ಬೆಂಗಳೂರು: ತೀವ್ರ ಹೃದಯಾಘಾತ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ (39) ಭಾನುವಾರ ಕೊನೆಯುಸಿರೆಳೆದರು.
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ನಟನೆಯ ಮೂಲಕ ಗುರ್ತಿಸಿಕೊಂಡಿರುವ ನಟ ಚಿರಂಜೀವಿ ಸರ್ಜಾ ಅವರಿಗೆ ತೀವ್ರತರವಾದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನು ಕೂಡಲೇ ಕುಟುಂಬಸ್ಥರು ಹತ್ತಿರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಚಿರಂಜೀವಿ ಸರ್ಜಾಗೆ ನಿನ್ನೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ವಯಸ್ಸು ಚಿಕ್ಕದಾದ್ದರಿಂದ ಇದು ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂದು ಕುಟುಂಬದವರು ಭಾವಿಸಿರಲಿಲ್ಲ. ಆದರೆ, ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಆಗಲೇ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ.
ಕೊರೋನಾ ಸಮಯದ ನಿಯಮಗಳಂತೆ ಅವರ ಸ್ವಾಬ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಿಸಲಾಗಿದೆ. ನಿನ್ನೆಯ ಅನಾರೋಗ್ಯಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ. ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಬಾಲ್ಡ್ವಿನ್ ಬಾಲಕರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ಇವರು ಸುಮಾರು 4 ವರ್ಷಗಳಿಂದ ಅವರ ಚಿಕ್ಕಪ್ಪ ಅರ್ಜುನ್ ಸರ್ಜಾರವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇವರು 2009 ರಲ್ಲಿ ತೆರೆಗೆ ಬಂದ ‘ವಾಯುಪುತ್ರ’ ಎಂಬ ಕನ್ನಡ ಚಲನಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ್ದರು.