ಮುಂಬೈ : ಬಾಲಿವುಡ್ ನಟ ಶಾರೂಖ್ ಖಾನ್ ಆ್ಯಸಿಡ್ ದಾಳಿ ಸಂತ್ರಸ್ತೆಯರೊಂದಿಗೆ ಒಂದಷ್ಟು ಹೊತ್ತು ಖುಷಿಯಿಂದ ಕಾಲ ಕಳೆದಿದ್ದಾರೆ. ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ ಶಸ್ತ್ರಚಿಕಿತ್ಸೆಗೆ ನೆರವಾಗುವ ಸಲುವಾಗಿ `ಟುಗೆದರ್ ಟ್ರಾನ್ಸ್‍ಫಾಮ್ರ್ಡ್’ ಕಾರ್ಯಕ್ರಮದ ಅಂಗವಾಗಿ ಬಾಲಿವುಡ್ ಬಾದ್‍ಶಾ ಇವರೆಲ್ಲರನ್ನು ಭೇಟಿಯಾದರು. ಒಂದಷ್ಟು ಹೊತ್ತು ಸಂತ್ರಸ್ತೆಯರ ಕಷ್ಟ ಸುಖಗಳನ್ನು ಆಲಿಸಿದ ಶಾರೂಖ್ ಅವರೆಲ್ಲರಿಗೂ ಧೈರ್ಯ ತುಂಬಿದರು.
ಮೀರ್ ಫೌಂಡೇಷನ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಂತ್ರಸ್ತೆಯರನ್ನು ಭೇಟಿಯಾದ ಬಳಿಕ ಇನ್‍ಸ್ಟ್ರಾಗ್ರಾಂನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಶಾರೂಖ್, ಈ ಮಹತ್ಕಾರ್ಯದಲ್ಲಿ ಕೈಜೋಡಿಸಿರುವ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ. ಜೊತೆಗೆ,
ಶಸ್ತ್ರಚಿಕಿತ್ಸೆಗೊಳಗಾದ 120 ಮಹಿಳೆಯರ ಆರೋಗ್ಯವೃದ್ಧಿಗೂ ಶಾರೂಖ್ ಶುಭಕೋರಿದ್ದಾರೆ.
ಮೀರ್ ಫೌಂಡೇಶನ್ 2017ರಲ್ಲಿ ಶಾರೂಕ್ ಹುಟ್ಟುಹಾಕಿದ್ದ ಎನ್‍ಜಿಓ. ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆಯರ ಸಬಲೀಕರಣಕ್ಕೆ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
