ಪ್ರಾಂಟಿಕೋಲ್ ಅತಿ ಮುದ್ದಾದ ಹಕ್ಕಿ. ಕನ್ನಡದಲ್ಲಿ ಇದು ಚಿಟವ. ಗುಬ್ಬಿ ಮತ್ತು ಮೈನಾದ ನಡುವಿನ ಗಾತ್ರದ ಪುಟ್ಟಕಾಲು ಮತ್ತು ಪುಟ್ಟ ಕೊಕ್ಕಿನ ಹಕ್ಕಿ. ಭಾರತದಾದ್ಯಂತ ಮತ್ತು ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶಗಳಲ್ಲಿಯೂ ಕಂಡುಬರುವ ಇದು ವಲಸೆ ಹಕ್ಕಿ.
ಪಕ್ಷಿನೋಟ 19

♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರ: ಜಿ.ಎಸ್. ಶ್ರೀನಾಥ
newsics.com@gmail.com
ksn.bird@gmail.com
ಅ ರೇ! ಯಾವುದೋ ಔಷಧದ ಹೆಸರಿನಂತಿರುವ ಇದು ಹಕ್ಕಿಯೇ ಎಂದು ನಿಮಗನ್ನಿಸಬಹುದು! ಹೌದು, ಇದು ಹಕ್ಕಿಯೇ! ನಮ್ಮಲ್ಲಿನ ಅತಿ ಮುದ್ದಾದ ಹಕ್ಕಿಗಳಲ್ಲಿ ಒಂದು ಈ ಪ್ರಾಂಟಿಕೋಲ್. ಕನ್ನಡದಲ್ಲಿ ಇವನ್ನು ಚಿಟವ ಎಂದು ಕರೆಯುತ್ತಾರೆ. ಕವಲುಬಾಲದ ಚಿಟವ, ಸಣ್ಣ ಚಿಟವ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ.ಕೀಟಾಹಾರಿ ಹಕ್ಕಿ…
ಸಾಮಾನ್ಯವಾಗಿ ನೀರಿನಾಸರೆಗಳ ಸಮೀಪ ಕಂಡುಬರುವ ಇವು ಕಲ್ಲು, ಮರಳಿನ ಭೂಭಾಗದೊಂದಿಗೆ ಸೇರಿಹೋಗುವಂತಹ ಗರಿಹೊದಿಕೆಯನ್ನು ಹೊಂದಿದೆ. ಗುಬ್ಬಿ ಮತ್ತು ಮೈನಾದ ನಡುವಿನ ಗಾತ್ರದ ಪುಟ್ಟಕಾಲು ಮತ್ತು ಪುಟ್ಟ ಕೊಕ್ಕಿನ ಹಕ್ಕಿ. ಭಾರತದಾದ್ಯಂತ ಮತ್ತು ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶಗಳಲ್ಲಿಯೂ ಕಂಡುಬರುತ್ತದೆ. ಸ್ಥಳೀಯವಾಗಿ ವಲಸೆ ಹೋಗುವ ಹಕ್ಕಿ. ಗಾಳಿಯಲ್ಲಿ ಹಾರುತ್ತಲೇ ಕೀಟಗಳನ್ನು ಹಿಡಿದು ತಿನ್ನುತ್ತವೆ. ಕೀಟಾಹಾರಿ ಹಕ್ಕಿ. ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಚಟುವಟಿಕೆಯಿಂದಿರುತ್ತದೆ.
ಪರಿಸರದ ಪಕ್ಷಿ…
ಇದರ ಗೂಡು ಎಂದರೆ ನೀರಿನಾಸರೆಯ ಸಮೀಪ ನೆಲದ ಮೇಲೆ ತುಸು ತಗ್ಗಿನಲ್ಲಿ ಇಲ್ಲವೇ ಬಂಡೆಕಲ್ಲುಗಳ ಸಮೀಪದ ಸ್ಥಳ! ಹೌದು, ನೆಲದ ಮೇಲೆಯೇ ಮೊಟ್ಟೆಯಿಡುವ ಹಕ್ಕಿಯಿದು. ಆದರೆ, ಮೊಟ್ಟೆಗಳ ಬಣ್ಣ ಎಷ್ಟು ಪರಿಸರದೊಂದಿಗೆ ಹೊಂದಿಕೊಂಡಿರುತ್ತದೆ ಎಂದರೆ ಯಾರಾದರೂ ಹತ್ತಿರ ಹೋದಾಗ ಆ ಹಕ್ಕಿ ಎಚ್ಚರಿಕೆಯ ಕೂಗನ್ನು ಕೂಗಿದಾಗಲೇ ಅಲ್ಲೆಲ್ಲೋ ಇದರ ಗೂಡಿದೆ ಎಂದು ತಿಳಿಯುವುದು! ಹಾಗೆಯೇ ಇವುಗಳ ಮರಿಗಳು ಸಹ ಅದ್ಭುತವಾಗಿ ಪರಿಸರದೊಂದಿಗೆ ಹೊಂದಿಕೊಂಡುಬಿಟ್ಟಿರುತ್ತದೆ. ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಮರಿಗಳು ಗುಡುಗುಡುಗುಡು ಓಡಾಡುವುದು ಕಾಣುತ್ತದೆ.
ಇಂತಹ ವಿಸ್ಮಯದ ಹಕ್ಕಿ ನಿಮಗೆ ಕಂಡರೆ ನಮಗೆ ಬರೆದು ತಿಳಿಸಿ.