Sunday, December 5, 2021

ಮನೆಮನೆಯಲ್ಲೂ ಕೊರೋನಾ ಭಯ

Follow Us

ಕೆಲಸದ ನೆಪದಲ್ಲಿ ಇಷ್ಟು ದಿನ ಅಪ್ಪ–ಅಮ್ಮನಿಗೆ ಪ್ರೀತಿ ಕೊಡಲಾಗದೆ ಇದ್ದದ್ದು ಪ್ರತಿ ಮನೆಯ ಕಥೆ. ಆದರೆ ಈ ಕೊರೋನಾ ಅಪ್ಪ–ಅಮ್ಮ ಹಾಗೂ ವಯಸ್ಸಾದವರೊಂದಿಗೆ ಕಳೆಯಲು ಸಮಯ ಕಲ್ಪಿಸಿದೆ ಎಂದುಕೊಳ್ಳೋಣ. ಸೋಂಕು ಹರಡದಂತೆ ಜಾಗರೂಕರಾಗಿ ಕೊರೋನಾ ಕೊಟ್ಟ ಸಮಯವನ್ನು ನಮ್ಮವರೊಂದಿಗೆ ಕಳೆಯೋಣ.

===
♦ ದಿವ್ಯಾ ಶ್ರೀಧರ್ ರಾವ್
response@134.209.153.225
newsics.com@gmail.com

ಯಾವುದಕ್ಕೂ ಭಯಬೀಳದ ನಗರದ ಜನರನ್ನು ಈಗ ಯಕಃಶ್ಚಿತ್ ಸೂಕ್ಷ್ಮಾಣು ಕೊರೋನಾ ಕಂಗೆಡಿಸಿದೆ ಎಂದರೆ ಅದರ ಬಗ್ಗೆ ಅಚ್ಚರಿಯಾಗುತ್ತದೆ! ಕೊರೊನಾ ಭಯದಲ್ಲಿ ಕುಳಿತಿದ್ದ ನಾವೂ ಎಲ್ಲರಂತೆ ಟೀವಿ ನೋಡಿ ಪ್ರಪಂಚದಾದ್ಯಂತ ಏನಾಗುತ್ತಿದೆ ಎಂಬ ವಿಷಯ ತಿಳಿದುಕೊಳ್ಳುತ್ತಿದ್ದೆವು.
ಇಟಲಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಕುರಿತು ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಕಾರ್ಯಕ್ರಮ ನೋಡುತ್ತಿದ್ದ ನನ್ನ ತಂದೆ- ತಾಯಿ, ಮಗ ಹಾಗೂ ನಾನು ವಿಶೇಷ ಸುದ್ದಿಯನ್ನು ಕಣ್ಣ ರೆಪ್ಪೆ ಮುಚ್ಚದೆ ನೋಡುತ್ತಿದ್ದೆವು.
ಇಟಲಿಯಲ್ಲಿ ಹೆಚ್ಚಾದ ಸೋಂಕಿತರನ್ನು ನೋಡಲಾಗದೆ ಡಾಕ್ಟರ್ ಗಳು ರೋಗನಿರೋಧಕ ಶಕ್ತಿ ಕಳೆದುಕೊಂಡ ಅರವತ್ತು ವರುಷ ಮೇಲ್ಪಟ್ಟವರಿಗೆ ಔಷಧ ನೀಡುವುದನ್ನು ನಿಲ್ಲಿಸಿಬಿಟ್ಟಿದ್ದರು ಎಂದು ಸುದ್ದಿಯಲ್ಲಿ ಹೇಳಲಾಗುತ್ತಿತ್ತು.
ಪ್ರಯಾರಿಟಿ ಬೇಸಿಸ್ ಮೇಲೆ ಔಷಧ ಕೊಡುವ ಬಗ್ಗೆ ಮಾತನಾಡುತ್ತಿದ್ದ ನಮ್ಮನ್ನು ಅಪ್ಪನ ಮೌನ ಪ್ರಶ್ನೆಯಾಗಿಸಿತು.
‘ಅಪ್ಪಾ…. ಏನಾಯಿತು?” ಎಂದೆ.
‘ಕೊರೋನಾ ಏನಾದರೂ ಭಾರತದಲ್ಲಿ ಇಟಲಿಯಲ್ಲಿ ಹಬ್ಬಿದಷ್ಟು ಹಬ್ಬಿ, ಇಲ್ಲಿಯೂ ಆದ್ಯತೆ ಮೇರೆಗೆ ಔಷಧ ಕೊಟ್ಟರೆ ನಾವೆಲ್ಲ ಸಾಯುವುದೇ ಹಾಗಿದ್ರೆ’ ಎಂದು ದುಃಖದಿಂದ ನೆಲ ನೋಡುತ್ತಾ ನುಡಿದರು.
ಅಲ್ಲೆಲ್ಲೋ ದೂರದಲ್ಲಿ ಕೊರೋನಾ ಬಂತು, ಅಷ್ಟೆಲ್ಲ ವಿನಾಶ ಮಾಡಿತು, ರಾಜ್ಯದಲ್ಲಿ ಇಷ್ಟು ಹಬ್ಬಿತು ಎಂದೆಲ್ಲ ಮಾತನಾಡುತ್ತ, ಇದಕ್ಕೆ ಮೂಲವಾದ ಚೀನಾವನ್ನು ಬೈದುಕೊಳ್ಳುತ್ತ, ಒಮ್ಮೆ ವರ್ಕ್ ಫ್ರಂ ಹೋಂ ಅವಕಾಶ ಸಿಕ್ಕಿತು ಎನ್ನುವ ಖುಷಿಯಲ್ಲಿರುತ್ತ, ಮಗದೊಮ್ಮೆ ಮನೆಯಲ್ಲೇ ಇರಲು ಬೇಸರ ಎಂದುಕೊಳ್ಳುತ್ತ ನಮ್ಮ ಪ್ರಪಂಚದಲ್ಲೇ ನಾವಿದ್ದುಕೊಂಡು ಅರವತ್ತು ವರ್ಷ ದಾಟಿದವರ ಕಷ್ಟ ತಿಳಿಯದೇ ಹೋದೆವು ಎಂದೆನಿಸಿತು. ಅಪ್ಪನ ದುಃಖವನ್ನು ಕಂಡು ಒಂದರೆ ಕ್ಷಣ ಮಾತನಾಡದೆ ಸುಮ್ಮನಾದೆ.
ಕೊರೋನಾ ಕುರಿತಾದ ಸುದ್ದಿಗಳನ್ನು ನೋಡುತ್ತಿದ್ದರೆ ಎಂಥವರಿಗೂ ಗಾಬರಿಯಾಗುತ್ತದೆ. ದೇಶದ ಸ್ಥಿತಿ ಎಲ್ಲಿಗೆ ಬರಬಲ್ಲದು ಎಂದು ಚಿಂತೆಯಾಗುತ್ತದೆ. ನಮಗೇ ಹೀಗಾಗುತ್ತದೆ ಎಂದ ಮೇಲೆ ಜಗತ್ತನ್ನೇ ಕಂಗೆಡಿಸುವ ಇಂಥ ಸುದ್ದಿಗಳು ಹಿರಿಯರಿಗೆ, 60 ವರ್ಷ ಮೇಲ್ಪಟ್ಟು ವಯಸ್ಸಾದವರಿಗೆ ಇನ್ನಷ್ಟು ಹಿಂಸೆ ನೀಡುತ್ತವೆ. ಚಿಂತೆ ಹೆಚ್ಚಿಸುತ್ತವೆ. ಈಗಂತೂ ಮನೆಯಲ್ಲೇ ಇರಬೇಕಿರುವುದರಿಂದ ವಾಕಿಂಗ್ ಇಲ್ಲದೆ, ಸಮ ವಯಸ್ಕರ ಒಡನಾಟವಿಲ್ಲದೆ ಮನಸ್ಸು ಮುದುಡುತ್ತದೆ. ಇವೆಲ್ಲದರ ಪರಿಣಾಮ ಮಧುಮೇಹ, ಹೃದಯದ ಒತ್ತಡ ಹೆಚ್ಚಾಗಬಹುದು. ಹೀಗಾಗಿ, ಕೊರೊನಾ ಸುದ್ದಿಗಳನ್ನು ಹಿರಿಯರು ಇರುವ ಮನೆಗಳಲ್ಲಿ ಹೆಚ್ಚು ನೋಡುವುದು ತರವಲ್ಲ.
ಕಾಳಜಿ ತೋರಿಸಿ:
ಕೊರೋನಾಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನೋಡಬೇಡಿ ಎಂದು ಈಗಾಗಲೇ ಮಾನಸಿಕ ರೋಗ ತಜ್ಞರು ಜನರಿಗೆ ಮನವಿ ಮಾಡಿರುವುದು ಗಮನಾರ್ಹ. ಸುದ್ದಿಯ ಬದಲಿಗೆ, ಅವರೊಂದಿಗೆ ಉತ್ತಮವಾಗಿ ಸಮಯ ಕಳೆಯಲು ಮನಸ್ಸು ಮಾಡಬೇಕಿದೆ. ಭಯಪಟ್ಟರೆ, ಚಿಂತೆಗೆ ಒಳಗಾದರೆ ಧೈರ್ಯ ಹೇಳುವ ಕೆಲಸ ಮಾಡಬೇಕಿದೆ. ಮಕ್ಕಳಿಗೆ ತೋರುವ ಕಾಳಜಿಯನ್ನೇ ಅವರ ಬಗೆಗೂ ತೋರಬೇಕಿದೆ. ಕುಳಿತಲ್ಲೇ ಆಡುವ ಆಟಗಳನ್ನು ಆಡಬಹುದು, ನಗುವಂಥ ವಿಡಿಯೋಗಳನ್ನು ತೋರಿಸಬಹುದು. ಮನೆಮಂದಿಯೆಲ್ಲ ಕುಳಿತು ಎಂಜಾಯ್ ಮಾಡಬಲ್ಲಂಥ ಉತ್ತಮ ಸಿನಿಮಾ ತೋರಿಸಬಹುದು.
ಇಷ್ಟು ದಿನ ಅಪ್ಪ–ಅಮ್ಮನಿಗೆ ಕೆಲಸದ ನೆಪದಲ್ಲಿ ಪ್ರೀತಿ ಕೊಡಲಾಗದೆ ಇದ್ದದ್ದು ಪ್ರತಿ ಮನೆಯ ಕಥೆ. ಆದರೆ ಈ ಕೊರೋನಾ ಅಪ್ಪ–ಅಮ್ಮ ಹಾಗೂ ವಯಸ್ಸಾದವರೊಂದಿಗೆ ಕಳೆಯಲು ಸಮಯ ಕಲ್ಪಿಸಿದೆ ಎಂದುಕೊಳ್ಳೋಣ. ಸೋಂಕು ಹರಡದಂತೆ ಜಾಗರೂಕರಾಗಿ ಕೊರೋನಾ ಕೊಟ್ಟ ಸಮಯವನ್ನು ನಮ್ಮವರೊಂದಿಗೆ ಕಳೆಯೋಣ.

ಮತ್ತಷ್ಟು ಸುದ್ದಿಗಳು

Latest News

ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡೀಸ್‌ಗೆ ತಡೆ

newsics.com ಮುಂಬೈ: ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ದುಬೈಗೆ ಹೊರಟಿದ್ದ ಜಾಕ್ವೆಲಿನ್ ಫೆರ್ನಾಂಡೀಸ್ ಅವರನ್ನು ಲುಕೌಟ್ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ತಡೆಯಲಾಗಿದೆ....

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 29,52,708 ಜನ ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...
- Advertisement -
error: Content is protected !!