Saturday, January 23, 2021

ಪತ್ನಿಯ ವೃತ್ತಿಗಾಗಿ ಸಿಇಒ ಪತಿ ನಿವೃತ್ತಿ!

ಪತ್ನಿ ಎಷ್ಟೇ ಓದಿದ್ದರೂ ಆಕೆಯ ವೃತ್ತಿ ಬದುಕಿನ ಬಗ್ಗೆ ಯೋಚಿಸುವ ಪುರುಷರು ಕಡಿಮೆ. ಆದರೆ, ಜರ್ಮನಿ ಮೂಲದ ಕಂಪನಿಯೊಂದರ ಸಿಇಒ ಆಗಿರುವ ರುಬಿನ್ ವಿಭಿನ್ನ. ನ್ಯಾಯಾಧೀಶೆ ಪತ್ನಿಯ ವೃತ್ತಿ ಬದುಕಿಗಾಗಿ ಮನೆಯಲ್ಲಿರಲು ನಿರ್ಧರಿಸಿದ್ದಾರೆ.

   ರೌಂಡ್ ಟೇಬಲ್   

♦ ವಿಧಾತ್ರಿ
newsics.com@gmail.com


“ಉ ದ್ಯೋಗವೇ ಪುರುಷ ಲಕ್ಷಣ’ ಎಂಬುದನ್ನು ಭಾರತೀಯ ಪುರುಷರು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ! ಅವರ ದೃಷ್ಟಿಯಲ್ಲಿ ಉದ್ಯೋಗವೆಂದರೆ, ಮನೆಯ ಜವಾಬ್ದಾರಿಯಲ್ಲ. ಬಾಹ್ಯ ಪ್ರಪಂಚದ ಕೆಲಸಗಳು ಮಾತ್ರ ಅವರಿಗೆ ಪುರುಷ ಮಾಡುವ ಕೆಲಸದಂತೆ ಕಾಣುತ್ತದೆ. ಅಲ್ಲದೆ, ಭಾರತೀಯ ಪುರುಷರು ಸಾಮಾನ್ಯವಾಗಿ ಯಾವುದೇ ಕಾರಣಕ್ಕೂ ತಮಗಿಂತ ಹೆಚ್ಚು ಓದಿರುವ ಮಹಿಳೆಯರನ್ನು ಮದುವೆಯಾಗುವುದಿಲ್ಲ. ಒಂದೊಮ್ಮೆ ಪತಿಗಿಂತ ಪತ್ನಿ ಹೆಚ್ಚು ಓದಿದವಳಾಗಿದ್ದು, ಆತನಿಗಿಂತ ಆರ್ಥಿಕವಾಗಿ ದುಡಿಯುವ ಸಾಮರ್ಥ್ಯ ಹೊಂದಿದ್ದರೂ ‘ಅಗತ್ಯ’ವಿಲ್ಲದಿದ್ದರೆ ಆಕೆ ಮನೆಯಿಂದ ಹೊರಗೆ ದುಡಿಯಲು ಹೋಗುವಂತಿಲ್ಲ. (ಅಗತ್ಯವೆಂದರೆ, ಪತಿಯ ಹಣಕಾಸು ಅಗತ್ಯ).
ಮನೆಯಲ್ಲಿ ಜನರಿದ್ದು, ಮಕ್ಕಳನ್ನು ಹೊರಗಿನ ಡೇ ಕೇರ್ ಮತ್ತಿತರ ಕಡೆ ಬಿಡುವ ಅನಿವಾರ್ಯತೆ ಇಲ್ಲದಿದ್ದರೂ, ಮಕ್ಕಳ ಲಾಲನೆ-ಪಾಲನೆಗೆ ಅಜ್ಜ-ಅಜ್ಜಿಯರಿದ್ದರೂ ಪತ್ನಿಯ ವೃತ್ತಿ ಬದುಕಿನ ಕುರಿತು ಕಾಳಜಿ ವಹಿಸುವ ಪುರುಷರು ಅತಿ ಕಡಿಮೆ ಎಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಸ್ವಲ್ಪ ಬದಲಾಗುತ್ತಿದೆ ಎನ್ನುವುದು ಸಮಾಧಾನಕರ.
ಭಾರತೀಯ ಸಾಂಪ್ರದಾಯಿಕ ಮನಸ್ಥಿತಿಗೆ ಅಚ್ಚರಿಯಾಗುವಂತೆ ಜರ್ಮನಿಯಲ್ಲೊಬ್ಬ ಸಿಇಒ ಕಂಡುಬರುತ್ತಾರೆ. ಝಲ್ಯಾಂಡೊ ಎಸ್ಇ ಎನ್ನುವ ಆನ್ ಲೈನ್ ಫ್ಯಾಷನ್ ರಿಟೇಲ್ ಕಂಪೆನಿಯ ಸಿಇಒ ಆಗಿರುವ 38 ವರ್ಷದ ರುಬಿನ್ ರಿಟ್ಟರ್ ಪತ್ನಿಯ ವೃತ್ತಿಗಾಗಿ ತಾನು ಕೆಲಸದಿಂದ ನಿವೃತ್ತಿಯಾಗಲು ಹೊರಟಿದ್ದಾರೆ.
825 ಕೋಟಿ ರೂ. ತ್ಯಾಗ..!
ಇದಕ್ಕಾಗಿ ಅವರು ತ್ಯಾಗ ಮಾಡಲು ಹೊರಟಿರುವುದು ಸಣ್ಣ ಪುಟ್ಟ ಹಣವಲ್ಲ. ಬರೋಬ್ಬರಿ 112 ಮಿಲಿಯನ್ ಡಾಲರ್ (ಸುಮಾರು 825 ಕೋಟಿ ರೂ.) ಹಣವನ್ನು ಹೆಂಡತಿಗಾಗಿ ಬಿಡಲು ಸಿದ್ಧರಾಗಿದ್ದಾರೆ. ಹೆಂಡತಿಯನ್ನು ವೃತ್ತಿಗೆ ಕಳುಹಿಸಿ ಎಲ್ಲ ವ್ಯವಹಾರಗಳನ್ನೂ ಬಿಟ್ಟು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸಿದ್ಧರಾಗಿದ್ದಾರೆ.
ನ್ಯಾಯಾಧೀಶೆ ಪತ್ನಿಗಾಗಿ…
ಅಂದ ಹಾಗೆ, ಅವರ ಪತ್ನಿ ನ್ಯಾಯಾಧೀಶೆಯಾಗಿದ್ದು, ಮನೆ, ಮಕ್ಕಳಿಗಾಗಿ ತಮ್ಮ ವೃತ್ತಿಯಿಂದ ದೂರವಿದ್ದರು. ‘ಇಷ್ಟು ವರ್ಷಗಳ ಕಾಲ ಮಕ್ಕಳನ್ನು ಪತ್ನಿ ನೋಡಿಕೊಂಡಳು. ಇನ್ನು ಮುಂದೆ ನನ್ನ ಬೆಳೆಯುತ್ತಿರುವ ಕುಟುಂಬದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುವೆ’ ಎಂದು ರುಬಿನ್ ಹೇಳುವುದನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಸದ್ಯದಲ್ಲೇ ಅವರು ಎರಡನೇ ಮಗುವಿಗೆ ತಂದೆಯಾಗಲಿದ್ದಾರೆ. ಮಗು ಜನಿಸಿದ ಬಳಿಕ ಪತ್ನಿಯನ್ನು ವೃತ್ತಿಗೆ ಕಳುಹಿಸಿ ತಾವು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
‘ಮುಂದಿನ ವರ್ಷಗಳಲ್ಲಿ ನನ್ನ ಪತ್ನಿಯ ವೃತ್ತಿಗೆ ಸಂಬಂಧಿಸಿದ ಮಹತ್ವಾಕಾಂಕ್ಷೆಗಳನ್ನು ಪೂರೈಸಬೇಕಿದೆ. ಈ ಬಗ್ಗೆ ನಾವಿಬ್ಬರೂ ಒಮ್ಮತಕ್ಕೆ ಬಂದಿದ್ದೇವೆ’ ಎಂದು ಅವರು ತಮ್ಮ ಸಂಸ್ಥೆಗೆ ಪತ್ರ ಬರೆದಿರುವುದು ಇತ್ತೀಚೆಗೆ ವೈರಲ್ ಆಗಿದೆ.
ವಿವಾದದಲ್ಲಿದ್ದ ಝಲ್ಯಾಂಡೊ…
ಝಲ್ಯಾಂಡೊ ಕಂಪನಿಯ ಹೆಚ್ಚಿನ ಗ್ರಾಹಕರು ಮಹಿಳೆಯರೇ ಆಗಿರುವುದು ವಿಶೇಷ. ಇದು ಲಿಂಗ ಸಮಾನತೆಯ ವಿಚಾರದಲ್ಲಿ ಕಳೆದ ವರ್ಷ ಚರ್ಚೆಯಲ್ಲಿತ್ತು. ಕಾರ್ಯನಿರ್ವಹಣಾ ಮಂಡಳಿಯಲ್ಲಿ ಮಹಿಳಾ ನಿರ್ದೇಶಕರನ್ನು ಹೊಂದಿರದ ಬಗ್ಗೆ ವಿವಾದ ಸೃಷ್ಟಿಸಿತ್ತು. ಇದೀಗ, ಇದರ ಸಿಇಒ ತನ್ನ ಪತ್ನಿಗಾಗಿ ಕೆಲಸ ಬಿಡುವ ನಿರ್ಧಾರ ಮಾಡಿರುವುದು ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ.
ಜರ್ಮನಿಯಲ್ಲೂ ಸಹ ಉನ್ನತ ಹುದ್ದೆಗಳಲ್ಲಿರುವ ಪುರುಷರು ತಮ್ಮ ಪತ್ನಿಗಾಗಿ ಹುದ್ದೆ ತೊರೆದ ಉದಾಹರಣೆಗಳು ಅತಿ ಕಡಿಮೆಯಂತೆ. ರುಬಿನ್ ಅವರು 11 ವರ್ಷಗಳ ಹಿಂದೆ ಈ ಕಂಪನಿ ಸೇರಿದ್ದರು. ಇಂದು ಇದು ಅಪಾರ ಖ್ಯಾತಿ ಪಡೆದಿದೆ.

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!