Wednesday, July 6, 2022

ಹದಿಮೂರು ವರುಷ ಐಸೋಲೇಷನ್’ನಲ್ಲೇ ಬದುಕು!

Follow Us

ಕೊರೋನಾ ಸಂಕಷ್ಟದ ಕಾಲದಲ್ಲಿ ಎಲ್ಲರೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ರೋಗನಿರೋಧಕ ಶಕ್ತಿಯೇ ಇಲ್ಲದ ಸಮಸ್ಯೆಯೂ ಇದೆ ಎನ್ನುವುದು ಗೊತ್ತೇ? ಅದೇ ಸೀವಿಯರ್ ಕಂಬೈನ್ಡ್ ಇಮ್ಯುನೋಡೆಫಿಶಿಯೆನ್ಸಿ ಸಿಂಡ್ರೋಮ್. ಈ ಸಮಸ್ಯೆಯನ್ನಿಟ್ಟುಕೊಂಡು ಜನಿಸಿದ ಬಾಲಕ ಡೇವಿಡ್ ವೆಟ್ಟರ್ ಈ ಸಮಯದಲ್ಲಿ ನೆನಪಾಗುತ್ತಾನೆ.

 

♦ ಪ್ರಮಥ
newsics.com@gmail.com

 

ಪ್ರಪಂಚದಲ್ಲಿರುವ ದೇಶಗಳೆಲ್ಲ ಇಂದು ಪ್ರತ್ಯೇಕ ದ್ವೀಪಗಳಂತಾಗಿವೆ. ಮನುಷ್ಯ-ಮನುಷ್ಯರ ಮಧ್ಯೆ ಗೋಡೆಯೆದ್ದಿದೆ. ಪ್ರೀತಿಪಾತ್ರರನ್ನು ಕಂಡಾಗ ಒಂದು ಸಣ್ಣ ಅಪ್ಪುಗೆಯಲ್ಲಿ ಖುಷಿಪಡುತ್ತಿದ್ದವರು ಈಗ ಕಣ್ಣಿನಲ್ಲೇ ಪ್ರೀತಿ ದಾಟಿಸುತ್ತಿದ್ದಾರೆ. ಇದೆಲ್ಲ ಕೊರೋನಾ ವೈರಸ್ ಮಹಿಮೆ. ಇನ್ನು ದೇಹದಲ್ಲಿ ವೈರಸ್ ಇರುವುದು ಖಾತ್ರಿಯಾದರೆ ಅದು ಬೇರೆಯವರಿಗೂ ಹರಡದಿರಲು ಐಸೋಲೇಷನ್ ಒಂದೇ ಪರಿಹಾರ. ನಾಲ್ಕಾರು ದಿನಗಳ ಪ್ರತ್ಯೇಕತೆಗೆ ಹೆದರಿ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡವರಿದ್ದಾರೆ. ಕೆಲವು ದಿನಗಳ ಐಸೋಲೇಷನ್’ಗೇ ಇಷ್ಟೆಲ್ಲ ಹೆದರುವ ನಾವು ವರ್ಷಾನುಗಟ್ಟಲೆ ಹಾಗೆ ಕಳೆಯುವುದನ್ನು ಯೋಚಿಸಲೂ ಸಾಧ್ಯವಿಲ್ಲ. ಆದರೆ, ಹುಟ್ಟಿದಾಗಿನಿಂದ ಸಾಯುವವರೆಗೂ ಒಬ್ಬ ಬಾಲಕ ಐಸೋಲೇಷನ್’ನಲ್ಲೇ ಬದುಕಿದ್ದ ಎನ್ನುವ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಈ ಕರುಣಾಜನಕ ಬದುಕಿನ ಕತೆಯೊಂದನ್ನು ಈ ಕೊರೋನಾ ಕಾಲದಲ್ಲಿ ವಿದೇಶಿ ಮಾಧ್ಯಮಗಳು ಸ್ಮರಿಸಿಕೊಳ್ಳುತ್ತಿವೆ.
ವಿಜ್ಞಾನಿಗಳ ಪ್ರಯೋಗದ ಜೀವ
1971ರಲ್ಲಿ ಟೆಕ್ಸಾಸ್’ನಲ್ಲಿ ಜನಿಸಿದ್ದ ಮಗುವೊಂದು ತಾನು ಬದುಕಿದ್ದಷ್ಟೂ ವರ್ಷಗಳ ಕಾಲ ಇತರರಿಂದ ಪ್ರತ್ಯೇಕವಾಗಿ ಸಂಪೂರ್ಣ ಐಸೋಲೇಷನ್ ನಲ್ಲೇ ಬದುಕಿತ್ತು. ಈತನೇ ಡೇವಿಡ್ ವೆಟ್ಟರ್. ಸುತ್ತುವರಿದ ಪ್ಲಾಸ್ಟಿಕ್ ರಕ್ಷಾಕವಚದೊಳಗೆ ಬರೋಬ್ಬರಿ 13 ವರ್ಷಗಳನ್ನು ಕಳೆದ ಬಾಲಕ. ಈತ ಎಷ್ಟು ಪ್ರತ್ಯೇಕವಾಗಿ ಬೆಳೆದ ಎಂದರೆ, ತಾಯಿಯೂ ಇವನನ್ನು ಮುಟ್ಟುವಂತಿರಲಿಲ್ಲ. ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಟ್ಟ ಆಹಾರವನ್ನಷ್ಟೇ ಇವನಿಗೆ ನೀಡಲಾಗುತ್ತಿತ್ತು. ಏಕೆಂದರೆ, ಬಾಹ್ಯ ಜಗತ್ತಿನ ಯಾವುದೇ ದುರ್ಬಲ ವೈರಸ್ ಕೂಡ ಇವನನ್ನು ಸಾವಿನ ದವಡೆಗೆ ತಳ್ಳಬಹುದಿತ್ತು. ಅಷ್ಟಕ್ಕೂ ಇವನಿಗಿದ್ದ ಕಾಯಿಲೆ ಯಾವುದು ಗೊತ್ತಾ? ಸೀವಿಯರ್ ಕಂಬೈನ್ಡ್ ಇಮ್ಯುನೋಡೆಫಿಶಿಯೆನ್ಸಿ ಸಿಂಡ್ರೋಮ್ (ಎಸ್ಸಿಐಡಿ). ಹೀಗಾಗಿ, ಡೇವಿಡ್ ಬದುಕಿರುವಷ್ಟು ಕಾಲವೂ ವಿಜ್ಞಾನಿಗಳ ಪ್ರಯೋಗದ ಜೀವವಾದ.
ಐಸೋಲೇಷನ್’ನಲ್ಲೇ ಜೀವನ!
ಅಮೆರಿಕದ ಇಮ್ಯುನೋಡೆಫಿಶಿಯೆನ್ಸಿ ಫೌಂಡೇಶನ್ ಪ್ರಕಾರ, 58 ಸಾವಿರ ಶಿಶುಗಳಲ್ಲಿ ಒಂದು ಮಗುವಿಗೆ ಇಂಥ ತೊಂದರೆ ಬರಬಲ್ಲದು. ಇದು ವಂಶವಾಹಿಗಳ ರೂಪಾಂತರದಿಂದ ಬರುತ್ತದೆ. ಡೇವಿಡ್ ಕೂಡ ಜನಿಸುವಾಗಲೇ ಈ ಸಮಸ್ಯೆಯನ್ನು ಹೊತ್ತುತಂದಿದ್ದ. ಈ ಸಮಸ್ಯೆ ಇರುವವರ ದೇಹದಲ್ಲಿ ರೋಗನಿರೋಧಕ ಶಕ್ತಿ ನೀಡುವ ಕೋಶಗಳ ಸಂಖ್ಯೆ ಅತಿ ಕಡಿಮೆ ಇರುವುದರಿಂದ ಯಾವುದೇ ಸೋಂಕಿನಿಂದ ರಕ್ಷಿಸಿಕೊಳ್ಳಲು ದೇಹ ವಿಫಲವಾಗುತ್ತದೆ. ಹೀಗಾಗಿ, ಹೊರಗಿನ ವಾತಾವರಣಕ್ಕೆ ಡೇವಿಡ್ ನನ್ನು ಬಿಡುವುದು ಸಾವಿಗೆ ಆಹ್ವಾನ ನೀಡುವಂತೆ ಆಗುತ್ತಿತ್ತು. ಪರಿಣಾಮವಾಗಿ, ಸಂಪೂರ್ಣವಾಗಿ ಐಸೋಲೇಷನ್ ನಲ್ಲಿಯೇ ಇವನನ್ನು ಬೆಳೆಸಲು ಸಂಶೋಧಕರು ನಿರ್ಧರಿಸಿದರು.
ಮಗುವೊಂದನ್ನು ಹುಟ್ಟಿದಾರಭ್ಯ ತೊಟ್ಟಿಲಿನಂಥ ಪ್ಲಾಸ್ಟಿಕ್ ರಚನೆಯೊಳಗೆ ಬೆಳೆಸುವುದು ಎಷ್ಟು ಕಷ್ಟಕರವಾಗಿದ್ದಿರಬಹುದೆಂದು ಎಲ್ಲರೂ ಊಹಿಸಬಹುದು. ಆದರೆ, ಹೀಗೆಯೇ, ಅಲ್ಲಿಯೇ ಆಡುತ್ತ, ಸಿನಿಮಾ ನೋಡುತ್ತ, ಚಿತ್ರ ಬಿಡಿಸುತ್ತ ಡೇವಿಡ್ ಬೆಳೆದ. ಇವನ ತಾಯಿ ಇವನನ್ನು ಸ್ಪರ್ಶಿಸದೆ ಇದ್ದರೂ ನಿರಂತರವಾಗಿ ಕತೆಗಳನ್ನು ಹೇಳುತ್ತಿದ್ದಳು. ಹೊರ ಪ್ರಪಂಚದಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿಸುತ್ತಿದ್ದಳು. ದಿನಗಳು ಕಳೆಯುತ್ತಿದ್ದವು.
ವೈದ್ಯಕೀಯ ತಂತ್ರಜ್ಞಾನದ ಸುಧಾರಣೆಗೆ ಕಾರಣನಾದ
ಆ ಸಮಯದಲ್ಲಿ, ವಂಶವಾಹಿಗಳ ರೂಪಾಂತರಕ್ಕೆ ಅಸ್ಥಿಮಜ್ಜೆಯ ಕಸಿಯೊಂದೇ ಪರಿಹಾರ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿತ್ತು. ವೈದ್ಯಕೀಯ ತಂತ್ರಜ್ಞಾನ ಮುಂದುವರಿದಿತ್ತು. ಡೇವಿಡ್ ಗೂ ಈ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದರು. ಸಹೋದರಿಯ ಅಸ್ಥಿಮಜ್ಜೆ ಡೇವಿಡ್ ಗೆ ಹೊಂದಾಣಿಕೆ ಆಗುತ್ತಿದ್ದುದರಿಂದ 1984ರಲ್ಲಿ ಈ ಕಸಿ ಶಸ್ತ್ರಕ್ರಿಯೆ ನಡೆಸಲಾಯಿತು. ಆದರೆ, ಆಕೆಯ ಅಸ್ಥಿಮಜ್ಜೆಯಲ್ಲಿದ್ದ, ಪತ್ತೆಗೆ ಸಿಗದಿದ್ದ ಎಪ್ಸ್ಟೀನ್-ಬಾರ್ ಎನ್ನುವ ವೈರಸ್ಸೊಂದು ಡೇವಿಡ್ ನಲ್ಲಿ ಕ್ಯಾನ್ಸರನ್ನು ಹುಟ್ಟುಹಾಕಿತು. ತನ್ನ ಹದಿಮೂರನೇ ವಯಸ್ಸಿಗೆ ಡೇವಿಡ್ ಕ್ಯಾನ್ಸರ್ ನಿಂದ ಮೃತನಾದ. ಆದರೆ, ಇವನ ಸಾವು ಕೂಡ ಸಂಶೋಧಕರಿಗೆ ಇನ್ನೊಂದು ರೀತಿಯಲ್ಲಿ ನೆರವು ನೀಡಿತು. ಅದೆಂದರೆ, ಎಪ್ಸ್ಟೀನ್-ಬಾರ್ ವೈರಸ್ ಕ್ಯಾನ್ಸರ್ ಗೆ ಕಾರಣವಾಗುವುದು ತಿಳಿದುಬಂತು. ಅಷ್ಟೇ ಅಲ್ಲ, ಅಸ್ಥಿಮಜ್ಜೆಯನ್ನು ಕೂಲಂಕಷವಾಗಿ ಪರೀಕ್ಷಿಸುವ ತಂತ್ರಜ್ಞಾನದ ಅನ್ವೇಷಣೆಗೂ ಪ್ರೇರಣೆ ನೀಡಿತು.
ಅಸ್ಥಿಮಜ್ಜೆ ಕಸಿ
ಇಂದಿನ ದಿನಗಳಲ್ಲಿ ವೈದ್ಯ ತಂತ್ರಜ್ಞಾನ ಸಾಕಷ್ಟು ಮುಂದುವರಿದಿರುವುದರಿಂದ ಅಸ್ಥಿಮಜ್ಜೆ ಕಸಿ ಯಶಸ್ವಿಯಾಗುತ್ತಿದೆ. ಹುಟ್ಟಿನಿಂದಲೇ ಎಸ್ಸಿಐಡಿ ಸಮಸ್ಯೆ ಹೊಂದಿರುವ ಮಕ್ಕಳಿಗೆ 3.5 ತಿಂಗಳಿಗೂ ಮುನ್ನವೇ ಅಸ್ಥಿಮಜ್ಜೆ ಕಸಿ ಮಾಡಿದರೆ ಅವರು ಮುಂದೆ ಚೆನ್ನಾಗಿ ಬದುಕು ಸಾಧ್ಯತೆ ಈಗ ಶೇ.91ರಷ್ಟಾಗಿದೆ. ಇದಕ್ಕೆಲ್ಲ ಕಾರಣನಾಗಿದ್ದು ಹೊರಜಗತ್ತನ್ನೇ ಕಾಣದ ಡೇವಿಡ್ ವೆಟ್ಟರ್ ಎಂಬ ಮುಗ್ಧ ಬಾಲಕ.
ಕ್ವಾರಂಟೈನ್, ಐಸೋಲೇಷನ್ ಪದಗಳ ಬಳಕೆ ಹೆಚ್ಚಾಗಿರುವ ಇಂದಿನ ಕೊರೋನಾ ದಿನಗಳಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಇತ್ತೀಚೆಗೆ ಡೇವಿಡ್ ವೆಟ್ಟರ್ ನನ್ನು ಮತ್ತೆ ಸ್ಮರಿಸಿದೆ. ಅಂದ ಹಾಗೆ, ಡೇವಿಡ್ ನ ವೈದ್ಯಕೀಯ ದಾಖಲೆಗಳು, ಖಾಸಗಿ ಕಾಗದಪತ್ರಗಳನ್ನು ಸ್ಮಿತ್ಸೊನಿಯನ್ ಸಂಶೋಧನಾ ಮತ್ತು ಮ್ಯೂಸಿಯಂ ಸಂಸ್ಥೆ ರಕ್ಷಿಸಿಟ್ಟಿದೆ. ಈ ಸಂಸ್ಥೆ ರಕ್ಷಿಸಿ ಇಟ್ಟಿರುವ ಸಾವಿರಾರು ದಾಖಲೆಗಳಲ್ಲಿ ಇದೊಂದು ಹೃದಯಸ್ಪರ್ಶಿ ದಾಖಲೆಯಾಗಿದೆ.

ಕೊರೋನಾ ಸಮಯದಲ್ಲಿ ಗಾಬರಿ ಹುಟ್ಟಿಸುತ್ತಿದೆ ಈ ನೋಟಿಸ್!

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!