ಸರಳ ವ್ಯಕ್ತಿತ್ವದ ಕಾಸರಗೋಡಿನ ಕಲಾವಿದ ರವಿಶಂಕರ್ ವಳಕ್ಕುಂಜ ಅವರು ಹಾಸ್ಯದ ಮೂಲಕ ಜನರನ್ನು ನಗಿಸುವುದರ ಜತೆಗೆ, ಹಲವು ವಿಚಾರಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ಹೇಳಬಲ್ಲವರೆಂಬುದು ಹೆಮ್ಮೆಯ ವಿಷಯ.
6

♦ ದಿವ್ಯಾ ಶ್ರೀಧರ್ ರಾವ್
newsics.com@gmail.com
ಕಾ ಸರಗೋಡಿನ ಕಲಾವಿದ ರವಿಶಂಕರ್ ವಳಕ್ಕುಂಜ, ‘ಯಕ್ಷದೀಪ’ ಪತ್ರಿಕೆಯ ಗೌರವ ಸಂಪಾದಕರು. ಯಕ್ಷಗಾನ ಕ್ಷೇತ್ರವಲ್ಲದೆ ಸಾಹಿತ್ಯ ಲೋಕದಲ್ಲಿಯೂ ತೊಡಗಿಸಿಕೊಂಡಿರುವ, ಯಕ್ಷಗಾನದ ಹಾಸ್ಯದ ಮೂಲಕ ನೀತಿ ಹೇಳುವ ಕಲಾವಿದರು ರವಿಶಂಕರ್ ವಳಕ್ಕುಂಜ.
ತಮ್ಮ ಅಣ್ಣ ಹಾಗೂ ಸೋದರ ಮಾವನಿಂದಲೆ ಯಕ್ಷಗಾನ ಕಲಿತ ಇವರು, ತಮ್ಮ 19ನೇ ವಯಸ್ಸಿನಲ್ಲೆ ವೇಷ ಕಟ್ಟಿ, ತೆಂಕುತಿಟ್ಟಿನ ಅಗ್ರಮಾನ್ಯ ಹಾಸ್ಯ ಕಲಾವಿದಲ್ಲೊಬ್ಬರಾಗಿ ಬೆಳೆದವರು. ಜತೆಗೆ ತಾಳಮದ್ದಳೆಗಳಲ್ಲಿ ತೊಡಗಿಸಿಕೊಂಡು, ತಮ್ಮ ಅದ್ಭುತ ಜ್ಞಾನ ಹಾಗೂ ತೂಕದ ಮಾತುಗಳಿಂದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸ್ವತಃ ಕಲಾವಿದರಾಗಿ ಇನ್ನೊಬ್ಬ ಕಲಾವಿದರ ಬಗ್ಗೆ ಮೆಚ್ಚಿ ಬರೆಯುವ ವಿಶಾಲ ಹೃದಯವಿರುವ ಇವರು, ನಲವತ್ತಕ್ಕೂ ಹೆಚ್ಚು ಕಲಾವಿದರ ಅಂತರಂಗವನ್ನು ‘ಅಂತರಂಗದ ಧ್ವನಿ’ ಅಂಕಣದಲ್ಲಿ ಅನಾವರಣಗೊಳಿಸಿದ್ದಾರೆ.
ಸರಳ ವ್ಯಕ್ತಿತ್ವದ ಈ ಕಲಾವಿದರು ಹಾಸ್ಯದ ಮೂಲಕ ಜನರನ್ನು ನಗಿಸುವುದರ ಜತೆಗೆ, ಅನೇಕ ವಿಚಾರಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ಹೇಳಬಲ್ಲವರೆಂಬುದು ಹೆಮ್ಮೆಯ ವಿಷಯ.
ಮೂಲತಃ ಕಾಸರಗೋಡಿನವರಾದ ಇವರಿಗೆ ಯಕ್ಷಗಾನವೆಂಬುದು ತಮ್ಮ ಹಿರಿಯರ ಬಳುವಳಿ. ಬಳುವಳಿಯಾಗಿ ರಕ್ತದಿಂದಲೇ ಬಂದ ಯಕ್ಷಗಾನದಲ್ಲಿ ಇವರದ್ದು 22 ವರ್ಷಗಳ ಅನುಭವವಿದ್ದರೂ, ವಿನಯದಿಂದ ಮಾತನಾಡುವ ಮೂಲಕ ಹಿರಿ- ಕಿರಿಯರನ್ನು ಗೌರವದಿಂದ ಕಾಣುವ ಇವರ ಗುಣ ಜನರನ್ನು ಆಕರ್ಷಿಸದೇ ಇರದು. ಇವರು ಮೊದಲು ವೇಷ ಕಟ್ಟಿದ ಮೇಳವಾದ ಕಟೀಲು ಮೇಳದಲ್ಲಿಯೇ ತಮ್ಮ ಯಕ್ಷ ಜೀವನದ 22 ವರ್ಷಗಳನ್ನು ಕಳೆದಿರುವುದು ಶ್ಲಾಘನೀಯ.
ರವಿಶಂಕರ್ ವಳಕ್ಕುಂಜ ಅವರು ‘ಯಕ್ಷಗಾನ ಪ್ರಸಂಗ ದೃಶ್ಯಾವಳಿ’, ‘ಯಕ್ಷಗಾನ ವಾಚಿಕ ಸಮಾರಾಧನೆ’, ‘ಯಕ್ಷಪಾತ್ರ ದೀಪಿಕಾ’ ಪುಸ್ತಕಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.