ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ಜೀವನಗಾಥೆಯನ್ನಾಧರಿಸಿದ ಚಿತ್ರ ಮತ್ತು ವೆಬ್ ಸರಣಿಗೆ ತಡೆಯಾಜ್ಞೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.
ಜಯಲಲಿತಾ ಕುರಿತು ನಿರ್ದೇಶಕ ಗೌತಮ್ ವಾಸುದೇವ ಮೆನನ್ ಅವರು ತಯಾರಿಸಿರುವ ‘ಕ್ವೀನ್’ ಎಂಬ ವೆಬ್ ಸೀರೀಸ್ ಹಾಗೂ ನಿರ್ದೇಶಕ ಎ.ಎಲ್. ವಿಜಯ್ ನಿರ್ದೇಶಿಸುತ್ತಿರುವ ‘ಥಲೈವಿ’ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ಜಯಲಲಿತಾ ಅವರ ಸಂಬಂಧಿ ಜೆ.ದೀಪಾ ಅರ್ಜಿ ಸಲ್ಲಿಸಿದ್ದರು. ಚಿತ್ರದ ಕಥಾ ಹಂದರ ಜಯಲಲಿತಾ ಅವರ ಖಾಸಗಿತನಕ್ಕೆ ಧಕ್ಕೆ ತರುವ ಸಾಧ್ಯತೆಯಿರುವುದರಿಂದ ಅದನ್ನು ತಮ್ಮ ಅನುಮತಿ ಪಡೆಯದೆ ಬಿಡುಗಡೆಗೊಳಿಸದಂತೆ ನಿರ್ದೇಶಿಸಬೇಕು ಎಂದು ಅವರು ಕೋರಿದ್ದರು. ಇದನ್ನು ನ್ಯಾಯಾಲಯ ನಿರಾಕರಿಸಿದೆ.