Saturday, January 23, 2021

ಮಾನವ ಹಕ್ಕುಗಳ ರಕ್ಷಣೆಯಾಗಲಿ

ಇಂದು ವಿಶ್ವ ಮಾನವ ಹಕ್ಕುಗಳ ದಿನ. ಕೋವಿಡ್-19 ಬಳಿಕ ವಿಶ್ವದಲ್ಲಿ ಉಂಟಾಗಿರುವ ಅಸಮಾನತೆಗಳ ನಿವಾರಣೆಗೆ ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎನ್ನುವ ಮಹಾನ್ ಸಂದೇಶವನ್ನು ನೀಡಲಾಗಿದೆ.

♦ ವಿಧಾತ್ರಿ
newsics.com@gmail.com 


 ಭಾ ರತ ವೈವಿಧ್ಯತೆಗಳ ತವರೂರು. ಮನೆಗೊಂದು ಜಾತಿ, ಊರಿಗೊಂದು ಪದ್ಧತಿ. ಹೀಗಾಗಿಯೇ ಇಲ್ಲಿ ಅಸಮಾನತೆಯೂ ಅಪಾರ. ಸಮಾನ ಅವಕಾಶಗಳನ್ನು ಸೃಷ್ಟಿಸಲೆಂದೇ ನಮ್ಮ ಸಂವಿಧಾನ ನಾಗರಿಕರಿಗೆ ಹಕ್ಕುಗಳನ್ನು ನೀಡಿದೆ. ಆದರೂ ಭಾರತದಲ್ಲಿ ಅತಿ ಹೆಚ್ಚು ದಮನಕ್ಕೆ ಒಳಗಾಗುವ ಹಕ್ಕೆಂದರೆ ಸಮಾನತೆಯ ಹಕ್ಕು. ಜಾತಿ-ಪಂಥಗಳ ನಡುವಿನ ಅಸಮಾನತೆ ಊಹಿಸಲಸಾಧ್ಯ. ಕೇವಲ ಭಾರತವೆಂದಲ್ಲ, ವಿಶ್ವದಲ್ಲೇ ಅತಿ ಹೆಚ್ಚು ಉಲ್ಲಂಘನೆಯಾಗುವ ಹಕ್ಕೆಂದರೆ ಸಮಾನತೆಯ ಹಕ್ಕು. ಇಂಥ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಅನ್ಯಾಯವಾಗಬಾರದೆಂಬ ವಿಶಾಲ ಅರ್ಥದಲ್ಲಿ ಬೆಲೆ ಬಂದಿದ್ದೇ ಮಾನವ ಹಕ್ಕುಗಳಿಗೆ.
ಅಂದರೆ, ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಒಂದಿಷ್ಟು ಮೂಲ ಹಕ್ಕುಗಳಿವೆ. ಅವುಗಳಿಗೆ ಯಾವ ವ್ಯವಸ್ಥೆಯೂ ಧಕ್ಕೆ ತರುವಂತಿಲ್ಲ.
ಸಹಜ ಸ್ಥಿತಿಗೆ ಮರಳುವ ಆಶಾವಾದ
ಇಂದು (ಡಿಸೆಂಬರ್ 10) ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ. ಸಾಮಾನ್ಯ ದಿನಗಳಲ್ಲೇ ಮಾನವ ಹಕ್ಕುಗಳ ದಮನವಾಗುತ್ತಿರುತ್ತದೆ ಎಂದಾದರೆ, ಕೋವಿಡ್-19 ಸಾಂಕ್ರಾಮಿಕದಂಥ ಸ್ಥಿತಿಯಲ್ಲಿ ಹಕ್ಕುಗಳನ್ನು ಕೇಳುವವರಾರು? ಈ ಹಿನ್ನೆಲೆಯಲ್ಲಿ ಈ ಬಾರಿಯ ಮಾನವ ಹಕ್ಕುಗಳ ಘೋಷವಾಕ್ಯವನ್ನು ಕೋವಿಡ್-19 ಸನ್ನಿವೇಶಕ್ಕೆ ಜೋಡಿಸಿ ನೀಡಲಾಗಿದೆ. ಅದೆಂದರೆ, “ಉತ್ತಮವಾಗಿ ಸಹಜ ಸ್ಥಿತಿಗೆ ಮರಳಿ: ಮಾನವ ಹಕ್ಕುಗಳ ರಕ್ಷಣೆಗೆ ಬದ್ಧರಾಗಿ’ ಎನ್ನುವ ಮೂಲಕ ವಿಶ್ವಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗೆ ಕಟಿಬದ್ಧವಾಗಿರುವುದನ್ನು ಸೂಚಿಸಿದೆ.
ಕೊರೋನಾ ನಂತರದ ದಿನಗಳಲ್ಲಿ ಮಾನವನ ದುಡಿಯುವ, ಕೆಲಸ ಮಾಡುವ, ಶಿಕ್ಷಣ ಪಡೆಯುವಂಥ ಅನೇಕ ಹಕ್ಕುಗಳ ದಮನ ನಿರಂತರಾಗಿ ನಡೆಯುತ್ತಲೇ ಇದೆ. ಇವುಗಳನ್ನೆಲ್ಲ ಪ್ರಯತ್ನಗಳ ಮೂಲಕವೇ ಮತ್ತೆ ಮರಳಿ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಬಾರಿಯ ಘೋಷವಾಕ್ಯವನ್ನಿರಿಸಲಾಗಿದೆ.
ಮಾನವ ಹಕ್ಕುಗಳೆಂದರೆ…
ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1948ರಲ್ಲಿ ಮಾನವ ಹಕ್ಕುಗಳನ್ನು ಅಳವಡಿಸಿಕೊಂಡ ನೆನಪಿಗಾಗಿ ಪ್ರತಿವರ್ಷ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಮಾನವ ಹಕ್ಕುಗಳೆಂದರೆ ಇನ್ನೇನೂ ಅಲ್ಲ, ಪ್ರತಿಯೊಬ್ಬರ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಇದು ಪ್ರತಿಪಾದಿಸುತ್ತದೆ. ಜೀವಿಸುವ ಹಕ್ಕು, ಸ್ವಾತಂತ್ರ್ಯ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು, ಸಾಮಾಜಿಕ, ಸಾಂಸ್ಕೃತಿಕ, ಆಹಾರ, ಕೆಲಸ, ಶಿಕ್ಷಣ ಹಾಗೂ ಆರ್ಥಿಕ ಹಕ್ಕುಗಳು ಇದರಲ್ಲಿ ಸೇರ್ಪಡೆಯಾಗಿವೆ.
ಮಾನವ ಹಕ್ಕುಗಳಿಗೂ ಸರ್ಕಾರಕ್ಕೂ ಸಂಘರ್ಷ
ಎಂದಿನಿಂದಲೂ ಮಾನವ ಹಕ್ಕುಗಳಿಗೆ ಹಾಗೂ ಸರ್ಕಾರಗಳಿಗೆ ಸಂಘರ್ಷವಿರುವುದನ್ನು ಕಾಣಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಸರ್ಕಾರಗಳು ಇರುವಂತೆಯೇ ದೇಶದ ಅಸ್ಮಿತೆ, ಪರಂಪರೆ, ಸಂಸ್ಕೃತಿಯನ್ನು ಟೀಕಿಸುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೆಂದುಕೊಂಡವರೂ ಇದ್ದಾರೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳೆಂದರೆ, ಒಂದಿಷ್ಟು ಹೋರಾಟಗಾರರು ನೆನಪಾಗುತ್ತಾರೆಯೇ ವಿನಾ ಅದರ ಉನ್ನತ ಮೌಲ್ಯಗಳ ನೆನಪಾಗುವುದು ಕಡಿಮೆಯಾಗಿದೆ.
ವಿವಿಧ ದೇಶಗಳಲ್ಲಿ ಧರ್ಮಾಧಾರಿತ ಮಾನವ ಹಕ್ಕುಗಳ ದಮನವೂ ವ್ಯಾಪಕವಾಗಿದೆ. ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಈ ಬಗ್ಗೆ ಆಗಾಗ ಚರ್ಚೆಗಳಾಗುತ್ತಲೇ ಇರುವುದನ್ನು ಕಾಣಬಹುದು. ಬಡ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳಿಗೆ ಅಪಾಯ ಹೆಚ್ಚು. ಏನೇ ಆಗಲಿ, ಮಾನವ ಹಕ್ಕುಗಳ ಮೌಲ್ಯಗಳಿಗೆ ಎಲ್ಲರೂ ಗೌರವ ನೀಡಬೇಕಾದ ಅಗತ್ಯ ಎಂದಿಗಿಂತ ಇಂದು ಹೆಚ್ಚಾಗಿದೆ. ಮಾನವರು ಪರಸ್ಪರ ಹಕ್ಕುಗಳ ರಕ್ಷಣೆಗೆ ಬದ್ಧರಾಗಿದ್ದರೆ ಭೂಮಿಯಲ್ಲಿ ಎಲ್ಲರೂ ಸುರಕ್ಷಿತ.

ಮತ್ತಷ್ಟು ಸುದ್ದಿಗಳು

Latest News

ಪ್ರತಿಭಟನಾ ನಿರತ ರೈತರ ಹತ್ಯೆಗೆ ಸಂಚು: ಆರೋಪಿ ಬಂಧನ

Newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತಪಾತ ಹರಿಸಲು ಸಂಚು ಹೂಡಿದ್ದ ಆರೋಪಿಯನ್ನು ರೈತರು...

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು ಈ ಹತ್ಯೆ ಮಾಡಲಾಗಿದೆ. ಮೃತಪಟ್ಟ ಬಾಲಕಿಯನ್ನು  ಅಂಶು...

ಲಂಡನ್ ನಲ್ಲಿ ಆಶ್ರಯ ಕೋರಿ ವಿಜಯ ಮಲ್ಯ ಅರ್ಜಿ

Newsics.com ಲಂಡನ್: ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿರುವ ದಿವಾಳಿ ಉದ್ಯಮಿ ವಿಜಯ ಮಲ್ಯ ಆಶ್ರಯ ಕೋರಿ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಲ್ಯ ಪರ ವಕೀಲ ಫಿಲಿಪ್ ಮೈಕಲ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಭಾರತದ ಬ್ಯಾಂಕ್...
- Advertisement -
error: Content is protected !!