* ಸಂಪ್ರೀತಿ ಹೆಬ್ರಿ
ಸುಮ್ಮನೆ ಯಾರ ಮುಂದಾದರೂ, ‘ಪ್ರೇಮಿಗಳ ದಿನ’ ಎಂದು ಹೇಳಿ ನೋಡಿ. ಅವರ ಅಭಿಪ್ರಾಯ ಏನೇ ಇರಲಿ, ಮುಖದಲ್ಲೊಂದು ಸಣ್ಣ, ತುಂಟ ನಗುವಂತೂ ಕಾಣುತ್ತದೆ. ಅದು ಪ್ರೀತಿಯ ಶಕ್ತಿ, ವ್ಯಾಪ್ತಿ.
ಪ್ರೀತಿಯೆಂಬುದು ಒಂದು ಭಾವವಲ್ಲ, ಒಂದು ಹಲವು ಭಾವನೆಗಳ ಸಮ್ಮಿಳನ. ಪ್ರೀತಿಯಲ್ಲಿ ಬಿದ್ದವರ ಮನಸ್ಸು ಏಕಕಾಲಕ್ಕೆ ಎಲ್ಲಾ ಭಾವನೆಗಳಲ್ಲಿ ಮುಳುಗೇಳುತ್ತಿರುತ್ತದೆ. ಅರಿವೇ ಇಲ್ಲದೇ ಮುಖದಲ್ಲಿ ನಗು ಮೂಡುತ್ತಿದ್ದರೆ, ಸುಖಾಸುಮ್ಮನೆ ಸಿಟ್ಟು ಬರುತ್ತದೆ. ಕಾರಣವೇ ತಿಳಿಯದೆ ಮನಸ್ಸು ದುಃಖದಲ್ಲಿ ಮುಳುಗಿ ಕಣ್ಣೀರು ತರಿಸುತ್ತದೆ. ಎಲ್ಲಾ ಮುಗಿದ ಮೇಲೆ ಕೊನೆಯಲ್ಲೊಂದು ಗೊಂದಲವಂತೂ ಉಳಿದುಕೊಳ್ಳುತ್ತದೆ. ಮನಸ್ಸು ತಪ್ಪು ಒಪ್ಪುಗಳ ಪರಾಮರ್ಶೆ ನಡೆಸುತ್ತದೆ.
ಏಕಕಾಲಕ್ಕೆ ಹಲವು ಭಾವನೆಗಳಿಂದ ತತ್ತರಿಸುವ ಮನಸ್ಸು, ಕಾರಣವಿಲ್ಲದೆ ಮಗುವಾಗುವ, ಸದಾ ಮಮಕಾರ ಬೇಡುವ ಸಣ್ಣ ನಿರ್ಲಕ್ಷ್ಯಕ್ಕೂ ಸಿಡಿದೇಳುವ ಭಾವವೇ ಪ್ರೀತಿ.
ಪ್ರೀತಿಸಿದವರು ಕಣ್ಣೆದುರು ಬಂದರೆ ಕಣ್ಣಲ್ಲಿ ಮಿಂಚು ಕಾಣಿಸಿಕೊಳ್ಳುತ್ತದೆ, ಎದೆಬಡಿತ ಜೋರಾಗುತ್ತದೆ ಎಂಬುದೆಲ್ಲ ಸಿನಿಮೀಯ ಎನಿಸಿದರೂ, ಪ್ರೀತಿಪಾತ್ರರ ನೆನಪಲ್ಲಿ ಮನಸ್ಸು ಸಂತಸಗೊಳ್ಳುವುದಂತೂ ಸತ್ಯ. ಅದೇ ಪ್ರೀತಿಸಿದವರು ದೂರಾದರೆ, ದೂರಾಗುವ ಲಕ್ಷಣಗಳು ಕಾಣಿಸಿದರೆ ಉಂಟಾಗುವ ನೋವನ್ನು ತಡೆದುಕೊಳ್ಳುವುದು ಸುಲಭವಲ್ಲ ಎಂಬುದನ್ನೂ ಒಪ್ಪಿಕೊಳ್ಳಲೇಬೇಕು. ಅದೇ ಪ್ರೀತಿಯ ಗತ್ತು, ಗಮ್ಮತ್ತು ಅಲ್ಲವೇ?
ಇಂದು ಪ್ರೇಮಿಗಳ ದಿನ. ಮತ್ತೊಮ್ಮೆ ಮನಸನ್ನು ಮಗುವಾಗಿಸಿ, ಆತ್ಮೀಯರನ್ನು ನಿಸ್ವಾರ್ಥದಿಂದ ಪ್ರೀತಿಸಿ ನೋಡಿ. ಮುನಿಸಿಕೊಂಡವರನ್ನು ಪಟ್ಟು ಹಿಡಿದು ಓಲೈಸಿ, ನೊಂದವರಿಗೊಂದಿಷ್ಟು ನಲಿವು ನೀಡಿ, ಬದುಕನ್ನು ಸುಂದರವಾಗಿಸಿಕೊಳ್ಳಿ.
ಹ್ಯಾಪಿ ವ್ಯಾಲೆಂಟೈನ್ಸ್ ಡೇ…