ಶಾರದೀಯ ನವರಾತ್ರಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಿದ ಬಳಿಕ, ಆಯುಧ ಪೂಜೆಯನ್ನು ಮುಗಿಸಿದ ನಂತರ ವಿಜಯದಶಮಿಯನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ದೇಶದೆಲ್ಲೆಡೆ ವಿಜಯದಶಮಿಯನ್ನು ನಾನಾ ರೀತಿಯಿಂದ ಆಚರಿಸುವುದು ಕಂಡುಬರುತ್ತದೆ.
ಪ್ರಮಥ
newsics.com@gmail.com
ಓದಿನ ಆರಂಭಕ್ಕೆ ವಿಜಯದಶಮಿ, ‘ಅ’ಕಾರ ತಿದ್ದುವ ಕಾಯಕದ ಶುರುವಿಗೆ ವಿಜಯದಶಮಿಯೇ ಮುಹೂರ್ತ. ಸಂಗೀತದ ಪಾಠ ಆರಂಭವಾಗುವುದು ವಿಜಯದಶಮಿಯ ಶುಭ ದಿನದಂದು. ಹೊಸದೊಂದು ಅಂಗಡಿ ತೆರೆಯಲು, ಉದ್ಯಮ ಆರಂಭಿಸಲು… ಹೀಗೆ ಯಾವುದೇ ಹೊಸ ಕಾರ್ಯಾರಂಭಕ್ಕೆ ವಿಜಯದಶಮಿ ಮುನ್ನುಡಿ ಬರೆಯುತ್ತದೆ. ಇಂದು ಆರಂಭಿಸಿದ ಕೆಲಸ ಕಾರ್ಯಗಳೆಲ್ಲವೂ ಯಶಸ್ಸಿನತ್ತ ಸಾಗುತ್ತವೆ ಎನ್ನುವ ನಮ್ಮ ನಂಬಿಕೆಯೇ ಇದಕ್ಕೆ ಮೂಲಾಧಾರ. ನಂಬಿಕೆಯಿಂದ ಆರಂಭಿಸಿದ ಕೆಲಸ ಯಶಸ್ಸು ಕಾಣದೆ ಇರುವುದೆಂತು?
ರಾಮನಿಂದ ಆರಂಭವಾಯಿತು ದುರ್ಗಾ ಪೂಜೆ
ಇಂದು ವಿಜಯದಶಮಿ. ಶಾರದೀಯ ನವರಾತ್ರಿಯ ಹತ್ತನೆಯ ದಿನದಂದು ದೇಶದೆಲ್ಲೆಡೆ ಬಹಳ ವಿಜೃಂಭಣೆಯಿಂದ ವಿಭಿನ್ನ ರೂಪಗಳಲ್ಲಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ನವರಾತ್ರಿಯ ಪೂಜೆ ಆರಂಭವಾಗಿದ್ದು ರಾಮಾಯಣ ಕಾಲದಿಂದ, ಅದೂ ಸ್ವತಃ ಶ್ರೀರಾಮನಿಂದಲೇ ಎನ್ನುವುದು ಜನಜನಿತ ಸಂಗತಿ. ಲಂಕೆಗೆ ಕಾಲಿಡುವ ಮುನ್ನ ರಾಮನು ದುರ್ಗಾದೇವಿಯ ವಿವಿಧ ಸ್ವರೂಪಗಳನ್ನು ಒಂಬತ್ತು ದಿನಗಳ ಕಾಲ ಪೂಜೆ ಮಾಡಿ ಶಕ್ತಿ ಸ್ವರೂಪಿಣಿಯನ್ನು ಆವಾಹನೆ ಮಾಡಿದ್ದ. ದೇವಿ ಸಂಪ್ರೀತಳಾಗಿ ಆತನಿಗೆ ಹತ್ತನೆಯ ದಿನದಂದು ವಿಜಯ ಕರುಣಿಸಿದ್ದಳು. ಅದರ ಪ್ರತೀಕವಾಗಿಯೇ ವಿಜಯದಶಮಿಯನ್ನು ಅಧರ್ಮದ ವಿರುದ್ಧ ಧರ್ಮದ ವಿಜಯವೆಂದು ಪರಿಗಣಿಸಿ, ರಾವಣದ ಪ್ರತಿಕೃತಿಯನ್ನು ದಹನ ಮಾಡಲಾಗುತ್ತದೆ.
ವಿಜಯದಶಮಿಯಲ್ಲೇ ಇದೆ ಶಮೀ…
ವಿಜಯದಶಮಿಯಂದು ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಶಮೀ ವೃಕ್ಷವನ್ನು ನಾವು ಬನ್ನಿ ಮರವೆಂದು ಕರೆಯುತ್ತೇವೆ. ಈ ಮರದಲ್ಲಿ ಪಾಂಡವರು ತಮ್ಮ ಒಂದು ವರ್ಷದ ಅಜ್ಞಾತವಾಸದ ಸಮಯದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಅಡಗಿಸಿ ಇಟ್ಟಿದ್ದರು. ಅದನ್ನು ಹೊರತೆಗೆಯುವ ವೇಳೆ ವೃಕ್ಷಕ್ಕೆ ಹಾಗೂ ದುರ್ಗಾಮಾತೆಗೆ ಪೂಜೆ ಸಲ್ಲಿಸಿದ್ದರು. ಬಳಿಕ, ಯುದ್ಧದಲ್ಲಿ ಜಯಶಾಲಿಯಾದರು. ಈ ಹಿನ್ನೆಲೆಯಿಂದ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸುವ ಪದ್ಧತಿ ಇಂದಿಗೂ ಇದೆ. ಈ ಪರಂಪರೆಯನ್ನು ಮೈಸೂರು ಅರಸರು ಬಹಳ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿದ್ದರೆಂದು ಇತಿಹಾಸ ಹೇಳುತ್ತದೆ. ಇಂದಿಗೂ ಮೈಸೂರು ದಸರಾದಲ್ಲಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸುವುದು ಕಂಡುಬರುತ್ತದೆ.
ವಿಜೃಂಭಣೆಯ ಆಚರಣೆ
ನಮ್ಮ ದೇಶದಲ್ಲಿ ನವರಾತ್ರಿಯ ಅತ್ಯಂತ ಅದ್ದೂರಿ ಹಾಗೂ ವಿಜೃಂಭಣೆಯ ಆಚರಣೆ ಕಂಡುಬರುವುದು ಪಶ್ಚಿಮ ಬಂಗಾಳದಲ್ಲಿ. ವಿವಿಧ ಪ್ರಮುಖ ಸ್ಥಳಗಳಲ್ಲಿ ಬೃಹತ್ ಪೆಂಡಾಲುಗಳನ್ನು ಹಾಕಲಾಗುತ್ತದೆ. ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಎಷ್ಟು ಅದ್ದೂರಿಯಾಗಿ ಜರುಗುತ್ತದೆಯೋ ಅದೇ ಮಾದರಿಯಲ್ಲಿ ದುರ್ಗಾ ದೇವಿಯನ್ನು ಕೋಲ್ಕತ ಹಾಗೂ ಇತರೆಡೆಗಳಲ್ಲಿ ಉತ್ಸವ ಆಚರಿಸಲಾಗುತ್ತದೆ. ಸಂಗೀತ ಹಾಗೂ ನೃತ್ಯಗಳು ಇದರ ಪ್ರಮುಖ ಭಾಗವಾಗಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣ ಕಂಡುಬರುತ್ತದೆ.
ಸಾವಿರಾರು ವರ್ಷಗಳ ಕಾಲದಿಂದಲೂ ಇಂತಹ ಉತ್ಸವಗಳು ನಡೆಯುತ್ತ ಬಂದಿವೆ, ಜನಮಾನಸದಲ್ಲಿ ಅಚ್ಚಳಿಯದಂತೆ ನಿಂತಿವೆ ಎಂದರೆ, ನಮ್ಮ ಪರಂಪರೆಯ ಆಳವನ್ನು ಊಹಿಸಬಹುದು. ಅಂತಹ ಪರಂಪರೆ ನಮ್ಮ ಜೀವನದ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತಲೇ ಇರಲಿ. ವಿಜಯದಶಮಿಯ ವಿಜಯಯಾತ್ರೆ ಎಂದಿಗೂ ಮುಗಿಯದೇ ಇರಲಿ.