Monday, October 2, 2023

ಹೆಚ್ಚಲಿದೆ ತಾಲಿಬಾನಿಗಳ ಅಹಂಕಾರ: ಭಾರತಕ್ಕೂ ಗಂಡಾಂತರ

Follow Us

ತಾಲಿಬಾನಿಗಳ ಅಟ್ಟಹಾಸ ಮೇರೆ ಮೀರಿದೆ. ಶಾಂತಿಯ ಮಾತನ್ನಾಡಿದ್ದ ಉಗ್ರರನ್ನು ನಂಬಿ ಸೇನೆ ಹಿಂತೆಗೆದುಕೊಳ್ಳುವ ಹಾದಿಯಲ್ಲಿದ್ದ ಅಮೆರಿಕ ಈಗ ಪುನಃ ರಂಗಪ್ರವೇಶ ಮಾಡಿದೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಭಾರತಕ್ಕೂ ಗಂಡಾಂತರ ತಂದಿಟ್ಟಿದೆ. ಇಡೀ ವಿಶ್ವವನ್ನೇ ಎದುರು ಹಾಕಿಕೊಂಡರೂ ಸರಿ, ತಮ್ಮ ಧಾರ್ಮಿಕ ಯುದ್ಧ ಬಿಡಲೊಲ್ಲೆವು ಎನ್ನುವುದು ತಾಲಿಬಾನಿಗಳ ಅಹಂಕಾರ.
newsics.com Features Desk

2020ರ ಫೆಬ್ರವರಿ ತಿಂಗಳು. ಜಗತ್ತು…ಅದರಲ್ಲೂ ಏಷ್ಯಾ ರಾಷ್ಟ್ರಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವು. ಏಕೆಂದರೆ, ವಿಶ್ವದ ಅತ್ಯುಗ್ರ ಭಯೋತ್ಪಾದಕರ ಸೇನೆಯಾಗಿರುವ ತಾಲಿಬಾನ್ ಅಂದು ಶಾಂತಿಮಂತ್ರ ಪಠಿಸಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ವಿಶ್ವದ ಶಾಂತಿದೂತರೆಂದು ಬೀಗಿದ್ದರು. ಇಂಥದ್ದೊಂದು ಪ್ರಯತ್ನ ತಪ್ಪೇನೂ ಆಗಿರಲಿಲ್ಲ. ಒಪ್ಪಂದದ ಪ್ರಕಾರ 2021ರ ಆಗಷ್ಟ್ ಅಂತ್ಯದೊಳಗೆ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಪೂರ್ತಿ ವಾಪಸ್ ಕರೆಸಿಕೊಳ್ಳಬೇಕು. ಅದರಂತೆ ನಡೆಯುವುದಾಗಿ ಅಮೆರಿಕ ಭರವಸೆ ನೀಡಿದ್ದಲ್ಲದೆ, ಹಂತಹಂತವಾಗಿ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಆರಂಭಿಸಿತ್ತು. ಬರೋಬ್ಬರಿ ಇಪ್ಪತ್ತು ವರ್ಷಗಳ ಕಾಲ ಅಮೆರಿಕ ಹಾಗೂ ನ್ಯಾಟೋ ಪಡೆಗಳು ಅಫ್ಘಾನಿಸ್ತಾನದಲ್ಲಿ ಸೇನೆಯನ್ನಿಟ್ಟು ತಾಲಿಬಾನಿಗಳ ನಿಯಂತ್ರಣಕ್ಕೆ ಕಾರಣವಾಗಿದ್ದವು. 2002ರಿಂದ ಅಮೆರಿಕ ಸೇನೆ ಅಲ್ಲಿ ನೆಲೆಸಿತ್ತು.
ಇನ್ನೇನು, ತಾಲಿಬಾನ್ ಯುಗ ಮುಗಿದು ಅಫ್ಘಾನಿಸ್ತಾನ ಶಾಂತಿಯಿಂದ ಅಭಿವೃದ್ಧಿಯತ್ತ ಸಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿರುವಾಗ ತಾಲಿಬಾನಿಗಳು ಮತ್ತೆ ತಮ್ಮ ಅಟ್ಟಹಾಸ ತೋರಿದ್ದಾರೆ. ತಾಲಿಬಾನಿ ಉಗ್ರ ಸಂಘಟನೆಯನ್ನು ಅರಿತವರಿಗೆ ಅವರ ಶಾಂತಿಮಂತ್ರ ಸುಳ್ಳೆಂದು ಯಾವಾಗಲೋ ಗೊತ್ತಿತ್ತು ಹಾಗೂ ಗುಪ್ತಚರ ಸಂಘಟನೆಗಳೂ ಈ ಕುರಿತು ಎಚ್ಚರಿಕೆ ನೀಡುತ್ತಲೇ ಇದ್ದವು.
ತಾಲಿಬಾನಿಗಳ ಸೊಕ್ಕು ಮತ್ತು ಹಣ
ಅಷ್ಟಕ್ಕೂ ತಾಲಿಬಾನಿಗಳಿಗೆ ಇಷ್ಟೆಲ್ಲ ಧೈರ್ಯ, ಸೊಕ್ಕು ಹೇಗೆ ಬರುತ್ತದೆ ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ. ಮೊದಲೇ ಮತಾಂಧ ಉಗ್ರರು ಅವರು. ಅವರಿಗೆ ಮೂಲತಃ ಸೊಕ್ಕಿರುವುದು ಅವರ ಹಣ ಸಂಗ್ರಹದ ಜಾಲದ ಬಗ್ಗೆ. ನಿಮಗೆ ತಿಳಿದಿರಲಿ, ತಾಲಿಬಾನಿಗಳ 2019-20 ನೇ ಸಾಲಿನ ಬಜೆಟ್ 1.6 ಬಿಲಿಯನ್ ಡಾಲರ್. ಅಂದರೆ, ಸುಮಾರು ಹತ್ತು ಸಾವಿರ ಕೋಟಿಗೂ ಮೀರುತ್ತದೆ ಅವರ ಆದಾಯ!
ಇದೆಲ್ಲ ಎಲ್ಲಿಂದ ಬರುತ್ತದೆ ಎಂದರೆ, ಅದು ನಮ್ಮನಿಮ್ಮಂತಹ ಸಾಮಾನ್ಯರ ಮನೆಯ ಬಾಗಿಲಿಗೂ ಬಂದುಬಿಡಬಹುದು. ಏಕೆಂದರೆ, ಅವರ ಬಹುದೊಡ್ಡ ಆದಾಯದ ಮೂಲವಿರುವುದು ಡ್ರಗ್ಸ್ ಜಾಲದಲ್ಲಿ. 2020ರ ವಿಶ್ವಸಂಸ್ಥೆಯ ಡ್ರಗ್ ವರದಿ ಪ್ರಕಾರ, ಅಫ್ಘಾನಿಸ್ತಾನವೊಂದೇ ಶೇಕಡ 84 ರಷ್ಟು ಓಪಿಯಮ್ ಉತ್ಪಾದನೆ ಮಾಡಿದೆ. ಇದರ ಬಹುತೇಕ ಲಾಭ ತಾಲಿಬಾನಿಗಳಿಗೆ ಸೇರುತ್ತದೆ. ಹೀಗೆ ಅವರಿಗೆ ಸಂದಾಯವಾದ ಹಣ 3 ಸಾವಿರ ಕೋಟಿಗೂ ಅಧಿಕ. ಅವರ ಜಾಲ ಭಾರತದಲ್ಲೂ ವ್ಯಾಪಕವಾಗಿದೆ. ಗಡಿಭಾಗಗಳಿಂದ ದೇಶದೆಲ್ಲೆಡೆ ವಿಸ್ತಾರವಾಗಿ ಹರಡಿದೆ. ಹೀಗಾಗಿಯೇ, ನಮ್ಮ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳ ಶ್ರೀಮಂತ ವಿದ್ಯಾರ್ಥಿಗಳು ಈ ಜಾಲದ ಟಾರ್ಗೆಟ್ ಆಗಿರುವುದು.
ಗಣಿಗಾರಿಕೆ
ಗಣಿಗಾರಿಕೆಯೂ ತಾಲಿಬಾನಿಗಳ ಮತ್ತೊಂದು ಪ್ರಮುಖ ಆದಾಯದ ಮೂಲ. ಕಬ್ಬಿಣದ ಅದಿರು, ಮಾರ್ಬಲ್, ತಾಮ್ರ, ಚಿನ್ನ, ಝಿಂಕ್ ಹಾಗೂ ಇತರ ಅಪರೂಪದ ಅದಿರುಗಳ ಗಣಿಗಾರಿಕೆ ನಡೆಸುತ್ತದೆ ತಾಲಿಬಾನ್ ಸಂಘಟನೆ. ಪ್ರತಿವರ್ಷ ಗಣಿಗಾರಿಕೆಯಿಂದ ತಾಲಿಬಾನ್ ಗಳಿಸುವ ಆದಾಯ ಸುಮಾರು 400 ಮಿಲಿಯನ್ ಡಾಲರ್, ಅಂದರೆ 2900 ಕೋಟಿ ರೂಪಾಯಿ.
ತೆರಿಗೆ
ಅಫ್ಘಾನಿಸ್ತಾನದ ಸರ್ಕಾರದಂತೆಯೇ ತಾಲಿಬಾನ್ ಕೂಡ ತನ್ನ ಆಡಳಿತವಿರುವ ಪ್ರದೇಶಗಳಲ್ಲಿ ತೆರಿಗೆ ವಸೂಲಿ ಮಾಡುತ್ತದೆ. ಇದರಿಂದಾಗಿ ವಾರ್ಷಿಕ ಸುಮಾರು 160 ಮಿಲಿಯನ್ ಡಾಲರ್ ಗಳಿಕೆ ಮಾಡುತ್ತದೆ.
ಹಫ್ತಾ ವಸೂಲಿ
ಅಫ್ಘಾನಿಸ್ತಾನದ ಎಲ್ಲ ಸಣ್ಣಪುಟ್ಟ, ದೊಡ್ಡ ಗಣಿಗಾರಿಕೆ ಸಂಸ್ಥೆಗಳು ತಾಲಿಬಾನಿಗಳಿಗೆ ನಿಯಮಿತವಾಗಿ ಸಂದಾಯ ಮಾಡಲೇಬೇಕು. ಯಾರು ಸಂದಾಯ ಮಾಡುವುದಿಲ್ಲವೋ ಅವರನ್ನು ಸಾರ್ವಜನಿಕವಾಗಿ ಹಳ್ಳಿಗಳ ಜನರ ಎದುರು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಲಾಗುತ್ತದೆ.
ದೇಣಿಗೆ
ಉಗ್ರ ಸಂಘಟನೆ ತಾಲಿಬಾನ್ ಗೆ ಇಡೀ ಜಗತ್ತಿನ ನೆರವೂ ದೊರೆಯುತ್ತದೆ ಎಂದರೆ ಅಚ್ಚರಿಯಾಗಬಹುದು. ವಿಶ್ವದಾದ್ಯಂತ ತಾಲಿಬಾನ್ ಬೆಂಬಲಿಗರಿದ್ದಾರೆ, ಅವರು ವಾರ್ಷಿಕ ಸರಿಸುಮಾರು 240 ಮಿಲಿಯನ್ ಡಾಲರ್ ಹಣ ದೇಣಿಗೆ ನೀಡುತ್ತಾರೆ. ತಾಲಿಬಾನಿಗಳ ಧಾರ್ಮಿಕ ಹೋರಾಟಕ್ಕೆ ಅನುಕಂಪ ಹೊಂದಿರುವ ದೇಶಗಳಲ್ಲಿ ಪರ್ಷಿಯನ್ ಗಲ್ಫ್ ದೇಶಗಳು ಮುಂಚೂಣಿಯಲ್ಲಿವೆ. ಇನ್ನು, ಸೌದಿ ಅರೇಬಿಯಾದ ಸಿರಿವಂತರು, ಪಾಕಿಸ್ತಾನ, ಇರಾನ್ ಸೇರಿದಂತೆ ಹಲವೆಡೆ ಇರುವ ಮುಸ್ಲಿಂ ಧನಿಕರು ಬೃಹತ್ ನೆರವು ನೀಡುತ್ತಾರೆ. ಇತ್ತೀಚಿನ ಬಿಬಿಸಿ ವರದಿ ಪ್ರಕಾರ, ರಷ್ಯಾ, ಪಾಕಿಸ್ತಾನ, ಇರಾನ್ ಹಾಗೂ ಸೌದಿ ಅರೇಬಿಯಾ ಸರ್ಕಾರಗಳು ತಾಲಿಬಾನ್ ಗೆ ಬ್ಯಾಂಕ್ ನೆರವು ನೀಡುತ್ತವೆ.
ರಫ್ತು
ತಾಲಿಬಾನಿಗಳು ವ್ಯಾಪಾರನ್ನೂ ನಡೆಸುತ್ತಾರೆ. ದೈನಂದಿನ ಬಳಕೆಯ ಗ್ರಾಹಕ ಸರಕುಗಳ ರಫ್ತು ಮತ್ತು ಆಮದನ್ನು ಅಕ್ರಮವಾಗಿ ನಡೆಸುತ್ತಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಕಾರ, ರಫ್ತಿನ ಮೂಲ ತಾಲಿಬಾನಿಗಳು ವಾರ್ಷಿಕ 240 ಮಿಲಿಯನ್ ಡಾಲರ್ ನೆಟ್ ಪ್ರಾಫಿಟ್ ಗಳಿಸುತ್ತಾರೆ. ತಾಲಿಬಾನ್ ಸಂಘಟನೆಯೊಂದಿಗೆ ಸಂಯೋಜಿತವಾಗಿ ಅಂತಾರಾಷ್ಟ್ರೀಯ ಕಂಪೆನಿಗಳೂ ಇವೆ. ಆಟೊಮೊಬೈಲ್ ಬಿಡಿಭಾಗಗಳನ್ನು ರಫ್ತು ಮಾಡುವ ಖ್ಯಾತ ನೂರ್ಜಿ ಬ್ರದರ್ಸ್ ಲಿಮಿಟೆಡ್ ಅಂಥದ್ದೊಂದು ಕಂಪೆನಿಗಳಲ್ಲೊಂದು.
ರಿಯಲ್ ಎಸ್ಟೇಟ್ ಕೂಡ ತಾಲಿಬಾನ್ ಹಣ ಸಂಗ್ರಹದ ಮೂಲಗಳಲ್ಲೊಂದು. ಇದರಿಂದಾಗಿ ವಾರ್ಷಿಕ 8 ಕೋಟಿ ಆದಾಯ ಪಡೆಯುತ್ತದೆ.
ಶರಿಯಾ ಕಾನೂನು ಸ್ಥಾಪನೆಯ ಉದ್ದೇಶ
1990ರಲ್ಲಿ ಶರಿಯಾ ಕಾನೂನನ್ನು ಜಾರಿಗೊಳಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಉಗ್ರ ಸಂಘಟನೆಯೊಂದು ಇಷ್ಟೊಂದು ಕಂಟಕವಾಗಿ ಬೆಳೆಯಬಹುದೆನ್ನುವ ಕಲ್ಪನೆ ಅಂದು ಯಾರಿಗೂ ಇರಲಿಲ್ಲ. ಆದರೆ, ಯಾವಾಗ ತಾಲಿಬಾನ್ 1996ರಲ್ಲಿ ಕಾಬೂಲ್ ವಶಪಡಿಸಿಕೊಂಡು ತನ್ನ ಆಟ ಶುರು ಮಾಡಿತ್ತೋ ಆಗಲೇ ಅದರ ಉಗ್ರರೂಪದ ದರ್ಶನವಾಗಿತ್ತು. ಸಾಮಾನ್ಯರ ಬದುಕು ದುಸ್ತರವಾಯಿತು. ಮಹಿಳೆಯರ ಸ್ಥಿತಿಯಂತೂ ಶೋಚನೀಯವಾಯಿತು. 12 ವರ್ಷ ಮೇಲ್ಪಟ್ಟ ಹುಡುಗಿಯರನ್ನು ತಾಲಿಬಾನ್ ಉಗ್ರರು ತಮ್ಮ ಲೈಂಗಿಕ‌ದಾಸಿಯನ್ನಾಗಿ ಮಾಡಿಕೊಂಡರು. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರು. ಹೀಗೆ, ತಾಲಿಬಾನಿಗಳ ಅಟ್ಟಹಾಸದ ಕತೆಗಳು ಮುಗಿಯುವುದಿಲ್ಲ. ಇಷ್ಟು ವರ್ಷಗಳ ನಿರಂತರ ಹೋರಾಟದಿಂದಲೂ ಬಸವಳಿಯದೆ ಮತ್ತಷ್ಟು ವಿಧ್ವಂಸಕಾರಿ ಕೃತ್ಯಗಳನ್ನು ನಡೆಸುತ್ತ ಸಾಗಿದೆ. ಇದರಿಂದಾಗಿ, ಪಾಕಿಸ್ತಾನದಂತೆಯೇ ಅಫ್ಘಾನಿಸ್ತಾನ
ಮತ್ತೊಂದು ಉಗ್ರರ ತರಬೇತಿ ಕೇಂದ್ರವಾಗುವ ಅಪಾಯಗಳಿವೆ. ಭಾರತಕ್ಕೆ ಇದರ ನೇರ ಪರಿಣಾಮ ತಟ್ಟಲಿದೆ ಎಂದು ಹೇಳಲಾಗುತ್ತಿದೆ.
ಇದೀಗ ಅಫ್ಘಾನಿಸ್ತಾನ ಸರ್ಕಾರವೂ ಪತನವಾಗಿದೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಕೂಡ ದೇಶ ತೊರೆದು ತಜಿಕಿಸ್ತಾನ್ ಕ್ಕೆ ಪಲಾಯನ ಮಾಡಿದ್ದಾರೆ. ಹೀಗಾಗಿ ಇನ್ನು ತಾಲಿಬಾನಿಗಳದ್ದೇ ನಿಯಮ ,ಕಾನೂನು ಜಾರಿಯಾಗಲಿದೆ. ಈ ಕಾರಣದಿಂದ ಮುಂದೆ ತಾಲಿಬಾನ್ ನಡೆ ಇನ್ನೂ ಭಯಂಕರವಾಗಿರುತ್ತದೆ ಎನ್ನಲಡ್ಡಿಯಿಲ್ಲ…

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನದಲ್ಲಿ ಉಸಿರಾಟ ಸ್ಥಗಿತವಾಗಿದ್ದ ಮಗುವಿಗೆ ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ!

newsics.com ನವದೆಹಲಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ವಿಮಾನದಲ್ಲಿದ್ದ ಐಎಎಸ್ ಅಧಿಕಾರಿ ಹಾಗೂ ವೈದ್ಯರೊಬ್ಬರು ಚಿಕಿತ್ಸೆ...

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಅ.1 ರಿಂದ ಜಾರಿ!

newsics.com ಬೆಂಗಳೂರು: ಐದು ವರ್ಷಗಳ ಬಳಿಕ ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದೆ. ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಭಾನುವಾರದಿಂದ (ಅ.1) ಜಾರಿಯಾಗಿದೆ. ಹೊಸ ದರಗಳ ಪ್ರಕಾರ ದಸ್ತಾವೇಜುಗಳ ನೋಂದಣಿಗೆ ನೋಂದಣಿ ಮತ್ತು ಮುದ್ರಾಂಕ...

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ ಅಲೇಮಾಡ ನಾಣಯ್ಯ ಅವರು ಶ್ರೀನಿವಾಸ್ ಎಂಬುವರ...
- Advertisement -
error: Content is protected !!