ಇಂದು ಆನೆಗಳ ದಿನ
ಇಂದು (ಆಗಸ್ಟ್ 12) ವಿಶ್ವ ಆನೆಗಳ ದಿನ. ಆನೆಗಳ ರಕ್ಷಣೆ ಹಾಗೂ ಮಹತ್ವದ ಕುರಿತು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಅತ್ಯುತ್ತಮ ಸ್ಮರಣೆ, ಭಾವನಾತ್ಮಕ ತೀಕ್ಷ್ಣತೆ, ಸೂಕ್ಷ್ಮಮತಿಗಳಾಗಿರುವ ಆನೆಗಳು ನಮ್ಮ ನಡುವಿನ ಅತಿ ದೊಡ್ಡ ದೇಹಿಗಳು.
♦ ಪ್ರಮಥ
newsics.com@gmail.com
ದೇಹ ದೈತ್ಯವಾಗಿದ್ದರೂ ಸೂಕ್ಷ್ಮಮತಿಯಾಗಿರುವ ಜೀವಿ ಆನೆ. ನಮ್ಮ ರಾಜ್ಯ ಸೇರಿದಂತೆ ಹಲವೆಡೆ ಆನೆ-ಮನುಷ್ಯರ ಸಂಘರ್ಷ ನಿರಂತರವಾಗಿ ಸಾಗಿದೆ. ಅರಣ್ಯ ನಾಶ, ಆನೆಗಳ ಕಾರಿಡಾರ್ ಮಾಯವಾಗಿರುವುದು, ಅವುಗಳಿಗೆ ಸಮೃದ್ಧವಾದ ಮೇವು ದೊರಕದಿರುವುದು, ಅರಣ್ಯದಲ್ಲಿ ಆಹಾರ ಲಭಿಸದೆ ಇರುವುದು ಮುಂತಾದ ಹಲವು ಕಾರಣಗಳು ಇದರ ಹಿಂದಿವೆ. ಏಕೆಂದರೆ, ಸೂಕ್ಷ್ಮಮತಿ ಹಾಗೂ ವಿವೇಚನೆಯುಳ್ಳ ಆನೆಗಳು ಎಂದಿಗೂ ಸುಖಾಸುಮ್ಮನೆ ಇತರ ಜೀವಿಗಳಿಗೆ ಹಾನಿಯುಂಟುಮಾಡುವ ಚಾಳಿ ಹೊಂದಿರುವುದಿಲ್ಲ. ಆದರೆ, ನಮ್ಮ ಈ ಸಂಘರ್ಷದ ಹೊರತಾಗಿಯೂ, ಆನೆಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದೇ ಆಗಿದೆ. ಏಕೆಂದರೆ, ಆನೆಗಳು ಕಾಡಿನ ಸೌಂದರ್ಯ.
ಇಂದು ವಿಶ್ವ ಆನೆಗಳ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿಯ ಆಚರಣೆಗೆ ಹತ್ತು ವರ್ಷಗಳ ಸಂಭ್ರಮವೂ ಸೇರಿದೆ. ಆನೆಗಳ ದಿನವನ್ನು 2012ರಿಂದ ಆಚರಿಸಲಾಗುತ್ತಿದ್ದು, ಮುಖ್ಯವಾಗಿ ಆನೆಗಳ ರಕ್ಷಣೆ ಹಾಗೂ ಅವುಗಳ ಮಹತ್ವವನ್ನು ತಿಳಿಸುವ ಉದ್ದೇಶ ಹೊಂದಿದೆ. ಮೂಲತಃ ಕೆನಡಾದ ಚಿತ್ರನಿರ್ಮಾಪಕರಾದ ಪೆಟ್ರೀಷಿಯಾ ಸಿಮ್ಸ್ ಮತ್ತು ಮೈಕೆಲ್ ಕ್ಲಾರ್ಕ್ ಅವರು 2011ರಲ್ಲಿ ಇಂಥದ್ದೊಂದು ಆರಂಭಕ್ಕೆ ಮುನ್ನುಡಿ ಬರೆದರು. ಆನೆಗಳ ಕುರಿತಾದ ಕಾಳಜಿಯೇ ಇದಕ್ಕೆ ಕಾರಣವಾಗಿತ್ತು. ಕೇವಲ ಒಂದೇ ದಶಕದಲ್ಲಿ ಆನೆಗಳ ಸಂಖ್ಯೆ ಲಕ್ಷಾಂತರ ಪ್ರಮಾಣದಲ್ಲಿ ಕುಸಿದಿದ್ದ ಹಿನ್ನೆಲೆಯಲ್ಲಿ ಆನೆಗಳ ರಕ್ಷಣೆಯ ಮಹತ್ವದ ಕುರಿತು ಜಗತ್ತಿನ ಗಮನ ಸೆಳೆಯುವುದು ಅವರ ಉದ್ದೇಶವಾಗಿತ್ತು. ಅದೀಗ ಸಫಲವಾಗಿದೆ. ಏಕೆಂದರೆ, ಆನೆಯ ದಿನದ ನೆಪದಲ್ಲಿ ಆನೆಗಳ ರಕ್ಷಣೆ ಕುರಿತು ಸರ್ಕಾರಗಳೂ ಮಾತನಾಡುತ್ತವೆ, ಕೆಲವು ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತವೆ.
ಇಂದು ಪ್ರಪಂಚದಲ್ಲಿ ಕೇವಲ 50 ಸಾವಿರದಷ್ಟು ಏಷ್ಯಾ ಆನೆಗಳಿವೆ. 4.15 ಲಕ್ಷದಷ್ಟು ಆಫ್ರಿಕಾ ಆನೆಗಳಿವೆ. ಏಷ್ಯಾ ಆನೆಗಳನ್ನು ಅಪಾಯದಲ್ಲಿರುವ ಜೀವಿ ಎಂದು ಗುರುತಿಸಲಾಗಿದ್ದರೆ, ಆಫ್ರಿಕಾ ಆನೆಗಳನ್ನು ಅಪಾಯಕ್ಕೆ ಒಳಗಾಗುವ ಜೀವಿಗಳೆಂದು ಗುರುತಿಸಲಾಗಿದೆ. 2016ರ ವೇಳೆಗೆ ಆಫ್ರಿಕಾ ಆನೆಗಳ ಸಂಖ್ಯೆ 1.11 ಲಕ್ಷಕ್ಕೆ ಕುಸಿದು ಜಗತ್ತಿನಾದ್ಯಂತ ಕಳವಳ ಹೆಚ್ಚಿತ್ತು. ಕಳೆದೊಂದು ಶತಮಾನದಲ್ಲಿ ಶೇ.90ರಷ್ಟು ಆಫ್ರಿಕಾ ಆನೆಗಳು ನಾಶವಾಗಿವೆ. ಏಷ್ಯಾ ಆನೆಗಳು ಕಳೆದ ಮೂರು ತಲೆಮಾರುಗಳಿಂದ ಶೇ.50ರಷ್ಟು ನಶಿಸಿಹೋಗಿವೆ.
ದುಬಾರೆ ಕ್ಯಾಂಪ್
ನಮ್ಮ ಕೊಡಗಿನ ದುಬಾರೆ ಆನೆ ಕ್ಯಾಂಪ್ ಗೆ ಹೋಗುವ ಮಕ್ಕಳು ಆನೆಗಳ ಮೇಲೆ ಸವಾರಿ ಮಾಡದೇ ವಾಪಸ್ ಬರಲಾರರು. ಆನೆಗಳ ಮೇಲಿನ ಸವಾರಿ, ಅವುಗಳ ದೇಹದ ವಿಶಾಲತೆ, ಸವಾರಿಯ ಮೋಜು, ಆನೆಗಳ ಕುರಿತಾದ ರೋಮಾಂಚನ ಇವು ಅವರಲ್ಲಿ ಯಾವತ್ತೂ ಶಾಶ್ವತವಾಗಿರುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ. ಕರ್ನಾಟಕದಲ್ಲೇ ಇರುವ ನಮಗೆ ಇದೊಂದು ಕೊಡುಗೆ ಎನ್ನುವುದರಲ್ಲಿ ತಪ್ಪಿಲ್ಲ. ಈ ಪ್ರಯತ್ನ ಹಾಗೂ ಅತ್ಯುತ್ತಮ ಫಲ ನೀಡುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಆನೆಗಳ ವೈಶಿಷ್ಟ್ಯತೆ
ಆನೆಗಳು ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಅತ್ಯುತ್ತಮ ಸ್ಮರಣ ಶಕ್ತಿ ಹೊಂದಿರುತ್ತವೆ, ಹತ್ತಾರು ವರ್ಷಗಳ ಬಳಿಕ ಭೇಟಿಯಾದರೂ ಗುರುತಿಸುವಷ್ಟು ತೀಕ್ಷ್ಣ ಬುದ್ಧಿ ಹೊಂದಿರುತ್ತವೆ. ಅಸಲಿಗೆ ಅವು ಮರೆಯುವುದೇ ಇಲ್ಲ ಎಂದೂ ಹೇಳಲಾಗುತ್ತದೆ. ಭಾಷೆಗಳನ್ನು ಗುರುತಿಸುತ್ತವೆ. ಸಲಕರಣೆ ಬಳಸುವ ಸಾಮರ್ಥ್ಯ ಹೊಂದಿದ್ದು, ಮನುಷ್ಯರೊಂದಿಗೆ ಅತ್ಯುತ್ತಮವಾಗಿ ಸಂವಹನ ನಡೆಸಬಲ್ಲವು. ತಮ್ಮನ್ನು ಪಳಗಿಸುವ ಮಾವುತರನ್ನು ಭಾವನಾತ್ಮಕವಾಗಿ ಹಚ್ಚಿಕೊಳ್ಳುವುದು ಆನೆಗಳ ಸ್ವಭಾವ. ಅಚ್ಚರಿ ಎಂದರೆ, ಆನೆಗಳ ಸೊಂಡಿಲಿನಲ್ಲಿ ಬರೋಬ್ಬರಿ 1.50 ಲಕ್ಷ ಮಾಂಸಖಂಡಗಳ ಘಟಕಗಳಿರುತ್ತವೆ