Thursday, August 18, 2022

ಓ ಸಾವೇ, ನೀ ಘನತೆಯಿಂದ ಬಾ…

Follow Us

ಪ್ರತಿನಿತ್ಯ ನಾವು ಕಾಣುವ ಅತಿ ಹೆಚ್ಚು ಸುದ್ದಿ ಸಾವಿನದ್ದೇ. ದಿನಪತ್ರಿಕೆ ತೆರೆದರೆ ಮೂರು ಅಥವಾ ನಾಲ್ಕನೇ ಪುಟದಲ್ಲಿ ಕಣ್ಣಾಡಿಸಿದರೆ ಮೊದಲು ಕಾಣುವುದು ಸಾವುಗಳು !!


♦ ಬಿ.ಕೆ ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com

ದಿನವೊಂದಕ್ಕೆ ಕನಿಷ್ಠ 20 ಸಾವುಗಳನ್ನಾದರೂ ನಾವು ಓದುತ್ತೇವೆ.
ಕೆಲವು ಸಾವುಗಳಿಗೆ ಮರ್ಯಾದೆ ಹೆಚ್ಚು. ಮುಖಪುಟ ಮತ್ತು ಹೆಡ್ ಲೈನ್ ನಲ್ಲಿ ಕಾಣಸಿಗುತ್ತದೆ.

ಇಲಿ ಪಾಷಾಣ ಬೆರೆತಿದ್ದ ಟೊಮೊಟೊ ಹಾಕಿ ಮಾಡಿದ ನೂಡಲ್ಸ್ ತಿಂದು ಯುವತಿ ಸಾವು!
ಕಬಿನಿ ನಾಲೆಗೆ ಕಾರು ಬಿದ್ದು ಇಬ್ಬರೂ ವಕೀಲರ ಸಾವು !!
ಅಪಘಾತ ; 6 ಸಾವು !!!
ಕಾರು ನಿಲ್ಲಿಸುತ್ತಿದ್ದ ತಂದೆ ! ಅದೇ ಕಾರಿಗೆ ಸಿಕ್ಕಿ ಆಟವಾಡುತ್ತಿದ್ದ ಆತನ ಮಗುವಿನ ಸಾವು !!
ಇವೆಲ್ಲ ಒಂದು ರೀತಿ ಸಾವುಗಳು.

ದಿನವೊಂದಕ್ಕೆ ಎಷ್ಟು ಸಾವು ಅಂತ ಲೆಕ್ಕ ಹಾಕಿಸಿದ್ದು ಕೊರೋನ.
ಮನೆಯಲ್ಲಿದ್ದವರು ,ಕಚೇರಿಗಳಲ್ಲಿ ಕುಳಿತವರು, ಮಾಧ್ಯಮಗಳವರು, ಕ್ರಿಕೆಟ್ ಸ್ಕೋರ್ ರೀತಿ ಸಾವಿನ ಲೆಕ್ಕ ಹಾಕುತ್ತಾ ಎಣಿಸಿ ಗುಣಿಸಿಬಿಟ್ಟರಲ್ಲ..!
ಕೊರೊನ ಸಾವುಗಳು ಈ ಶತಮಾನದಲ್ಲಿ ಕಂಡ ಅತ್ಯಂತ ದಾರುಣ ಸಾವುಗಳು.

ಭೂಕಂಪ ,ನೆರೆ ,ಪರ್ವತಗಳಲ್ಲಿ ಕಲ್ಲು ಮಣ್ಣು ಗುಡ್ಡಗಳು ಕುಸಿದು ಸಂಭವಿಸುವ ಸಾವುಗಳು, ಅಮರನಾಥ ಕೇದಾರನಾಥ ಶಬರಿಮಲೈ ಯಾತ್ರಾ ಸ್ಥಳಗಳಿಗೆ ಹೋದಾಗ, ಹವಾಮಾನಗಳ ವೈಪರೀತ್ಯ ತಾಳದೆ ಸಂಭವಿಸುವ ಸಾವುಗಳು ,ಕಾಯಿಲೆಗಳು ವಕ್ಕರಿಸಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಫಲಕಾರಿಯಾಗದೆ ಸಂಭವಿಸುವ ಸಾವುಗಳು.
ಇವುಗಳನ್ನು ಮತ್ತೊಂದು ರೀತಿ ವಿಂಗಡಿಸಬಹುದು.
ಇಡೀ ಜಗತ್ತನ್ನು ತಲ್ಲಣ ಗೊಳಿಸಿದ ಸಾವು ಪುನೀತ್ ರಾಜಕುಮಾರ್ ಅವರದ್ದು. ಕಾರಣವೇ ಇಲ್ಲದ್ದು.
ಕರ್ನಾಟಕದಲ್ಲಿ ಗಾಬರಿ ಹುಟ್ಟಿಸಿದ ಸಾವು ವಾಸ್ತು ಗುರೂಜಿ ಅವರದು. ಕಾರಣ ಇದ್ದದ್ದು.
ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ಸಾವು
ಸಾವಿನ ಹಿಂದಿನ ಸಾಮ್ರಾಜ್ಯಗಳನ್ನು ತೋರಿಸಿತು.
ಪ್ರಪಂಚದಲ್ಲಿ ಸರಾಸರಿ ದಿನವೊಂದಕ್ಕೆ ಸಂಭವಿಸುವ ಸಾವುಗಳು ಎಷ್ಟು ?
2011ರ ಅಂಕಿ ಅಂಶದ ಪ್ರಕಾರ ,
ಸಾವಿರ ಜನರಿಗೆ 8 ಜನ ಸಾಯುತ್ತಾರೆ.
ಪ್ರತಿದಿನ 1, 51,600 ಸಾವುಗಳು ಸಂಭವಿಸುತ್ತವೆ.
ನಿಮಿಷಕ್ಕೆ 105 ಮಂದಿ ಸಾಯುತ್ತಾರೆ.
ಒಂದು ಸೆಕೆಂಡಿಗೆ ಇಬ್ಬರು ಸಾಯುತ್ತಾರೆ.
ಈ ಅಂಕಿ ಅಂಶಗಳು ಬದಲಾಗುತ್ತಿರುತ್ತದೆ.
ಹುಟ್ಟು ಉಚಿತ ,ಸಾವು ಖಚಿತ. ಎಂದು ಎಲ್ಲರಿಗೂ ತಿಳಿದಿದೆ.
ಬಹುಶಃ ಪಂಡಿತ ಪಾಮರರಿಂದ ಹಿಡಿದು ದೊಡ್ಡವರು, ಚಿಕ್ಕವರು, ವಿಜ್ಞಾನಿಗಳು, ಆಧ್ಯಾತ್ಮ ಚಿಂತಕರು ಎಲ್ಲರನ್ನೂ ಕಾಡುವುದು ಸಾವು.
ಸಾವಿನ ನಂತರದ ಸಂಗತಿಗಳು ಅತ್ಯಂತ ಕುತೂಹಲಕಾರಿ. ಈ ಸಂಬಂಧಿ ಚರ್ಚೆಗಳು ಮಾತುಗಳು ನಡೆಯುತ್ತಲೇ ಇರುತ್ತವೆ.

ಸಾವು ಸದಾ ನಿಗೂಢ ಮತ್ತು ರುದ್ರರಮಣೀಯ.
ಸಾವನ್ನು ಜಯಿಸಲು ಹೊರಟವರು ಎಷ್ಟೋ ಮಂದಿ .ಸಾವಿನ ಅಧ್ಯಯನಕ್ಕೆ ತೊಡಗಿದವರು ಹಲವು ಮಂದಿ.
ರಮಣ ಮಹರ್ಷಿಗಳು ಏಳೆಂಟು ವರ್ಷದ ಬಾಲಕನಿದ್ದಾಗ ಸಂಬಂಧಿಕರು ತೀರಿಕೊಂಡದ್ದು ನೋಡಿ “ಏನಾಯಿತು ” ಎಂದು ಕೇಳಿದರು . “ಅವರು ಇನ್ನಿಲ್ಲ ಸತ್ತು ಹೋದರು ” ಎಂಬ ಉತ್ತರ ಕೇಳಿ , ಅವರ ಪಕ್ಕ ಮಲಗಿ “ನಾನು ಸತ್ತು ಹೋದೆ ” ಎಂದರಂತೆ, ಮನೆಯವರು ಬೈದು ಇವರನ್ನು ಎಬ್ಬಿಸಿದರಂತೆ. “ಆಗಲೇ ನನಗೆ ಸಾವಿನ ಬಗ್ಗೆ ಕುತೂಹಲ ಹುಟ್ಟಿತು ” ಎಂದು ಹೇಳುತ್ತಾರೆ ರಮಣ ಮಹರ್ಷಿಗಳು.

ಸಾವು ಹೇಗಿರಬೇಕು?
ಇದೆಂಥ ಪ್ರಶ್ನೆ ಎನ್ನಿಸಬಹುದು.
‘ ಅನಾಯಾಸೇನ ಮರಣಂ” (ಮರಣ ಅನಾಯಾಸವಾಗಿ ಬರಬೇಕು )ಎಂದು ಹೇಳಿದ್ದಾರೆ ಹಿರಿಯರು.
“ಯಾರ ಕೈಯಲ್ಲೂ ಹಾಕದೆ ನನ್ನನ್ನು ಕರೆದುಕೋ ಎಂದು ಹಿರಿಯರು ಪ್ರಾರ್ಥನೆ ಮಾಡುತ್ತಿರುತ್ತಾರೆ .”
ಅಲ್ಲಿಯವರೆಗೆ ಒಂದು ಘನತೆಯ ಜೀವನ ಜೀವಿಸಿ ಕೊನೆಯಲ್ಲಿ ಘಾಸಿ ಮಾಡಿ ಅವಮಾನಿತರಾಗಿ ಗತಿ ಕಾಣದೆ ಸಾವು ಅನುಭವಿಸುವುದು ಬೇಡ ಎಂದು ಪ್ರತಿಯೊಬ್ಬ ಜೀವಿಯೂ ಬಯಸುತ್ತಾನೆ.

ಸಾವಿಗೆ ಘನತೆ ಇದೆ ಅಲ್ಲವೇ?
ಘನತೆ ಇದೆಯೇ ? ಇರಬೇಕೇ?
ಯಾಕೆ ಈ ಪ್ರಶ್ನೆ ಗಳು ?
ಇತ್ತೀಚೆಗೆ ಕರಾವಳಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು. ಇಡೀ ಕರ್ನಾಟಕವನ್ನು ಅಲುಗಾಡಿಸಿ ಸಾವಿನ ಘನತೆಯನ್ನೇ ತೆಗೆದು ಹಾಕಿವೆ.
ಸಾವನ್ನು ಸಾರ್ವತ್ರಿಕ ವ್ಯಾಪಾರ ಮಾಡಲಾಗಿದೆ ಎಂಬುದು ಸತ್ಯವಲ್ಲವೇ.
ಮುಖ್ಯಮಂತ್ರಿಗಳು ಒಬ್ಬರ ಮನೆಗೆ ಹೋದರು ಮತ್ತೊಬ್ಬರ ಮನೆಗೆ ಹೋಗಲಿಲ್ಲ ಎಂದು ಒಂದು ಸುದ್ದಿ.
ಇವರು ಸತ್ತಾಗ ನೀವು ಸಾಂತ್ವನ ಹೇಳಿದಿರಾ ಎನ್ನುವುದು ಮತ್ತೊಬ್ಬರ ಉತ್ತರ.
ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ಒಬ್ಬರು ಹೇಳುತ್ತಾರೆ.
ನಾವು ರಕ್ತಪಾತ ಮಾಡುತ್ತೇವೆ ಎಂದು ಮತ್ತೊಬ್ಬರು ಘೋಷಿಸುತ್ತಾರೆ.
ಸಾವಿನ ಬಗ್ಗೆ ಆಗಲಿ ಸತ್ತವರ ಬಗ್ಗೆ ಆಗಲಿ ಸಂತಾಪವನ್ನೇನಾದರೂ ಕಂಡಿರಾ ?
ಯುದ್ಧದಲ್ಲಿ ಸೈನಿಕ ‘ಮರಣವೇ ಮಹಾನವಮಿ ‘ಎನ್ನುತ್ತಾನೆ.
ಯೋಗಿ, ಸಿದ್ದರು ಸ್ವಯಂ ತೃಪ್ತಿಯಿಂದ ಸಾವನ್ನು ತಾವಾಗಿಯೇ ಕರೆದು ಆಲಿಂಗಿಸುತ್ತಾರೆ.

ಆದರೆ ಇವು ಎಂತಹ ಸಾವುಗಳು !
ಬಸ್ ಸ್ಟಾಪ್ ನಲ್ಲಿ ಬಾಂಬ್ ಸಿಡಿದು ಅಮಾಯಕರು ಸಾಯುತ್ತಾರೆ. ಅದು ಎಂತಹ ಸಾವು?
ಯಾರದೋ ಮೇಲಿನ ದ್ವೇಷ !
ಯಾರೋ ಯಾರ ಬಗ್ಗೆ ಯೋ ಆಡಿದ ಮಾತಿಗೆ ಇನ್ಯಾರದೋ ಸಾವು !!
ಉದಯಪುರದ ಕನ್ನಯ್ಯ ಕರಾವಳಿಯ ಪ್ರವೀಣ್, ಮಸೂದ್ ,ಫಾಜಿಲ್ , ಈ ಸಾವುಗಳು ಜನಸಾಮಾನ್ಯರನ್ನು ಬಿಟ್ಟು ಬೇರೆ ಯಾರಲ್ಲಿಯೂ ತಲ್ಲಣ ಹುಟ್ಟಿಸಿಲ್ಲ ಎಂದೆನಿಸುವುದಿಲ್ಲವೇ ?
ಈಗ ಸಾವುಗಳೆಂದರೆ ಲೆಕ್ಕಾಚಾರ.
ಸಾವಿಗೆ ಸಾವು.
ಯಾರೇ ಸತ್ತರೂ ಅದಕ್ಕೆ ದ್ವೇಷವೇ ಕಾರಣ. ಕೆಲವು ಸರ್ವ ಸಮ್ಮತ ಹೇಳಿಕೆಗಳು ಎಂದು ಹೇಳುವ ವಕ್ತಾರರ ಪ್ರಕಾರ
ದ್ವೇಷ ಹುಟ್ಟಿಸುವುದು ಒಂದೇ ಒಂದು ಪಕ್ಷ ಮಾತ್ರ. ಸಾವುಗಳ ಸುತ್ತ ,
ಎಷ್ಟೆಲ್ಲಾ ವರದಿಗಳು ! ಎಷ್ಟೆಲ್ಲ ಚಮತ್ಕಾರಗಳು ! ಎಷ್ಟೊಂದು ವ್ಯಾಖ್ಯಾನಗಳು !
ಪ್ರತಿಯೊಂದು ಸಾವು ಯಾಕೆ ಹೇಗೆ ಎಲ್ಲಿ ಸಂಭವಿಸಿದೆ ಎಂದು ಸ್ಥಳೀಯರಿಗೆ ಖಂಡಿತ ಗೊತ್ತಿರುತ್ತದೆ.
ಎಲ್ಲೋ ಕುಳಿತು ಯಾರೋ ಇನ್ಯಾವುದನ್ನು ಅರ್ಥೈಸಿ ಸಾವಿನ ಘನತೆಯನ್ನು ಅರ್ಥವನ್ನು ಸಂಪೂರ್ಣವಾಗಿ ಸಾಯಿಸುತ್ತಿರುವದನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಸಾವಿನ ಭಾಷೆ ನಿಮಗೇನಾದರೂ ತಿಳಿದಿದೆಯೇ?
ಓ ಸಾವೇ ! ಘನತೆಯಿಂದ ಬರಲಾರೆಯಾ?

ಮತ್ತಷ್ಟು ಸುದ್ದಿಗಳು

vertical

Latest News

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ...

ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್ ತೀರ್ಪು

newsics.com ಎರ್ನಾಕುಳಂ:  ಮದುವೆಯಾದ ಬಳಿಕ ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವ   ಪ್ರವೃತ್ತಿ ಇರುವವರಿಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನೀನು ಅವರಷ್ಟು ಸುಂದರವಾಗಿಲ್ಲ ಎಂದು ಮೂದಲಿಸುತ್ತಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್...

ಸಹಜ ಸ್ಥಿತಿಗೆ ಮರಳುತ್ತಿರುವ ಶಿವಮೊಗ್ಗ: ನಿಷೇಧಾಜ್ಞೆ ಮುಂದುವರಿಕೆ

newsics.com ಶಿವಮೊಗ್ಗ:  ಫ್ಲೆಕ್ಸ್ ವಿವಾದದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ಶಿವಮೊಗ್ಗದಲ್ಲಿ ಇದೀಗ ಪರಿಸ್ಥಿತಿ ಶಾಂತವಾಗಿದೆ. ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ನಗರದ ಸೂಕ್ಷ್ಮ...
- Advertisement -
error: Content is protected !!