Monday, March 1, 2021

ಶುದ್ಧ ನೀರಿಗೂ ಜೌಗು ಪ್ರದೇಶಕ್ಕೂ ಗಾಢ ನಂಟು

ಇಂದು (ಫೆ.2) ವಿಶ್ವ ಜೌಗು ದಿನ. ಜೌಗು ಪ್ರದೇಶಗಳ ಮಹತ್ವ, ಅವುಗಳ ಮೌಲ್ಯದ ಕುರಿತು ಜನಜಾಗೃತಿ ಮೂಡಿಸಲೆಂದು ಪ್ರತಿವರ್ಷ ಜೌಗು ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಶುದ್ಧ ನೀರಿಗೂ, ಜೌಗು ಪ್ರದೇಶಕ್ಕೂ ಇರುವ ಅವಿನಾಭಾವ ಸಂಬಂಧದ ಕುರಿತು ಗಮನ ಸೆಳೆಯಲಾಗುತ್ತಿದೆ.

      ಇಂದು ವಿಶ್ವ ಜೌಗು ದಿನ      

♦ ಸುಮನಾ
newsics.com@gmail.com


 ಕೃ ಷಿಗೂ ಯೋಗ್ಯವಲ್ಲದ, ವಸತಿ ನಿರ್ಮಾಣಕ್ಕೂ ಬಾರದ ಜೌಗು ಪ್ರದೇಶದ ಬಗ್ಗೆ ಜನಮಾನಸದಲ್ಲಿ ಸಾಕಷ್ಟು ನಿರ್ಲಕ್ಷ್ಯವಿದೆ. ಇದರ ಪರಿಣಾಮವಾಗಿಯೇ ಜೌಗು ಪ್ರದೇಶಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಚಿಕ್ಕದಾಗಲಿ, ದೊಡ್ಡದಾಗಲಿ, ಎಲ್ಲಾದರೂ ಜೌಗು ಪ್ರದೇಶಗಳಿದ್ದರೆ ಅವು ಪ್ರಕೃತಿಯ ಸಮತೋಲನಕ್ಕೆ, ನೀರಿನ ಸ್ವಚ್ಛತೆಗೆ ಅತ್ಯಂತ ಪೂರಕ. ಜೌಗು ಪ್ರದೇಶಗಳು ಫಿಲ್ಟರ್’ನಂತೆ ಕಾರ್ಯನಿರ್ವಹಿಸುತ್ತವೆ. ಜೌಗು ಪ್ರದೇಶಗಳ ರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸಲೆಂದು ಪ್ರತಿವರ್ಷ ಫೆಬ್ರವರಿ 2ರಂದು ವಿಶ್ವ ಜೌಗು ದಿನ ಅಥವಾ ವಿಶ್ವ ತೇವ ಭೂ ದಿನವನ್ನು ಆಚರಿಸಲಾಗುತ್ತದೆ.
ವರ್ಷದಿಂದ ವರ್ಷಕ್ಕೆ ಹವಾಮಾನದ ವೈಪರೀತ್ಯಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇಡೀ ಜಗತ್ತಿನಲ್ಲಿಂದು ನೀರಿನ ಸಮಸ್ಯೆ ಜ್ವಲಂತವಾಗಿದೆ. ಮುಂದೊಂದು ಮಹಾಯುದ್ಧ ನಡೆದರೆ ನೀರಿಗಾಗಿ ನಡೆಯುತ್ತದೆಯಂತೆ. ಇದ್ದರೂ ಇರಬಹುದು, ಅಷ್ಟರಮಟ್ಟಿಗೆ ನೀರಿನ ತತ್ವಾರ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವ ಜೌಗು ದಿನದ ಥೀಮ್ ಅನ್ನು ‘ಜೌಗು ಪ್ರದೇಶ ಮತ್ತು ಜಲ’ ಎಂದು ಇರಿಸಲಾಗಿದೆ.
ಶುದ್ಧ ಜಲವೂ ಜೌಗು ಪ್ರದೇಶವೂ…
ಶುದ್ಧ ಜಲದ ಮೂಲವಾಗಿರುವ ಜೌಗು ಪ್ರದೇಶಗಳ ನಾಶವನ್ನು ತಡೆಗಟ್ಟುವುದು ಹಾಗೂ ಈಗಾಗಲೇ ಬತ್ತಿ ಹೋಗಿರುವ ಜೌಗು ಪ್ರದೇಶಗಳನ್ನು ಯಥಾಸ್ಥಿತಿಗೆ ಮರಳುವಂತೆ ಮಾಡಬೇಕೆನ್ನುವುದು ಈ ಬಾರಿಯ ಸಂದೇಶವಾಗಿದೆ. ಶುದ್ಧ ನೀರಿನ ಅಭಾವಕ್ಕೆ ಜೌಗು ಪ್ರದೇಶಗಳು ದಿನದಿಂದ ದಿನಕ್ಕೆ ನಾಶವಾಗುತ್ತಿರುವುದು ಪ್ರಮುಖ ಕಾರಣ. ನಮಗೆ ಶುದ್ಧ ನೀರು ಬೇಕು, ಆದರೆ, ಅದರ ಸಂರಕ್ಷಣೆ ಮಾಡುವ ಜೌಗು ಪ್ರದೇಶಗಳನ್ನು ಮಾತ್ರ ನಾಶ ಮಾಡುತ್ತಿದ್ದೇವೆ. ಇದು ಸಲ್ಲದು. ನೀರು ಮತ್ತು ಜೌಗು ಪ್ರದೇಶಗಳು ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಜೀವಿಗಳಿಗಾಗಿ ಮಾತ್ರವಲ್ಲ, ಭೂ ಗ್ರಹದ ರಕ್ಷಣೆಗಾಗಿ ಜೌಗು ಪ್ರದೇಶಗಳನ್ನು ರಕ್ಷಿಸಬೇಕಿದೆ. ಹೀಗಾಗಿ, ಜೌಗು ಪ್ರದೇಶಗಳು ಹಾಗೂ ಶುದ್ಧ ಜಲಕ್ಕಿರುವ ಸಂಬಂಧದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಬಾರಿ ವಿಶ್ವ ಜೌಗು ದಿನವನ್ನು ಆಚರಿಸಲಾಗುತ್ತಿದೆ.
ಇರಾನ್ ದೇಶದ ಕ್ಯಾಸ್ಪಿಯನ್ ಸಮುದ್ರ ತೀರದ ಜೌಗು ಪ್ರದೇಶವಾಗಿರುವ ರಾಮ್ಸಾರ್’ನಲ್ಲಿ 1971ರ ಫೆಬ್ರವರಿ 2ರಂದು ಸಭೆ ನಡೆಯಿತು. ಸಭೆಯಲ್ಲಿ ಜೌಗು ಪ್ರದೇಶಗಳ ರಕ್ಷಣೆಗಾಗಿ ಅನೇಕ ರಾಷ್ಟ್ರಗಳು ಒಡಂಬಡಿಕೆ ಮಾಡಿಕೊಂಡವು. ಬಳಿಕ, ಜೌಗು ಪ್ರದೇಶಗಳ ಪ್ರಾಮುಖ್ಯತೆ ಮತ್ತು ಮೌಲ್ಯದ ಬಗ್ಗೆ ಅರಿವು ಮೂಡಿಸಲು 1997ರಿಂದ ಜೌಗು ದಿನವನ್ನು ಆಚರಿಸಲಾಗುತ್ತಿದೆ. ಜೌಗು ಪ್ರದೇಶಗಳನ್ನು ರಾಮ್ಸಾರ್ ಸೈಟ್ ಎಂದೇ ಗುರುತಿಸಲಾಗುತ್ತಿದೆ.
ಅಂದ ಹಾಗೆ, ಜೌಗು ಪ್ರದೇಶಗಳು ಯಾವುವು? ಯಾವುದೇ ರೀತಿಯಲ್ಲಿ ತೇವವಾಗಿರುವ ಭೂಮಿ. ಅದು ಕೆರೆ, ಸರೋವರದ ಪಕ್ಕದ ಭೂಮಿಯಾಗಿರಬಹುದು. ನದಿ ಮುಖಜ ಭೂಮಿಯಾಗಿರಬಹುದು, ಅಳಿವೆಗಳು, ತೇವಯುಕ್ತ ಹುಲ್ಲುಗಾವಲು, ಕೆಸರು ಗದ್ದೆಗಳು, ಭತ್ತ ಬೆಳೆಯುವ ಪ್ರದೇಶ, ಮ್ಯಾಂಗ್ರೂವ್’ನಂಥ ಕಾಡು…ಇವೆಲ್ಲವೂ ಜೌಗು ಪ್ರದೇಶಗಳು.
ಏನು ಪ್ರಯೋಜನ?
• ಜಲದ ಸಂಗ್ರಹ ಹಾಗೂ ಶುದ್ಧೀಕರಣ: ಜೌಗು ಪ್ರದೇಶಗಳು ನೈಸರ್ಗಿಕ ಫಿಲ್ಟರ್ ಗಳು. ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡಿ ಶುದ್ಧ ಜಲವನ್ನು ಬಿಡುಗಡೆ ಮಾಡುತ್ತವೆ. ನೀರಿನ ಗುಣಮಟ್ಟ ಹಾಗೂ ಪ್ರಮಾಣ ಹೆಚ್ಚಿಸಲು ಜೌಗು ಪ್ರದೇಶಗಳು ಅತ್ಯಗತ್ಯ.
• ಜೌಗು ಪ್ರದೇಶಗಳಿಂದ ಜೀವಿಗಳಿಗೆ ಆಹಾರ ಲಭಿಸುತ್ತದೆ. ಭತ್ತದ ಗದ್ದೆಗಳಿಂದ ವಾರ್ಷಿಕ 350 ಕೋಟಿ ಜನ ಆಹಾರ ಪಡೆಯುತ್ತಾರೆ. ಒಳನಾಡು ಮೀನುಗಾರಿಕೆಯಿಂದ ವಾರ್ಷಿಕ ಸುಮಾರು 12 ಮಿಲಿಯನ್ ಟನ್ ಮೀನು ದೊರೆಯುತ್ತದೆ.
• ಜಾಗತಿಕ ಆರ್ಥಿಕತೆಗೂ ಇವು ಪೂರಕ. ವಿಶಿಷ್ಟ ಜೀವವೈವಿಧ್ಯ ಹೊಂದಿರುತ್ತವೆ. ವರ್ಷಕ್ಕೆ ಸುಮಾರು 47 ಲಕ್ಷ ಕೋಟಿ ಡಾಲರ್ ಮೌಲ್ಯದ ಸೇವೆ ಪಡೆಯುತ್ತೇವೆ. ಜಗತ್ತಿನಲ್ಲಿ ನೂರು ಕೋಟಿ ಜನ ಆದಾಯಕ್ಕಾಗಿ ಜೌಗು ಪ್ರದೇಶಗಳನ್ನೇ ಅವಲಂಬಿಸಿದ್ದಾರೆ.
• ವಿಶ್ವದ ಶೇ.40ರಷ್ಟು ಜೀವಪ್ರಭೇದ ಜೌಗು ಪ್ರದೇಶಗಳಲ್ಲಿ ವಾಸಿಸುತ್ತದೆ. ಸಿಹಿನೀರಿನ ಜೌಗು ಪ್ರದೇಶಗಳಲ್ಲಿ ಪ್ರತಿವರ್ಷ 200 ಹೊಸ ಜಾತಿಯ ಮೀನುಗಳು ಪತ್ತೆಯಾಗುತ್ತವೆ ಎನ್ನುವುದು ಅಚ್ಚರಿದಾಯಕ. ಶೇ.25ರಷ್ಟು ಜಲಜೀವಿಗಳಿಗೆ ಹವಳದ ಬಂಡೆಗಳು ಆವಾಸಸ್ಥಾನ.
• ಜೌಗು ಪ್ರದೇಶಗಳು ಪ್ರವಾಹವನ್ನು ತಡೆಯುತ್ತವೆ. ಒಂದು ಎಕರೆ ಜೌಗು ಪ್ರದೇಶ ಸುಮಾರು 1.5 ಮಿಲಿಯನ್ ಗ್ಯಾಲನ್ ಪ್ರವಾಹದ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು.
• ಹವಾಮಾನ ನಿಯಂತ್ರಣಕ್ಕೆ ಜೌಗು ಪ್ರದೇಶ ಅತ್ಯಗತ್ಯ. ಕಾರ್ಬನ್ ಹೀರಿಕೊಂಡು ವಾತಾವರಣವನ್ನು ಶುದ್ಧೀಕರಿಸುತ್ತವೆ.
ತರಿ ಭೂಮಿ
ಜೌಗು ಪ್ರದೇಶಗಳನ್ನು ತರಿ ಭೂಮಿ, ಪೀಟ್ ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಇವು ಇಂಗಾಲವನ್ನು ಹೀರಿಕೊಳ್ಳುವ ಸ್ಪಾಂಜ್ ನಂತೆ ಕೆಲಸ ಮಾಡುತ್ತವೆ. ರಾಮ್ಸಾರ್ ಕನ್ವೆನ್ಷನ್ ಪ್ರಕಾರ, ವಿಶ್ವದ ಎಲ್ಲ ಅರಣ್ಯಗಳು ಹೀರಿಕೊಳ್ಳುವ ಎರಡು ಪಟ್ಟು ಇಂಗಾಲವನ್ನು ಜಗತ್ತಿನಲ್ಲಿರುವ ಜೌಗು ಪ್ರದೇಶಗಳು ಹೀರಿಕೊಳ್ಳುತ್ತವೆ.
ಭಾರತದ ಪ್ರಮುಖ ಜೌಗು ಪ್ರದೇಶಗಳು
• ಸುಂದರ್ ಬನ್ಸ್: ಪಶ್ಚಿಮ ಬಂಗಾಳ, ವಿಸ್ತೀರ್ಣ 4230 ಚದರ ಕಿಲೋಮೀಟರ್
• ವೆಂಬನಾಡ್ ಕೋಲ್: ಕೇರಳ, 1512 ಚದರ ಕಿಲೋಮೀಟರ್
• ಚಿಲ್ಕ ಸರೋವರ: ಒಡಿಶಾ, 1165 ಚದರ ಕಿಲೋಮೀಟರ್
ವಿಶ್ವದ ಬೃಹತ್ ಜೌಗು ಪ್ರದೇಶ
ದಕ್ಷಿಣ ಅಮೆರಿಕದಲ್ಲಿರುವ ಪೆಂತನಾಲ್ ವಿಶ್ವದ ಅತಿದೊಡ್ಡ ಜೌಗು ಪ್ರದೇಶವೆಂದು ಗುರುತಿಸಿಕೊಂಡಿದೆ. ಇದರ ವಿಸ್ತೀರ್ಣ 42 ಮಿಲಿಯನ್ ಎಕರೆ! ಇಂಗ್ಲೆಂಡ್ ಗಿಂತ ದೊಡ್ಡದಾಗಿರುವ ಇದು ಬೊಲಿವಿಯಾ, ಬ್ರೆಜಿಲ್, ಪೆರಗ್ವೆಗಳಲ್ಲಿ ಹರಡಿಕೊಂಡಿದೆ.

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!