Monday, March 1, 2021

ಗಂಡು-ಹೆಣ್ಣು ಹೊಂದಿಕೊಂಡು…

ಇಂದು ವಿಶ್ವ ವಿವಾಹ ದಿನ (ಫೆಬ್ರವರಿ ಎರಡನೇ ಭಾನುವಾರ). ಪತಿ-ಪತ್ನಿಯರು ತಮ್ಮ ಬಾಂಧವ್ಯ ನೆನಪಿಸಿಕೊಳ್ಳಲು ಲಭ್ಯವಾದ ಮತ್ತೊಂದು ದಿನ. ಮದುವೆಯ ವಾರ್ಷಿಕೋತ್ಸವ ಹೊರತುಪಡಿಸಿ ಮತ್ತೊಮ್ಮೆ ಪ್ರೀತಿಯಿಂದ ಪರಸ್ಪರರನ್ನು ಗೌರವಿಸುತ್ತ, ಅರಿತುಕೊಂಡು ಸಾಗಲೊಂದು ನೆಪ.

  ಇಂದು ವಿಶ್ವ ವಿವಾಹ ದಿನ   


♦ ಸುಮನಾ
newsics.com@gmail.com


“ಅ  ಮೋಘ 25 ವರ್ಷಗಳ ಕಾಲ ಒಬ್ಬರೊಂದಿಗೇ ಬದುಕಿದ್ದೇನೆ, ನನ್ನ ಸಾಧನೆಗೆ ಏನಾದರೂ ಕೊಡಬೇಕಲ್ಲವೇ?’ ಎಂದು ಹಿರಿಯ ಗೆಳತಿಯೊಬ್ಬರು ತಮಾಷೆ ಮಾಡಿದಾಗ ನಕ್ಕರೂ “ಹೌದಲ್ಲವೇ?’ ಎನ್ನಿಸಿತ್ತು. ಯಾರೊಂದಿಗಾದರೂ ಇಡೀ ಜೀವನ ಕಳೆಯುವುದೆಂದರೆ ತಮಾಷೆಯ ಮಾತೇ? ಪ್ರೀತಿಯಿಲ್ಲದೆ ಅದು ಸಾಧ್ಯವೇ? ಎನಿಸುವಾಗ ಕೆ.ಎಸ್.ನ. ಅವರ ಕವಿತೆಯೊಂದು ಬೇಡವೆಂದರೂ ನೆನಪಾಗುತ್ತದೆ.
“ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದು ಕನಸು ಕಂಡು, ಮಾತಿಗೊಲಿಯದ ಅಮೃತ ಉಂಡು, ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ?’ ಎನ್ನುವ ಸಾಲುಗಳು ಪತಿ-ಪತ್ನಿಯ ನಡುವೆ ಇರುವ ಹಾಗೂ ಇರಬೇಕಾದ ಬಾಂಧವ್ಯವನ್ನು ಅತ್ಯಂತ ಸ್ಫುಟವಾಗಿ ಹೇಳುತ್ತವೆ.
ಹೌದು, ಮುಖ ನೋಡದೆ ಮದುವೆಯಾದರೂ ಹಿಂದಿನ ಗಂಡು-ಹೆಣ್ಣುಗಳು ಹೇಗೋ ಸೇರಿ ಹೊಂದಿಕೊಳ್ಳುತ್ತಿದ್ದವು. ಇಂದು ವರ್ಷಾನುಗಟ್ಟಲೆ ಕುಳಿತು ಮಾತನಾಡಿ, ಲೆಕ್ಕಾಚಾರ ಹಾಕಿ ಮದುವೆಯಾದರೂ ನಾಲ್ಕೈದು ವರ್ಷ ಸಂಸಾರ ಮಾಡುವಷ್ಟರ ಹೊತ್ತಿಗೆ ಸುಸ್ತಾಗಿರುತ್ತದೆ. ಹೀಗೇಕೆ? ಬದುಕಿನಲ್ಲಿ ಹೊಂದಾಣಿಕೆಯೇ ಇಲ್ಲವಾಯ್ತೇ?
ಹಿರಿಯ ನಿಘಂಟು ತಜ್ಞ ವೆಂಕಟಸುಬ್ಬಯ್ಯ ಅವರನ್ನೊಮ್ಮೆ ಮಾತನಾಡಿಸಲು ಹೋದಾಗ ಅವರಿಗೆ ಮದುವೆಯಾಗಿ ಎಪ್ಪತ್ತೈದು ವರ್ಷಗಳಾಗಿದ್ದವು. ಮದುವೆಯಾಗಿ ಎರಡೇ ವರ್ಷ ಸಂದಿದ್ದ ನಾನು ‘ಅಬ್ಬಾ’ ಎಂದು ಅಚ್ಚರಿಪಟ್ಟಿದ್ದೆ. ಅವರ ಪತ್ನಿ ಲಕ್ಷ್ಮೀಯವರು ಈಗಿಲ್ಲ. ಆದರೆ, ಆಗ ಅವರು ಹೇಳಿದ ಮಾತೊಂದು ಮುಂದೆ ನನಗೂ ದಾರಿದೀಪವಾಯ್ತು ಎಂಬುದನ್ನು ಇಲ್ಲಿ ಹೇಳಲೇಬೇಕು. “ಹೊಂದಾಣಿಕೆಯೇ ನಮ್ಮ ಸಂಸಾರದ ಗುಟ್ಟು. ಲಕ್ಷ್ಮೀ ಹೊಂದಾಣಿಕೆಯಿಂದ ಸಂಸಾರ ಮಾಡಿದ್ದರಿಂದಲೇ ಇಷ್ಟು ವರ್ಷ ನಮ್ಮ ಸಂಸಾರ ಉಳಿದಿದೆ’ ಎಂದು ವೆಂಕಟಸುಬ್ಬಯ್ಯನವರು ಅತ್ಯಂತ ಪ್ರಾಮಾಣಿಕವಾಗಿ, ಪತ್ನಿಯೆಡೆಗೆ ಪ್ರೀತಿಯಿಂದ ನೋಡುತ್ತ ಹೇಳಿದ್ದರು. ಹೌದಲ್ಲವೇ? ಪ್ರೀತಿಯಿದ್ದೆಡೆ, ವ್ಯಕ್ತಿ ಸುಸಂಸ್ಕೃತನಿದ್ದಾಗ ಹೊಂದಾಣಿಕೆ ಮಾಡಿಕೊಳ್ಳುವುದೆಂದರೆ ಅದು ಆತ್ಮಗೌರವಕ್ಕೆ ಚ್ಯುತಿ ತರುವಂಥದ್ದೇನೂ ಅಲ್ಲ.
ನಮ್ಮ ಅಪ್ಪ-ಅಮ್ಮಂದಿರನ್ನೇ ನೆನಪಿಸಿಕೊಂಡರೂ ಸಾಕು, ಗಂಡ-ಹೆಂಡತಿಯ ಎಷ್ಟೆಲ್ಲ ಅಪಸವ್ಯಗಳ ಮಧ್ಯವೂ ಚೆಂದದ್ದೊಂದು ಸಂಸಾರವನ್ನು ಹೇಗೆ ನೇಯ್ದಿದ್ದರು ಎನ್ನುವುದು ಅರಿವಾಗುತ್ತದೆ. ವಿವಾಹವೆಂದರೇ ಹೀಗೆ. ತಾಳ್ಮೆಯಿಂದ ಜತೆಯಾಗಿ ಸಾಗುತ್ತ, ಕೊರತೆಗಳ ಬಗೆಗೆ ಯೋಚಿಸದೆ ಬಂಧವನ್ನು ಬಿಗಿಯಾಗಿಟ್ಟುಕೊಳ್ಳಬೇಕಾಗುತ್ತದೆ.
ಅಂದ ಹಾಗೆ, ಇಂದು “ವಿಶ್ವ ವಿವಾಹ ದಿನ’ವಂತೆ. ಪ್ರತಿ ವರ್ಷ ಫೆಬ್ರವರಿ ಎರಡನೇ ಭಾನುವಾರದಂದು ವಿಶ್ವ ವಿವಾಹ ದಿನವನ್ನು ಆಚರಿಸಲಾಗುತ್ತದೆ. “ವಿವಾಹ ದಿನ’ವೆಂದಾಕ್ಷಣ ನಲ್ವತ್ತು-ಐವತ್ತು ವರ್ಷಗಳ ಕಾಲ ಒಟ್ಟಿಗೆ ಬದುಕುವ ಚೋದ್ಯವೇ ನೆನಪಿನಲ್ಲಿ ಮೂಡುತ್ತದೆ. ವಿವಾಹ ದಿನದ ಆಶಯವೂ ಇದೇ ಆಗಿದೆ. ದೀರ್ಘಕಾಲದ ಪಯಣದಲ್ಲಿ ಪರಸ್ಪರರ ಸಂಬಂಧವನ್ನು ಆಳವಾಗಿಸಿಕೊಂಡು, ಬದ್ಧತೆ, ನಂಬಿಕೆಯಿಂದ ಜತೆಯಾಗಿ ಸಾಗುವುದು. ಜೀವದ ಸಾಂಗತ್ಯಕ್ಕಾಗಿ ಬೆಸೆದುಕೊಳ್ಳುವ ಬಂಧನದಲ್ಲಿ ಪರಸ್ಪರ ನಿರೀಕ್ಷೆಗಳೂ ಸಾಮಾನ್ಯ. ಹಾಗೆಂದು ಅವು ಸಂಬಂಧವನ್ನು ಮೀರಲು ಬಿಡುವಂತಿಲ್ಲ.
ಅಷ್ಟಕ್ಕೂ ಮನಸ್ಸಿಗೆ ಹತ್ತಿರವಾದ, ಸಮಾನ ಗೌರವ ನೀಡುವ, “ತನ್ನಂತೆ ನೀನೂ’ ಎಂದು ಭಾವಿಸುವ ಜತೆಗಾರರಿದ್ದರೆ ಬದುಕು ಖಂಡಿತ ಹಗುರ, ಹಗುರ.

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!