ನಮ್ಮ ದೊಡ್ಡ-ಸಣ್ಣ ಎಲ್ಲ ನಗರಗಳಿಗೂ ನೀರು ಬರುತ್ತಿರುವುದು ಒಂದಲ್ಲ ಒಂದು ಕಾಡಿನಿಂದ, ಆ ಕಾಡನ್ನು ಸಮತೋಲನದಲ್ಲಿಡುವುದು ಪ್ರಾಣಿಗಳು-ಸಸ್ಯಗಳು-ಸೂಕ್ಷ್ಮಜೀವಿಗಳು. ಮನುಷ್ಯರಾದ ನಾವೂ ಈ ಕೊಂಡಿಯ ಒಂದು ಭಾಗ, ಅಷ್ಟೆ! ಇದು ಪರಸ್ಪರ ಸಂಬಂಧ!
ವನ್ಯಜೀವಿ ಸಪ್ತಾಹ ವಿಶೇಷ- 2

♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
ವ ನ್ಯಜೀವಿಗಳನ್ನು ಏಕೆ ಸಂರಕ್ಷಿಸಬೇಕು? ಎಂಬ ಪ್ರಶ್ನೆ ಬರುವುದು ಸಹಜ. ಇಂದು ನಾವು ಅನೇಕ ಕಾರಣಗಳಿಗೆ ಕಾಡುಗಳನ್ನು ನಾಶ ಮಾಡುತ್ತಿದ್ದೇವೆ. ಕಾಡುಗಳ ನಡುವೆ ರಸ್ತೆ, ಅಣೆಕಟ್ಟು, ಗಣಿಗಾರಿಕೆ ಹೀಗೆ ಅನೇಕ ಅಭಿವೃದ್ಧಿ ಎಂದು ಕರೆಸಿಕೊಳ್ಳುವ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಆದರೆ, ಇವೆಲ್ಲವೂ ನಮ್ಮ ಬದುಕಿಗೆ, ಒಳಿತಿಗೆ ಬೇಕಲ್ಲವೆ? ಎಂಬ ಪ್ರಶ್ನೆ ನಮಗೆ ಒಂದಲ್ಲ ಒಂದು ಬಾರಿ ಕಾಡಬಹುದು. ಜತೆಗೆ, ಪ್ರಾಣಿಗಳಿಲ್ಲದಿದ್ದರೆ ಕಾಡಿನ ಸೌಂದರ್ಯವನ್ನು ಯಾವ ಅಡತಡೆಯೂ ಇಲ್ಲದೆ ಸವಿಯಬಹುದಲ್ಲವೆ ಎಂದೂ ಅನಿಸಿರಬಹುದು. ಆದರೆ, ವಿಷಯ ಅಷ್ಟು ಸರಳವಾಗಿಲ್ಲ. ಆದರೆ, ದಿಗ್ಭ್ರಮೆಯಾಗುವಷ್ಟು ಕುತೂಹಲಕಾರಿಯಾಗಿದೆ.
ನಲ್ಲಿ ನೀರಿಗೂ ಹುಲಿಗೂ ಸಂಬಂಧ…!
ಈಗ ಒಂದು ಕುತೂಹಲಕಾರಿ ಪ್ರಶ್ನೆಯಿದೆ ನೋಡಿ. ನಮ್ಮ ಮನೆಯ ನಲ್ಲಿಯಲ್ಲಿ ಬರುವ ನೀರಿಗೂ ಕಾಡಿನಲ್ಲಿರುವ ಹುಲಿಗೂ ಇರುವ ಸಂಬಂಧವೇನು? ಇದು ಪ್ರಶ್ನೆ! ನಿಮ್ಮಲ್ಲಿ ಕೆಲವರಿಗೆ ಉತ್ತರ ಹೊಳೆದೇ ಬಿಟ್ಟಿರಬಹುದು. ಇರಲಿ. ಈ ಕುರಿತು ಯೋಚಿಸಿ. ಇಂತಹವನ್ನು ಪಾರಿಸಾರಿಕ ಸೂಕ್ಷ್ಮಗಳು ಎಂದು ಕರೆಯುತ್ತಾರೆ. ಹೌದು ನಮ್ಮ ಮನೆಯ ನಲ್ಲಿಯಲ್ಲಿ ಬರುವ ನೀರಿಗೂ ಕಾಡಿನಲ್ಲಿರುವ ಹುಲಿಗೂ ಸಂಬಂಧವಿದೆ. ಅಲ್ಲಿ ಹುಲಿಗಳು ಸೌಖ್ಯವಾಗಿದ್ದರೆ ನಮಗೆ ಇಲ್ಲಿ ನೀರಿಗೆ ಕೊರತೆಯಿರುವುದಿಲ್ಲ. ಇರಲಿ, ಇದರ ಮರ್ಮವನ್ನು ವಿವರವಾಗಿ ತಿಳಿಯೋಣ.ಕಾಡಿನಲ್ಲಿನ ಎಲ್ಲ ಮಾಂಸಾಹಾರಿ ಪ್ರಾಣಿಗಳನ್ನು ತೆಗೆದುಬಿಡೋಣ. ಈಗ ಕಾಡಿನಲ್ಲಿ ಯಾವುದೇ ಹುಲಿ, ಚಿರತೆಗಳ ಭಯವಿಲ್ಲದೆ ಬಹಳ ಸಂತೋಷಗಾಗಿ ಓಡಾಡಬಹುದು. ನದಿಯ ಪಕ್ಕ ಕೂತು ಕಾಲುಗಳನ್ನು ನೀರಿನಲ್ಲಿ ಇಳಿ ಬಿಟ್ಟು ಆಡಿಸುತ್ತಾ ಕಾಲ ಕಳೆಯಬಹುದು! ಅದಿರಲಿ, ಈಗ ಏನಾಗುತ್ತದೆ ಎಂದು ನೋಡೋಣ. ಹುಲಿ ಇತ್ಯಾದಿ ಮಾಂಸಾಹಾರಿ ಪ್ರಾಣಿಗಳಿಲ್ಲದೆ ಜಿಂಕೆಯಂತಹ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ವಿಪರೀತ ಹೆಚ್ಚುತ್ತವೆ (ಅವೆಲ್ಲ ಇದ್ದೇ ಜಿಂಕೆಗಳ ಸಂಖ್ಯೆ ಸಾವಿರ-ಸಾವಿರವಿದೆ). ಈಗ ಅಂಕೆಮೀರಿ ಹೆಚ್ಚಿದೆ. ಸರಿ, ಇವಕ್ಕೆ ಆಹಾರ ಬೇಕಲ್ಲವೆ? ಕಾಡಿನಲ್ಲಿ ಹಲ್ಲು, ಗಿಡಕ್ಕೆ ಕೊರತೆಯೇ?! ಆ ಎಲ್ಲ ಜಿಂಕೆ ಮತ್ತು ಇತರೆ ಸಸ್ಯಾಹಾರಿ ಪ್ರಾಣಿಗಳು ಕಾಡಿನ ಹುಲ್ಲು ಮತ್ತು ನೆಲಮಟ್ಟದ ಅನೇಕ ಸಸ್ಯಗಳನ್ನು ತಿಂದವು. ಕಾಡಿನಲ್ಲಿ ಎಲ್ಲೆಲ್ಲಿ ನೋಡಿದರೂ ಜಿಂಕೆ, ಸಾರಗ, ಕಾಡೆಮ್ಮೆಗಳೇ!
ಈಗ ಮಳೆಗಾಲ ಬಂದಿತು. ಆ ಕುಂಭದ್ರೋಣ ಮಳೆಗೆ ಹುಲ್ಲಿನ ತಡೆ ತಪ್ಪಿಹೋಗಿದ್ದ ನೆಲದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ನದಿಗೆ ಸೇರಿತು. ನದಿಯ ಪಾತ್ರ ಮೇಲಕ್ಕೆ ಬಂದು ಪ್ರವಾಹ ಉಂಟಾಯಿತು. ಮುಂದಿನ ಎರಡು ವರ್ಷಗಳಲ್ಲಿ ಕಾಡಿನ ಮಣ್ಣು ನದಿ, ಕುಂಟೆಗಳನ್ನು ಸೇರಿ ಅದರ ಪಾತ್ರ ಮೇಲೆ ಬಂದು ನೀರೇ ನಿಲ್ಲದೆ ಹೋಯಿತು. ಭೂಮಿ ಸಡಿಲವಾದ್ದರಿಂದ ದೊಡ್ಡ ದೊಡ್ಡ ಮರಗಳು ನೆಲಕಚ್ಚಿದವು. ಅದು ಆಶ್ರಯ ಕೊಡುತ್ತಿದ್ದ ಜೀವಿಗಳು, ಹಕ್ಕಿಗಳು ವಂಶಾಭಿವೃದ್ಧಿ ಮಾಡಲಾಗದೆ ಕುಸಿಯತೊಡಗಿದವು.
ಬರಗಾಲ ಬಂದಿತು! ನದಿಯಿಂದ ನಗರಗಳಿಗೆ ಬರುತ್ತಿದ್ದ ನೀರು ನಿಂತುಹೋಯಿತು. ಮನೆಯಲ್ಲಿ ಮಾಣಿ ನಲ್ಲಿ ತಿರುಗಿಸಿದ, ಎಲ್ಲಿದೆ ನೀರು? ಈಗ ನಮಗೆ ತಿಳಿಯಿತಲ್ಲವೆ ಕಾಡಿನಲ್ಲಿನ ಹುಲಿಯಂತಹ ಪ್ರಾಣಿಗಳಿಗೂ ನಮ್ಮ ಮನೆಯ ನಲ್ಲಿಯಲ್ಲಿ ಬರುವ ನೀರಿಗೂ ಇರುವ ಸಂಬಂಧ! ನಮ್ಮ ದೊಡ್ಡ-ಸಣ್ಣ ಎಲ್ಲ ನಗರಗಳಿಗೂ ನೀರು ಬರುತ್ತಿರುವುದು ಒಂದಲ್ಲ ಒಂದು ಕಾಡಿನಿಂದ, ಆ ಕಾಡನ್ನು ಸಮತೋಲನದಲ್ಲಿಡುವುದು ಪ್ರಾಣಿಗಳು-ಸಸ್ಯಗಳು-ಸೂಕ್ಷ್ಮಜೀವಿಗಳು. ಮನುಷ್ಯರಾದ ನಾವೂ ಈ ಕೊಂಡಿಯ ಒಂದು ಭಾಗ, ಅಷ್ಟೆ! ಇದು ಪರಸ್ಪರ ಸಂಬಂಧ! ಇದು ಸ್ಥೂಲವಾದ ವಿವರಣೆ. ಇದರಲ್ಲಿ ಸಾಕಷ್ಟಿದೆ. ಹಾಗೆಯೇ, ನದಿ ಮತ್ತು ಇತರ ಪ್ರಾಣಿಗಳ ನಡುವೆ ಸಂಬಂಧವಿದೆ. ಒಂದು ಕಾಡಿನಲ್ಲಿನ ಒಂದು ಜೀವಿಯನ್ನು ತೆಗೆದರೆ ಕ್ರಮೇಣ ಕಾಡು ಹಾಳಾಗುವ ಎಲ್ಲ ಜೀವಿಗಳ ಮೇಲೆ ಗಣನೀಯ ಪರಿಣಾಮ ಬೀರುತ್ತದೆ ಎಂದು ತೋರಿಸುವ ಅಧ್ಯಯನಗಳು ನಡೆದಿವೆ.
ಈಗ ಬೆಂಗಳೂರಿನಲ್ಲಿರುವ ನಾನು ನಮ್ಮ ಮನೆಯಲ್ಲಿರುವ ನಲ್ಲಿಯನ್ನು ತಿರುಗಿಸಿದರೆ ಕಾವೇರಿ ನೀರು ಬರುತ್ತದೆ ಎಂದರೆ ಅಲ್ಲಿ, ದೂರದ ಬ್ರಹ್ಮಗಿರಿ ಅರಣ್ಯದಲ್ಲಿ ಹುಲಿಯಂತಹ ಮಾಂಸಾಹಾರಿ ಪ್ರಾಣಿಗಳು ಇವೆ ಎಂದರ್ಥ! ಅವು ಕಡಿಮೆಯಾದಲ್ಲಿ ಪರಿಣಾಮ ಸರಣಿ ಸ್ಫೋಟ ಆರಂಭವಾಗುತ್ತದೆ.
ನಮಗಾಗಿಯೇ ವನ್ಯಜೀವಿ ಸಂರಕ್ಷಣೆ…!
ಪಶ್ಚಿಮಘಟ್ಟಗಳಲ್ಲಿ ನಡೆಯುತ್ತಿರುವ ಪರಿಸರ ನಾಶದ ಕಾರ್ಯಗಳು ನಮ್ಮೆಲ್ಲರ ಮೇಲೆ ಬೀರುವ ಪರಿಣಾಮವನ್ನು ನಾವು ಬಹುಶಃ ಊಹಿಸಲೂ ಆಗದು. ಈ ನಿಟ್ಟಿನಲ್ಲಿ ಯೋಚಿಸಿರಿ.
ಅಂದರೆ, ವನ್ಯಜೀವಿ ಸಂರಕ್ಷಣೆ ಮಾಡುವುದು ನಮಗಾಗಿ, ಅಷ್ಟೆ! ಬೇರೆ ಯಾವುದೋ ಪರೋಪಕಾರಕ್ಕಾಗಿ ಅಲ್ಲ!
ಆದರೆ, ಬಂಧುಗಳೇ, ಸಂರಕ್ಷಣೆಗೆ ಮುಖ್ಯವಾದ ಕಾರಣ ಇತರ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬ ನೈತಿಕತೆಯೇ ಆಗಿರಬೇಕು, ಅಲ್ಲವೆ? ಅದೇ ಮೊದಲ ಕಾರಣ. ನಂತರದ ಕಾರಣ ಅವುಗಳ ಉಳಿವು ನಮ್ಮ ಉಳಿವು! ಅದಕ್ಕಾಗಿ ನಾವು ಅವುಗಳನ್ನು ಸಂರಕ್ಷಿಸಬೇಕು.
ಹಾಗಾದರೆ, ವನ್ಯಜೀವಿಗಳು ಎಂದರೆ ನಿಜವಾಗಿ ಏನು? ಅವುಗಳ ಸಂರಕ್ಷಣೆ ಹೇಗೆ? ಇದನ್ನು ಮುಂದಿನ ಭಾಗದಲ್ಲಿ ತಿಳಿಯೋಣ. ಎಲ್ಲರಿಗೂ ವನ್ಯಜೀವಿ ಸಪ್ತಾಹದ ಹೃತ್ಪೂರ್ವಕ ಶುಭಾಶಯಗಳು!