ಇಂದು ರಾಷ್ಟ್ರೀಯ ವಿಜ್ಞಾನ ದಿನ. ಈ ಬಾರಿಯ ಘೋಷವಾಕ್ಯವೇ ವಿಜ್ಞಾನ ಆಸಕ್ತರಿಗೆ ಮೈನವಿರೇಳಿಸುವಂತಿದೆ. ಅಪರಿಮಿತ ಸಾಧ್ಯತೆಗಳ ವಿಜ್ಞಾನದ ಭವಿಷ್ಯ ಹೇಗಿರಬಲ್ಲದು ಎಂದು ಊಹಿಸುವ ಅವಕಾಶ ನೀಡಿದೆ.
ಇಂದು ರಾಷ್ಟ್ರೀಯ ವಿಜ್ಞಾನ ದಿನ
newsics.com Features Desk
ವಿ ಜ್ಞಾನ ಕ್ಷೇತ್ರಕ್ಕೆ ಹೊಸ ದಿಕ್ಕು ಲಭ್ಯವಾದ ದಿನ ಫೆಬ್ರವರಿ 28. 1928ರ ಫೆಬ್ರವರಿ 28ರಂದು ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಸರ್ ಸಿ.ವಿ.ರಾಮನ್ ಅವರು ತಮ್ಮ “ರಾಮನ್ ಪರಿಣಾಮ’ವನ್ನು ಜಗತ್ತಿಗೆ ಸಾರಿದ್ದರು. ಆ ದಿನದ ಸ್ಮರಣೆಗಾಗಿ ಪ್ರತಿ ವರ್ಷ ಇಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ.
ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕು ಹಾಯಿಸಿದರೆ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳಿರುತ್ತವೆ. ಹೀಗೆ ಚೆದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದೆಯಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರ ಮೂಲಕ್ಕಿಂತ ಬದಲಾಗಿರುತ್ತದೆ. ಈ ಚೆದುರುವಿಕೆಯನ್ನೇ ರಾಮನ್ ಗುರುತಿಸಿದ್ದರು. ಇದಕ್ಕೆ ಕಾರಣ ಏನೆಂದು ಮಂಡಿಸಿರುವ ಸಿದ್ಧಾಂತವನ್ನೇ ‘ರಾಮನ್ ಪರಿಣಾಮ’ವೆಂದು ಕರೆಯಲಾಗಿದೆ. ಈ ಸಿದ್ಧಾಂತದ ಆಧಾರದ ಮೇಲೆ ಅದೆಷ್ಟೋ ಅಸಂಖ್ಯಾತ ವೈಜ್ಞಾನಿಕ ಬೆಳವಣಿಗೆಗಳು ನಡೆದವು. ಸಾವಿರಾರು ರಾಸಾಯನಿಕ ಸಂಯುಕ್ತಗಳ ಅಧ್ಯಯನ ಕಾರ್ಯ ನಿರಂತರವಾಗಿ ನಡೆಯಿತು, ಇಂದಿಗೂ ನಡೆಯುತ್ತಿದೆ. ವಿಜ್ಞಾನದ ಭವಿಷ್ಯ…!
ಪ್ರತಿಬಾರಿಯ ವಿಜ್ಞಾನ ದಿನವನ್ನು ಒಂದೊಂದು ಘೋಷವಾಕ್ಯದಡಿ ಆಚರಿಸಲಾಗುತ್ತದೆ. ಈ ಬಾರಿಯ ಥೀಮ್ “ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರದ ಭವಿಷ್ಯ: ಶಿಕ್ಷಣ, ಕೌಶಲ ಮತ್ತು ಕಾರ್ಯದ ಮೇಲೆ ಇವುಗಳ ಪ್ರಭಾವ’ ಎನ್ನುವುದಾಗಿದೆ. ಇದಂತೂ ಊಹಿಸಲೂ ಅಸಾಧ್ಯವಾದ ವಿಷಯವೆಂದರೆ ತಪ್ಪಿಲ್ಲ. ಏಕೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆವಿಷ್ಕಾರಗಳ ಭವಿಷ್ಯವನ್ನು “ಹೀಗೆ’ ಎಂದು ಊಹಿಸಲು ಸಾಧ್ಯವೇ? ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ವೈಜ್ಞಾನಿಕ ಆವಿಷ್ಕಾರಗಳಿಂದ ಮನುಷ್ಯ ಬದುಕುವ ರೀತಿ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈಗಾಗಲೇ ಸಾಕಷ್ಟು ಬದಲಾವಣೆಯಾಗಿದೆ. ಮುಂದೇನಾಗುತ್ತದೆಯೋ ಬಲ್ಲವರಾರು? ಹೀಗಾಗಿ, ಈ ದಿಸೆಯಲ್ಲಿ ಸಾಧ್ಯತೆಗಳೂ ಅಪಾರ. ಕಲ್ಪನಾಶಕ್ತಿಗೆ ಮಿತಿಯಿಲ್ಲದೆ ಯೋಚಿಸುವ ಅವಕಾಶ ಈ ಕ್ಷೇತ್ರದಲ್ಲಿದೆ.
ಸಮಸ್ಯೆಗಳಿಗೆ ಪರಿಹಾರ ಬೇಕಾಗಿದೆ
ವಿಜ್ಞಾನ, ತಂತ್ರಜ್ಞಾನಗಳಲ್ಲಿ ಮಾನವ ಮಾಡಿಕೊಂಡ ಅವಾಂತರಗಳೂ ಸಾಕಷ್ಟಿವೆ. ಆದರೆ, ಅವುಗಳಿಗೆ ಪರಿಹಾರವನ್ನೂ ಅಲ್ಲೇ ಹುಡುಕಬೇಕಾಗಿದೆ. ಹೀಗಾಗಿ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಯುವ ವಿಜ್ಞಾನಿಗಳು, ಉತ್ಸಾಹಿಗಳಿಗೆ ಆಗಾಗ “ಆಧುನಿಕ ಜಗತ್ತಿನ ಸಮಸ್ಯೆಗಳಿಗೆ ವಿಜ್ಞಾನ, ತಂತ್ರಜ್ಞಾನಗಳ ಮೂಲಕ ಪರಿಹಾರ ಕಂಡುಹಿಡಿಯಲು ಮುಂದೆ ಬನ್ನಿ, ವೈಜ್ಞಾನಿಕ ಆವಿಷ್ಕಾರಗಳಿಗೆ ಮುಂದಾಗಿ’ ಎಂದು ಹೇಳುತ್ತಲೇ ಇರುತ್ತಾರೆ. ಇದು ಸತ್ಯವೂ ಹೌದು. ಇಂದು, ಸಾಕಷ್ಟು ಯುವ ವಿಜ್ಞಾನಿಗಳು ಪರಿಸರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಇವುಗಳನ್ನು ಸರ್ಕಾರಗಳು ಮನಸ್ಸು ಮಾಡಿ ದೊಡ್ಡ ಮಟ್ಟದಲ್ಲಿ ಕಾರ್ಯಗತಗೊಳಿಸಬೇಕಷ್ಟೆ.
ಜಗತ್ತಿನ ಪ್ರಗತಿಗೆ ವಿಜ್ಞಾನ ಬೇಕು, ಹಾಗೆಯೇ ಮಾನವ ಮೂಲಭೂತವಾಗಿ ಪ್ರಕೃತಿಯಿಂದ ದೂರವಾಗಿ ಬದುಕಲು ಸಾಧ್ಯವಿಲ್ಲ. ಇವೆರಡರ ಸಮತೋಲನವೇ ಇಂದಿನ ನಿಜವಾದ ಸವಾಲು. ಆದರೆ, ಇದನ್ನೂ ಸಹ, ವೈಜ್ಞಾನಿಕ ದೃಷ್ಟಿಕೋನದೊಂದಿಗೆ, ವಿಜ್ಞಾನದ ಸರಿಯಾದ ಅಳವಡಿಕೆಯಿಂದ ಸಾಧ್ಯವಿದೆ. ಹೀಗಾಗಿಯೇ ಅಪರಿಮಿತ ಸಾಧ್ಯತೆಗಳ ಕ್ಷೇತ್ರ ವಿಜ್ಞಾನವಲ್ಲದೆ ಬೇರೇನೂ ಅಲ್ಲ.