`ನಂಗೆ ನೀನು ಯಾರೆಂದು ಗೊತ್ತಿಲ್ಲ’
ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್, ನಟ ಸೈಫ್ ಅಲಿ ಖಾನ್‍ರನ್ನು ಮದುವೆಯಾಗಿ ಈಗ ಅಪ್ಪಟ ಗೃಹಿಣಿಯಾಗಿದ್ದಾರೆ. ತಾಯಿಯಾಗಿ ಮಗನೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಜೊತೆಗೆ, ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಈ ಬಾಲಿವುಡ್ ಬೆಡಗಿ. ಇಂತಹ ಕರೀನಾ ಸಂದರ್ಶನವೊಂದರಲ್ಲಿ ತಮ್ಮ ಪ್ರೀತಿಯ ದಿನಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ, ಸೈಫ್ ಅವರ ಪ್ರೇಮ ನಿವೇದನೆಯನ್ನು ಎರಡು ಬಾರಿ ಕರೀನಾ ತಿರಸ್ಕರಿಸಿದ ಕತೆಯನ್ನೂ ಬಿಚ್ಚಿಟ್ಟಿದ್ದಾರೆ.
ಕರೀನಾ ಹೇಳಿದ್ದೇನು…?
ಅದು ತಶನ್ ಚಿತ್ರದ ಶೂಟಿಂಗ್ ಸಮಯ. ಗ್ರೀಸ್‍ನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಆಗ ಸೈಫ್ ಮೊದಲ ಬಾರಿಗೆ ನಮ್ಮಿಬ್ಬರ ಮದುವೆ ಪ್ರಸ್ತಾಪ ಮಾಡಿದ್ದರು. ಇದಾದ ಬಳಿಕ ಲಡಾಕ್‍ನಲ್ಲೂ ಸೈಫ್ ಇದೇ ವಿಷಯ ಮುಂದಿಟ್ಟಿದ್ದರು. ಆಗ ನಾನು `ನನಗೆ ಗೊತ್ತಿಲ್ಲ. ನನಗೆ ನಿಮ್ಮ ಬಗ್ಗೆ ಏನೂ ತಿಳಿದಿಲ್ಲ’ ಎಂದು ಹೇಳಿದ್ದೆ. ಆದರೆ, `ಗೊತ್ತಿಲ’್ಲ ಎಂದರೆ ನಿಜವಾಗಿಯೂ ಗೊತ್ತಿಲ್ಲ ಎಂದಲ್ಲ. `ನಾನು ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಾಗಿದೆ’ ಎಂಬರ್ಥದಲ್ಲಿ ನಾನು ಅಂದು ಸೈಫ್ ಅವರಿಗೆ ಉತ್ತರ ಕೊಟ್ಟಿದ್ದೆ’ ಎಂದು ಕರೀನಾ ಹೇಳಿಕೊಂಡಿದ್ದಾರೆ.
ಹೀಗೇ ಮಾತು ಮುಂದುವರಿಸಿದ ಕರೀನಾ, `ನನ್ನ ಪ್ರಕಾರ ನಾನು ನನ್ನ ಬದುಕಿನ ಬಗ್ಗೆ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೇನೆ’ ಎಂದು ಸೈಫ್ ಅಲಿ ಖಾನ್ ಅವರನ್ನು ವರಿಸಿರುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಜೊತೆಗೆ ಖುಷಿಯನ್ನೂ ವ್ಯಕ್ತಪಡಿಸಿದ್ದಾರೆ ಈ ಬಾಲಿವುಡ್ ಬ್ಯೂಟಿ. ಮದುವೆ ಬಳಿಕವೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಗ್ಗೆ ಮಾತನಾಡಿದ ಕರೀನಾ, `ನನಗೆ ನನ್ನ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನದ ಬಗ್ಗೆ ಸ್ಪಷ್ಟತೆ ಇತ್ತು. ಮದುವೆಯ ಬಳಿಕ ನಾನು ನನ್ನ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದು ಸೈಫ್‍ಗೆ ಅಂದೇ ಹೇಳಿದ್ದೆ, ಸೈಫ್ ಕೂಡಾ `ನೀನು ಖಂಡಿತಾ ಕೆಲಸ ಮಾಡಬೇಕು’ ಎಂದು ಹುರಿದುಂಬಿಸಿದ್ದರು ಎಂದು ಗಂಡನ ಬಗೆಗೆ ಮೆಚ್ಚುಗೆಯ ಮಾತನಾಡಿದ್ದಾರೆ ಕರೀನಾ.