ಮಾ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ‘ಎನ್ನನ್ನೂ ಜನ್ಮಲಬಂಧಂ’ ಧಾರಾವಾಹಿಯಲ್ಲಿ ನಾಯಕ ಯಶ್ ಆಗಿ ನಿರಂಜನ್ ನಟಿಸಲಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಗೊಂಡಿದ್ದು ಅದನ್ನು ಇನ್ಸ್ಟಾಗ್ರಾಂನಲ್ಲಿ ಸ್ವತಃ ನಿರಂಜನ್ ಅವರೇ ಹಂಚಿಕೊಂಡಿದ್ದಾರೆ.
ಅನಿತಾ ಬನಾರಿ
newsics.com@gmail.com
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಕಮಲಿ’ಯಲ್ಲಿ ನಾಯಕ ರಿಷಿ ಆಗಿ ನಟಿಸುತ್ತಿರುವ ನಿರಂಜನ್ ಮನೋಜ್ಞ ನಟನೆಯ ಮೂಲಕ ಕಿರುತೆರೆಯ ಜಗತ್ತಿನಲ್ಲಿ ಮನೆಮಾತಾದ ಹುಡುಗ. ಇಂಗ್ಲೀಷ್ ಲೆಕ್ಚರರ್ ಪಾತ್ರಕ್ಕೆ ಜೀವ ತುಂಬುತ್ತಿರುವ
ನಿರಂಜನ್ ಅಭಿನಯಕ್ಕೆ ಮಾರುಹೋಗದವರಿಲ್ಲ. ಕಿರುಚಿತ್ರದ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ನಿರಂಜನ್ ಇದೀಗ ಕಿರುತೆರೆ ವೀಕ್ಷಕರ ಅದರಲ್ಲೂ ಹೆಣ್ ಮಕ್ಕಳ ಪ್ರೀತಿಯ ಹೀರೋ! ಇದೀಗ ಪರಭಾಷೆಯ ಕಿರುತೆರೆಗೂ ಕಾಲಿಟ್ಟಿರುವ ನಮ್ಮ ಇಂಗ್ಲೀಷ್ ಮೇಷ್ಟ್ರು ಪರಭಾಷೆಯ ವೀಕ್ಷಕರನ್ನೂ ರಂಜಿಸಲಿದ್ದಾರೆ.
ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ‘ಎನ್ನನ್ನೂ ಜನ್ಮಲಬಂಧಂ’ ಧಾರಾವಾಹಿಯಲ್ಲಿ ನಾಯಕ ಯಶ್ ಆಗಿ ನಿರಂಜನ್ ನಟಿಸಲಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಗೊಂಡಿದ್ದು ಅದನ್ನು ಇನ್ಸ್ಟಾಗ್ರಾಂನಲ್ಲಿ ಸ್ವತಃ ನಿರಂಜನ್ ಅವರೇ ಹಂಚಿಕೊಂಡಿದ್ದಾರೆ.
‘ನಾಟ್ ಎ ಮರ್ಡರ್’ ಕಿರುಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿನಯ ಜಗತ್ತಿಗೆ ಪದಾರ್ಪಣೆ ಮಾಡಿದ ನಿರಂಜನ್ ನಂತರ ಶಿವ, ಬಿಬಿಎಂಪಿ ಸ್ವಚ್ಛತೆ, ಹೃದಯಾನೇ ಜೋಕಾಲಿ ಹೀಗೆ ಬರೋಬ್ಬರಿ ಹನ್ನೆರಡಕ್ಕೂ ಹೆಚ್ಚು ಕಿರುಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಶ್ರೀರಾಮಚಂದ್ರ ವಿತ್ ಗರ್ಲ್ಸ್ ಎಂಬ ಕಿರುಚಿತ್ರದಲ್ಲಿಯೂ ನಟಿಸಿದ್ದು, ಜನಪ್ರಿಯತೆ ಪಡೆದಿತ್ತು.
ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಾಂಧಾರಿ ಧಾರಾವಾಹಿಯಲ್ಲಿ ನಾಯಕನ ತಮ್ಮ ಕುಶಲ್ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ನಿರಂಜನ್ ನಂತರ ನಟಿಸಿದ್ದು ನಂದಿನಿಯಲ್ಲಿ. ನಾಲ್ಕು ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ನಂದಿನಿ ಧಾರಾವಾಹಿಯಲ್ಲಿ ನಟಿಸಿದ್ದ ನಿರಂಜನ್ ಅವರಿಗೆ ಜನಪ್ರಿಯತೆ ದೊರಕಿದ್ದು ಕಮಲ ಧಾರಾವಾಹಿಯ ಮೂಲಕ.
ಕಮಲಿಯ ರಿಷಿ ಆಗಿ ಬದಲಾದ ನಿರಂಜನ್ ಅವರು ಇಂದು ಎತ್ತ ಹೋದರೂ ರಿಷಿ ಎಂದೇ ಫೇಮಸ್ಸು! ಕಿರುತೆರೆಯಲ್ಲಿ ನಟನಾ ಛಾಪನ್ನು ಮೂಡಿಸಲಿರುವ ನಿರಂಜನ್ ಕ್ರೀಡಾ ಲೋಕದಲ್ಲಿಯೂ ಮಿಂಚಿದ ಪ್ರತಿಭೆ.
ವಾಲಿಬಾಲ್ ಸ್ಪರ್ಧಿಯಾಗಿದ್ದ ನಿರಂಜನ್ ಸತತ ಏಳು ಬಾರಿ ಕರ್ನಾಟಕವನ್ನು ಪ್ರತಿನಿಧಿಸಿ ಸೈ ಎನಿಸಿಕೊಂಡಿದ್ದಾರೆ. ಬಿಹಾರ, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ ಹೀಗೆ ಹಲವೆಡೆ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿರುವ ನಿರಂಜನ್ ಕಬಡ್ಡಿ ಆಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕಬಡ್ಡಿಯಲ್ಲಿ ಮೂರು ಬಾರಿ ಕರ್ನಾಟಕವನ್ನು ಪ್ರತಿನಿಧಿಸಿರುವ ಇವರು ಅತ್ಯುತ್ತಮ ಈಜುಗಾರರೂ ಹೌದು.
ಎಲ್ಲವೂ ಅಂದುಕೊಂಡಿದ್ದ ಹಾಗೇ ಆಗಿದ್ದರೆ ನಿರಂಜನ್ ಅವರು ಆರ್ಮಿ ಆಫೀಸರ್ ಆಗಿ ಮಿಂಚುತ್ತಿದ್ದರು. ಬಾಲ್ಯದಿಂದಲೂ ತಾನು ಆರ್ಮಿ ಆಫೀಸರ್ ಆಗಬೇಕು, ಸೈನಿಕ ಆಗಿ ಗಡಿ ಕಾಯಬೇಕು ಎಂಬ ಹಂಬಲ ಹೊಂದಿದ್ದ ನಿರಂಜನ್ ಅದಕ್ಕಾಗಿಯೇ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದರು. ಆದರೆ ಆ ಸಮಯದಲ್ಲಿ ನಡೆದ ಅಪಘಾತದಿಂದಾಗಿ ಅವರ ಕಾಲಿನ ಲಿಗಮೆಂಟ್ಗೆ ತೊಂದರೆ ಆಯಿತು. ಇದರಿಂದ ಸೈನಿಕ ಆಗಬೇಕು ಎಂಬ ಕನಸು ಕನಸಾಗಿಯೇ ಉಳಿಯಿತು. ನಂತರ ಮುಂದೇನು ಎಂದು ಆಲೋಚಿಸುತ್ತಿದ್ದಾಗ ನಟನಾ ಜಗತ್ತು ಕೈಬೀಸಿ ಕರೆಯಿತು. ಅಂತೆಯೇ ನಟನೆಗೆ ಕಾಲಿಟ್ಟ ನಿರಂಜನ್ ಇಂದು ಇಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.