‘ಬಯಲಾಟದ ಕೋಲ್ಮಿಂಚು’ ಖ್ಯಾತಿಯ ವಿಶ್ವ ಪೂಜಾರಿ ಹೆನ್ನಾಬೈಲ್ ಪಾತ್ರದಲ್ಲಿ ಲೀನವಾಗುವ ಕಲಾವಿದ. ಅಂದು ದನ ಕಾಯುವಾಗ ಮಕ್ಕಳಾಟಕ್ಕೆಂದು ಕುಣಿದದ್ದು ಇಂದು ರಂಗದ ಮೇಲೆ ಅದ್ಭುತ ಕಲಾವಿದ. ಇವರು ನಿಜಕ್ಕೂ ಯಕ್ಷ ಮಾಣಿಕ್ಯ.
14

♦ ದಿವ್ಯಾ ಶ್ರೀಧರ್ ರಾವ್
newsics.com@gmail.com
‘ನೋಡಮ್ಮಾ… ಒಮ್ಮೆ ಕುರುಕ್ಷೇತ್ರದತ್ತ ಮುಖ ಮಾಡಿ ನೋಡು…’ ಎಂಬ ಮಾತಿನ ಮೂಲಕ ಅಭಿಮನ್ಯು ಪಾತ್ರದೊಳಗೆ ತನ್ನನ್ನು ತಾನು ಇಳಿಸಿಕೊಂಡು ನೆರೆದ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಬರುವಷ್ಟರಮಟ್ಟಿಗೆ ಪಾತ್ರದಲ್ಲಿ ಲೀನವಾಗುವ ಕಲಾವಿದ ‘ಬಯಲಾಟದ ಕೋಲ್ಮಿಂಚು’ ಖ್ಯಾತಿಯ ವಿಶ್ವ ಪೂಜಾರಿ ಹೆನ್ನಾಬೈಲ್ ಅವರು.
8 ನೇ ತರಗತಿಯಲ್ಲಿರುವಾಗ ತಮ್ಮ ಅಧ್ಯಾಪಕರ ಜತೆ ಜಗಳ ಮಾಡಿಕೊಂಡು, ಮುಂದಿನ ತರಗತಿಗೆ ತಾನು ಶಾಲೆಗೆ ಹೋದರೆ ಮುಖ್ಯೋಪಾಧ್ಯಾಯರು ಬೈಯುವರೆಂಬ ಭಯದಿಂದ ಮನೆ ಬಿಟ್ಟು ಹೋಟೆಲ್ ಸೇರುವ ಯೋಚನೆಯಲ್ಲಿರುವಾಗ ಕಮಲಶಿಲೆ ಮೇಳದ ಮ್ಯಾನೇಜರ್ ನಾರಾಯಣ ಶೆಟ್ಟಿಯವರು ಮೇಳಕ್ಕೆ ಸೇರಿಸಿಕೊಳ್ಳುವ ಭರವಸೆ ಕೊಟ್ಟು ಕರೆದುಕೊಂಡು ಹೋಗಿ ಇಂದಿಗೆ 16 ವರುಷಗಳಾಗಿದೆ.
ಬಯಲಾಟದ ಕೋಲ್ಮಿಂಚು…
ಯಾವುದೇ ಗುರುಗಳಿಂದ ಯಕ್ಷಗಾನ ಕಲಿಯದ ವಿಶ್ವ ಅವರು ನೇರವಾಗಿ ರಂಗಸ್ಥಳದಲ್ಲಿ ಬಾಲಗೋಪಾಲನಾಗಿ ಹೆಜ್ಜೆ ಹಾಕಿ, ಸೈ ಎನ್ನಿಸಿಕೊಂಡಿರುವುದರ ಜತೆಗೆ ಅವರ ಶೃದ್ಧೆ ಹಾಗೂ ಕಲಿಯುವ ಹುಮ್ಮಸ್ಸು ಅವರನ್ನಿಂದು ಬಯಲಾಟದ ಕೋಲ್ಮಿಂಚಾಗಿ ಪರಿವರ್ತಿಸಿದೆ.
ಅಭಿಮನ್ಯುವಿನ ಪಾತ್ರದಲ್ಲಿ ದೇಶ-ವಿದೇಶಗಳಲ್ಲಿ ಹೆಸರು ಮಾಡಿದ ಅವರು ಸಾಕಷ್ಟು ಸನ್ಮಾನ ಹಾಗೂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಯಕ್ಷರಂಗದಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವುದಕ್ಕೆ ಮುಖ್ಯವಾಗಿ ಗುರುವಿನ ಸ್ಥಾನದಲ್ಲಿ ಎಂ ಕೆ ಆಚಾರ್, ಶಶಿಕಾಂತ್ ಶೆಟ್ಟಿ ಕಾರ್ಕಳ, ಆರ್ಗೋಡು ಮೋಹನದಾಸ್ ಶಣೈ, ಉದಯ್ ಕುಮಾರ್ ತಾರೆಕೋಡ್ಲು ಅವರು ಕಾರಣರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.
ಅಂದು ಮಕ್ಕಳಾಟಕ್ಕೆ ಕುಣಿದದ್ದು ಇಂದು…
ದನ ಕಾಯುವಾಗ ಮಕ್ಕಳಾಟಕ್ಕೆಂದು ಕುಣಿಯುತ್ತಿದ್ದ ಹುಡುಗನೊಬ್ಬ ಇಂದು ಅಭಿಮನ್ಯು, ಬಬ್ರುವಾಹನ ಮುಂತಾದ ವೇಷಗಳಲ್ಲಿ ಜನಮಾನಸದಲ್ಲಿ ಮನೆಮಾಡಿರುವುದಲ್ಲದೆ, ಸುಮಾರು ಮೂರು ವರ್ಷದ ಮಕ್ಕಳಿಂದ ಹಿಡಿದು ಅರವತ್ತರ ವಯಸ್ಸಿನವರ ಅಭಿಮಾನ, ಪ್ರೀತಿ ಗಳಿಸಿರುವುದಕ್ಕೆ ಕಾರಣ ಅವರ ನಗು ಮುಖದ ಪ್ರೀತಿ ಹಾಗೂ ರಂಗದ ಮೇಲಿನ ಚುರುಕುತನ ಎಂಬುದು ಸತ್ಯ.
ಮೂಲತಃ ಉಡುಪಿಯ ಕುಂದಾಪುರದವರಾದ ಇವರು ತಮ್ಮ ಚುರುಕಾದ ಹೆಜ್ಜೆ, ಒಂದಿಷ್ಟು ಕುಣಿತ, ಕುಣಿತಕ್ಕಿಂತ ಜಾಸ್ತಿ ಮಾತುಗಳಿಂದ ಯಕ್ಷರಂಗದಲ್ಲಿ ಯಶಸ್ಸಿನ ಮೆಟ್ಟಿಲೇರುತ್ತಾ ಬಂದಿದ್ದರ ಹಿಂದೆ ಕಮಲಶಿಲೆ ದೇವಸ್ಥಾನದ ಮುಕ್ತೇಶ್ವರರಾದ ಸಚ್ಚಿದಾನಂದ ಚಾತ್ರರಿದ್ದಾರೆ ಎನ್ನುತ್ತಾರೆ.
‘ಯಕ್ಷ ಮಾಣಿಕ್ಯ’ಎಂಬ ಬಿರುದಿನ ಹಿಂದಿನ ಇವರ ಶ್ರಮದ ಪ್ರತೀಕವಾದ ಇವರ ಯಶಸ್ಸಿನ ಮೆಟ್ಟಿಲು ಇನ್ನಷ್ಟು ಮೇಲೇರಲಿ ಎಂಬ ಆಶಯ ನಮ್ಮದ್ದು.