Saturday, January 23, 2021

ನಾನೇ ‘ಬಯಲಾಟದ ಸುಧನ್ವ…’

‘ಬಯಲಾಟದ ಸುಧನ್ವ’ ಎಂದೇ ಪ್ರಸಿದ್ಧರಾಗಿರುವ ಕಲಾವಿದ ಕೋಟ ಸುರೇಶ್. ಅನುಕರಣೆಯ ಬದಲು ತಮ್ಮ ಸ್ವಂತಿಕೆಯನ್ನು ಬೆಳೆಸಿಕೊಂಡು ಮುಂದುವರೆಯುವಲ್ಲಿ, ಯಕ್ಷರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಕಲಾವಿದರಿವರು. ಅಮೃತೇಶ್ವರಿ ಮೇಳದ ಪ್ರಬಂಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಕೋಟ ಸುರೇಶ್.

  27  


♦ ದಿವ್ಯಾ ಶ್ರೀಧರ್ ರಾವ್

newsics.com@gmail.com


 ನಾ ನು ಮೂರು ವರ್ಷದ ಮಗುವಾಗಿದ್ದಾಗ ನನ್ನ ತಂದೆಯವರು ತೀರಿಕೊಂಡಿದ್ದರು. ಆಗ ನನ್ನ ಅಮ್ಮ ಕಷ್ಟಪಟ್ಟು ನಾಲ್ಕನೇ ತರಗತಿಯವರೆಗೆ ಓದಿಸಿದ್ದರು. ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಹತ್ತಿರದಿಂದ ಬಲ್ಲವರಾಗಿದ್ದ ನಮ್ಮೂರಿನ ಕಲಾವಿದ ಹಿರಿಯ ನಾಯ್ಕರು ನನ್ನನ್ನು ಮೇಳಕ್ಕೆ ಸೇರಿಸಿದ್ದರು. ಊಟವಿಲ್ಲದೆ ಹಸಿವಿನಿಂದಿರುತ್ತಿದ್ದ ನನಗೆ ಎರಡು ಹೊತ್ತಿನ ಊಟವಾದರೂ ಕೊಡಿಸುವ ಕಾರಣದಿಂದ ಹಿರಿಯ ನಾಯ್ಕರು ಹೆಜ್ಜೆ ಕಲಿಯದ ನನ್ನನ್ನು ಮೇಳ ಸೇರಿಸುವ ಧೈರ್ಯ ತೋರಿದ್ದನ್ನು ನಾನು ಇಂದಿಗೂ ನೆನಪಿಸಿಕೊಳ್ಳುತ್ತೇನೆ.
ಪರೀಕ್ಷೆಯಲ್ಲಿ ಪಾಸಾಗಿದ್ದೆ…
ಉಡುಪಿ ಜಿಲ್ಲೆ ಕುಂದಾಪುರದವನಾದ ನಾನು ಯಕ್ಷಗಾನವನ್ನು ನೋಡುತ್ತಾ ಬೆಳೆದವನು. ಮೇಳಕ್ಕೆ ಸೇರಿದ ನಾನು ಕೆಲವೇ ಕೆಲವು ವರ್ಷಗಳಲ್ಲಿ ಹೆಜ್ಜೆಯ ಜತೆ ಮಾತನ್ನೂ ಕಲಿತಿದ್ದೆ. ಆದರೆ ಈಗಿನಂತೆ ಅವಕಾಶವಿರದ ಕಾರಣ ನಾನು ಯಕ್ಷರಂಗದಲ್ಲಿ ನಿಧಾನಗತಿಯಲ್ಲಿ ಬೆಳೆದವನು. ಯಕ್ಷರಂಗಕ್ಕೆ ಸೇರಿದ ಸುಮಾರು 15 ವರ್ಷಗಳ ಬಳಿಕ ನನಗೆ ಪುರುಷ ವೇಷಧಾರಿಯಾಗಿ ವರ್ಗಾವಣೆಯಾಗುವಾಗ, ಪರೀಕ್ಷಾರ್ಥವಾಗಿ ನಾನು ಸುಧನ್ವನ ಪಾತ್ರ ಮಾಡಬೇಕಾಗಿ ಬಂದಿತ್ತು. ಸುಧನ್ವನಾಗಿ ಸೈ ಎನ್ನಿಸಿಕೊಂಡರೆ ಯಾವುದೇ ಪುರುಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದಾದ್ದರಿಂದ ನನಗೆ ಆ ಪಾತ್ರ ಮಾಡುವುದು ಅನಿವಾರ್ಯವಾಗಿತ್ತು. ಅಂದು ನಾನು ಸುಧನ್ವನಾಗಿ ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ನನ್ನ ಮುಂದಿಟ್ಟ ಪರೀಕ್ಷೆಯಲ್ಲಿ ಪಾಸಾಗಿದ್ದೆ.
ಸುಧನ್ವನಾಗಿ ಖ್ಯಾತಿ…
ಇದಾದ ಮೇಲೆ ನಾನು ಸುಮಾರು ಪುರುಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಅಭಿಮಾನಿಗಳು ಇಂದಿಗೂ ನನ್ನನ್ನು ಗುರುತಿಸುವುದು ಸುಧನ್ವನಾಗಿಯೇ. ಸುಧನ್ವನ ಪಾತ್ರದಲ್ಲಿ ಭಾವರಸ, ಭಕ್ತಿರಸ, ಶೃಂಗಾರರಸಗಳೆಲ್ಲವೂ ಇರುವ ಕಾರಣ ಆ ಪಾತ್ರ ನನ್ನನ್ನು ಹೆಚ್ಚಾಗಿ ಆಕರ್ಷಿಸಿತು. ನನ್ನಿಂದ ಸುಧನ್ವ ಪಾತ್ರವನ್ನು ಮಾಡಿಸುವ ಸಲುವಾಗಿ ಅದೆಷ್ಟೋ ಸಲ ಸುಧನ್ವಾರ್ಜುನ ಕಾಳಗವನ್ನೆ ಮಾಡಿಸುವಂತೆ ಮೇಳದ ಮುಖ್ಯಸ್ಥರು ಹಾಗೂ ಸೇವೆಯಾಟ ಮಾಡುವ ಭಕ್ತಾದಿಗಳು ಕೇಳಿಕೊಳ್ಳುತ್ತಿದ್ದರು.ಅವರೆಲ್ಲರ ಪ್ರೀತಿಯಿಂದ ನಾನಿಂದು ಈ ಸ್ಥಾನವನ್ನು ತಲುಪುವಂತಾಗಿದೆ.
ನಮ್ಮ ವೇಷ ಮುಗಿದ ಬಳಿಕವೂ ನಾವು ಕುಳಿತು ಯಕ್ಷಗಾನವನ್ನು ನೋಡಬೇಕು. ಆಗ ಮಾತ್ರ ನಾವು ಯಕ್ಷರಂಗದಲ್ಲಿ ಬೆಳೆಯುವುದಕ್ಕೆ ಸಾಧ್ಯ. ನಾನು ಅಂದಿನಿಂದ ಇಂದಿನವರೆಗೂ ನನ್ನ ವೇಷವನ್ನು ಮುಗಿಸಿದ ಮೇಲೆ ಬೆಳಗಿನ ತನಕ ಯಕ್ಷಗಾನವನ್ನು ನೋಡುತ್ತೇನೆ. ಅದರಿಂದಾಗಿ ನನ್ನ ಗುರುವಿಲ್ಲದ ಯಕ್ಷಪಯಣ ಯಶಸ್ವಿಯಾಗಿ ಸಾಗುತ್ತಿದೆ.
ಮೀರಿದ ಚೌಕಟ್ಟು…
ನಾನು 44 ವರ್ಷಗಳ ತಿರುಗಾಟ ಮುಗಿಸಿದ್ದೇನೆ. ನಾನು ಯಕ್ಷಗಾನಕ್ಕೆ ಸೇರಿಕೊಂಡ ಹೊಸತರಲ್ಲಿ ಅಂದರೆ ಸುಮಾರು 44 ವರ್ಷಗಳ ಹಿಂದೆ ಯಕ್ಷಗಾನವೆಂಬುದು ತನ್ನದೇ ಚೌಕಟ್ಟಿನಲ್ಲಿ ನಡೆಯುತ್ತಿತ್ತು. ಆದರೆ ಇಂದು ಹಾಗಿಲ್ಲ. ತನ್ನ ಚೌಕಟ್ಟನ್ನು ಮೀರಿ ಬೆಳೆದಿದೆ. ಪೀಳಿಗೆಗೆ ಮೂಲ ಯಕ್ಷಗಾನದ ಚೌಕಟ್ಟು ಹಾಗೂ ಮಿತಿಯ ಪರಿಧಿಯ ಪರಿಚಯವೂ ಇಲ್ಲದಿರುವುದು ನೋವಿನ ವಿಷಯ. ಇಂದು ನಡೆಯುತ್ತಿರುವ ಪ್ರದರ್ಶನವನ್ನು ನೋಡಿದಾಗ ಸಂಕಟವಾಗುತ್ತದೆ. ಇಂದಿನ ಯುವ ಪೀಳಿಗೆಯ ಕಲಾವಿದರು ಈ ಬಗ್ಗೆ ಸ್ವಲ್ಪ ನಿಗಾ ವಹಿಸಿದರೆ ಮತ್ತೆ ಯಕ್ಷಚೌಕಟ್ಟಿನತ್ತ ಮುಖ ಮಾಡಿ ನಿಲ್ಲುವುದು ದೊಡ್ಡ ವಿಷಯವಲ್ಲ.
ಕೋಟ ಸುರೇಶ್ 9880720810

ಮತ್ತಷ್ಟು ಸುದ್ದಿಗಳು

Latest News

ಲಂಡನ್ ನಲ್ಲಿ ಆಶ್ರಯ ಕೋರಿ ವಿಜಯ ಮಲ್ಯ ಅರ್ಜಿ

Newsics.com ಲಂಡನ್: ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿರುವ ದಿವಾಳಿ ಉದ್ಯಮಿ ವಿಜಯ ಮಲ್ಯ ಆಶ್ರಯ ಕೋರಿ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಲ್ಯ ಪರ ವಕೀಲ ಫಿಲಿಪ್...

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು, ಇಂದು ಎನ್ ಡಿ ಪಿಎಸ್  ನ್ಯಾಯಾಲಯದಲ್ಲಿ...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...
- Advertisement -
error: Content is protected !!