ನಾನು ಯಾರೊಂದಿಗೆ ಡೇಟಿಂಗ್ ಮಾಡಬಾರದು, ಯಾರೊಂದಿಗೆ ಇರಬೇಕು ಮತ್ತು ಯಾರೊಂದಿಗೆ ಇರಬಾರದು ಎಂಬುದರ ಬಗ್ಗೆ ನೀವು ತುಂಬಾ ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ’ ಎಂದು ನಟಿ ದೀಪಿಕಾ ದಾಸ್ ಹೇಳಿದ್ದಾರೆ.
• ಅನಿತಾ ಬನಾರಿ
newsics.com@gmail.comಸೆಲೆಬ್ರಿಟಿಗಳು ಅಂದಾಕ್ಷಣ ಅವರ ಜೀವನದ ಬಗ್ಗೆ ಕಮೆಂಟ್ ಮಾಡುವ, ಅವರ ಬದುಕಿನ ಪ್ರತಿ ವಿಷಯದಲ್ಲೂ ತಮಗೂ ಹಕ್ಕು ಇದೆ ಅಂತ ಜನರು ವರ್ತಿಸೋದು ಸಾಮಾನ್ಯ. ಬಣ್ಣದ ಲೋಕದಲ್ಲಿ ಯಶಸ್ಸು ಅಪ್ಪಿಕೊಂಡಾಗ ಅದರೊಂದಿಗೆ ಅಭಿಮಾನಿಗಳ ಸೋಗನ್ನು ಹಾಕಿಕೊಂಡಿರುವ ಹಾಗೂ ಸಾರ್ವಜನಿಕ ವಲಯದಿಂದ ಉಂಟಾಗುವ ಅನೇಕ ಚಾಲೆಂಜ್ಗಳನ್ನು ನಿಭಾಯಿಸೋದು ಕರಗತವಾಗಿರಬೇಕಾದದ್ದು ಅನಿವಾರ್ಯ. ಕನ್ನಡದ ನಟಿ ದೀಪಿಕಾ ದಾಸ್ ಈಗ ಇಂತಹ ಒಂದು ನಡೆಯಿಂದ ಸುದ್ದಿಯಲ್ಲಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 7 ಫೈನಲಿಸ್ಟ್ ಮತ್ತು ಕಿರುತೆರೆಯ ಜನಪ್ರಿಯ ನಟಿಯಾಗಿರುವ ದೀಪಿಕಾ ದಾಸ್ ತಮ್ಮ ಇನ್ಸ್ಟಾಗ್ರಾಂ ಹ್ಯಾಂಡಲ್ನಲ್ಲಿ ಹಂಚಿದ ಸಂದೇಶವೊಂದು ತನ್ನ ಜೀವನದ ಕರ್ತೃ ತಾನೇ ಎಂಬ ದಿಟ್ಟ ಸಂದೇಶ ರವಾನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ತನ್ನ ಅಭಿಮಾನಿಗಳಂತೆ ನಟಿಸುವವರಿಗೆ ಎಚ್ಚರಿಕೆಯ ನೋಟಿಸ್ ಜಾರಿ ಮಾಡಿದ್ದಾರೆ ದೀಪಿಕಾ. ತನ್ನ ಅಭಿಮಾನಿಗಳ ಸೋಗಿನಲ್ಲಿ ತನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ವಿವರವಾಗಿ ಕೇಳುವ ಸಂದೇಶಗಳನ್ನು ಕಳುಹಿಸುವ ಜನರಿಗೆ ದೀಪಿಕಾ ಛೀಮಾರಿ ಹಾಕಿದ್ದಾರೆ.ಪೋಸ್ಟ್ನಲ್ಲಿ ಹೀಗೆಂದು ಬರೆದುಕೊಂಡಿದ್ದಾರೆ. “ನಮಸ್ಕಾರ, ಇದು ನನ್ನ ಅಭಿಮಾನಿಯಂತೆ ನಟಿಸುವವರಿಗೆ ಮತ್ತು ಕಿರುಕುಳ ನೀಡುವವರಿಗೆ. ಒಂದಷ್ಟು ಮೆಸೇಜ್ಗಳು ಹಾಗೂ ಮೇಲ್ಗಳನ್ನು ನಾನು ಗಮನಿಸಿದ್ದೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋದು ನಿಮ್ಮ ಕೆಲಸ ಅಂತ ನಾನು ಭಾವಿಸಲಾರೆ. ಕೆಲವು ವಿಷಯಗಳಿಂದ ದೂರವಿರಿ. ಸಮಸ್ಯೆ ಉಂಟು ಮಾಡಬೇಡಿ ಎಂದು ಮನವಿ ಮಾಡುತ್ತೇನೆ. ಇದು ಎಲ್ಲರಿಗೂ ನೀಡುತ್ತಿರುವ ಎಚ್ಚರಿಕೆ. ನೀವು ನನಗೆ ಏನೋ ಮಾಡಲು ಹೇಳಿದ್ದೀರಿ ಎಂದ ಮಾತ್ರಕ್ಕೆ ಯಾವುದೂ ಬದಲಾಗೋದಿಲ್ಲ’ ಎಂದು ಸ್ಪಷ್ಟವಾಗಿ ತಮ್ಮ ಜೀವನವನ್ನು ಕೈಗೆತ್ತಿಕೊಳ್ಳಲು ಮುಂದಾಗುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ದೀಪಿಕಾ ತಮ್ಮ ನಿಜವಾದ ಅಭಿಮಾನಿಗಳನ್ನು ಶ್ಲಾಘಿಸಿದರು. ಪೋಸ್ಟ್ನಲ್ಲಿ ಅವರ ಕುರಿತಾಗಿಯೂ ಬರೆದುಕೊಂಡಿದ್ದಾರೆ. ‘ನನ್ನ ವೃತ್ತಿ ಜೀವನದುದ್ದಕ್ಕೂ ಜತೆಗಿರುವ ನಿಜವಾದ ಮತ್ತು ಪ್ರೀತಿಪಾತ್ರರಾದ ಅಭಿಮಾನಿಗಳನ್ನು ಪ್ರಶಂಸಿಸುತ್ತೇನೆ. ನಿಮ್ಮೆಲ್ಲರ ನೈಜ ಅಭಿಮಾನಕ್ಕೆ ಧನ್ಯವಾದಗಳು’ ಎಂದಿದ್ದಾರೆ.
ಇನ್ನು ತಮ್ಮ ಡೇಟಿಂಗ್ ಕುರಿತಾಗಿ ನಡೆಯುತ್ತಿರುವ ಗಾಸಿಪ್ಗಳಿಗೆ ನಟಿ ತೆರೆ ಎಳೆದಿದ್ದು, ನಟಿ ಪೋಸ್ಟ್ನಲ್ಲಿ ಈ ವಿಚಾರದ ಕುರಿತಾಗಿ ಹಂಚಿಕೊಂಡಿದ್ದಾರೆ. ‘ನಾನು ಯಾರೊಂದಿಗೆ ಡೇಟಿಂಗ್ ಮಾಡಬಾರದು, ಯಾರೊಂದಿಗೆ ಇರಬೇಕು ಮತ್ತು ಯಾರೊಂದಿಗೆ ಇರಬಾರದು ಎಂಬುದರ ಬಗ್ಗೆ ನೀವು ತುಂಬಾ ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಕೆಲವು ಗ್ರೂಪ್ಗಳಲ್ಲಿ ಮನನೋಯಿಸುವ ಮೆಸೇಜ್ಗಳನ್ನು ನಾನು ನೋಡಿದ್ದೇನೆ. ಇದನ್ನು ಒಪ್ಪಿಕೊಳ್ಳಲಾಗೋದಿಲ್ಲ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ. ನನ್ನ ಬಗ್ಗೆ ಇರುವ ನಿಮ್ಮ ಪ್ರೀತಿಯನ್ನು ನಾನು ಅರ್ಥ ಮಾಡಿಕೊಳ್ಳಬಹುದು. ಆದರೆ ಬೇರೆಯವರ ಮನಸ್ಸು ನೋಯಿಸಬೇಡಿ’ ಎಂದು ನಟಿ ದೀಪಿಕಾ ದಾಸ್ ಹೇಳಿದ್ದಾರೆ.ಕೆರಿಯರ್ ವಿಚಾರಕ್ಕೆ ಬರುವುದಾದರೆ ಸ್ವಲ್ಪ ಸಮಯದಿಂದ ದೀಪಿಕಾ ಅಭಿನಯದಿಂದ ದೂರವೇ ಇದ್ದಾರೆ. ನಾಗಿಣಿ ಧಾರಾವಾಹಿಯ ಯಶಸ್ಸಿನ ಬಳಿಕ ಬಿಗ್ಬಾಸ್ನಲ್ಲಿ ಅವರ ಉತ್ತಮ ಪ್ರದರ್ಶನ ಜನರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ದೀಪಿಕಾಗೆ ಸಹಾಯ ಮಾಡಿತ್ತು. ಈಗ ದೀಪಿಕಾ ಫ್ಯಾಷನ್ ಉದ್ಯಮಿಯಾಗಿಯೂ ತೊಡಗಿಕೊಂಡಿದ್ದಾರೆ.