ನಮ್ಮಲ್ಲಿ ಅನೇಕರು “ವಾರಕ್ಕೊಮ್ಮೆಯಾದರೂ ಕಾಡಿಗೆ ಹೋಗಿಬರದಿದ್ದರೆ ಸಮಾಧಾನವಿರುವುದಿಲ್ಲ”, “ಕಾಡಿನಲ್ಲಿರುವ ಆನಂದ ನಾಡಿನಲ್ಲೆಲ್ಲಿ!”, “ಆಯ್ಯೋ! ಆ ಹಕ್ಕಿಯನ್ನು ನೋಡಿ ಎಷ್ಟು ದಿನವಾಯಿತು!” ಎಂದೆಲ್ಲ ಹೇಳುತ್ತಾ ಅವರ ವನ್ಯಪ್ರೇಮವನ್ನು ಜಾಹೀರು ಮಾಡುತ್ತಿರುತ್ತಾರೆ. ಆದರೆ, ನಾವು ಕಾಡಿಗೆ ಹೋಗುವುದರಿಂದ, ಆನಂದಪಡುವುದರಿಂದ ಸಂರಕ್ಷಣೆ ಸಾಧ್ಯವಿಲ್ಲ! ಹಾಗೆ ನೋಡಿದರೆ ನಾವು ವಿನಾಕಾರಣ ಕಾಡಿಗೆ ಹೋಗುವುದರಿಂದ ವನ್ಯಜೀವಿಗಳಿಗೆ, ಸಂರಕ್ಷಣೆಗೆ ತೊಂದರೆಯೇ ಆಗುತ್ತದೆ!
ಪಕ್ಷಿ ಸಂರಕ್ಷಣೆ – 2
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
www.facebook.com/ksn.bird
ksn.bird@gmail.com@
ಸಂರಕ್ಷಣೆ ಎಂದರೇನು ಎಂದು ಅರಿತ ನಾವು, ಸಂರಕ್ಷಣೆಗೆ ಬೇಕಾದ ಮಹತ್ವದ ಅಂಶವನ್ನು ಇಂದು ತಿಳಿಯೋಣ. ಅದು ಅರಿವು! ಹೌದು. ನಾವು ಸಂರಕ್ಷಿಸುಲು ಹೋರಟಿರುವ ಪ್ರಭೇದವನ್ನು ಕುರಿತಾದ ಅರಿವು ಬಹಳ ಮುಖ್ಯ. ಈ ಅರಿವು ಎಷ್ಟು ಆಳ ಹಾಗೂ ವಿಸ್ತಾರವಾಗಿರುತ್ತದೆಯೋ ನಮ್ಮ ಸಂರಕ್ಷಣಾ ಯೋಜನೆಗಳು ಸಹ ಅಷ್ಟೇ ಫಲಪ್ರದವಾಗಿರುತ್ತದೆ.
ಈ ಅರಿವು ಬಹಳ ಮುಖ್ಯ. ಈಗ ನಮ್ಮ ಜೊತೆಯಲ್ಲಿ ಬರುತ್ತಿರುವವರೊಬ್ಬರಿಗೆ ಹೃದಯಾಘಾತವಾಯಿತು ಎಂದಿಟ್ಟುಕೊಳ್ಳಿ. ಅವರಿಗೆ ಸಹಾಯ ಮಾಡಿ ಅವರ ಜೀವ ಉಳಿಸಲು ಸಾಧ್ಯವಿರುವುದು ವೈದ್ಯರಿಗೆ ಮಾತ್ರ! ಏಕೆಂದರೆ ಅವರಿಗೆ ಆ “ಅರಿವು” ಇರುತ್ತದೆ. ಉಳಿದವರು ಎಷ್ಟು ಪ್ರೀತಿ ತೋರಿಸಿದರೂ, ಗೋಳಿಟ್ಟರೂ, ಹಲುಬಿದರೂ ಅವರ ಜೀವ ಉಳಿಸಲು ಸಾಧ್ಯವಿಲ್ಲ. ವೈದ್ಯರು ಮಾತ್ರ ಅವರನ್ನು ಉಳಿಸಲು ಸಾಧ್ಯ. ನಮ್ಮಲ್ಲಿ ಅನೇಕರು “ವಾರಕ್ಕೊಮ್ಮೆಯಾದರೂ ಕಾಡಿಗೆ ಹೋಗಿಬರದಿದ್ದರೆ ಸಮಾಧಾನವಿರುವುದಿಲ್ಲ”, “ಕಾಡಿನಲ್ಲಿರುವ ಆನಂದ ನಾಡಿನಲ್ಲೆಲ್ಲಿ!”, “ಆಯ್ಯೋ! ಆ ಹಕ್ಕಿಯನ್ನು ನೋಡಿ ಎಷ್ಟು ದಿನವಾಯಿತು!” ಎಂದೆಲ್ಲ ಹೇಳುತ್ತಾ ಅವರ ವನ್ಯಪ್ರೇಮವನ್ನು ಜಾಹೀರು ಮಾಡುತ್ತಿರುತ್ತಾರೆ. ಆದರೆ, ನಾವು ಕಾಡಿಗೆ ಹೋಗುವುದರಿಂದ, ಆನಂದಪಡುವುದರಿಂದ ಸಂರಕ್ಷಣೆ ಸಾಧ್ಯವಿಲ್ಲ! ಹಾಗೆ ನೋಡಿದರೆ ನಾವು ವಿನಾಕಾರಣ ಕಾಡಿಗೆ ಹೋಗುವುದರಿಂದ ವನ್ಯಜೀವಿಗಳಿಗೆ, ಸಂರಕ್ಷಣೆಗೆ ತೊಂದರೆಯೇ ಆಗುತ್ತದೆ! ಆದ್ದರಿಂದ ಅರಿವು ಬಹಳ ಮುಖ್ಯ. ಆ ಅರಿವೇ ವನ್ಯಜೀವಿ ಸಂರಕ್ಷಣಾ ವಿಜ್ಞಾನ.
ಇಂದು ವನ್ಯಜೀವಿ ಸಂರಕ್ಷಣಾ ವಿಜ್ಞಾನ ಹೆಮ್ಮರವಾಗಿ ಬೆಳೆದಿದೆ. ಅನೇಕ ವಿಶ್ವವಿದ್ಯಾನಿಲಯಗಳು ವನ್ಯಜೀವಿ ಸಂರಕ್ಷಣೆ ಹಾಗೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ. ಪ್ರಭೇದ ಕುರಿತ ಅರಿವು ಇಲ್ಲಿ ದೊರಕುತ್ತದೆ. ಒಂದು ಜೀವಿಯ ಉಳಿವಿಗೆ ಬೇಕಾದುದೇನು? ಎಂತಹ ಆವಾಸ ಬೇಕು? ಯಾವ ಆಹಾರವನ್ನು ಆ ಜೀವಿ ಸೇವಿಸುತ್ತದೆ? ಎಷ್ಟು ಸೇವಿಸುತ್ತದೆ? ಆ ಆಹಾರದ ಲಭ್ಯತೆ ಸದರಿ ಕಾಡಿನಲ್ಲಿ ಇದೆಯೇ? ಇರುವುದಾದರೆ ಎಷ್ಟಿದೆ? ಅದರ ಸ್ಥಿತಿಗತಿಗಳೇನು? ಆ ಪ್ರಭೇದಕ್ಕಿರುವ ನೈಸರ್ಗಿಕ ಹಾಗೂ ಮಾನವಕೃತ ವೈರಿಗಳು ಯಾವುವು? ಅವನ್ನು ಮೆಟ್ಟಿ ಆ ಪ್ರಭೇದ ಬದುಕುಳಿಯುವ ಸಾಧ್ಯತೆಗಳೆಷ್ಟು? ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ವನ್ಯಜೀವಿ ಸಂರಕ್ಷಣಾ ವಿಜ್ಞಾನ ವಿಧಿವಿಧಾನಗಳನ್ನು ಹಾಕಿಕೊಡುತ್ತದೆ. ಈ ಉತ್ತರಗಳನ್ನು ಅನುಸರಿಸಿ ಪ್ರಭೇದದ ಸ್ಥಿತಿಗತಿಗಳನ್ನು ತಿಳಿಯಬಹುದಾಗಿರುತ್ತದೆ.
ಆಧುನಿಕ ವಿಜ್ಞಾನ ವನ್ಯಸಂರಕ್ಷಣೆಗೆ ಬೇಕಾದ ಎಲ್ಲವನ್ನು ಒದಗಿಸುವ ಸ್ಥಿತಿಯಲ್ಲಿದೆ. ಇನ್ನೂ ಸಂಶೋಧನೆಗಳು, ಅಧ್ಯಯನಗಳು ನಡೆಯುತ್ತಿದ್ದು, ಸಂರಕ್ಷಣೆಗೆ ಬೇಕಾದ ಹೊಸ ಪರಿಕರಗಳನ್ನು ಸಿದ್ಧಪಡಿಸುತ್ತಿದೆ. ವನ್ಯಜೀವಿ ಸಂರಕ್ಷಣಾ ವಿಜ್ಞಾನ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಸಂಖ್ಯಾಶಾಸ್ತ್ರ, ಗಣಿತ, ಮಾಹಿತಿ ತಂತ್ರಜ್ಞಾನ, ಕಾನೂನು, ನಿರ್ವಹಣೆ, ಕೊನೆಗೆ ರಾಜಕೀಯವೂ ಸೇರಿದಂತಹ ಅಂತರ್ಶಿಸ್ತೀಯ ವಿಜ್ಞಾನ.
“ನಮಗೆ ಉಪಗ್ರಹ ಹಾರಿಬಿಡಲು ಗೊತ್ತು, ಆದರೆ, ಒಂದು ಪ್ರಭೇದ ಏಕೆ ಹೀಗೆ ವರ್ತಿಸುತ್ತದೆ ಎಂಬುದು ತಿಳಿದಿಲ್ಲ” ಎಂದು ಒಬ್ಬ ವನ್ಯಜೀವಿ ವಿಜ್ಞಾನಿಗಳು ಹೇಳಿದ್ದರು. ಇದು ಒಂದು ಕಹಿ ಸತ್ಯ. ಆದರೂ ಇಂದು ಉಪಗ್ರಹ ಆಧಾರಿತ ತಂತ್ರಜ್ಞಾನವನ್ನು ವನ್ಯಜೀವಿ ಸಂರಕ್ಷಣೆಯಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ! ಇವು ಏನು? ಎಂತು? ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ. ನಮಸ್ಕಾರ!