Saturday, December 10, 2022

ನಿನ್ನ ಬೆರಳುಗಳ ಸ್ಪರ್ಶದಲ್ಲಿ…

Follow Us

  • ಸನಿಹ

    response@134.209.153.225

ಪ್ರಿಯ ಸನಿ,
ಪತ್ರ ತಲುಪಿತು. ನಿನ್ನ ಬೆರಳುಗಳ ಸ್ಪರ್ಶದಲ್ಲಿ ಅರಳಿ ನಿಂತ ಅಕ್ಷರಗಳು ನನ್ನೊಳಗಿನ ಭಾವಲೋಕವನ್ನು ಇನ್ನಿಲ್ಲದಂತೆ ಕಲಕಿತು ಎಂದು ಹೇಳುವುದು ಎಷ್ಟು ಕ್ಲೀಷೆ ಅಲ್ವಾ ನಿ. ಈ ಪದಗಳಿಗೆ ಇರುವ ವ್ಯಾಪ್ತಿ ತುಂಬ ಕಡಿಮೆ. ಅದು ತನ್ನ ಮಿತಿಯನ್ನು ಬಿಟ್ಟು ಆಚೆ ಹೋಗುವುದಿಲ್ಲ. ಹೀಗಾಗಿಯೇ ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ ಎಂದು ನಾನೀಗ ಹೇಳಿದರೆ ನೀನು ಎಷ್ಟು ಅನ್ನುತ್ತಿ. ನಾನು ತುಂಬ ತುಂಬ ಎನ್ನುತ್ತೇನೆ. ತುಂಬ ಎಂದರೆ ಎಷ್ಟು ಎನ್ನುತ್ತಿ. ಮಾತು ಅಲ್ಲಿಗೆ ಮುಗಿಯುತ್ತದೆ. ಅದನ್ನು ಮುಂದುವರೆಸಲೇಬೇಕು ಎಂದರೆ ಸಾಗರಕ್ಕೋ ಆಕಾಶಕ್ಕೋ ಹೋಲಿಸಿಕೊಂಡು ಅದರಷ್ಟು ಎನ್ನಬೇಕಾಗುತ್ತದೆ. ಆ ಎರಡೂ ಪದಗಳಿಗೂ ಒಂದು ಗಡಿ ಇದೆ. ಅದರ ಆಚೆಗೆ ಅದು ಕೂಡ ಏನು ಅಲ್ಲದಿರಬಹುದು. ಸಾಗರಕ್ಕೆ ಮಿತಿಯೇ ಎನ್ನಬೇಡ. ಗಮನಿಸಿ ನೋಡು. ಎಲ್ಲಿ ನೆಲದ ಹಾಸು ಎದುರಾಗುತ್ತದೆಯೋ ಅಲ್ಲಿ ನೀರಿನ ಚಲನೆ ಮುಗಿಯುತ್ತದೆ. ಈ ಆಕಾಶ ಈ ಭೂಮಿಗಷ್ಟೆ ಸೀಮಿತವಾಗಿರಬಹುದು ಅಲ್ವಾ. ಬೇರೆ ಬೇರೆ ಗ್ರಹಗಳಿಗೆ ಬೇರೆ ಬೇರೆ ಆಗಸವಿರುತ್ತದೆ. ಆಗ ಒಂದಂತೂ ಸ್ಪಷ್ಟ ನಿ, ಎಲ್ಲ ಎಲ್ಲದಕ್ಕೂ ಅಂದರೆ ಭೌತಿಕದ ಎಲ್ಲ ವಸ್ತುಗಳಿಗೂ ಒಂದು ಮಿತಿಯಿದೆ. ಅಲ್ಲಿಗೆ ಅನಂತ ಎನ್ನುವುದು ಅಲೌಕಿಕಕ್ಕೆ ಅಂತಿಟ್ಟುಕೊಳ್ಳಬಹುದು. ಅದಕ್ಕೆ ಪ್ರೀತಿಯನ್ನ ಅಧ್ಯಾತ್ಮಕ್ಕೆ ಹೋಲಿಸಿಕೊಳ್ಳುವುದು. ಅಂದರೆ ಅದು ಸೃಷ್ಟಿ ಜಗತ್ತಿನೊಳಗಿನ ಅನೂಹ್ಯ ಹುಡುಕಾಟ ತನ್ನನ್ನು ತಾನು ಅರಿತುಕೊಳ್ಳುವ ತಾದಾತ್ಮ್ಯ. ತಾನು ಮತ್ತು ಅದು ಎನ್ನುವುದರ ನಡುವೆ ಇರಬಹುದಾದಂತಹ ತಂತುಗಳ ನಂಟು. ಅದಕ್ಕೆ ನಾನು ಹೇಳೋದು, ಯಾರಾದರೂ ಮತ್ತ್ಯಾರಿಗಾದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ ಅವರು ತನ್ನನ್ನು ತಾನು ಮತ್ತೊಬ್ಬರ ಮೂಲಕ ಕಂಡುಕೊಳ್ಳುವ ಯತ್ನದಲ್ಲಿದ್ದಾರೆ ಎಂದು ಅರ್ಥ. ಅಸಲಿ ಪ್ರೀತಿ ಎನ್ನುವ ಭಾವ ಅದು ರಾಗ ದ್ವೇಷ ಈ ಎಲ್ಲದರ ಹಾಗೆ ನಮ್ಮೊಳಗೆ ಇರುವಂತಹದ್ದು. ಬೇರೆಲ್ಲ ಗುಣಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಸನ್ನಿವೇಶಕ್ಕೆ ಅನುಗುಣವಾಗಿ ಪ್ರಕಟಗೊಳ್ಳುತ್ತವೆಯಾದರೂ ಹರೆಯದ ಪ್ರೀತಿಯನ್ನು ಉದ್ದೀಪನಗೊಳಿಸುವುದಕ್ಕೆ ಎದುರಿಗಿನ ಆಯಸ್ಕಾಂತೀಯ ಗುಣವಿರಬೇಕು. ಅದರೊಳಗೆ ತನ್ನದೇ ಭಾವಗಳು ಕಣ್ಣಿಗೆ ಕಾಣುವಂತಿರಬೇಕು. ಕೆಲವೊಮ್ಮೆ ನಾವು ನಮ್ಮ ಗುಣಗಳಿಗೆ ವಿರುದ್ಧದ ವ್ಯಕ್ತಿಗಳತ್ತ ಆಕರ್ಷಿತರಾಗಿ ಬಿಡುತ್ತೇವೆ. ಅದೂ ಕೂಡ ಒಂದು ಸೈಕಾಲಜಿಯೇ. ಹೊಸತನವೊಂದರ ಹುಡುಕಾಟದಲ್ಲಿ ನಾವಿರುತ್ತೇವೆ ಎಂದಷ್ಟೇ ಅರಿಯಬೇಕಾದ್ದು. ವಿಜ್ಞಾನದ ಪ್ರಕಾರ ಹೇಳುವುದಾದರೆ ಅಪೋಸಿಟ್ ಪೋಲ್ಸ್ ಆರ್ ಅಟ್ರಾಕ್ಟಿವ್. ತನ್ನೊಳಗೆ ಇಲ್ಲದ ಭಾವ ಒರತೆಯೊಂದರ ಕುರಿತು ಕುತೂಹಲಗೊಳ್ಳುವ ಒಂದು ಘಟ್ಟ ಅದು. ನಿಜ ಹೇಳಲಾ, ನಾವಿಬ್ಬರೂ ಒಂದೇ ರೀತಿ ಯೋಚಿಸುತ್ತೇವೆ. ಅದೇ ಕೆಲವೊಮ್ಮೆ ನಮ್ಮೊಳಗೆ ಕಂದಕವನ್ನು ತೆರೆದಿಡುತ್ತದೆ. ಹೋಗುತ್ತಿರುವ ಮಾರ್ಗ ಒಂದೇ ಎಂದು ಬಿಂಕದಿಂದ ಹೇಳಿಕೊಂಡರೂ ಹೋಗುವ ರೀತಿ ಬೇರೆಯದೇ ಆಗಿರುತ್ತದೆ‌. ಹಾಗಾದಾಗ ನೀನು ನನ್ನಂತೆ ನಡೆಯುತ್ತಿದ್ದಿ ಎಂದು ನಾನು ಅಂದುಕೊಳ್ಳುವ ಹೊತ್ತಿನಲ್ಲಿಯೇ ಅವಳೂ ನನ್ನ ರೀತಿಯೇ ನಡೆಯಲಿ ಎಂದು ಬಯಸುತ್ತಿರುತ್ತೇನೆ ಮತ್ತು ಅದು ವೈಸಾವರ್ಸಾ. ಆದರೆ ಅದು ನಾವು ಅಂದುಕೊಂಡಂತೆ ಇಲ್ಲ ಎಂದು ಗೊತ್ತಾದ ಕೂಡಲೇ ನನಗಿಂತ ಇವ ಬೇರೆಯೇ ಎಂದು ಅನ್ನಿಸತೊಡಗುತ್ತದೆ. ನಮ್ಮದೇ ಬಿಂಬ ಮಸುಕಾದಂತೆ ಅನ್ನಿಸಿ ಭಯಗೊಳ್ಳುತ್ತೇವೆ. ಅದೇ ಕಾರಣಕ್ಕೆ ಒಂದು ರೀತಿಯ ಗುಣಗಳಿರುವ ವ್ಯಕ್ತಿಗಳು ಹೆಚ್ಚು ಹೊತ್ತು ಜತೆಗಿರುವುದು ಸಾಧ್ಯವಾಗುವುದಿಲ್ಲ. ಇನ್ನು ಬೇರೆಯ ವ್ಯಕ್ತಿತ್ವವಾದರೆ ಅದನ್ನು ನಾವು ಓಪನ್ ಮೈಂಡಿನಲ್ಲಿ ಒಳ ಹೊಕ್ಕು ಅದು ಇರುವಂತೆ ಇರತೊಡಗುತ್ತೇವೆ. ಹಾಗಾಗಿ ಅಲ್ಲಿ ಅಷ್ಟರಮಟ್ಟಿನ ಸಂಘರ್ಷಕ್ಕೆ ಎಡೆ ಇರುವುದಿಲ್ಲ. ಒಂದು ತಿಳಿ ಸನಿ, ನಾನಿಲ್ಲಿ ಗಂಡು ಹೆಣ್ಣಿನ ನಡುವಣ ಹರೆಯದ ಪ್ರೀತಿಯನ್ನಷ್ಟೇ ಹೇಳುತ್ತಿದ್ದೇನೆ. ಬೇರೆಯದಕ್ಕೆ ಈ ಎಲ್ಲವೂ ಅನ್ವಯಿಸುವುದಿಲ್ಲವಾ ಎನ್ನುವ ಪ್ರಶ್ನೆ ಕೇಳಿ ವಿಷಯ ಡೈವರ್ಟ್ ಮಾಡಬೇಡ. ಕಾರಣ ನೀನು ನನಗೆ ತಲೆ ಹಾಳು ಮಾಡಿಕೊಂಡು ಪತ್ರ ಬರೆಯುವುದಾಗಲಿ ಅಥವಾ ನಾನಿಲ್ಲಿ ಒಂಟಿ ಉಯ್ಯಾಲೆಯಲಿ ಕೂತು ಯಾವುದೋ ದೇಶದ ನಡುರಾತ್ರಿಯಲಿ ಪತ್ರ ಬರೆಯವುದಾಗಲಿ ಬೇರೆ ಯಾವ ಪ್ರೀತಿಯೂ ಅಲ್ಲ ಎನ್ನುವುದು ಇಬ್ಬರಿಗೂ ಗೊತ್ತಿದೆ. ಹಾಗಾಗಿ ನಾನಲ್ಲಿ ನಮಗೆ ಸಂಬಂಧಿಸಿದಷ್ಟನ್ನೇ ಮಾತಾಡುತ್ತಿದ್ದೇನೆ. ಗೊತ್ತಿದೆ ನನಗೆ ಬೈಯ್ಯುತ್ತಿ. ಇವ ಇಲ್ಲದ್ದು ಹೇಳಿ ತಲೆ ಹಾಳು ಮಾಡುತ್ತಾನೆ ಎನ್ನುತ್ತಿ. ನಿನ್ನ ಗೊಣಗಾಟಗಳ ನಡುವೆಯೂ ನನ್ನ ಈ ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳುತ್ತಿ. ನಿನಗೆ ಮತ್ತೊಂದು ತಮಾಷೆ ವಿಷಯ ಗೊತ್ತಾ? ಯಾರಾದರೂ ನಿನ್ನನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅವರು ನಿನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನೆನಪಿಟ್ಟುಕೋ. ಯಾವುದೇ ಸಂಬಂಧಗಳಲ್ಲಿ ಕೇಳಿಸಿಕೊಳ್ಳುವುದು ಬಹಳ ಮುಖ್ಯ ನೀ. ಯಾವ ನೆಂಟಸ್ತಿಕೆಯಲ್ಲಿ ಈ ಗುಣಗಳು ಇರುವುದಿಲ್ಲವೋ ಅಲ್ಲಿ ಕೊಸರಾಟಗಳು ಹುಟ್ಟಿಕೊಳ್ಳುತ್ತವೆ. ಒಬ್ಬರಿಗೆ ಮತ್ತೊಬ್ಬರು ಕಿರಿಕಿರಿ ಎನ್ನಿಸಲು ಶುರುವಾಗುತ್ತದೆ. ನೀನು ಮೊನ್ನೆ ಪತ್ರ ಬರೆದಾಗಲೂ ಅದೇ ನಿನ್ನ ನನ್ನ ನಡುವಣ ವಯಸ್ಸಿನ ಅಂತರವನ್ನು ಪ್ರಸ್ತಾಪಿಸಿದ್ದೆ. ಅದರಿಂದ ಯಾಕೆ ನೀನು ಆಚೆ ಬರುತ್ತಿಲ್ಲವೆಂದು ನನಗೆ ಈಗಲೂ ತಿಳಿಯುತ್ತಿಲ್ಲ. ಒಮ್ಮೆ ಸುಮ್ಮನೆ ಕೂತು ಆಲೋಚಿಸಿ ನೋಡು, ಈ ಸೃಷ್ಟಿ ಶುರುವಾದಾಗ ಗಣಿತವಿತ್ತ ಅಮೀಬಾದಿಂದ ಶುರುವಾಗಿ ಪಾಚಿ ಹಸಿರು ಸಸ್ಯ ಹೀಗೆ ಏನೆಲ್ಲ ಆಗಿ ಅದೆಷ್ಟೋ ಜೀನ್ ಮ್ಯುಟೇಷನ್‍ಗಳು ಆಗಿ ಮನುಷ್ಯ ಹುಟ್ಟಿದ ಮೊದಲು ಹುಟ್ಟಿದ್ದು ಗಂಡೋ ಹೆಣ್ಣೋ ಯಾರಿಗೆ ಗೊತ್ತು, ಕಂಡು ಹಿಡಿದವರು ಯಾರು? ಅದೂ ಬಿಡು, ಈ ಸಮಾಜದ ಕಲ್ಪನೆಗಳಿಲ್ಲದೆ ಮದುವೆ ಅನ್ನುವ ವ್ಯವಸ್ಥೆಯೇ ಇಲ್ಲದಿದ್ದಾಗ ಈ ವಯಸ್ಸು ಲೆಕ್ಕ ಹಾಕುವ ಪದ್ಧತಿ ಇರಲಿಕ್ಕೆ ಸಾಧ್ಯವಿತ್ತಾ ಹೇಳು? ಅದು ಆ ನಂತರದಲ್ಲಿ ಬೆಳೆದು ಬಂದ ಪರಿಸ್ಥಿತಿ. ನಿನಗೆ ಅದಕ್ಕೆ ಕಾರಣಗಳು ಗೊತ್ತಿಲ್ಲ ಎಂದೇನೂ ಅಲ್ಲ. ಮನುಷ್ಯನ ಅಲೆಮಾರಿ ಜೀವನದಿಂದ ಸ್ಥಿರ ಬದುಕಿನ ಸ್ಥಿತಿ ರೂಢಿಸಿಕೊಂಡ ಮೇಲೆ ಹೆಂಗಸರ ಮಹತ್ವ ಕಡಿಮೆಯಾಗುತ್ತ ಸಾಗಿದ್ದು ನಿನಗೂ ಗೊತ್ತಲ್ಲ. ಹೊಟ್ಟೆಪಾಡಿಗೆ ಹಿಟ್ಟು ತಂದವನಿಗೆ ಮನ್ನಣೆ ಸಿಗತೊಡಗಿತು. ಅದೇ ಹಿಟ್ಟಿನ ಸಲುವಾಗಿ ಅವನನ್ನು ಓಲೈಸುವ ಪರಿಸ್ಥಿತಿಗಳು ನಿರ್ಮಾಣ ಆಗಿದ್ದು. ಯಜಮಾನ ಅಂತ ಅವನಿಗೊಂದು ಪಟ್ಟ ಕಟ್ಟಿ ಅಟ್ಟದಲ್ಲಿ ಕೂರಿಸಿದ್ದು. ಮತ್ತು ಅವನ ಸವಲತ್ತುಗಳು ಏರತೊಡಗಿದ್ದು ಅವನಿಗೆ ಮರ್ಯಾದೆ ಸಿಗಲು ಎನ್ನುವ ಕಾರಣಕ್ಕೆ ಕಡಿಮೆ ವಯಸ್ಸಿನ ಹೆಂಗಸರನ್ನ ಮದ್ವೆಯಾಗಬೇಕು ಎನ್ನುವ ನಿಯಮ ತಂದಿದ್ದು. ಮತ್ತು ಅವನಿಗೆ ವಯಸ್ಸಾದಾಗ ಕಾಲು ಒತ್ತಕ್ಕೆ ಜನ ಇರಲಿ ಅಂತ ಬಯಸಿದ್ದು ಈ ಯಾವುದು ನಿನ್ನ ತಲೆಗೆ ಹೋಗದೆ ಉಳಿದಿದ್ದು ಯಾಕೆ ಅಂತ ನನಗೆ ಗೊತ್ತಾಗಲಿಲ್ಲ. ಒಂದು ಮಾತು ಕೇಳು ಗೂಬೆ, ಹಾಗೆ ಬಾಯಿ ಮಾತಲ್ಲಿ ಹೇಳಿದ್ರೆ ಯಾರು ಅದನ್ನ ಪಾಲಿಸಲ್ಲ ಅಂತ ಸಂಪ್ರದಾಯ ಅಂತ ಪ್ರಚಾರ ಕೊಟ್ರು. ಭಯ ಹುಟ್ಟಿಸಿದ್ರು. ಆದರೆ ನಮ್ಮಗಳ ತಿಕ್ಕಲುತನ ಹೇಗಿದೆ ಎಂದರೆ ಹೆಣ್ಣು ಗಂಡು ಇಬ್ಬರೂ ಲ್ಯಾಪ್‍ಟಾಪಿನಲ್ಲಿ ಮುಖ ಹುದುಗಿಸಿ ಕಳೆದು ಹೋಗುವಾಗಲೂ ಈ ವಯಸ್ಸು ಅದೂ ಇದೂ ಅಂದುಕೊಳ್ಳುತ್ತ ಕೀಳಿರಿಮೆಯಲ್ಲಿ ಬೆಂದುಕೊಳ್ಳುತ್ತ ಆಸೆಗಳ ಅದುಮಿಟ್ಟುಕೊಳ್ಳುತ್ತ ಬದುಕುತ್ತೇವೆ. ಅಸಲಿ ಬದುಕು ಇರುವುದೇ ಸಾಯುವುದಕ್ಕೆ. ನಾವುಗಳು ಹುಟ್ಟಿ ಅಳುವ ಕ್ಷಣಕ್ಕೆ ಸಾವು ಲೆಕ್ಕದ ಪುಸ್ತಕ ಲೇಖನಿ ಹಿಡಿದಿರುತ್ತದೆ. ಹಾಗಿರುವಾಗ ಇರುವ ಕ್ಷಣಗಳಲ್ಲಿ ಬದುಕುವುದು ಕಲಿಯಬೇಕು ನೀ. ಈ ಎಲ್ಲ ರಗಳೆಗಳನ್ನು ಆಚೆಗೆ ಎತ್ತಿಟ್ಟಿರು. ಮತ್ತೆ ಅದೇ ಹಳೇ ಅಳುಮುಂಜಿಯ ಹಾಗೆ ವಿಪರೀತ ಕನ್ಸ್‍ವೇಟಿವ್ ಆಗಿ ಪತ್ರ ಬರೆದೆಯೋ ನಾನು ಇದನ್ನು ಇಲ್ಲಿಗೆ ನಿಲ್ಲಿಸಿ ನಿನಗೆ ಇಷ್ಟವಿಲ್ಲದ ವಿಡಿಯೋ ಕಾಲ್ ಮಾಡ್ತೀನಿ ನೋಡು. ಅಲ್ಲಿಗೆ ಈ ಭಾವುಕ ಭ್ರಮೆಗಳೆಲ್ಲ ಕಳಚಿ ಇವ ಇಷ್ಟೇ ಅನ್ನಿಸಿ ನೀನು ಮಾತು ನಿಲ್ಲಿಸಿಬಿಡುತ್ತಿ ಹ್ಹ ಹ್ಹ. ಇವತ್ತಿಗೆ ಇಷ್ಟು ಸಾಕೆನ್ನಿಸುತ್ತದೆ. ನಿದ್ದೆ ಕಣ್ಣು ಮುತ್ತುತ್ತಿದೆ. ಯಾವುದೇ ಭಾವಗಳು ಎಷ್ಟೇ ಸತಾಯಿಸಿದರೂ ದೇಹ ತನ್ನ ಕಾರ್ಯ ಚಟುವಟಿಕೆಗಳಿಂದ ವಿಮುಖವಾಗುವುದೇ ಇಲ್ಲ. ಹಾಗೆ ಅದು ನಮ್ಮ ಹಾಗೆ ಮುನಿಸಿಕೊಂಡು ಕೂತರೆ ನಿನ್ನದೇ ಆಸ್ಪತ್ರೆಯ ಹಸಿರು ಬೆಡ್ ಕಾಯುತ್ತಿರುತ್ತದೆ. ಆದರೆ ಒಂದು ತಿಳಿ ಸನಿ, ನಾನು ಈ ರಾತ್ರಿಯಲ್ಲಿ ಹೀಗೆಲ್ಲ ಹೇಳುತ್ತ ಕೂತಿದ್ದೇನೆಂದರೆ ನಾನಿದಕ್ಕೆ ಯಾವುದೇ ಲೇಖಕನಾಗಬೇಕಿಲ್ಲ. ಕವಿಯೂ ಆಗಬೇಕಿಲ್ಲ. ಎದೆಯ ಮಾತುಗಳನ್ನು ಅಕ್ಷರಕ್ಕೆ ಇಳಿಸುವುದಕ್ಕೆ ಯಾವುದೇ ಕೋಡುಗಳ ಅವಶ್ಯಕತೆ ಇರುವುದಿಲ್ಲ. ಎಲ್ಲದಕ್ಕಿಂತ ನನಗೆ ನೀನು ಮುಖ್ಯ ಎನ್ನುವುದಷ್ಟೇ ನೀನು ಅರಿಯಬೇಕಾದ ಸತ್ಯ. ಬಹುಶಃ ನೀನು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟಿಲ್ಲ. ನಿನ್ನ ಈ ತಾಕಲಾಟಗಳು ತಿಕ್ಕಲುತನಗಳು ನನಗಿಷ್ಟ. ಆದರೆ ನಿನ್ನ ಅತಿಯಾದ ಪ್ರೀತಿಯ ಬಗ್ಗೆ ನನಗೆ ಭಯವಿದೆ. ಅದು ನನ್ನ ಕಾಳಜಿಯೂ ಆಗಿದೆ. ಮತ್ತೆ ಬರೆಯುವೆ ಸನೀ.

ಪ್ರೀತಿಯಿಂದ
ಮನಸ್ವಿ

ಮತ್ತಷ್ಟು ಸುದ್ದಿಗಳು

vertical

Latest News

ತೃತೀಯ ಏಕದಿನ ಪಂದ್ಯ: ದ್ವಿಶತಕ ಬಾರಿಸಿದ ಈಶಾನ್ ಕಿಶನ್, ಭಾರತ ಬೃಹತ್ ಮೊತ್ತದತ್ತ

newsics.com ಢಾಕಾ:  ಬಾಂಗ್ಲಾ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಈಶಾನ್ ಕಿಶನ್ ದ್ವಿಶತಕ ಸಿಡಿಸಿದ್ದಾರೆ. ಇದೀಗ 210 ರನ್ ಬಾರಿಸಿ ಈಶಾನ್ ಕಿಶನ್...

ಡಿಸೆಂಬರ್ 15ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ

newsics.com ಬೆಂಗಳೂರು:  ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಇದರ ಮೊದಲ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯ ಭೇಟಿ ನಿಗದಿ ಪಡಿಸಲಾಗಿದೆ. ಡಿಸೆಂಬರ್ 15ರಂದು...

ಕಾರ್ಕಳ ಬಳಿ ಭೀಕರ ಅಪಘಾತ: ದಂಪತಿ, ಮಗು ಸಹಿತ ಮೂವರ ಸಾವು

newsics.com ಮಂಗಳೂರು:  ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ  ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಮೈನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು...
- Advertisement -
error: Content is protected !!