ನಟ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಅವರ ಐದು ಸ್ಮರಣೀಯ ಚಿತ್ರಗಳನ್ನು ಪ್ರೈಮ್ ವಿಡಿಯೋ ಉಚಿತವಾಗಿ ಒದಗಿಸಲಿದ್ದು ಲಾ, ಕವಲು ದಾರಿ, ಮಾಯಾಬಜಾರ್, ಫ್ರೆಂಚ್ ಬಿರಿಯಾನಿ, ಯುವರತ್ನ ಚಿತ್ರಗಳು ಫೆಬ್ರವರಿ ಒಂದರಿಂದ ಒಂದು ತಿಂಗಳವರೆಗೆ ಪ್ರೈಮ್ನ ಸದಸ್ಯರಲ್ಲದವರಿಗೂ ಲಭ್ಯವಾಗಲಿದೆ.
• ಅನಿತಾ ಬನಾರಿ
newsics.com@gmail.com
ಕಳೆದ ಎರಡು ತಿಂಗಳಿನಿಂದ ಅಪ್ಪು ಇಲ್ಲವೆಂಬ ಕೊರಗು ಕಾಡುತ್ತಿದೆ. ಆದರೆ ಅವರ ಆಸೆಯನ್ನು ಪೂರೈಸಲು ಅವರ ಪತ್ನಿ ಅಶ್ವಿನಿ ಪುನೀತ್ ಟೊಂಕ ಕಟ್ಟಿ ನಿಂತಿದ್ದಾರೆ. ಅಪ್ಪು ಅವರು ಆರಂಭಿಸಿದ ಪಿಆರ್ ಕೆ ಪ್ರೊಡಕ್ಷನ್ ನನ್ನು ಅಶ್ವಿನಿ ನಡೆಸಿಕೊಂಡು ಬರುತ್ತಿದ್ದಾರೆ. ಇಂದು ಪಿಆರ್ ಕೆ ಪ್ರೊಡಕ್ಷನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ಪಿಆರ್ ಕೆ ಪ್ರೊಡಕ್ಷನ್ನಲ್ಲಿ ನಿರ್ಮಾಣಗೊಂಡಿರುವ ಮ್ಯಾನ್ ಆಫ್ ದಿ ಮ್ಯಾಚ್, ಒನ್ ಕಟ್ ಟು ಕಟ್ ಹಾಗೂ ಫ್ಯಾಮಿಲಿ ಪ್ಯಾಕ್ ಸಿನಿಮಾಗಳು ಎಕ್ಸ್ ಕ್ಲೂಸಿವ್ ಆಗಿ ಅಮೆಜಾನ್ ಪ್ರೈಮ್ನಲ್ಲಿ ಶೀಘ್ರವೇ ಬಿಡುಗಡೆಯಾಗಲಿದ್ದು ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುತ್ತಿದೆ.
ಕನ್ನಡ ಚಿತ್ರರಂಗದ ಕೀರ್ತಿ ಸಾರಿದ ನಟ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಅವರ ಐದು ಸ್ಮರಣೀಯ ಚಿತ್ರಗಳನ್ನು ಪ್ರೈಮ್ ವಿಡಿಯೋ ಉಚಿತವಾಗಿ ಒದಗಿಸಲಿದ್ದು ಲಾ, ಕವಲು ದಾರಿ, ಮಾಯಾಬಜಾರ್, ಫ್ರೆಂಚ್ ಬಿರಿಯಾನಿ, ಯುವರತ್ನ ಚಿತ್ರಗಳು ಫೆಬ್ರವರಿ ಒಂದರಿಂದ ಒಂದು ತಿಂಗಳವರೆಗೆ ಪ್ರೈಮ್ನ ಸದಸ್ಯರಲ್ಲದವರಿಗೂ ಲಭ್ಯವಾಗಲಿದೆ.
ಕೇವಲ ಪ್ರೈಮ್ ಸದಸ್ಯರಿಗೆ ಸೀಮಿತ ಮಾಡದೇ ಅಮೆಜಾನ್ ಖಾತೆ ಹೊಂದಿರುವ ಯಾರಿಗಾದರೂ ಉಚಿತವಾಗಿ ನೋಡಲು ಅವಕಾಶ ನೀಡುವುದು ಅಭಿಮಾನಿಗಳು ಪುನೀತ್ ಅವರಿಗೆ ಪ್ರೀತಿ ಗೌರವ ತೋರಿಸಲು ಮಾಡುವ ಒಂದು ಪ್ರಯತ್ನ ಎಂದು ಅಮೆಜಾನ್ ಕಂಪನಿ ನುಡಿದಿದೆ.
ಕಳೆದ ಕೆಲವು ವರ್ಷಗಳಿಂದ ನಾವು ಪಿಆರ್ ಕೆ ಪ್ರೊಡಕ್ಷನ್ ಜತೆ ಸಹಯೋಗ ಹೊಂದಿದ್ದೇವೆ. ಪುನೀತ್ ರಾಜ್ಕುಮಾರ್ ಅವರ ಪ್ರತಿಭೆ ಹಾಗೂ ಕತೆ ಹೇಳುವ ವಿಶಿಷ್ಟ ದೃಷ್ಟಿಗೆ ಗೌರವ ಸಲ್ಲಿಸುವ ಪ್ರಯತ್ನ. ಸಿನಿಮಾ ರಂಗಕ್ಕೆ ಅವರ ಕೊಡುಗೆ ಅಪಾರ. ಅವರ ಚಿತ್ರಗಳು ಅಭಿಮಾನಿಗಳಿಗೆ ಮನರಂಜನೆ ನೀಡುತ್ತವೆ. ಅವರ ನೆನಪಿಗಾಗಿ ಈ ಚಿತ್ರಗಳನ್ನು ಪ್ರಸ್ತುತ ಪಡಿಸಲು ಹರ್ಷಿಸುತ್ತೇವೆ. ಪ್ರೈಮ್ ಮೂಲಕ ದೇಶಿ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತೇವೆ ಎಂದು ಅಮೆಜಾನ್ ಪ್ರೈಮ್ ಮುಖ್ಯಸ್ಥ ಮನೀಶ್ ಮೆಂಘಾನಿ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ವಿಭಿನ್ನ ದೃಷ್ಟಿಕೋನ ಪ್ರೇಕ್ಷಕರನ್ನು ಆಕರ್ಷಿಸಿದೆ. ಈ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ. ಪ್ರೈಮ್ ವಿಡಿಯೋ ಜತೆಗಿನ ಸಹಯೋಗ ಮತ್ತು ನಮ್ಮ ಚಿತ್ರಗಳನ್ನು ವಿಶ್ವದಾದ್ಯಂತ ವೀಕ್ಷಕರಿಗೆ ಕೊಂಡೊಯ್ಯುವುದಕ್ಕೆ ಹೆಮ್ಮೆ ಇದೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.