ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಅತ್ತಿಗೆ ಮಾನ್ಸಿ ಆಗಿ ನಟಿಸುತ್ತಿರುವ ಶಿಲ್ಪಾ ಅಯ್ಯರ್ ಅವರು ಇದೀಗ ತಮ್ಮ ಪಾತ್ರದಿಂದ ಹೊರಬರುತ್ತಿದ್ದು ಈ ವಿಚಾರವನ್ನು ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.
ಅನಿತಾ ಬನಾರಿ
newsics.com@gmail.com
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ಧಾರಾವಾಹಿಯ ಕತೆಯ ಜತೆಗೆ ಎಲ್ಲಾ ಪಾತ್ರಗಳೂ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಆರಂಭದ ದಿನಗಳಿಂದಲೂ ಟಿ ಆರ್ ಪಿ ಯಲ್ಲಿ ಉತ್ತಮ ಸ್ಥಾನ ಕಾಯ್ದುಕೊಂಡಿರುವ ಜೊತೆ ಜೊತೆಯಲಿ ಧಾರಾವಾಹಿಯು ಇದೀಗ ಹೊಸ ಸುದ್ದಿಯೊಂದನ್ನು ಹೊರಹಾಕಿದೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಅತ್ತಿಗೆ ಮಾನ್ಸಿ ಆಗಿ ನಟಿಸುತ್ತಿರುವ ಶಿಲ್ಪಾ ಅಯ್ಯರ್ ಅವರು ಇದೀಗ ತಮ್ಮ ಪಾತ್ರದಿಂದ ಹೊರಬರುತ್ತಿದ್ದು ಈ ವಿಚಾರವನ್ನು ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.
‘ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾನು ಮಾನ್ಸಿ ಆಗಿ ನಟಿಸುತ್ತಿದ್ದೆ. ಆದರೆ ಇದೀಗ ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿದ್ದೇನೆ. ಇದರ ಹೊರತಾಗಿ ನಾನು ಮಾನ್ಸಿ ಪಾತ್ರಕ್ಕೆ ವಿದಾಯ ಹೇಳುವುದಕ್ಕೆ ಬೇರಾವ ಕಾರಣವೂ ಇಲ್ಲ. ಇಷ್ಟು ದಿನಗಳ ಕಾಲ ನೀವು ನನಗೆ ನೀಡಿರುವ ಪ್ರೋತ್ಸಾಹ, ಮಾನ್ಸಿ ಪಾತ್ರದ ಮೇಲೆ ತೋರಿಸಿರುವ ಪ್ರೀತಿ ಎಲ್ಲವೂ ಅಗಾಧ. ನಿಮ್ಮ ಪ್ರೀತಿಗೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ಇದರ ಜತೆಗೆ ನನ್ನ ಹೊಸ ಪ್ರಾಜೆಕ್ಟ್ಗಳಿಗೂ ನಿಮ್ಮ ಬೆಂಬಲ ಸದಾ ಹೀಗೆಯೇ ಇರಲಿ. ಅಂದ ಹಾಗೇ ನನ್ನ ಹೊಸ ಪಯಣದ ಬಗ್ಗೆ ನಾನು ಆದಷ್ಟು ಬೇಗ ನಿಮಗೆ ತಿಳಿಸುತ್ತೇನೆ’ ಎಂದು ಶಿಲ್ಪಾ ಅಯ್ಯರ್ ಹೇಳಿಕೊಂಡಿದ್ದಾರೆ.
ನಿರೂಪಕಿಯಾಗಿ ಟಿವಿ ಜಗತ್ತಿಗೆ ಕಾಲಿಟ್ಟ ಶಿಲ್ಪಾ ಅಯ್ಯರ್ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮಿಂಚಿದ ಪ್ರತಿಭೆ. ಸಮಯ ನ್ಯೂಸ್, ಪ್ರಜಾ ಟಿವಿಯಲ್ಲಿ ನ್ಯೂಸ್ ರೀಡರ್ ಆಗಿ ಕಾಣಿಸಿಕೊಳ್ಳುವ ಮೂಲಕ ಟಿವಿ ಲೋಕಕ್ಕೆ ಕಾಲಿಟ್ಟ ಶಿಲ್ಪಾ ಮತ್ತೆ ಉದಯ ಮ್ಯೂಸಿಕ್ನ ಗಲ್ಲಿ ಗಲ್ಲಿ ಗಾಸಿಪ್, ಫಿಲ್ಮಿಭಾತ್, ಉದಯ ಟಿವಿಯ ಖಾರಾ ಮಸಾಲಾ, ಕೈ ರುಚಿ ಕಾರ್ಯಕ್ರಮಗಳ ನಿರೂಪಕಿಯಾಗಿ ಮೋಡಿ ಮಾಡಿದ್ದರು.
ಕಸ್ತೂರಿ ಟಿವಿಯಲ್ಲಿನ ನಾಗಮಂಡಲ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನೆಗೆ ಕಾಲಿಟ್ಟ ಶಿಲ್ಪಾ ಅಯ್ಯರ್ ಮುಂದೆ ಕಲರ್ಸ್ ಸೂಪರ್ನ ಶಾಂತಂ ಪಾಪಂ, ಜೀ ಕನ್ನಡದ ಮಹಾದೇವಿ, ಉದಯ ವಾಹಿನಿಯ ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಫಣೇಶ್ ಭಾರದ್ವಾಜ್ ನಿರ್ದೇಶನದ ಮೈಲಾಪುರ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಹಾರಿರುವ ಅಯ್ಯರ್, ನೈಬರ್ಸ್ ಎನ್ನುವ ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ.