ದೀರ್ಘಕಾಲದ ಜೀವಿತಾವಧಿ ಹೊಂದಿರುವ ಜೀವಿಗಳು
ಜೀವಿ ಎಂದ ಮೇಲೆ ಅದಕ್ಕೊಂದು ಅಂತ್ಯ ಇರಲೇಬೇಕು ಎನ್ನುವುದು ನಮ್ಮ ಸಾಮಾನ್ಯ ನಂಬಿಕೆ. ಆದರೆ, ಸಾವೇ ಇಲ್ಲದ ಜೀವಪ್ರಭೇದವೂ ನಮ್ಮ ನಡುವಿದೆ. ಹಾಗೆಯೇ, ನೂರಾರು ವರ್ಷಗಳ ಕಾಲ ಜೀವಿಸುವ ಪ್ರಾಣಿಗಳೂ ಈ ಭೂಮಿಯ ಮೇಲಿವೆ. ಇದು, ದೀರ್ಘಕಾಲ ಬದುಕುವ ಜೀವಿಗಳ ಮೇಲೊಂದು ನೋಟ, ನಿಮ್ಮ ಕುತೂಹಲಕ್ಕಾಗಿ.
♦ಪ್ರಮಥ
newsics.com@gmail.com
ಪ್ರಪಂಚದ ಜೀವವೈವಿಧ್ಯತೆ ಅದ್ಭುತ. ಅದಕ್ಕೆ ಸರಿಸಾಟಿ ಯಾವುದೂ ಇಲ್ಲ. ಭೂಮಿ ಮೇಲಿರುವ ಪ್ರಾಣಿಗಳ ಜೀವಿತಾವಧಿಯ ಒಂದೇ ಅಂಶವನ್ನು ತೆಗೆದುಕೊಂಡರೂ ಸಹಸ್ರಾರು ವಿಭಿನ್ನತೆಗಳು ಗೋಚರಿಸುತ್ತವೆ. ಕೆಲವು ಜೀವಿಗಳು ಒಂದೇ ದಿನದಲ್ಲಿ ಹುಟ್ಟಿ, ತಮ್ಮ ಬದುಕನ್ನು ಅಂತ್ಯಗೊಳಿಸಿದರೆ, ಕೆಲವು ಜೀವಿಗಳು ನೂರಾರು ವರ್ಷಗಳ ಕಾಲ ಬದುಕುತ್ತವೆ. ಬಹಳಷ್ಟು ಪ್ರಾಣಿಗಳಿಗೆ ಹೋಲಿಕೆ ಮಾಡಿದರೆ ಮನುಷ್ಯನ ಜೀವಿತಾವಧಿ ದೀರ್ಘ ಎನಿಸುತ್ತದೆ. ಆದರೆ, ಪ್ರಪಂಚದಲ್ಲಿ ಒಂದಿಷ್ಟು ಬಗೆಯ ಜೀವಿಗಳಿವೆ. ಅವು ಬದುಕುವ ಅವಧಿ ನೋಡಿದರೆ ಅವುಗಳಿಗೆ ಸಾವೇ ಇಲ್ಲವೇನೋ ಎನ್ನುವಂತೆ ಭಾಸವಾಗುತ್ತದೆ.
ಅತಿ ದೀರ್ಘ ಕಾಲ ಬದುಕುವ ಕೆಲವು ಪ್ರಾಣಿಗಳ ಬಗ್ಗೆ ಇಲ್ಲಿ ತಿಳಿಯೋಣ.
ಟುರ್ರಿಟೊಪಿಸ್ ಡೊಹ್ರಿನಿ
ಇದು ಜೆಲ್ಲಿ ಮೀನು ಪ್ರಭೇದ. ಇದಕ್ಕೆ ಮಿದುಳು ಹಾಗೂ ಹೃದಯವಿಲ್ಲ. ಭೂಮಿಯ ಮೇಲೆ ಅಳಿವಿಲ್ಲದ ಜೀವಿ ಎಂದೇ ಹೆಸರಾಗಿರುವ ಏಕೈಕ ಜೀವಿ. ಉಷ್ಣಪ್ರದೇಶದ ನೀರಿನಲ್ಲಿ ವಾಸಿಸುತ್ತದೆ. ನಿರ್ದಿಷ್ಟ ಸಮಯ ಜೀವಿಸಿದ ಬಳಿಕ ಇವು ಸಾವಿಗೀಡಾಗುವುದಿಲ್ಲ ಎನ್ನುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಬದುಕಿನ ಒಂದು ಹಂತ ತಲುಪಿದಾಗ ಇವು ಮತ್ತೆ ಯೌವನಾವಸ್ಥೆ ಪಡೆದುಕೊಳ್ಳುತ್ತವೆ. ಮತ್ತೆ ಮೊದಲಿನಂತೆ ಜೀವಿಸಲು ಶುರು ಮಾಡುತ್ತವೆ. ಯೌವನದ ಸಮಯದಲ್ಲಿ ಮತ್ತೆ ಬೆಳವಣಿಗೆ, ವಯಸ್ಸಾಗುತ್ತಿರುವಂತೆಯೇ ಹಾಗೆಯೇ ಮರಳಿ ಯೌವನ. ಹೀಗೆ ಅವು ಎಷ್ಟು ಬಾರಿ ಪುನಾವರ್ತನೆಯ ಬದುಕನ್ನು ಜೀವಿಸುತ್ತವೆಯೋ ಲೆಕ್ಕವಿಲ್ಲ. ಇಂತಹ ಜೆಲ್ಲಿ ಫಿಶ್ ಗಳು ಯಾವುದಾದರೂ ಬೇರೆ ಪ್ರಾಣಿಯ ದಾಳಿ ಅಥವಾ ರೋಗದಿಂದ ಮಾತ್ರವೇ ಸಾವಿಗೀಡಾಗುತ್ತವೆ. ಅತಿ ನಿಧಾನಗತಿಯ ಬೆಳವಣಿಗೆಯೇ ಇವುಗಳ ಅವಿನಾಶಿ ಗುಣಕ್ಕೆ ಕಾರಣ ಎನ್ನಲಾಗಿದೆ.
ಅಂಟಾರ್ಕ್ಟಿಕ್ ಸ್ಪಾಂಜ್
ಜೀವಿತಾವಧಿಯಲ್ಲಿ ದಾಖಲೆ ನಿರ್ಮಿಸಿರುವ ಅಂಟಾರ್ಕ್ಟಿಕ್ ಸ್ಪಾಂಜ್, ಆರ್ಕ್ಟಿಕ್ ವಲಯದ ತಣ್ಣಗಿನ ನೀರಿನಲ್ಲಿ ಬದುಕುತ್ತದೆ. ಪ್ರತಿವರ್ಷ ಇದು ೦.೨ಮಿಲಿಮೀಟರ್ ನಷ್ಟು ಬೆಳೆಯುತ್ತದೆ! ಸೂರ್ಯನ ಬೆಳಕು ತಲುಪದ ೨೦೦ ಮೀಟರ್ ಆಳದಲ್ಲಿ ಬದುಕುತ್ತದೆ. ಸುಮಾರು ೫-೧೫ ಸಾವಿರ ವರ್ಷಗಳವರೆಗೆ ಜೀವಿಸಬಲ್ಲದು.
ಕೆಂಪು ಸಮುದ್ರದ ಅರ್ಚಿನ್ (ಮುಳ್ಳು ಹೊಂದಿರುವ ಜೀವಿ)
ಪೆಸಿಫಿಕ್ ಸಮುದ್ರದ ಉತ್ತರ ಅಮೆರಿಕಾದ ಪಶ್ಚಿಮ ಕರಾವಳಿಯಲ್ಲಿ ಕಂಡುಬರುವ ಒಂದು ಜಾತಿಯ ಮುಳ್ಳುಗಿಡ ಅತಿ ಕಿರಿದಾದ ಪ್ರದೇಶದಲ್ಲಿ ಬದುಕುತ್ತದೆ. ಸಮುದ್ರದ ಅಲೆಗಳು ಹೆಚ್ಚು ತಲುಪದ ಆದರೆ, ನೀರಿರುವ ಜಾಗ ಇದಕ್ಕೆ ಬೇಕು. ತನ್ನ ಮುಳ್ಳುಗಳ ಸಹಾಯದಿಂದ ಕೆಲವೊಮ್ಮೆ ಕರಾವಳಿ ತೀರದಲ್ಲಿ ತೆವಳುತ್ತ ಸಾಗುವುದು ಕಂಡುಬರುತ್ತದೆ. ಭೂಮಿಯ ಮೇಲೆ ಹೆಚ್ಚು ಕಾಲ ಬದುಕುವ ಪ್ರಾಣಿಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಇದು ೨೦೦ಕ್ಕೂ ಹೆಚ್ಚು ಕಾಲ ಜೀವಿಸುತ್ತವೆ.
ಜಾಯಿಂಟ್ ಗಾಲಾಪಗೋಸ್ ಆಮೆ
ಬೃಹತ್ ದೇಹಿ ಆಮೆ ಎನಿಸಿಕೊಂಡಿರುವ ಗಾಲಾಪಗೋಸ್ ಆಮೆ ಸರಾಸರಿ ೨೦೦ ವರ್ಷಗಳ ಕಾಲ ಜೀವಿಸುತ್ತದೆ. ಗಾಲಾಪಗೋಸ್ ದ್ವೀಪಗಳಲ್ಲಿ ಕಂಡುಬರುತ್ತದೆ. ಗಂಡು ಗಾಲಾಪಗೋಸ್ ಆಮೆ ಸುಮಾರು ೨೫೦ ಕೆಜಿ ತೂಗುತ್ತದೆ. ೨೦೦೬ರಲ್ಲಿ ಕೋಲ್ಕತದ ಅಲಿಪೋರ್ ಗಾರ್ಡನ್ ನಲ್ಲಿದ್ದ ಒಂದು ಗಾಲಾಪಗೋಸ್ ಆಮೆ ತೀರಿಕೊಂಡಿತ್ತು.
ಲ್ಯಾಮೆಲಿಬ್ರಾಚಿಯಾ
ಇದು ಕೊಳವೆ ಮಾದರಿಯ ಹುಳು. ಎರೆಹುಳುವಿನ ಮಾದರಿಯಂತಹ ಈ ಹುಳು ಸಮುದ್ರತೀರಗಳಲ್ಲಿ ಹೈಡ್ರೋಕಾರ್ಬನ್ ಬಿಡುಗಡೆಯಾಗುವ ಪ್ರದೇಶಗಳ ಸಮೀಪ ವಾಸಿಸುತ್ತದೆ. ಸುಮಾರು ಮೂರು ಮೀಟರ್ ಉದ್ದವಿರುವ ಇದು ೨೫೦ಕ್ಕೂ ಹೆಚ್ಚು ವರ್ಷಗಳ ಕಾಲ ಬದುಕುತ್ತದೆ.
ಕಮಾನಿನಾಕಾರದ ತಲೆಯ ತಿಮಿಂಗಿಲ (ಬೋ ಹೆಡ್ ವೇಲ್)
ಅತಿ ದೀರ್ಘ ಕಾಲ ಬದುಕುವ ಸಸ್ತನಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಜೀವಿ ತಿಮಿಂಗಿಲ. ಅದರಲ್ಲೂ ಕಮಾನಿನಾಕಾರದ ತಲೆಯುಳ್ಳ ತಿಮಿಂಗಿಲಗಳು ೨೦೦ಕ್ಕೂ ಅಧಿಕ ಕಾಲ ಬದುಕುತ್ತವೆ. ಇವುಗಳ ದೇಹದಲ್ಲಿ ಇಆರ್ ಆರ್ ಸಿ೧ ಎನ್ನುವ ವಂಶವಾಹಿಯೊಂದನ್ನು ಗುರುತಿಸಲಾಗಿದೆ. ಇದರ ವಿಶೇಷತೆಯೆಂದರೆ, ಇದು ಹಾನಿಗೊಳಗಾದ ಡಿಎನ್ ಎಗಳನ್ನು ರಿಪೇರಿ ಮಾಡುತ್ತದೆ! ಹೀಗಾಗಿ, ಈ ಸಸ್ತನಿಗೆ ಕ್ಯಾನ್ಸರ್, ನರರೋಗಗಳು, ಹೃದ್ರೋಗ ಹಾಗೂ ಮೆಟಬಾಲಿಕ್ ನಂತಹ ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲ. ಬರೋಬ್ಬರಿ ೬೦ ಅಡಿ ಉದ್ದ ಹೊಂದಿದ್ದು, ೯೦-೦೦ ಟನ್ ತೂಗುತ್ತವೆ.
ಗ್ರೀನ್ ಲ್ಯಾಂಡ್ ಶಾರ್ಕ್
ಪ್ರಪಂಚದ ಬಹುತೇಕ ಶಾರ್ಕ್ ಪ್ರಭೇದಗಳು ಬೆಚ್ಚಗಿನ ನೀರಿನಲ್ಲಿ ವಾಸಿಸಿದರೆ ಇದು ಶೀತ ನೀರಿನಲ್ಲಿ ವಾಸಿಸುತ್ತದೆ. ಆರ್ಕ್ಟಿಕ್ ಸಮುದ್ರ ವಲಯದ ಆಳ ಪ್ರದೇಶದಲ್ಲಿ ಜೀವಿಸುವ ಇದು, ವರ್ಷಕ್ಕೆ ೦.೫ರಿಂದ ೧ ಸೆಂಟಿಮೀಟರ್ ನಷ್ಟು ಬೆಳೆಯುತ್ತದೆ. ೧೦೦-೨೦೦ ವರ್ಷಗಳವರೆಗೆ ಬದುಕುತ್ತದೆ. ಗರಿಷ್ಠ ಸಮಯದವರೆಗೆ ಬದುಕಿದ್ದ ಶಾರ್ಕ್ ಒಂದರ ಜೀವಿತಾವಧಿ ೩೯೨ ವರ್ಷಗಳು. ಇವುಗಳನ್ನು ಕಶೇರುಕ ಪ್ರಾಣಿ ವರ್ಗದಲ್ಲಿ ಅತಿ ದೀರ್ಘಕಾಲ ಬದುಕುವ ಜೀವಿ ಎಂದೇ ಗುರುತಿಸಲಾಗಿದೆ.
ರಫ್ ಯೆ ರಾಕ್ ಫಿಶ್
ಹೆಚ್ಚು ಕಾಲ ಬದುಕುವ ಮೀನುಗಳಲ್ಲಿ ಇವೂ ಒಂದು. ಕನಿಷ್ಠ ೨೦೫ ವರ್ಷಗಳ ಕಾಲ ಬದುಕುತ್ತವೆ. ಪೆಸಿಫಿಕ್ ಸಮುದ್ರದಲ್ಲಿ ಕ್ಯಾಲಿಫೋರ್ನಿಯಾದಿಂದ ಜಪಾನ್ ವರೆಗಿನ ಪ್ರದೇಶದಲ್ಲಿ ಕಂಡುಬರುತ್ತವೆ. ಇವುಗಳ ಉದ್ದ ೩೮ ಇಂಚುಗಳು. ಆದರೆ, ಈ ಮೀನುಗಳ ಪ್ರಭೇದ ಅಳಿವಿನಂಚಿನಲ್ಲಿದೆ.
ತೌತಾರಾ
ಹಲ್ಲಿ ಜಾತಿಗೆ ಸೇರಿದ ಪ್ರಭೇದ ತೌತಾರಾ. ಭೂಮಿಯ ಮೇಲೆ ೨೦ ಕೋಟಿ ವರ್ಷಗಳಿಂದಲೂ ಇರುವುದನ್ನು ಗುರುತಿಸಲಾಗಿದೆ. ಅಷ್ಟು ಪುರಾತನ ಜೀವಿ. ೧೦೦ ವರ್ಷಗಳವರೆಗೆ ಬದುಕುತ್ತವೆ. ನ್ಯೂಝಿಲ್ಯಾಂಡ್ ನ ಸಣ್ಣ ಸಣ್ಣ ದ್ವೀಪಗಳಲ್ಲಿ ಮಾತ್ರ ಕಂಡುಬರುತ್ತವೆ. ದೊಡ್ಡ ಜಾರಿಯ ಇಗುವಾನ ಹಲ್ಲಿಯ ಪ್ರಭೇದಕ್ಕೆ ಹೋಲಿಕೆಯಾಗುತ್ತದೆ. ಸುಮಾರು ೭೬ ಸೆಂಟಿಮೀಟರ್ ನಷ್ಟು ಬೆಳೆಯುತ್ತದೆ.