Wednesday, September 27, 2023

ಎಂ. ಬಿ. ಸಿಂಗ್ ಎಂಬ ದೈತ್ಯರೊಂದಿಗೆ ಒಡನಾಟ!

Follow Us

ವಿಶ್ವಕೋಶ ರಸಯಾತ್ರೆ – 3

  • ಕಲ್ಗುಂಡಿ ನವೀನ್
    response@134.209.153.225
    ksn.bird@gmail.com

ನ್ನಡ ವಿಶ್ವಕೋಶ ಅಡಕಮುದ್ರಿಕೆ (ಸಿಡಿ ಮತ್ತು ಡಿವಿಡಿ) ರೂಪದಲ್ಲಿ ತರಬೇಕು ಎಂದಾದ ನಂತರ ವಿಶ್ವಕೋಶವನ್ನು ಮಾನವಿಕ ಹಾಗೂ ವಿಜ್ಞಾನ ಎಂದು ವಿಂಗಡಿಸಲಾಯಿತು. ವಿಜ್ಞಾನದ ವಿಭಾಗದ ಹೊಣೆಯನ್ನು ಹೊತ್ತವರು ಡಾ ಟಿ ಆರ್ ಅನಂತರಾಮು ಆದರೆ, ಮಾನವಿಕದಲ್ಲಿನ ರಂಗಭೂಮಿ, ಸಿನೆಮಾ, ಕಲೆ ಹಾಗೆ ಇಂತಹ ಅದೆಷ್ಟೋ ವಿಷಯಗಳ ಹೊಣೆ ಹೊತ್ತವರು ಹೆಸರಾಂತ ಪತ್ರಕರ್ತರಾಗಿದ್ದ ಟಿಎಸ್ಆರ್ ಪ್ರಶಸ್ತಿ ಪುರಸ್ಕೃತ ಎಂ ಬಿ ಸಿಂಗ್‍ ಅವರು. ನನ್ನ ಅವರ ಒಡನಾಟ ಈ ಬರಹದ ಹೂರಣ.

ಎಂ ಬಿ ಸಿಂಗ್! ಈ ಹೆಸರನ್ನು ನಾನು ಮೊದಲು ನೋಡಿದ್ದು ಪುಸ್ತಕಗಳಲ್ಲಿ. ಅರೇ ಈ ಪಂಜಾಬಿ ವ್ಯಕ್ತಿಗೂ ಕನ್ನಡಕ್ಕೂ ಏನು ಸಂಬಂಧ? ಎಂದು ಆಶ್ಚರ್ಯಪಟ್ಟಿದ್ದೆ. ಡಾ ಅನುಪಮಾ ನಿರಂಜನ ಅವರ “ಬರಹಗಾರ್ತಿಯ ಬದುಕು” ಪುಸ್ತಕದಲ್ಲೂ ಇವರ ಬಗ್ಗೆ ಇದೆ. ನಾನು ವಿಶ್ವಕೋಶದ ಕೆಲಸಕ್ಕೆ ಸೇರಿದಾಗ “ಪಕ್ಕದ ಕೋಣೆಯಲ್ಲಿ ಎಂಬಿ ಸಿಂಗ್ ಇದ್ದಾರೆ, ಮಾತಾಡಿಸಿ” ಎಂದರು, ಪರಿಷತ್ತಿನ ಕಾರ್ಯದರ್ಶಿಗಳಾದ ಜಿಎನ್ಎನ್ ಮೂರ್ತಿಯವರು. ಸರಿ “ತಲೆಗೆ ಸಿಖ್ಖರ ಪಗಡಿ, ಕೈಯಲ್ಲಿ ಕಡಗವಿರುವ ವ್ಯಕ್ತಿಯನ್ನು ತಲೆಯಲ್ಲಿರಿಸಿಕೊಂಡು ಹೋದರೆ, ಅಲ್ಲಿ ಲಕ್ಷಣವಾಗಿ ಕ್ರಾಪ್ ಮಾಡಿಕೊಂಡು ಮಿಲಿಟರಿಯವರಷ್ಟು ನಯವಾಗಿ ಮುಖಕ್ಷೌರ ಮಾಡಿಸಿಕೊಂಡಿರುವ ಭವ್ಯ ಆಕಾರದ ವ್ಯಕ್ತಿಯೊಬ್ಬರು ತಲೆ ತಗ್ಗಿಸಿಕೊಂಡು ಏನನ್ನೋ ಬರೆಯುತ್ತಿದ್ದರು! ಆಶ್ಚರ್ಯವಾಯಿತು. (ಆಮೇಲೆ ತಿಳಿಯಿತು ಅವರು ರಜಪೂತ ಸಿಂಹರು ಎಂದು). ಪರಿಚಯವಾಯಿತು. “ಏನಾದರು ಬರೆದಿದ್ದಿದ್ದು ಇದ್ದರೆ, ತೋರಿಸಿ” ಎಂದರು. ಇತ್ತು. ತೋರಿಸಿದೆ. ಓದಿ “ಇಲ್ಲಿಗೆ ಬರುವ ಮುನ್ನ ಏನು ಮಾಡುತ್ತಿದ್ದಿರಿ” ಎಂದು ಕೇಳಿದರು! ನನಗೆ ಢವಢವ ಶುರುವಾಯಿತು! ಗ್ರಹಿಸಿದ ಅವರು, “ಇಲ್ಲಪ್ಪಾ ಚೆನ್ನಾಗಿದೆ. ಭಾಷೆ ಶುದ್ಧವಾಗೂ ಇದೆ. ಅದಕ್ಕೆ ಕೇಳಿದೆ. ಪತ್ರಿಕೆಯಲ್ಲಿ ಏನಾದರು ಇದ್ದಿರಾ” ಎಂದರು! ಸಮಾಧಾನವಾಯಿತು. “ಕಪ್ರದಲ್ಲಿ ವಾರವಿದ್ದೆ. ವಿಶ್ವಕೋಶದಲ್ಲಿ ಕೆಲಸ ಮಾಡುವ ಅವಕಾಶ ಎಂದರು ಅದಕ್ಕೆ ಇಲ್ಲಿಗೆ ಬಂದೆ” ಎಂದೆ. ಸಂತೋಷಪಟ್ಟರು. ನಿಧಾನವಾಗಿ ಆ ವ್ಯಕ್ತಿಯ ಮಹತ್ತು ಅರಿವಿಗೆ ಬರತೊಡಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆಯುಳ್ಳ ವ್ಯಕ್ತಿ. ಹಾಸ್ಯಪ್ರಜ್ಞೆಯೂ ಉನ್ನತ ಮಟ್ಟದ್ದು.

ವಿಶ್ವಕೋಶದಲ್ಲಿನ ಅನೇಕ ಮಾನವಿಕ ವಿಭಾಗದ ಭಾಗಗಳು, ಕಲೆ, ರಂಗಭೂಮಿ ಮತ್ತು ಸಿನೆಮಾ ಕುರಿತಾದ ವಿಷಯಗಳು ಆ ಮಟ್ಟಕ್ಕೆ ಬರಲು ಅವರು ಹಾಗೂ ಅವರು ಕರೆತಂದವರ ಶ್ರಮವೇ ಕಾರಣ. ಎಲ್ಲರಿಗೂ ಅವರಲ್ಲಿ ಅತೀವ ಗೌರವ.

ಅನೇಕ ಕಲಾವಿದರು, ಸಾಹಿತಿಗಳ ಮನೆಗೆ ಇವರೊಂದಿಗೆ ಪಯಣ! ಹೋದಡೆಯೆಲ್ಲ ಇವರನ್ನು ಸಾಮಾನ್ಯವಾಗಿ ಕೇಳಲಾಗುತ್ತಿದ್ದ ಪ್ರಶ್ನೆ “ಕಾಫಿ/ಟಿಗೆ ಸಕ್ಕರೆ ಹಾಕಬೇಕೋ ಬೇಡವೋ” ಇವರು ಕೊಡುತ್ತಿದ್ದ ಉತ್ತರ “ಮನೆಯಲ್ಲಿ ಏನಾದರು ಸಿಹಿ ಇದ್ದರೆ, ಅದನ್ನೂ ಕೊಡಬಹುದು”!

ಒಮ್ಮೆ ಒಬ್ಬ ಹಿರಿಯ ಕವಿಗಳ ಮನೆಗೆ ಹೋಗಿದ್ದೆವು. ಇಬ್ಬರೂ ಏಕವಚನದ ಮಿತ್ರರು. ಕವಿಗಳು ಕೇಳಿದರು “ಸಂಪಾದಕರ ಜಗತ್ತಿನಲ್ಲಿ ಯಾರಾದರು ಬುದ್ಧಿವಂತರಿದ್ದರೆ ತೋರಿಸು! ಎಲ್ಲರೂ ದಡ್ಡರೆ!”
ಎಂ ಬಿ ಸಿಂಗ್ ಬಾಣ ಬಿಟ್ಟರು “ನಿನ್ನಂತಹವರನ್ನು ಸರಿಮಾಡಬೇಕಲ್ಲಪ್ಪಾ, ಅಷ್ಟರಲ್ಲೇ ಎಲ್ಲಾಅಅ ಮುಗಿದ್ಹೋಗಿರುತ್ತೆ!” ಅವರ ಮನೆಯಲ್ಲಿ ಮಾತಾಡಿಕೊಂಡು ಹಾಗೆಯೇ ಗಾಂಧೀಬಜಾರಿನ ವಿದ್ಯಾರ್ಥಿ ಭವನಕ್ಕೆ ಬಂದು ದೋಸೆ ತಿಂದೆವು. ಅದರ ಮಾಲೀಕರೋ ಎಂ ಬಿ ಸಿಂಗ್ ಹಾಗೂ ಈ ಕವಿಗಳು ಬಂದರೆಂದು ಹಣ ತೆಗೆದುಕೊಳ್ಳಲು ನಿರಾಕರಿಸಿಬಿಟ್ಟರು! ಅವರನ್ನು ಕೃತಜ್ಞತೆಯಿಂದ ವಂದಿಸುತ್ತಾ ಹೊರಗೆ ಬಂದು ನಿಂತೆವು. ಸಿಂಗ್ ಅವರಿಗೆ ಕವಿಗಳು “ಬುದ್ಧಿವಂತರಲ್ಲ” ಎಂದದ್ದು ಇನ್ನೂ ಮನಸ್ಸಿನಲ್ಲಿತ್ತು ಎಂದು ಕಾಣುತ್ತದೆ. ಕವಿಗಳನ್ನುದ್ದೇಶಿಸಿ ಹೇಳಿದರು “…ನಿನಗೆ ಇಲ್ಲೊಬ್ಬಳು ಪ್ರೇಯಸಿ ಇರಬೇಕು, ಅಲ್ವೇ!” ಆ ಕವಿಗಳಿಗಾದ ಮುಜುಗರ ಹೇಳತೀರದು! ಅದೂ ನಮ್ಮೆಲ್ಲರ ಮುಂದೆ! “ಅಯ್ಯೋ! ಬಿಡಪ್ಪ ನನಗೇ 75 ವರ್ಷ ಆಯಿತು…” ಎಂದೇನೇನೋ ಗೊಣಗಿಕೊಂಡು ಮಾತು ಬದಲಿಸಿದರು! ಇವರನ್ನು ಮಾತಿನಲ್ಲಿ ಎದುರು ಹಾಕಿಕೊಂಡು ಬದುಕಿದವರುಂಟೆ!

ಸಾಮಾನ್ಯವಾಗಿ ಪಕ್ಕದ ಕಾಮತ್ ಹೊಟೇಲಿಗೆ ಊಟಕ್ಕೆ ಹೋಗುತ್ತಿದ್ದೆವು (ಕಾಮತ್ ಬ್ಯೂಗಲ್ರಾಕ್). ಅವರಿಗೊಂದು ಜಾಗ ಮಾಡಿ ಕೂರಿಸಿ ನೀರು ತಂದಿಡುತ್ತಿದ್ದೆ. ಅದಕ್ಕೆ ನನ್ನನ್ನು ನೀರುಗಂಟಿ ಎನ್ನುತ್ತಿದ್ದರು. ಅಲ್ಲಿನ ಮುಂಭಾಗದ ಗಾಜಿನ ಬಳಿಯ ಮೇಜು ನನಗೆ ಪ್ರಿಯವಾದ ಸ್ಥಳ. ಹೊರಗೆಲ್ಲಾ ಕಾಣುತ್ತದೆ. ನೋಡುತ್ತಾ ತಿನ್ನಬಹುದೆಂದು. ಅವರು ಬೇಡವೆಂದರು. ಕಾರಣ “ಜೂ಼ನಲ್ಲಿಟ್ಟಂತಿರುತ್ತದೆ” ಎಂಬುದು! ಅಂದಿನ ಅಡುಗೆಯಲ್ಲಿನ ತರಕಾರಿಗಳನ್ನು ಹೆಸರಿಸಿ “ಇವೆಲ್ಲ ಕಡಿಮೆ ಬೆಲೆಗೆ ಸಿಕ್ಕಿವೆ ಇವತ್ತು” ಎಂದು ವಿಶ್ಲೇಷಣೆ ಮಾಡುತ್ತಿದ್ದರು. ಆನಂತರ ಕೆಲಸ ಬಗ್ಗೆ ಮಾತು.

ಅವರು ಪದ-ದ್ವನಿಗಳ ಬಗ್ಗೆ ಎಷ್ಟು ಸೂಕ್ಷ್ಮರಾಗಿದ್ದರು ಎಂದರೆ ಯಾವುದೋ ಒಂದು ಸಂಸ್ಥೆಯ ಹೆಸರಿನ ಜೊತೆಗಿದ್ದ ನೋಂ (ನೋಂದಾಯಿತ ಎಂಬುದರ ಹ್ರಸ್ವರೂಪ) ಎಂಬುದನ್ನು ಉಚ್ಚರಿಸಿದ್ದಕ್ಕೆ ಅದನ್ನು ನೋಂ ನೋಂ ಎನ್ನಬೇಡಿ ಕಿವಿಯಲ್ಲೆಲ್ಲಾ ಒಂದು ಥರ ಆಗುತ್ತೆ ಎಂದಿದ್ದರು!

ನಮ್ಮ ಕಚೇರಿಯ ಪಕ್ಕಕ್ಕೇ ಆಗ ಅಭಿಜ್ಞಾನದ ಸೂರ್ಯಪ್ರಕಾಶ್ ಪಂಡಿತ್ ಇದ್ದರು. ಇವರಿಬ್ಬರು ಸೇರಿಬಿಟ್ಟರೆ ಅದು ಬೇರೊಂದು ಪ್ರಪಂಚವಾಗಿಬಿಡುತ್ತಿತ್ತು!

ಇಂದು ಜಾತಿ ಬಗ್ಗೆ ಮಾತನಾಡುವುದು ಆತ್ಮಹತ್ಯೆ ಮಾಡಕೊಂಡಂತೆ. ಅಷ್ಟು ವಿಷಮಿಸಿದೆ, ಕಾಲ. ಅವರು ಎಷ್ಟು ಸ್ನೇಹಪರರು, ಶುದ್ಧಹೃದಯದವರು ಎಂದರೆ ಯಾರೇ ಆಗಲಿ ಅವರ ಜಾತಿ, ಉಪಜಾತಿಯ ಹೆಸರು ಎತ್ತಿ ತಮಾಶೆ ಮಾಡಿಬಿಡುತ್ತಿದ್ದರು. ಯಾರೂ ತಪ್ಪು ತಿಳಿಯುತ್ತಿರಲಿಲ್ಲ! ಒಮ್ಮೆ ಹಿರಿಯರೊಬ್ಬರು ಬಂದು “…ಡಿವಿಜಿಯವರ ಮನೆಗೆ ಹೋಗಿದ್ದೆ. ಒಬ್ಬಟ್ಟು ಕೊಟ್ಟರು ಬಹಳ ರುಚಿಯಾಗಿತ್ತು” ಎಂದು ಗತಕಾಲವನ್ನು ನೆನೆಸಿಕೊಂಡರು. ಇವರು ತಟಕ್ಕನೆ “ಮುಲಕನಾಡು ಒಬ್ಬಟ್ಟು ಹೊಯ್ಸಳ ಕರ್ನಾಟಕರ ನಾಲಿಗೆ, ವಾಟ್ ಅ ಕಾಂಬಿನೇಷನ್!” ಎಂದು ಲೊಟಿಗೆ ಹೊಡೆದುಕೊಂಡು ಹೇಳಿಬಿಟ್ಟರು. ಎಲ್ಲರೂ ಮನಸಾರೆ ನಕ್ಕರು.

ಉತ್ಸಾಹ ಅವರ ಎಲ್ಲ ಮಾತು, ಕಾರ್ಯಗಳಲ್ಲಿ ತುಂಬಿರುತ್ತಿತ್ತು. ಪಿನ್ ಮುಗಿದ ಸ್ಟಾಪ್ಲರ್ಅನ್ನು ಮಿಟಿಕೆಯಂತೆ ಸದ್ದು ಮಾಡಿಸುತ್ತಾ “ಇದಕ್ಕೆ ಹೊಟ್ಗಿಲ್ಲ!” ಎನ್ನುತ್ತಿದ್ದರು!

ಒಮ್ಮೆ ಕಚೇರಿಯಲ್ಲಿ ನಿಂತು ಎಲ್ಲರನ್ನೂ ಉದ್ದೇಶಿಸಿ “ನಾನಿವತ್ತು ‘ಕರ್ಣಪಿಚಾಚಿ’ಯನ್ನು ಮರೆತು ಬಂದಿದ್ದೀನಿ. ಎಲ್ಲರೂ ಜೋರಾಗಿ ಮಾತಾಡೋದು” ಎಂದು ಆಜ್ಞೆ ಹೊರಡಿಸಿದರು! (ಕರ್ಣಪಿಚಾಚಿ ಎಂದರೆ ಕಿವಿಗೆ ಹಾಕಿಕೊಳ್ಳುವ ಶ್ರವಣ ಸಾಧನ).

ಇವರ ಸಂಪರ್ಕದಿಂದ ಅನೇಕ ವಿಚಾರಗಳನ್ನು ಕಲಿತದ್ದಾಯಿತು. ವಿಶ್ವಕೋಶಕ್ಕೆ ಅಮೂಲ್ಯ ಮಾಹಿತಿಗಳು, ಚಿತ್ರ ಮತ್ತು ವಿಡಿಯೋಗಳು ಸಹ ಸಿಕ್ಕಿದ್ದು ಇವರಿಂದಲೇ. ಆದರೆ, ಅವರ ಮಾತು ಅಸ್ಪಷ್ಟ. ಕೆಲವೊಮ್ಮೆ ಎರಡು ಮೂರುಬಾರಿ ಕೇಳಿ ಅರ್ಥ ಮಾಡಿಕೊಳ್ಳಬೇಕಾಗಿತ್ತು.

ವಿಶ್ವಕೋಶಕ್ಕಾಗಿ ನಾನು ಬರೆದ ಎಲ್ಲ ಲೇಖನಗಳನ್ನು ಓದಿ, ಅವಶ್ಯವಿದ್ದೆಡೆ ತಿದ್ದುಪಡಿ ಸೂಚಿಸಿದರು. ವಿಶ್ವಕೋಶದಂತಹ ಆಕರ ಗ್ರಂಥಗಳಿಗೆ ಬೇಕಾದ ಚೌಕಟ್ಟನ್ನು ಕಲಿಸಿದರು. ಇದು ಮುಂದೆ ನಾನು ಕಲಾದರ್ಶನ, ಬೆಂಗಳೂರು ದರ್ಶನದಂತಹ ಆಕರಗ್ರಂಥಗಳಿಗೆ ಬರೆಯುವಾಗ ಉಪಯೋಗವಾಯಿತು.

ಅವರು ಸಂಪಾದಕರಾಗಿದ್ದ ಪತ್ರಿಕೆಯಲ್ಲಿ ಸಂಬಳ ಕೊಡುವುದು ಸಿನೆಮಾದಲ್ಲಿ ಸಾಹುಕಾರ ನೌಕರರಿಗೆ ಕೊಡುವಂತೆ ಇರುತ್ತಿತ್ತಂತೆ! ಕೊಡುವಾಗ ಉಪದೇಶ “ಸೀದಾ ಮನೆಗೆ ಹೋಗಬೇಕು, ಬಾರಿಗೆ ಅಲ್ಲ!” ಇವರ ಮಾರುತ್ತರ “ಸುಳ್ಳು ಯಾಕೆ ಹೇಳಣ ಸರ್ ನಾನು ಅಲ್ಲಿಗೇ (ಬಾರಿಗೇ) ಹೋಗುವುದು!”

ಜೀವನದ ಕೊನೆಯ ದಿನಗಳಲ್ಲಿ ಕಷ್ಟಪಟ್ಟರೂ ಹೆಚ್ಚು ನರಳಲಿಲ್ಲ ಎಂಬುದು ಒಂದು ಸಮಾಧಾನ. ಪಕ್ವ, ಹಿರಿಜೀವ. ಅನಂತ ನಮಸ್ಕಾರಗಳು.

ಮತ್ತಷ್ಟು ಸುದ್ದಿಗಳು

vertical

Latest News

ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

newsics.com ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿನ...

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್’ಗೆ ಹೃದಯಾಘಾತ!

newsics.com ಮುಂಬೈ: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್'ಗೆ ಹೃದಯ ಸ್ತಂಭನವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿದೆ. ಶಾನವಾಜ್ ಹುಸೇನ್ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿ...

ಮನೆ ನೌಕರರಿಗೆ ಕಿರುಕುಳ ನೀಡುತ್ತಿದ್ದ ಸೇನಾ ಮೇಜರ್, ಆತನ ಪತ್ನಿ ಬಂಧನ!

newsics.com ಅಸ್ಸಾಂ: ಮನೆ ನೌಕರರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಮೇಜರ್ ಹಾಗೂ ಆತನ ಪತ್ನಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಸೇನಾ ಮೇಜರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು...
- Advertisement -
error: Content is protected !!