ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾನು ನಾಯಕಿ ಕನ್ನಿಕಾ ಆಗಿ ಅಭಿನಯಿಸುತ್ತಿದ್ದೇನೆ. ಮೊದಲ ಧಾರಾವಾಹಿಯಲ್ಲಿಯೇ ಪ್ರಮುಖ ಪಾತ್ರಕ್ಕೆ ಜೀವ ತುಂಬುವ ಅವಕಾಶ ದೊರೆತಿದ್ದು ನಾನಂತೂ ಸಖತ್ ಖುಷಿಯಾಗಿದ್ದೇನೆ.
ಅನಿತಾ ಬನಾರಿ
newsics.com@gmail.com
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಘುಚರಣ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಕನ್ಯಾಕುಮಾರಿಯಲ್ಲಿ ನಾಯಕಿ ಕನ್ನಿಕಾ ಆಗಿ ನಟಿಸುವ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟ ಈಕೆಯ ಹೆಸರು ಆಸಿಯಾ. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಆಸಿಯಾ ಬಣ್ಣದ ನಂಟು ಆರಂಭವಾಗಿದ್ದು ಮಾಡೆಲಿಂಗ್ ಮೂಲಕ. ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಆಸಿಯಾರನ್ನು ಮಾಡೆಲಿಂಗ್ ಲೋಕ ಕೈಬೀಸಿ ಕರೆಯಿತು.
ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಆಸಿಯಾಗೆ ದೊರೆತ ಅವಕಾಶಗಳು ಒಂದೆರಡಲ್ಲ. ಮಾಡೆಲಿಂಗ್ ಲೋಕದಲ್ಲಿ ಪಳಗಿದ ಆಸಿಯಾ ಮುಂದೆ ನಟಿಯಾಗಬೇಕು ಎಂದು ಬಯಸಿದರು. ಪೂರ್ಣ ಪ್ರಮಾಣದ ನಟಿಯಾಗಿ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಿದ ಆಸಿಯಾ, ಉಷಾ ಭಂಡಾರಿ ಅವರ ಆ್ಯಪ್ ಇನ್ಸ್ಟಿಟ್ಯೂಟ್ ಸೇರಿದರು. ನಟನೆಯ ಆಗುಹೋಗುಗಳನ್ನು ತಿಳಿದುಕೊಂಡ ಆಕೆ ಮೂರು ತಿಂಗಳ ನಟನಾ ಕೋರ್ಸ್ ಪಡೆದರು. ಈ ನಡುವೆ ಆಡಿಶನ್ಗಳಿಗೆ ಹೋಗುತ್ತಿದ್ದ ಆಸಿಯಾ ಆಯ್ಕೆಯಾಗುತ್ತಿರಲಿಲ್ಲ.
ತನಗೂ ಬಣ್ಣದ ಲೋಕಕ್ಕೂ ಆಗಿಬರುವುದಿಲ್ಲವೇನೋ ಎಂದು ಅಂದುಕೊಂಡಿದ್ದ ಆಸಿಯಾ ಮುಂದೆ ಸ್ಟಾರ್ಟ್ ಅಪ್ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡರು. ಆಸಿಯಾ ಅವರ ವಿಡಿಯೋ ನೋಡಿದ ಕನ್ಯಾಕುಮಾರಿ ಧಾರಾವಾಹಿಯ ನಿರ್ದೇಶಕ ರಘುಚರಣ್ ಅವರು ಆಡಿಶನ್ನಲ್ಲಿ ಭಾಗವಹಿಸುವಂತೆ ಹೇಳಿದರು. ಏನಾಗುತ್ತದೋ ಆಗಲಿ ಎಂದು ಆಡಿಶನ್ಗೆ ಹೋದ ಆಸಿಯಾಗೆ ಆಶ್ಚರ್ಯ ಕಾದಿತ್ತು. ಯಾಕೆಂದರೆ ಆಕೆಯ ಬಹುದಿನದ ಕನಸು ನನಸಾಗಿತ್ತು.
ಕನ್ನಿಕಾ ಆಗಿ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಆಸಿಯಾ ತಮ್ಮ ಪಾತ್ರದ ಬಗ್ಗೆ ವಿವರಿಸಲು ಮರೆಯುವುದಿಲ್ಲ.
ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾನು ನಾಯಕಿ ಕನ್ನಿಕಾ ಆಗಿ ಅಭಿನಯಿಸುತ್ತಿದ್ದೇನೆ. ಮೊದಲ ಧಾರಾವಾಹಿಯಲ್ಲಿಯೇ ಪ್ರಮುಖ ಪಾತ್ರಕ್ಕೆ ಜೀವ ತುಂಬುವ ಅವಕಾಶ ದೊರೆತಿದ್ದು ನಾನಂತೂ ಸಖತ್ ಖುಷಿಯಾಗಿದ್ದೇನೆ. ಶ್ರೀಮಂತ ಕುಟುಂಬದ ಕುಡಿಯಾಗಿರುವ ಕನ್ನಿಕಾ ತುಂಬಾ ಸರಳತೆಯಿಂದ ಕೂಡಿದ ಹುಡುಗಿ. ಸದಾ ಕಾಲ ಉಲ್ಲಾಸದಿಂದ ಇರುವ ಕನ್ನಿಕಾಗೆ ಭಾರತೀಯ ಸಂಸ್ಕೃತಿ ಎಂದರೆ ತುಂಬಾ ಇಷ್ಟ. ಒಟ್ಟಿನಲ್ಲಿ ಆಕೆ ಎಲ್ಲರಿಗೂ ಒಳಿತನ್ನೇ ಬಯಸುವ ಹುಡುಗಿ’ ಎಂದು ಪಾತ್ರ ಪರಿಚಯ ಮಾಡುತ್ತಾರೆ.