕು ಎಂಬ ಧೋರಣೆಯಲ್ಲಿ ಜನ ಮಾತನಾಡುತ್ತಾರೆ.
ಜನ ಮತ್ತು ಸರ್ಕಾರ ಎಂದಾಗ ನಿತ್ಯವೂ ರಾಗ ಮಾಲಿಕೆಗಳೇ ಕಿವಿಗೆ ಬೀಳುತ್ತದೆ .
ಒಂದೊಂದು ಇಲಾಖೆಯದು ಒಂದೊಂದು ರಾಗ.
ಕಳೆದ ಕೆಲವು ವರ್ಷಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ, ಡಿಜಿಟಲ್ ಸೌಕರ್ಯಗಳು ಜನರನ್ನು ತಲುಪಿದೆ.
ಮೊಬೈಲ್ ಕ್ರಾಂತಿ ಆಗುತ್ತಿರುವ ಈ ಸಂದರ್ಭದಲ್ಲಿ ಎಷ್ಟೋ ಉದ್ದಿಮೆಗಳು , ಉದ್ಯಮಗಳು ನೆಲಕಚ್ಚಿವೆ.
ಇದೇ ಕಾರಣಗಳಿಂದ ಕಳೆದ 20 ವರ್ಷಗಳಿಂದ ಸರ್ಕಾರಿ ಇಲಾಖೆಗಳಲ್ಲಿ (ಕೇಂದ್ರ ಸರ್ಕಾರವೇ ಆಗಲಿ ರಾಜ್ಯ ಸರ್ಕಾರವೇ ಆಗಲಿ ) ಅನೇಕ ಹುದ್ದೆಗಳಿಗೆ ನೇಮಕಾತಿಗಳೇ ನಡೆದಿಲ್ಲ.
ಸಂಪರ್ಕ ಕ್ರಾಂತಿ ಮಾಹಿತಿ ಕ್ರಾಂತಿ ತಂತ್ರಜ್ಞಾನದ ಉನ್ನತೀಕರಣ ಇವೆಲ್ಲದರ ಕಾರಣದಿಂದ ಕಡಿಮೆ ಜನ ಇದ್ದರೂ ಪರವಾಗಿಲ್ಲ ,ಯಂತ್ರಗಳ ಬಳಕೆಯಿಂದ ಗುರಿಗಳ ಸಾಧನೆ ಮಾಡಬಹುದು ,ನಿಖರ ಫಲಿತಾಂಶವನ್ನು ಪಡೆಯಬಹುದು ಎಂದು ಬಿಂಬಿಸಲಾಗುತ್ತಿದೆ.
ಹೀಗಿರುವಾಗ ಬಹುಶಃ ನೇಮಕಾತಿಗಳ ಅಗತ್ಯ ಇಲ್ಲ ಎಂದು ಸರ್ಕಾರ ಭಾವಿಸಿದ್ದಿರಬೇಕು.
ನಿವೃತ್ತರಾದವರ ಜಾಗಗಳಿಗೆ ಹೊಸಬರು ಬರಲೇ ಇಲ್ಲ.
ಇರುವ ಅಧಿಕಾರಿಗಳು ನೌಕರರಿಗೆ ಹೆಚ್ಚು ಒತ್ತಡ ಹಾಕಿದರೆ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ಭಾವಿಸಲಾಯಿತು. ಸರ್ಕಾರಿ ಕೆಲಸಗಳಲ್ಲಿ ,ಅದು ಬ್ಯಾಂಕ್ ಆಗಿರಲಿ ಮಾಧ್ಯಮವೇ ಇರಲಿ ,ಬಿಎಸ್ಎನ್ಎಲ್ ಇರಲಿ ,ನೀರಿರಲಿ ,ಕೃಷಿ ಆಗಲಿ ,ಕೇಂದ್ರವಾಗಲಿ ರಾಜ್ಯವಾಗಲಿ ಎಲ್ಲಾ ಕಡೆ ಇದೇ
“ಒತ್ತಡ ನೀತಿ” ಜಾರಿಗೆ ಬಂದಿತು.
ಯಾವುದೇ ಇಲಾಖೆಯಲ್ಲಿ ಯುವ ಜನರನ್ನು ನೋಡುವುದೇ ದುಸ್ತರವಾಯಿತು.
ಹಿರಿಯರು ತಮಗೆ ಒತ್ತಡ ಆಗುತ್ತಿದೆ ಎಂದು ಹೇಳಿದಾಗ ” ದಿನಗೂಲಿ ” ಅಥವಾ ” ಒಪ್ಪಂದ ಸೇವೆ ” ಗಳನ್ನು ಜಾರಿಗೆ ತಂದರೇ ಸುಲಭ ಎಂದು ಭಾವಿಸಲಾಯಿತು.
ತನ್ಮೂಲಕ ಸರಕಾರಕ್ಕೆ ಆಡಳಿತ ಯಂತ್ರಕ್ಕೆ ಉಳಿತಾಯ ಆಗುತ್ತದೆ ಎಂದು ನಂಬಿಕೆ ಮೂಡಿಸಲಾಯಿತು.
ಆದರೆ ಈ ಒಪ್ಪಂದ ಆಧಾರಿತ ಸಿಬ್ಬಂದಿಗೆ ಎಷ್ಟೇ ಮಾರ್ಗದರ್ಶನ ನೀಡಿದರೂ ಅದು ಅವರಿಗೆ “ಖಾಯಂ ” ಉದ್ಯೋಗದ ಭರವಸೆ ನೀಡಲಿಲ್ಲ . ಹಾಗಾಗಿ ಕಲಿಯುವಿಕೆ ಆಸಕ್ತಿ ಮತ್ತು ಬೆಳೆಯುವ ಹಂಬಲ ಕಿರಿಯರಲ್ಲಿ ಕಡಿಮೆ ಆಯಿತು.
ಆದ್ದರಿಂದ ಕೆಲಸ ಕಾರ್ಯಗಳ ಮತ್ತು ಇತರ ನಿರ್ವಹಣೆಗಳ ಒಟ್ಟೂ ಜವಾಬ್ದಾರಿ ಖಾಯಂ ನೌಕರರ ಮೇಲೆಯೇ ಅವಲಂಬಿತವಾಯಿತು.
ಕ್ರಮೇಣ ಸರ್ಕಾರದ ರೀತಿ ನೀತಿಗಳು ವಿಧಿ ವಿಧಾನಗಳು ಕಾನೂನುಗಳು ಎಲ್ಲವನ್ನೂ ಸ್ವತಃ ಕೆಲಸ ಮಾಡಿ ಅರಿತುಕೊಂಡ, ಆದರೆ ಖಾಯಂ ಅಲ್ಲದ, ಜವಾಬ್ದಾರಿ ಇರದ ಅರೆಕಾಲಿಕ ನೌಕರರ ಸಂಖ್ಯಾಬಲ ದೊಡ್ಡದಾಗುತ್ತಾ ಬಂದಿತು.
ಅವರಲ್ಲೂ ಸ್ಪರ್ಧೆ ಹೆಚ್ಚಾಗಿ ತಮಗೆ ಸಿಗಬಹುದಾದ ಒಪ್ಪಂದಗಳಿಗೆ ,ಒಪ್ಪಂದ ನವೀಕರಣಗಳಿಗೆ ,ಅಧಿಕಾರ ಇರುವವರ ಬಳಿ ಎಡತಾಕುವುದು ,ಹಲ್ಲು ಕಿರಿಯುವುದು ಮಾಡಬೇಕಾಗಿ ಬಂದಿತು.
ತಾವು ಮಾಡಬೇಕಾದ ಕೆಲಸಗಳನ್ನು ಇವರಿಗೆ ವಹಿಸಿಕೊಟ್ಟು ಬರೀ ಸಹಿ ಹಾಕುವುದನ್ನು ಮಾತ್ರ ಮಾಡುವ ಪರಿಪಾಠವನ್ನು ಕೆಲವು ಅಧಿಕಾರಿಗಳು ಬೆಳೆಸಿಕೊಂಡರು.
ನಿರಂತರವಾಗಿ ತಮಗೆ ಸಿಗುವ ಒಪ್ಪಂದ ಕೆಲಸ ಮತ್ತು ಸಂಭಾವನೆ ,ಗೌರವ ಧನಗಳಿಗಾಗಿ ಶೋಷಿತರಾಗಬೇಕಾದ ಪರಿಸ್ಥಿತಿ ಕೆಲವು ವರ್ಗಗಳಿಗೆ ಬಂದಿತು.
ಒಂದು ಕಡೆ ಇಲಾಖೆಗಳಲ್ಲಿ ಸಂಖ್ಯಾಬಲ ಕುಸಿತ. ಇನ್ನೊಂದು ಕಡೆ ಸರಿಯಾದ ಸಮಯಕ್ಕೆ ಸೇವೆಗೆ ಒದಗಿ ಬಾರದ ಖಾತ್ರಿ ಇಲ್ಲದ ಜವಾಬ್ದಾರಿ ರಹಿತ “ಒಪ್ಪಂದ ಪ್ರಣೀತ ” ಸಿಬ್ಬಂದಿ.
ಇನ್ನೊಂದು ಕಡೆ ಕೆಲಸ ಮಾಡಲು ಆಸಕ್ತಿ ಇದ್ದರೂ ಒಪ್ಪಂದ ಸಿಗದ ಮಂದಿ.
“ನೀವು ಕೆಲಸ ಮಾಡದಿದ್ದರೂ ನಿಮ್ಮ ಕೆಲಸವನ್ನು ಬೇರೆಯವರಿಂದ ಮಾಡಿಸುತ್ತೇವೆ” ಎಂದು ಹೇಳುತ್ತಾ ಹೆಚ್ಚು ಹೆಚ್ಚು ಸೇವೆಗಳನ್ನು ಪರಭಾರೆ ಮಾಡುವ ಇಲಾಖೆಗಳು…
ಒಂದೇ ಇಲಾಖೆಯಲ್ಲಿ ಎರಡು ಮೂರು ತರಹದ ಸಿಬ್ಬಂದಿ ವರ್ಗಗಳು…
ಹೀಗೆ ಒಂದಿಷ್ಟು ಪಲ್ಲಟಗಳು ನಡೆದವು.
ಇವೆಲ್ಲಾ ಒಂದೇ ಸಲ ಆದದ್ದಲ್ಲ.
ಕಳೆದ 20 ವರ್ಷಗಳ ಅವಧಿಯಲ್ಲಿ ಒಂದೊಂದೇ ಮೆಟ್ಟಿಲು ಇಳಿದು ಬಂದಿರುವುದು.
ಹಾಗಾದರೆ ಸುಧಾರಣೆ ಕಂಡಿದ್ದು ಇಲ್ಲವೇ ?
ತಂತ್ರಜ್ಞಾನ ಇಷ್ಟು ಬೆಳೆದಿರುವುದರ ಪರಿಣಾಮ ಏನಾಗಿದೆ ?
ಸರ್ಕಾರಿ ಇಲಾಖೆಗಳಲ್ಲಿ ಒತ್ತಡ ಕಡಿಮೆ ಆಗಿಲ್ಲವೇ ?
ಕೆಲಸ ಕಾರ್ಯಗಳಲ್ಲಿ ಕುಂಠಿತವಾಗುತ್ತಿರುವುದಾದರೂ ಏಕೆ ?
ಸಮಸ್ಯೆಗಳು ಎಲ್ಲಿವೆ ?
ಇದೇ ಮುಖ್ಯ ವಿಷಯ.
ಕೌಶಲ್ಯ ಅನುಭವಗಳನ್ನು ಧಾರೆ ಎರೆದು ಕೊಡಲು ತಯಾರಾಗಿರುವ ಸಿಬ್ಬಂದಿ ವಾರಸುದಾರರಿಗೆ ಹುಡುಕುತ್ತಿದ್ದಾರೆ.
ಆದರೆ ಅವರಿಗೆ ಪ್ರಾಮಾಣಿಕವಾಗಿ ಕಲಿತು ಮುನ್ನಡೆಸುವ ಆಸಕ್ತಿ ಇರುವ ಜವಾಬ್ದಾರಿ ಹೊಂದಿರುವ ಕಿರಿಯರು ಸಿಗುತ್ತಿಲ್ಲ.
ಇನ್ನೊಂದೆಡೆ ತಂತ್ರಜ್ಞಾನ ಪದವಿ ಸ್ನಾತಕೋತ್ತರ ಪದವಿಗಳನ್ನು ಮಾಡಿಕೊಂಡು ಅಪಾರ ಹಂಬಲ ಹೊಂದಿರುವ ಒಂದು ದೊಡ್ಡ ಕಿರಿಯರ ಬಳಗವೇ ಇದೆ.
ಆದರೆ ಅವರ ಕೌಶಲ್ಯಕ್ಕೆ ಬೆಲೆ ಕೊಡುವ, ಅವರನ್ನು ಪ್ರೀತಿಯಿಂದ ,ಗೌರವ ಆದರಗಳಿಂದ ನಡೆಸಿಕೊಂಡು, ದುಡಿಸಿಕೊಂಡು ಸರಿಯಾದ ಸಂಭಾವನೆ ಕೊಡುವ ಅಧಿಕಾರಿಗಳು ,ಇಲಾಖೆಗಳು ಕಾಣಸಿಗುತ್ತಿಲ್ಲ.
”ಹಲ್ಲಿದ್ದವನಿಗೆ ಕಡಲೆಯಿಲ್ಲ ಕಡಲೆಯಿದ್ದವನಿಗೆ ಹಲ್ಲಿಲ್ಲ”
ಎಂಬಂತಹ ಪರಿಸ್ಥಿತಿ ಎಲ್ಲೆಡೆ ನಿರ್ಮಾಣವಾಗುತ್ತಿರುವುದನ್ನು ನಾವು ಇಂದು ಕಾಣಬಹುದಾಗಿದೆ.
ಉನ್ನತ ಸ್ಥಾನಗಳಲ್ಲಿ ಇರುವ ಇಲಾಖೆ ಅಧಿಕಾರಿಗಳು ಇಂತಹ ಸಂಗತಿಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಹಲವಾರು ಕಡೆ ಪ್ರಯತ್ನ ಪಡುತ್ತಲೇ ಇದ್ದಾರೆ.
ಅದೇ ರೀತಿ, ಇಂತಹ ಅವ್ಯವಸ್ಥೆಯಲ್ಲಿ ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಯಥಾ ಶಕ್ತಿ ಅವ್ಯವಸ್ಥೆಗೆ ಕಾಣಿಕೆ ನೀಡುವ ಮಂದಿಯೂ ಹೆಚ್ಚುತ್ತಿದ್ದಾರೆ.
” ಹೌದಪ್ಪ ” ಸಿಬ್ಬಂದಿಗಳು ಎಂಥ ಸಂದರ್ಭದಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತುರರಾಗಿರುತ್ತಾರೆ.
ಈ 20 ವರುಷಗಳ ಅನೇಕ ನಡಾವಳಿಗಳಿಂದ ಎಷ್ಟೋ ಉದ್ಯೋಗಿಗಳು ವಲಸೆ ಹೋಗಿರುವುದನ್ನು ನಾವು ಕಾಣಬಹುದಾಗಿದೆ.
ತಂತ್ರಜ್ಞಾನ ತರಬೇತಿಯನ್ನು ನೀಡಿದರೂ ಕಲಿಯಲು ಆಸಕ್ತಿಯೇ ತೋರದ ಖಾಯಂ ಸಿಬ್ಬಂದಿ ಒಂದು ಕಡೆ ಆದರೆ, ಎಲ್ಲಾ ಕಲಿತು ಅಧಿಕಾರಿಗಳನ್ನೇ ಮಣಿಸುವಂತಹ contract ಕಲಿಗಳೂ ಇದ್ದಾರೆ.
“ಹೇಗೂ ಇನ್ನೂ ಎರಡೇ ವರ್ಷ ನಿವೃತ್ತಿ ಆಗುತ್ತೇನೆ”
“ಮೂರು ವರ್ಷ ಹೇಗೋ ತಳ್ಳಿ ಬಿಡುತ್ತೇನೆ”
“ನನಗೆ ಈಗ ಹೊಸ ಜವಾಬ್ದಾರಿಗಳು ಬೇಡ “
ಎಂದು ಹೇಳುವ ಮಂದಿಯನ್ನು ನಾವು ಇಂದು ಎಲ್ಲಾ ಇಲಾಖೆಗಳಲ್ಲೂ ನೋಡುತ್ತಿದ್ದೇವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಅಶ್ವಿನಿ ವೈಷ್ಣವ್ ಹೇಳಿರುವುದು ಬಹಳ ಸಮಂಜಸವಾಗಿದೆ ಎನ್ನಬಹುದು. ಯಾರಿಗೆ ನಿಗದಿತ ಕೆಲಸ ಕಾರ್ಯಗಳನ್ನು ಬದಲಾದ ತಂತ್ರಜ್ಞಾನದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲವೋ , ವಹಿಸಿದ ಜವಾಬ್ದಾರಿಗಳು ಒತ್ತಡ ಎಂದು ಅನಿಸುತ್ತಿದೆಯೋ ಅಂತಹವರು ನಿವೃತ್ತಿ ಪಡೆಯುವುದೇ ಲೇಸು.
ಪ್ರತಿ ಕೆಲಸದಲ್ಲೂ ಈಗ ಜವಾಬ್ದಾರಿಗಳು ಫಿಕ್ಸ್ (Fix) ಆಗುತ್ತಿವೆ.
ಸೂಕ್ತ ತರಬೇತಿ ,ಮಾರ್ಗದರ್ಶನ ಅರಿವು ನೀಡಲಾಗುತ್ತಿದೆ.
ಸರ್ಕಾರಿ ಇಲಾಖೆಗಳ ಕಾರ್ಯಕ್ಷಮತೆ ಹೆಚ್ಚಿಸುವತ್ತ ಗಮನ ಹರಿಸಲಾಗುತ್ತಿದೆ.
ವಿವೇಚನೆ ಮತ್ತು ತಂತ್ರಜ್ಞಾನ ಎರಡೂ ಸೇರಿದರೆ ಸರ್ಕಾರಿ ಯಂತ್ರ ಮತ್ತಷ್ಟು ಚುರುಕಾಗುವುದು ಖಚಿತ. ಇದು ಎಲ್ಲರ ಒಳಿತಿಗಾಗಿ ಸರ್ವರ ಹಿತಕ್ಕಾಗಿ ಎಂಬುದನ್ನು ಮನಗಾಣಿಸುವ ಕಾರ್ಯವನ್ನೂ ಮಾಡುವುದು ಅತ್ಯಂತ ತುರ್ತಿನದ್ದಾಗಿದೆ.
ಸರ್ಕಾರಕ್ಕೂ ಶ್ರಾವಣ ಬರಲಿ,

ಮತ್ತಷ್ಟು ಸುದ್ದಿಗಳು

vertical

Latest News

ಭಯೋತ್ಪಾದಕರ ಜತೆ ನಂಟು ಆರೋಪ: ಎನ್ ಐ ಎ ಯಿಂದ ಕೇರಳದ ಪತ್ರಕರ್ತರ ವಿಚಾರಣೆ

newsics.com ತಿರುವನಂತಪುರಂ: ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಆಧಾರದಲ್ಲಿ ರಾಷ್ಟ್ರೀಯ ತನಿಖಾ ದಳ ಕೇರಳದ ಎಂಟು ಪತ್ರಕರ್ತರನ್ನು ವಿಚಾರಣೆಗೆ ಗುರಿಪಡಿಸಿದೆ ಎಂದು ವರದಿಯಾಗಿದೆ. ಇದರಲ್ಲಿ...

ಜಿಮ್ ಡಂಬಲ್ಸ್ ನಿಂದ ಹೊಡೆದು ಪತ್ನಿಯ ಕೊಲೆ ಮಾಡಿದ ಪತಿ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಭೀಕರ ಕೊಲೆ ನಡೆದಿದೆ. ಪತಿ ಪತ್ನಿಯನ್ನು ಡಂಬಲ್ಸ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ರಾಮ ಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟವರನ್ನು ಲಿದಿಯಾ(44)...

ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಅಂತ್ಯ: ಬೇಡಿಕೆ ಈಡೇರಿಸಲು ಸಮ್ಮತಿ

newsics.com ಬೆಂಗಳೂರು: ಕಳೆದ  ಎಂಟು ದಿನಗಳಿಂದ ಅಂಗನವಾಡಿ ನೌಕರರು ನಡೆಸುತ್ತಿದ್ದ ಪ್ರತಿಭಟನೆ ಕೊನೆಗೊಂಡಿದೆ. ಗ್ರ್ಯಾಚುವಿಟಿ ಸೇರಿದಂತೆ ನೌಕರರ ಹಲವು ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್...
- Advertisement -
error: Content is protected !!