ಕಾಜಾಣಗಳು ಆಕಾಶದಲ್ಲಿ ಹಾರಿ ಹುಳು ಹಿಡಿಯುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅದೆಂಥ ಹಾರಾಟ ಪ್ರದರ್ಶನ! ಯಾವ ಯುದ್ಧ ವಿಮಾನಕ್ಕೂ ಇವುಗಳ ಹಾರಾಟ ಸಾಟಿಯಲ್ಲ. ಹಾರಿ, ತೇಲಿ, ಲಗಾಟಿ ಹೊಡೆದು, ಪಕ್ಕಕ್ಕೆ ತಿರುಗಿ ಹುಳುವಿಗೆ ಕಕಮಕ ಹಿಡಿಸಿ, ಹಿಡಿದ ಹುಳುವನ್ನು ಗಾಳಿಯಲ್ಲೇ ತಿನ್ನುತ್ತವೆ!
ಪಕ್ಷಿನೋಟ 13
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
ಚಿತ್ರಗಳು: ಜಿ ಎಸ್ ಶ್ರೀನಾಥ
ಸ ಹ್ಯಾದ್ರಿ ಮಲೆಗಳಲ್ಲೆಲ್ಲೋ ನೀವು ಪಕ್ಷಿ ವೀಕ್ಷಣೆ ಮಾಡುತ್ತಿದ್ದೀರೆಂದುಕೊಳ್ಳಿ. ಒಂದು ಹಕ್ಕಿಯ ಕೂಗು ಕೇಳುತ್ತಿದೆ, ಆದರೆ ಅದು ಕಾಣುತ್ತಿಲ್ಲ. ಪಕ್ಷಿ ವೀಕ್ಷಕರಿಗೆ ಇದು ಸಾಮಾನ್ಯ ಅನುಭವ. ಜತೆಗೆ ಅವರು ಆ ಪಕ್ಷಿಯನ್ನು ಹುಡುಕಿ ನೋಡುವ ಸಾಮರ್ಥ್ಯವನ್ನೂ ಹೊಂದಿರುತ್ತಾರೆ. ಹೊಸದಾಗಿ ಪಕ್ಷಿ ವೀಕ್ಷಣೆಗೆ ತೊಡಗಿರುವವರನ್ನು ದಾರಿ ತಪ್ಪಿಸುವ ಕೂಗು ಎಂದರೆ ಈ ಕಾಜಾಣಗಳದ್ದು! ಏಕೆಂದರೆ ಇವು ಇತರ ಹಕ್ಕಿಗಳ ಧ್ವನಿಯನ್ನು ಚೂರೂ ಸಂದೇಹ ಬರದಂತೆ ಅನುಕರಿಸುತ್ತವೆ! ಇವನ್ನು ಮಿಮಿಕ್ರಿ ಕಲಾವಿದರು ಎನ್ನಬಹುದು! ಇವುಗಳ ಇನ್ನೊಂದು ಅಭ್ಯಾಸವೆಂದರೆ ಹಾರಿ ಮತ್ತೆ ಬಂದು ಅದೇ ಕೊಂಬೆಯ ಮೇಲೆ ಕುಳಿತುಕೊಳ್ಳುತ್ತವೆ. ಇವು ಬಹಳ ಧೈರ್ಯವಂತ ಹಕ್ಕಿಗಳೂ ಹೌದು. ತಮಗಿಂತ ಎರಡು ಮೂರು ಪಟ್ಟು ದೊಡ್ಡದಿರುವ, ಬೇಟಗಾರ ಹಕ್ಕಿಗಳನ್ನು ಸಹ ಅಟ್ಟಿಸಿಕೊಂಡು ಹೋಗಿ ಓಡಿಸುತ್ತವೆ. ಈ ಸ್ವಭಾವ ಈ ಹಕ್ಕಿಗೆ ಕೆಲವೆಡೆ ಕೊತ್ವಾಲ ಎಂಬ ಹೆಸರನ್ನೂ ತಂದುಕೊಟ್ಟಿದೆ. ಈ ರಕ್ಷಣೆಯನ್ನು ಬಳಸಿಕೊಂಡು ಕೆಲವು ಪುಟ್ಟ ಹಕ್ಕಿಗಳು ಕಾಜಾಣಗಳು ಗೂಡು ನಿರ್ಮಿಸುವ ಸಮೀಪದಲ್ಲಿಯೇ ತಮ್ಮ ಗೂಡು ನಿರ್ಮಿಸಿ ಪುಕ್ಕಟೆ ರಕ್ಷಣೆ ಪಡೆದುಕೊಳ್ಳುತ್ತವೆ! ಅದ್ಭುತ ಹಾರಾಟ…
ಕಾಜಾಣಗಳು ಆಕಾಶದಲ್ಲಿ ಹಾರಿ ಹುಳು ಹಿಡಿಯುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅದೆಂಥ ಹಾರಾಟ ಪ್ರದರ್ಶನ! ಯಾವ ಯುದ್ಧವಿಮಾನಕ್ಕೂ ಇವುಗಳ ಹಾರಾಟ ಸಾಟಿಯಲ್ಲ. ಹೀಗೆ ಹಾರಿ, ತೇಲಿ, ಲಗಾಟಿ ಹೊಡೆದು, ಪಕ್ಕಕ್ಕೆ ತಿರುಗಿ ಹುಳುವಿಗೆ ಕಕಮಕ ಹಿಡಿಸಿ, ಹಿಡಿದ ಹುಳುವನ್ನು ಗಾಳಿಯಲ್ಲೇ ತಿನ್ನುತ್ತದೆ ಇಲ್ಲವೆ ತಾನು ಕೂತಿದ್ದ ಸ್ಥಳಕ್ಕೆ ಹಿಂದಿರುಗಿ ತಿನ್ನುತ್ತದೆ. ಇವುಗಳ ಪ್ರಧಾನ ಆಹಾರ ಕೀಟಗಳು. ಹೂವಿನ ಮಕರಂದ (ಹೂವಿನಲ್ಲಿರುವ ಸಿಹಿ ದ್ರವ್ಯ) ಸೇವಿಸುವುದು ಉಂಟು, ಅಪರೂಪವಾಗಿ ಹಕ್ಕಿಗಳನ್ನು ತಿನ್ನುವುದೂ ಉಂಟು. ಹಾರಾಡುವ ಕೀಟಗಳ ನಿಯಂತ್ರಣದಲ್ಲಿ ಇವುಗಳ ಪಾತ್ರ ಹಿರಿದು. ಆ ನಿಟ್ಟಿನಲ್ಲಿ ಇದು ರೈತನ ಮಿತ್ರ.
23 ಪ್ರಭೇದ
ದಕ್ಷಿಣ ಏಷ್ಯಾದಲ್ಲಿ ಹತ್ತು, ಪ್ರಪಂಚದಾದ್ಯಂತ ಸುಮಾರು 23 ಪ್ರಭೇದಗಳ ಕಾಜಾಣಗಳು ಕಂಡುಬರುತ್ತವೆ. ನಮ್ಮ ಸಹ್ಯಾದ್ರಿ ಶ್ರೇಣಿಯಲ್ಲಿ (ಪಶ್ಚಿಮಘಟ್ಟಗಳು) ಕಂಡುಬರುವ ವಿಶೇಷ ಕಾಜಾಣಕ್ಕೆ ಬಾಲದಿಂದ ಎರಡು ನೀಳವಾದ ಗರಿಗಳಿದ್ದು ಅವುಗಳ ತುದಿಯಲ್ಲಿ ತುಸು ನುಲಿದುಕೊಂಡಿರುವ ಎಲೆಯಂತಹ ಗರಿ ರಚನೆಯಿರುತ್ತದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ನೀವು ಗಮನಿಸಬಹುದು.ಎತ್ತರದಲ್ಲಿ ಗೂಡು
ಮರದ ಮೇಲೆ ಬಹು ಎತ್ತರದ ಕವಲಿನಲ್ಲಿ ಗೂಡು ರಚಿಸಿ ಮೊಟ್ಟೆಯಿಡುತ್ತವೆ. ಮರಿ ಬೆಳೆದು ದೊಡ್ಡ ಹಕ್ಕಿಯ ಎಲ್ಲ ಲಕ್ಷಣ ಪಡೆದುಕೊಳ್ಳಲು ಸುಮಾರು ಎರಡು ವರ್ಷಗಳು ಬೇಕಾಗುತ್ತವೆ. ಮರಿ ಹಕ್ಕಿಗಳ ಹೊಟ್ಟೆಯ ಮೇಲೆ ಅಡ್ಡಗೀರುಗಳಿರುತ್ತವೆ. ಬಣ್ಣವೂ ಬೆಳ್ಳಗಿರಬಹುದು. ಪ್ರಧಾನವಾಗಿ ಕಪ್ಪುಬಣ್ಣದ ಹಕ್ಕಿಗಳಾದ ಇವುಗಳ ಹೊಳಪು ಸಹ ಕಡಿಮೆಯಿರುತ್ತದೆ. ಅಂಡಮಾನ್, ಶ್ರೀಲಂಕಾಗಳಲ್ಲಿ ಕಂಡುಬರುವ ಕಾಜಾಣಗಳ ಗಾತ್ರ ಮತ್ತು ತಲೆಯ ಮೇಲಿನ ಶಿಖೆಯಂತಹ ರಚನೆ ಚಿಕ್ಕದಾಗಿರುತ್ತದೆ. ರೈತ ಮಿತ್ರನೂ, ನಮ್ಮಲ್ಲಿನ ವಿಶಿಷ್ಟವಾದ ಹಕ್ಕಿಗಳಲ್ಲಿ ಒಂದಾದ ಇವನ್ನು ನೀವು ಕಂಡರೆ ನಮಗೆ ಬರೆದು ತಿಳಿಸಿ.