ಬೆಂಗಳೂರು: ಒಂದಾದ ಮೇಲೊಂದು ಸ್ವೀಟ್ ನ್ಯೂಸ್ ಕೊಟ್ಟು ಬ್ಯುಸಿ ಮಮ್ಮಿ ಎನಿಸಿಕೊಂಡಿರುವ ಸ್ಯಾಂಡಲ್’ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಈಗ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಫುಲ್ ಬ್ಯುಸಿ. ಆಗಾಗ ಮಕ್ಕಳ ಪೋಟೋ, ವಿಡಿಯೋ ಜತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ರಾಧಿಕಾ ಪಂಡಿತ್ ಈ ಬಾರಿ ಒಂದೊಳ್ಳೆ ಮೆಸೆಜ್ ಜತೆ ಫೇಸ್ ಬುಕ್ ಗೆ ಮಗಳ ಪೋಟೋ ಅಪ್ ಮಾಡಿದ್ದಾರೆ.ಮಗಳು ಆಯ್ರಾ ಚಿತ್ರಕತೆಯ ಪುಸ್ತಕವೊಂದನ್ನು ಗಂಭೀರವಾಗಿ ನೋಡುತ್ತಿರುವ ಪೋಟೋ ಹಂಚಿಕೊಂಡಿರುವ ರಾಧಿಕಾ ಪಂಡಿತ್, ನಾನು ಮಗಳಿಗೆ ಫೋನ್, ಟಿವಿಗಳ ಬದಲು ಪುಸ್ತಕ ಕೊಡಲು ಇಷ್ಟಪಡುತ್ತೇನೆ. ಇದರಿಂದ ಅವರಿಗೆ ಮನೋರಂಜನೆಯು ದೊರೆಯುತ್ತದೆ ಹಾಗೂ ಓದುವ ಹವ್ಯಾಸವೂ ಬೆಳೆಯುತ್ತದೆ. ಸದ್ಯಕ್ಕೆ ಆಯ್ರಾ ಈ ಪುಸ್ತಕದ ಚಿತ್ರಗಳನ್ನಷ್ಟೇ ನೋಡುತ್ತಿದ್ದಾಳೆ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.
ಅಷ್ಟೇ ಅಲ್ಲ, ಇಷ್ಟು ಗಂಭೀರವಾಗಿ ನಾನು ನನ್ನ ಪರೀಕ್ಷೆ ಗೂ ಓದಿರಲಿಲ್ಲ ಎಂದು ಲೇವಡಿ ಕೂಡ ಮಾಡಿದ್ದಾರೆ. ಆದರೆ ಫೇಮಸ್ ನಟಿಯಾಗಿ ಮಕ್ಕಳಿಗೆ ದುಬಾರಿ ಬೆಲೆ ಆಟಿಕೆಗಳನ್ನು ಕೊಡಿಸಲು ಅವಕಾಶ ಇದ್ದಾಗಲೂ ರಾಧಿಕಾ ಮಗಳ ಕೈಯಲ್ಲಿ ಪುಸ್ತಕ ಹಿಡಿಸಿ ಓದುವ ಅಭಿರುಚಿ ಬೆಳೆಸಲು ಪ್ರಯತ್ನಿಸುತ್ತಿರುವ ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ರಾಧಿಕಾ ಅವರನ್ನು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲ, ಇದು ಎಲ್ಲ ಪಾಲಕರಿಗೂ ಉತ್ತಮ ಸಂದೇಶ ಎಂದು ಕಮೆಂಟ್ ಮಾಡ್ತಿದ್ದಾರೆ.
ಇನ್ನು ಆಯ್ರಾಳಿಗೆ ಇಂತಹದೊಂದು ಸುಂದರ ಪುಸ್ತಕ ಗಿಫ್ಟ್ ಮಾಡಿದ್ದಕ್ಕೆ ನಟಿ ಅನು ಪ್ರಭಾಕರ್, ನಟ ರಾಘು ಮುಖರ್ಜಿ ಹಾಗೂ ಅವರ ಪುತ್ರಿ ನಂದನಾ ಪ್ರಭಾಕರ ಮುಖರ್ಜಿಗೂ ರಾಧಿಕಾ ಥ್ಯಾಂಕ್ಸ್ ಹೇಳಿದ್ದಾರೆ.
ಮಗಳ ಪೋಟೋ ಜತೆ ಪಾಲಕರಿಗೆ ಟಿಪ್ಸ್ ಕೊಟ್ರು ಮಮ್ಮಿ ರಾಧಿಕಾ
Follow Us