♦ ಅನಿತಾ ಬನಾರಿ
newsics.com@gmail.com
ಜೀವನ ಎಂದ ಮೇಲೆ ಒಂದಲ್ಲ ಒಂದು ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಅದನ್ನೆಲ್ಲಾ ದಾಟಿದಾಗಲೇ ಅದು ಪೂರ್ಣವಾದಂತೆ. ಅದರಲ್ಲೂ ಹೆಣ್ಣು ಮಕ್ಕಳೆಂದ ಮೇಲೆ ಕೆಲವೊಂದು ಬೇರೆ ರೀತಿಯ ಸವಾಲುಗಳು ಎದುರಾಗುತ್ತವೆ. ಅದರಲ್ಲೂ ಮುಖ್ಯವಾದುದು ಮುಟ್ಟು. ಹೌದು, ಮುಟ್ಟಿನ ಸಮಯದಲ್ಲಿ ಆಕೆ ಎದುರಿಸುವ ಕಷ್ಟಗಳು ಒಂದೆರಡಲ್ಲ. ಈ ಸಮಯದಲ್ಲಿ ಆಗುವ ಮಾನಸಿಕ ಬದಲಾವಣೆಗಳ ಜತೆಗೆ ದೈಹಿಕ ಬದಲಾವಣೆಗಳು ಆಕೆಯನ್ನು ಜರ್ಜರಿತ ಮಾಡಿಬಿಡುತ್ತದೆ. ಆದರೆ ಇದೀಗ ಆಕೆಯ ಪಿರಿಯಡ್ಸ್ ಅರ್ಥಾತ್ ಮುಟ್ಟಿನ ಸಮಯ ಸರಾಗವಾಗಿ ಸಾಗುವಂತೆ ಮೆನ್ಸ್ಟ್ರುವಲ್ ಕಪ್ ಮಾಡುತ್ತದೆ. ಇದೀಗ ಅದೇ ಮೆನ್ಸ್ಟ್ರುವಲ್ ಕಪ್ನ ಬಗ್ಗೆ ಕಿರಿತೆರೆ ನಟಿ ಮಾತನಾಡಿದ್ದು, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕರ್ನಾಟಕ ಸೊಬಗಿನ ಗಿಣಿರಾಮ ಧಾರಾವಾಹಿಯಲ್ಲಿ ನಾಯಕಿ ಮಹತಿ ಆಗಿ ನಟಿಸುತ್ತಿರುವ ನಯನಾ ನಾಗರಾಜ್ ಅವರು ಮೊದಲ ಬಾರಿಗೆ ಮೆನ್ಸ್ಟ್ರುವಲ್ ಕಪ್ ಉಪಯೋಗಿಸಿದ್ದು ಅದರ ಅನುಭವ ಹಂಚಿಕೊಂಡಿದ್ದಾರೆ.
“ನಾನು ಇದೇ ಮೊದಲ ಬಾರಿಗೆ ಪಿರಿಯಡ್ಸ್ ಬಗ್ಗೆ ಮಾತನಾಡುತ್ತಿದ್ದೇನೆ. ಆ ದಿನಗಳು ಹೆಣ್ಣುಮಕ್ಕಳ ಪಾಲಿಗೆ ನಿಜವಾಗಿಯೂ ಸವಾಲಿನ ದಿನಗಳು! ಯಾಕೆಂದರೆ ಪಿರಿಯಡ್ಸ್ ಹೆಣ್ಣುಮಕ್ಕಳನ್ನು ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಕುಗ್ಗಿ ಹೋಗುವಂತೆ ಮಾಡುತ್ತದೆ. ಊದಿಕೊಂಡಿರುವ ಕಾಲುಗಳು ಅದಕ್ಕೆ ಸಾಕ್ಷಿ. ಒಮ್ಮೊಮ್ಮೆ ದೇಹದ ಕೆಳಗಿನ ಭಾಗವನ್ನು ಕತ್ತರಿಸಿಹಾಕಬೇಕು ಎಂದು ಅನ್ನಿಸಿಬಿಡುತ್ತದೆ. ಅಂದ ಹಾಗೇ ಇದರ ಜೊತೆಗೆ ನಾನು ಇದೇ ಮೊದಲ ಬಾರಿಗೆ ಮೆನ್ಸ್ಟ್ರುವಲ್ ಕಪ್ ಅನ್ನು ಉಪಯೋಗಿಸಿದ್ದೇನೆ. ಒಂದು ವರ್ಷದ ನಂತರ ಅಂತೂ ಇಂತೂ ಇದನ್ನು ಉಪಯೋಗಿಸಿರುವ ನಾನು ಉತ್ತಮ ಅನುಭವ ಪಡೆದಿರುವುದು ಸುಳ್ಳಲ್ಲ. ಯಾಕೆಂದರೆ ಸ್ಯಾನಿಟರಿ ಪ್ಯಾಡ್ ಹಾಗೂ ಮೆನ್ಸ್ಟ್ರುವಲ್ ಕಪ್ ಗೆ ಇರುವ ವ್ಯತ್ಯಾಸ ನಾನು ಖಂಡಿತಾ ಗಮನಿಸಬಲ್ಲೆ” ಎಂದು ಹೇಳಿಕೊಂಡಿದ್ದಾರೆ ನಯನಾ ನಾಗರಾಜ್. “ಮೊದಲ ಬಾರಿ ಮೆನ್ಸ್ಟ್ರುವಲ್ ಕಪ್ ಉಪಯೋಗಿಸುವವರು ತಪ್ಪದೇ ವೈದ್ಯರ ಸಲಹೆ ತೆಗೆದುಕೊಳ್ಳಲು ಮರೆಯದಿರಿ” ಎಂದು ಸಲಹೆ ಕೂಡ ನೀಡಿದ್ದಾರೆ.