ಲವ್ಲೀ ಹುಡುಗಿಯಾಗಿ ಸಿನಿರಂಗದಲ್ಲಿ ಮೋಡಿ ಮಾಡಿರುವ ರಚಿತಾ ರಾಮ್ ಇದೇ ಮೊದಲ ಬಾರಿಗೆ ರಗಡ್ ಅವತಾರದ ಮೂಲಕ ವೀಕ್ಷಕರನ್ನು ರಂಜಿಸಲಿದ್ದಾರೆ.
ಅನಿತಾ ಬನಾರಿ
newsics.com@gmail.com
ಗುಳಿಕೆನ್ನೆಯ ಚೆಲುವೆ ಎಂದೇ ಚಂದನವನದಲ್ಲಿ ಜನಪ್ರಿಯರಾಗಿರುವ ರಚಿತಾ ರಾಮ್ ಮನೋಜ್ಞ ನಟನೆಯ ಮೂಲಕ ಸಿನಿಪ್ರಿಯರ ಮನ ಸೆಳೆದ ಚೆಲುವೆ. ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಡಿಂಪಲ್ ಕ್ವೀನ್ ಇಂದು ಬೆಳ್ಳಿತೆರೆಯಲ್ಲಿ ಸಖತ್ ಬ್ಯುಸಿ. ಲವ್ಲೀ ಹುಡುಗಿಯಾಗಿ ಸಿನಿರಂಗದಲ್ಲಿ ಮೋಡಿ ಮಾಡಿರುವ ರಚಿತಾ ರಾಮ್ ಇದೇ ಮೊದಲ ಬಾರಿಗೆ ರಗಡ್ ಅವತಾರದ ಮೂಲಕ ವೀಕ್ಷಕರನ್ನು ರಂಜಿಸಲಿದ್ದಾರೆ.
ನವೀನ್ ಶೆಟ್ಟಿ ಅಭಿನಯದ “ಶಬರಿ ಸರ್ಚಿಂಗ್ ಫಾರ್ ರಾವಣ” ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದು ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಪೋಸ್ಟರ್ ಅನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಡಿಂಪಲ್ ಕ್ವೀನ್ “ಬಹುದಿನಗಳಿಂದ ನಾನು ಈ ಘಳಿಗೆಗಾಗಿಯೇ ಕಾತರದಿಂದ ಕಾಯುತ್ತಿದ್ದೆ. ಈಗ ಅದು ನಿಮ್ಮ ಎದುರಿಗಿದೆ” ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೆ ರಚಿತಾ ರಾಮ್ ಹಂಚಿಕೊಂಡಿರುವ ಪೋಸ್ಟರ್ ಕಂಡು ಸಿನಿ ಪ್ರಿಯರು ದಂಗಾಗಿದ್ದಾರೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ರಚಿತಾ ರಾಮ್ ಅವರು ಇದರಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಅವರು ಈ ರೀತಿಯಾಗಿ ಕಾಣಿಸಿಕೊಂಡಿದ್ದಾರೆ.
ಅರಸಿ ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟ ರಚಿತಾ ರಾಮ್ ಬುಲ್ ಬುಲ್ ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದರು. ತದ ದಿಲ್ ರಂಗೀಲಾ, ಅಂಬರೀಶ, ರನ್ನ, ರಥಾವರ, ಚಕ್ರವ್ಯೂಹ, ಭರ್ಜರಿ, ಪುಷ್ಪಕ ವಿಮಾನ, ಸೀತಾರಾಮ ಕಲ್ಯಾಣ, ನಟಸಾರ್ವಭೌಮ, ಆಯುಷ್ಮಾನ್ ಭವ ಸಿನಿಮಾಗಳಲ್ಲಿ ಡಿಂಪಲ್ ಕ್ವೀನ್ ನಟಿಸಿದ್ದಾರೆ. ಬ್ಯಾಡ್ ಮ್ಯಾನರ್ಸ್, ರಚ್ಚು ಐ ಲವ್ ಯು, ವೀರಂ, ಮ್ಯಾಟ್ನಿ, ಲಿಲ್ಲಿ, ಏಪ್ರಿಲ್, ಡಾಲಿ ಸಿನಿಮಾಗಳಲ್ಲಿ ಗುಳಿ ಕೆನ್ನೆಯ ಸುಂದರಿ ಬಣ್ಣ ಹಚ್ಚಿದ್ದು ಕನ್ನಡ ಸಿನಿರಂಗದ ದಿಗ್ಗಜರಾಗಿರುವ ಗಣೇಶ್, ದರ್ಶನ್, ಸುದೀಪ್, ಶ್ರೀಮುರಳಿ, ಧ್ರುವ ಸರ್ಜಾ, ರಮೇಶ್ ಅರವಿಂದ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.