ವನ್ಯಜೀವಿ ಸಪ್ತಾಹ ಎಂದರೆ ಈಗ ಕೇವಲ ವನ್ಯಪ್ರಾಣಿಗಳನ್ನು ಸಂರಕ್ಷಿಸುವುದಲ್ಲ; ಇಡೀ ವನ್ಯವ್ಯವಸ್ಥೆಯನ್ನು ಕಾಪಾಡಬೇಕು, ಸಂರಕ್ಷಿಸಬೇಕು. ಸಂರಕ್ಷಣೆಯ ವಿವಿಧ ಭಾಗಗಳನ್ನು ದಿನಕ್ಕೊಂದರಂತೆ ಈ ಸಪ್ತಾಹದಲ್ಲಿ ತಿಳಿಯುತ್ತಾ ಸಾಗೋಣ! ಬನ್ನಿ ವನ್ಯಸಂರಕ್ಷಣಾ ಲೋಕದಲ್ಲಿನ ಪಯಣಕ್ಕೆ.
ವನ್ಯಜೀವಿ ಸಪ್ತಾಹ ವಿಶೇಷ

♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
ಪ್ರ ತಿ ವರ್ಷ ಅಕ್ಟೋಬರ್ 2 ರಿಂದ ಒಂದು ವಾರ “ವನ್ಯಜೀವಿ ಸಪ್ತಾಹ”ವನ್ನಾಗಿ ಆಚರಿಸಲಾಗುತ್ತದೆ. ಹೆಸರೇ ಹೇಳುವಂತೆ ವನ್ಯಜೀವಿಗಳ ಸ್ಥಿತಿಗತಿಯನ್ನು ಉತ್ತಮಪಡಿಸಲು ಮಾಡಬೇಕಾದ ಕಾರ್ಯಗಳನ್ನು ಕುರಿತಾಗಿ ಕಾರ್ಯಯೋಜನೆಗಳನ್ನು ಹಾಕಿಕೊಳ್ಳುವುದು, ಜಾಗೃತಿ ಮೂಡಿಸುವುದು ಈ ಆಚರಣೆಯ ಮೂಲ ಉದ್ದೇಶ. 1952ರಲ್ಲಿ ಆರಂಭವಾದ ಇದು ಕೇವಲ ವನ್ಯಪ್ರಾಣಿಗಳ ಸ್ಥಿತಿಯನ್ನು ಉತ್ತಮಪಡಿಸುವುದಕ್ಕಾಗಿ ಎಂದಿತ್ತು.
ಆದರೆ, ಈಗ ನಮಗೆ ಪ್ರಾಣಿ, ಸಸ್ಯಗಳು ಹಾಗೂ ಒಟ್ಟಾರೆ ಪರಿಸರ ಎಲ್ಲವೂ ಒಂದೇ ವ್ಯವಸ್ಥೆಯ ವಿವಿಧ ಅಂಗಗಳು ಎಂಬುದು ತಿಳಿದಿದೆ. ಆ ಎಲ್ಲ ಅಂಗಗಳು ಸೇರಿ ಜೀವಪರಿಸ್ಥಿತಿ ವಿಜ್ಞಾನ ಅಥವಾ ಇಕಾಲಜಿ ಎಂದಾಗಿರುವುದು. ಹಾಗಾಗಿ, ವನ್ಯಜೀವಿ ಸಪ್ತಾಹ ಎಂದರೆ ಈಗ ಕೇವಲ ವನ್ಯಪ್ರಾಣಿಗಳನ್ನು ಸಂರಕ್ಷಿಸುವುದಲ್ಲ; ಇಡೀ ವನ್ಯವ್ಯವಸ್ಥೆಯನ್ನು ಕಾಪಾಡಬೇಕು, ಸಂರಕ್ಷಿಸಬೇಕು.ಸಂರಕ್ಷಣೆ ಹೇಗೆ?
ಈ ಸಂರಕ್ಷಣೆ ಎಂಬುದು ಕೇವಲ ಒಂದು ವಿಷಯವಲ್ಲ. ಹಲವಾರು ವೈಜ್ಞಾನಿಕ ಮತ್ತು ಸಾಮಾಜಿಕ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ಪ್ರಕ್ರಿಯೆ. ಇದು ವಿಜ್ಞಾನ, ತಂತ್ರಜ್ಞಾನವನ್ನು ಆಧರಿಸಿರುವಷ್ಟೇ ಸಂಖ್ಯಾಶಾಸ್ತ್ರವನ್ನೂ ಆಧರಿಸಿದೆ, ಕಾನೂನನ್ನು ಒಳಗೊಂಡಿದೆ, ಸಮಾಜವಿಜ್ಞಾನವನ್ನು ಆಧರಿಸಿದೆ, ಮಾನವ ನಡವಳಿಕೆಯನ್ನೂ ಆಧರಿಸಿದೆ. ಹಲವು ಜ್ಞಾನ ಶಾಖೆಗಳ ಸಂಯುಕ್ತ ಯಶಸ್ಸೇ ಯಶಸ್ವೀ ಸಂರಕ್ಷಣೆ.
ಯಾರು ಮಾಡಬೇಕು?
ಇನ್ನು ಇದನ್ನು ಯಾರು ಮಾಡಬೇಕು? ಇಷ್ಟೆಲ್ಲಾ ಕ್ಷೇತ್ರಗಳ ಪರಿಣತಿಯ ಅವಶ್ಯಕತೆ ಇರುವುದರಿಂದ ಇದು ಈಗ ಎಲ್ಲರ ಕೆಲಸ. ಹಾಗೆಂದ ಮಾತ್ರಕ್ಕೆ ಜನಸಾಮಾನ್ಯರಿಗೆ ಇದು ಅಸಾಧ್ಯ; ಅವರನ್ನು ದೂರವಿಡಬೇಕು ಎಂದಲ್ಲ! ಹಾಗೆ ಮಾಡಿದರೆ ಅದು ಒಂದು ಬಹುದೊಡ್ಡ ತಪ್ಪಾಗುತ್ತದೆ. ಜನಸಾಮಾನ್ಯರೂ ಸೇರಿದಂತೆ ಎಲ್ಲರೂ ಸೇರಿ ಮಾಡಬೇಕಾದ ಕಾರ್ಯ ವನ್ಯಸಂರಕ್ಷಣೆ. ಇಲ್ಲಿ ಪ್ರತಿಯೊಂದು ಸಮುದಾಯಕ್ಕೂ ಒಂದು ಕಾರ್ಯವಿದೆ; ಪ್ರತಿಯೊಂದು ಕಾರ್ಯವೂ ಒಂದು ಜ್ಞಾನ ಸಮುದಾಯವನ್ನು ಬಯಸುತ್ತದೆ.
ಇಂತಹ ಸಂಕೀರ್ಣ ವ್ಯವಸ್ಥೆಯ ಒಂದು ಭಾಗವೇ ಮನುಷ್ಯ. ಇಂದು ಈ ಅರಿವು ನಮಗಾಗಿದೆ. ಈ ಅರಿವನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಸಂರಕ್ಷಣೆಯ ವಿವಿಧ ಭಾಗಗಳನ್ನು ದಿನಕ್ಕೊಂದರಂತೆ ಈ ಸಪ್ತಾಹದಲ್ಲಿ ತಿಳಿಯುತ್ತಾ ಸಾಗೋಣ! ಬನ್ನಿ ವನ್ಯಸಂರಕ್ಷಣಾ ಲೋಕದಲ್ಲಿನ ಪಯಣಕ್ಕೆ.