Thursday, June 1, 2023

ಸ್ಮಾರ್ಟ್ ಫೋನ್ ಕಳುವಾದರೆ ಭಯ ಬೇಡ

Follow Us

ಹಿಂಜರಿಯದೆ ಸಿಮ್, ಮೊಬೈಲ್ ಬ್ಯಾಂಕಿಂಗ್ ಬ್ಲಾಕ್ ಮಾಡಿ
ಸ್ಮಾರ್ಟ್ ಫೋನ್ ಗಳಿಂದಾಗಿ ನಮ್ಮ ಬ್ಯಾಂಕಿಂಗ್ ಕೆಲಸಗಳು ಎಷ್ಟು ಸುಲಭವಾಗಿವೆಯೋ ಅಷ್ಟೇ ಅಪಾಯವೂ ಇದೆ. ಸ್ವಲ್ಪ ಯಾಮಾರಿದರೂ ಸೈಬರ್ ಕಳ್ಳರ ದಾಳಿಗೆ ಸಿಲುಕಿ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮಾಯವಾಗುತ್ತದೆ. ಇಂಥ ಸಮಯದಲ್ಲಿ ನಮ್ಮ ಸ್ಮಾರ್ಟ್ ಫೋನ್ ಕಳೆದುಹೋದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ಆ ಸಮಯದಲ್ಲಿ ಗಾಬರಿಯಾಗಿ ಕುಳಿತುಕೊಳ್ಳದೆ, ದುಃಖಿಸದೆ ತಕ್ಷಣ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.

♦ ಪ್ರಮಥ
newsics.com@gmail.com

ಸ್ಮಾರ್ಟ್ ಫೊನ್ ಗಳಿಂದಾಗಿ ನಮ್ಮ ಬದುಕೂ ಸ್ಮಾರ್ಟ್ ಆಗಿದೆ. ಕುಳಿತಲ್ಲೇ ಬೇಕಾದುದನ್ನು ಓದುವ, ಆರ್ಡರ್ ಮಾಡಿ, ತರಿಸಿಕೊಳ್ಳುವ, ಎಲ್ಲಕ್ಕಿಂತ ಮುಖ್ಯವಾಗಿ ಒಂದೆರಡು ಕ್ಲಿಕ್ ಗಳಲ್ಲಿ ಇನ್ನೊಬ್ಬರ ಖಾತೆಗೆ ದುಡ್ಡು ಜಮಾ ಮಾಡುವ ಕೆಲಸಗಳೆಲ್ಲ ಸುಲಭವಾಗಿವೆ. ಇವೆಲ್ಲದಕ್ಕೆ ಬೇಕಾಗುತ್ತಿದ್ದ ಸಮಯ ಉಳಿಯುತ್ತಿದೆ. ಇದೇ ಸಮಯಕ್ಕೆ ಸ್ಮಾರ್ಟ್ ಫೋನ್ ಗಳಿಂದ ನಮ್ಮ ಮೇಲೆ ಕಳ್ಳರ ನಿಗಾ ಕೂಡ ಹೆಚ್ಚಿದೆ. ಚೂರೇ ಚೂರು ಯಾಮಾರಿದರೂ ಖಾತೆಯಲ್ಲಿರುವ ಹಣ ನಿಮಿಷಾರ್ಧದಲ್ಲಿ ಸೈಬರ್ ಕಳ್ಳರ ಕೈ ಸೇರುತ್ತದೆ.
ಒಂದೊಮ್ಮೆ, ನಮ್ಮ ಸ್ಮಾರ್ಟ್ ಫೋನ್ ಕಳುವಾದರೆ…?! ಊಹಿಸಲು ಅಸಾಧ್ಯ. ಅಲ್ಲವೇ? ಸ್ಮಾರ್ಟ್ ಫೋನ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಬಯಸಿದರೂ ಕಳ್ಳರು ಯಾವಾಗ ಬೇಕಿದ್ದರೂ ನಮ್ಮ ಫೋನುಗಳನ್ನು ಕದ್ದುಬಿಡಬಹುದು. ಅಂಥ ಸಮಯದಲ್ಲಿ ಏನು ಮಾಡಬೇಕು ಎನ್ನುವುದನ್ನು  ಅರಿತರೆ ಹೆಚ್ಚು ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಇಲ್ಲವಾದಲ್ಲಿ, ಮೊಬೈಲ್ ಮೂಲಕವೇ ನಮ್ಮ ಖಾತೆಯಲ್ಲಿರುವ ಹಣವನ್ನು ಸೈಬರ್ ಖದೀಮರು ಸುಲಭವಾಗಿ ಪಡೆದುಕೊಳ್ಳಬಹುದು. ಹೀಗಾಗಿ, ಸ್ಮಾರ್ಟ್ ಫೋನ್ ಕಳೆದುಹೋದರೆ “ಸಿಗಬಹುದು’ ಎನ್ನುವ ಯಾವುದೇ ಆಕಾಂಕ್ಷೆ ಇಟ್ಟುಕೊಳ್ಳದೆ ತಕ್ಷಣ ಕೆಲವು ಕೆಲಸಗಳನ್ನು ಮಾಡಬೇಕು.
ಸಿಮ್ ಬ್ಲಾಕ್ ಮಾಡಿ
ಮೊಟ್ಟಮೊದಲನೆಯದಾಗಿ ಸಿಮ್ ಬ್ಲಾಕ್ ಮಾಡಬೇಕು. ಮೊಬೈಲ್ ಕಳೆದುಹೋದಾಗ ತಕ್ಷಣವೇ ಆ ಮೊಬೈಲ್ ನಲ್ಲಿರುವ ಬ್ಯಾಂಕ್ ಖಾತೆಗೆ ಜೋಡಿಸಲ್ಪಟ್ಟಿರುವ ಸಿಮ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಬೇಕು. ಇದರಿಂದ ಬ್ಯಾಂಕ್ ವಿವರಗಳನ್ನು ಪಡೆಯಲು ಯತ್ನಿಸುವ ಕಳ್ಳರಿಗೆ ಹಿನ್ನಡೆಯಾಗುತ್ತದೆ. ಸಿಮ್ ಬ್ಲಾಕ್ ಆದರೆ, ಒಟಿಪಿ ಪಡೆಯಲು ಸಾಧ್ಯವಾಗುವುದಿಲ್ಲ. ಒಮ್ಮೆ ಸಿಮ್ ಬ್ಲಾಕ್ ಮಾಡಿಸಿಕೊಂಡರೂ ಹೊಸ ಸಿಮ್ ಪಡೆದು ಮತ್ತೆ ಅದೇ ಸಂಖ್ಯೆಯನ್ನು ನಿಮ್ಮದಾಗಿಸಿಕೊಳ್ಳಬಹುದು.

ಗೂಗಲ್ ಪೇ, ಪೇಟಿಎಂ, ಫೋನ್ ಪೇ ಬ್ಲಾಕ್ ಮಾಡಿ
ಗೂಗಲ್ ಪೇ, ಪೇಟಿಎಂ, ಫೋನ್ ಪೇ ಇತ್ಯಾದಿ ಮೊಬೈಲ್ ಬ್ಯಾಂಕಿಂಗ್ ನಡೆಸುವ ಆ್ಯಪ್ ಗಳನ್ನು ಬ್ಲಾಕ್ ಮಾಡುವುದು ಮುಖ್ಯ. ಬ್ಲಾಕ್ ಮಾಡದಿದ್ದರೆ ಬ್ಯಾಂಕ್ ಖಾತೆಯ ದುರುಪಯೋಗವಾಗುವುದು ಗ್ಯಾರಂಟಿ. ಬ್ಯಾಂಕ್ ಗೆ ಕರೆ ಮಾಡುವ ಮೂಲಕವೂ ಅಕೌಂಟ್ ಅನ್ನು ಬ್ಲಾಕ್ ಮಾಡಿಸಬಹುದು. ಜತೆಗೆ, ಮೊಬೈಲ್ ವ್ಯಾಲೆಟ್ ಆಕ್ಸೆಸ್ ಅನ್ನೂ ಬ್ಲಾಕ್ ಮಾಡಬೇಕು. ಮೊಬೈಲ್ ವ್ಯಾಲೆಟ್ ಅನ್ನು ಅನೇಕ ಕಡೆ ಬಳಸಿದ್ದರೆ ಬ್ಯಾಂಕ್ ವಿವರಗಳು ಉಳಿದುಹೋಗಿರುತ್ತವೆ.

ಬ್ಯಾಂಕ್ ಖಾತೆಯಲ್ಲಿ ಮೊಬೈಲ್ ಸಂಖ್ಯೆ ಬದಲಾವಣೆ
ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡಿದ ಬಳಿಕವೂ ಬ್ಯಾಂಕ್ ಖಾತೆಯೊಂದಿಗೆ ಜೋಡಿಸಲ್ಪಟ್ಟಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಉತ್ತಮ.

ಪೊಲೀಸ್ ಠಾಣೆಗೆ ದೂರು ನೀಡಿ
ದೂರು ನೀಡುವುದರಿಂದ ಕಳೆದುಹೋದ ಮೊಬೈಲ್ ಸಿಗಲಾರದು, ಅನವಶ್ಯಕ ಎನಿಸಿದರೂ ಹಲವು ಕಾರಣಗಳಿಂದ ಈ ನಡೆ ರಕ್ಷಣೆ ನೀಡುತ್ತದೆ. ಒಂದೊಮ್ಮೆ ನಿಮ್ಮ ಫೋನ್ ಅಥವಾ ಸಂಖ್ಯೆ ದುರುಪಯೋಗವಾದರೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ.

ಮೊಬೈಲ್ ಬ್ಯಾಂಕಿಂಗ್ ಬ್ಲಾಕ್ ಮಾಡುವುದು ಹೇಗೆ ಗೊತ್ತೇ?
ಗೂಗಲ್ ಪೇ, ಫೋನ್ ಪೇ, ಪೇಟಿಎಂ ಪ್ರತಿಯೊಂದಕ್ಕೂ ಪ್ರತ್ಯೇಕ ಕಸ್ಟಮರ್ ಕೇರ್ ಸಂಖ್ಯೆಗಳಿರುತ್ತವೆ. ಅವುಗಳಿಗೆ ಕಾಲ್ ಮಾಡಿ ಯಾವ ವಿಚಾರಕ್ಕೆ ಕರೆ ಮಾಡಿದ್ದೀರಿ ಎನ್ನುವ ಆಯ್ಕೆಯನ್ನು ಗಮನಿಸಿ. ಮೊಬೈಲ್  ಕಳೆದುಹೋಗಿರುವ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು, ಒಟಿಪಿ ಬಾರದೆ ಇರುವಂತೆ ಮಾಡಿಕೊಳ್ಳಬಹುದು. ಖಾತೆಯನ್ನು ಬ್ಲಾಕ್ ಮಾಡಬಹುದು.

ಇವೆಲ್ಲ ಮೊಬೈಲ್ ಕಳೆದುಹೋದ ತಕ್ಷಣ ಆಗಬೇಕಾದ ಕೆಲಸಗಳು. ಒಂದು ಸೂಚನೆಯೆಂದರೆ, ಯಾವುದೇ ಕಾರಣಕ್ಕೂ ಗೂಗಲ್ ನಲ್ಲಿ ಇವುಗಳ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕಬೇಡಿ. ಅಲ್ಲಿ ಕೆಲವೊಮ್ಮೆ ಫೇಕ್ ಸಂಖ್ಯೆಗಳು ಸಿಗಬಹುದು. ಅದರಿಂದಲೂ ಸಮಸ್ಯೆಯಾಗುತ್ತದೆ. ಅಧಿಕೃತ ಸಂಖ್ಯೆಗಷ್ಟೇ ಕರೆ ಮಾಡುವುದು ಅತ್ಯಂತ ಮುಖ್ಯ.
ಗೂಗಲ್ ಪೇ ಹೆಲ್ಪ್ ಲೈನ್: 18004190157
ಪೇಟಿಎಂ ಪೇಮೆಂಟ್ ಬ್ಯಾಂಕ್ ಹೆಲ್ಪ್ ಲೈನ್: 01204456456
ಫೋನ್ ಪೇ ಹೆಲ್ಪ್ ಲೈನ್: 08068727374/ 02268727274
ಡೇಟಾವನ್ನೂ ಅಳಿಸಬಹುದು!
ಫೋನ್ ಕಳೆದಾಗ ಅದರಲ್ಲಿರುವ ನಮ್ಮ ವೈಯಕ್ತಿಕ ಮಾಹಿತಿ, ಫೋಟೊಗಳು, ಇಮೇಲ್, ಇತರ ಪ್ರಮುಖ ಆ್ಯಪ್ ಗಳ ಡೇಟಾವನ್ನು ಡಿಲೀಟ್ ಮಾಡಬಹುದು. ನಿಮ್ಮ ಸ್ನೇಹಿತರ ಮೊಬೈಲ್ ಗಳಿಂದಲೇ ಇದನ್ನು ಮಾಡಬಹುದು. ಅಥವಾ ಕಂಪ್ಯೂಟರ್ ನಲ್ಲಿ ಲಾಗಿನ್ ಆಗಿಯೂ ಮಾಡಬಹುದು. ಮೊದಲನೆಯದಾಗಿ,  ಬ್ರೌಸರ್ ಓಪನ್ ಮಾಡಿಕೊಂಡು https://myaccount.google.com/intro/find-your-phone ಎಂದು ಟೈಪ್ ಮಾಡಬೇಕು. ನಿಮ್ಮ ಕಳೆದುಹೋದ ಸ್ಮಾರ್ಟ್ ಫೋನ್ ನಲ್ಲಿ ಯಾವ ಮೇಲ್ ಐಡಿಯಲ್ಲಿ ಲಾಗಿನ್ ಆಗಿದ್ದ ಜಿಮೇಲ್ ಐಡಿಯೊಂದಿಗೆ ಲಾಗಿನ್ ಆಗಬೇಕು. ಈ ಸಮಯದಲ್ಲಿ ಮೂರು ಆಯ್ಕೆಗಳು ಬರುತ್ತವೆ. ಇರೇಸ್ ಡಿವೈಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಬಳಿಕ, ಜಿಮೇಲ್ ಪಾಸ್ ವರ್ಡ್ ನಮೂದಿಸಬೇಕಾಗುತ್ತದೆ. ನಂತರ ನಿಮ್ಮ ಮೊಬೈಲ್ ನಲ್ಲಿರುವ ಎಲ್ಲ ಡೇಟಾವನ್ನೂ ಅಳಿಸಿಹಾಕಬಹುದು. ಇದರಿಂದ ಸೈಬರ್ ಕಳ್ಳರಿಗೆ ಯಾವುದೇ ಮಾಹಿತಿ ಸಿಗುವುದಿಲ್ಲ.

ಮತ್ತಷ್ಟು ಸುದ್ದಿಗಳು

vertical

Latest News

ಲೈಂಗಿಕ ಚಟುವಟಿಕೆ ನಿರಾಕರಿಸಿದ್ದಕ್ಕೆ ಹೆಂಡತಿಯನ್ನೇ ಕೊಂದ ಪತಿ

newsics.com ಹೈದರಾಬಾದ್: ತನ್ನ ಪತ್ನಿ ಲೈಂಗಿಕತೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಆಕೆಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಶವಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಬಹಿರಂಗವಾಗುವ ಮೂಲಕ...

ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನ ಬೋಗಿ ಬೆಂಕಿಗಾಹುತಿ

newsics.com ಕಣ್ಣೂರು: ಕೇರಳದ ಕಣ್ಣೂರು ರೈಲು ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಇಂದು (ಜೂ. 1) ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಟ್‌ಫಾರ್ಮ್ ಮತ್ತು ಭಾರತ್ ಪೆಟ್ರೋಲಿಯಂ ಇಂಧನ ಡಿಪೋದಿಂದ ಹಲವಾರು ಮೀಟರ್ ದೂರದಲ್ಲಿ ರೈಲು...

ಅವಳಿ ಮಕ್ಕಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ

newsics.com ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು (35) ಮಕ್ಕಳನ್ನು ಕೊಂದ ಪಾಪಿ ತಂದೆ....
- Advertisement -
error: Content is protected !!