ಧಾರ್ಮಿಕ, ಸಂಪ್ರದಾಯದ ಹೆಸರಿನಲ್ಲಿ ವಿಶ್ವದ ವಿವಿಧೆಡೆ ಚಾಲ್ತಿಯಲ್ಲಿರುವ ಅನಿಷ್ಟ ಪದ್ಧತಿ ಎಂದರೆ ಯೋನಿಛೇಧನ. ಭಾರತದಲ್ಲೂ ಹಲವು ಗುಂಪುಗಳಲ್ಲಿ ಈ ಪದ್ಧತಿ ಇದೆ ಎನ್ನಲಾಗುತ್ತದೆ. ಇಂದು (ಫೆ.6) ಈ ಅನಿಷ್ಟ ಪದ್ಧತಿಯ ವಿರುದ್ಧ ಶೂನ್ಯ ಸಹನೆ ದಿನವನ್ನು ಆಚರಿಸಲಾಗುತ್ತಿದೆ.
♦ ಇಂದು ಸ್ತ್ರೀ ಸುನ್ನತಿ ವಿರುದ್ಧ ಶೂನ್ಯ ಸಹನೆ ದಿನ
ವಿಧಾತ್ರಿ
newsics.com@gmail.com
ವಾ ರಿಸ್ ಡೆರಿ….ಕಪ್ಪು ಸುಂದರಿ, ಖ್ಯಾತ ಮಾಡೆಲ್. ಸೋಮಾಲಿಯಾದ ವಾರಿಸ್ ತನ್ನ ಆತ್ಮಕತೆ “ಡೆಸರ್ಟ್ ಫ್ಲಾವರ್’ ಪ್ರಕಟಿಸಿದಾಗ ವಿಶ್ವವೇ ಬೆಚ್ಚಿಬಿತ್ತು. ಏಕೆಂದರೆ, ಆಕೆ ಅತ್ಯಂತ ವಿಕೃತ ಪದ್ಧತಿಯಾದ ಯೋನಿಛೇದನ ಅಥವಾ ಸ್ತ್ರೀ ಸುನ್ನತಿಗೆ ಒಳಗಾದವಳಾಗಿದ್ದಳು. ಆಕೆಯ ಆತ್ಮಕತೆ ಸೋಮಾಲಿಯಾದಂಥ ಕಡು ಬಡ ರಾಷ್ಟ್ರದಲ್ಲಿ ಧರ್ಮದ ಹೆಸರಿನಲ್ಲಿ ಜಾರಿಯಲ್ಲಿರುವ ವಿಕೃತ ಪದ್ಧತಿಯನ್ನು ಜಗತ್ತಿಗೆ ಪರಿಚಯಿಸಿತು. ಹಾಗೆಂದು ಈ ಪದ್ಧತಿಯ ಬಗ್ಗೆ ಜಗತ್ತಿಗೆ ಮೊದಲು ತಿಳಿದೇ ಇರಲಿಲ್ಲ ಎಂದೇನೂ ಇಲ್ಲ. ಆದರೆ, ಜಾಗತಿಕ ಮಟ್ಟದಲ್ಲಿ ದೊಡ್ಡದೊಂದು ದನಿ ಆಗ ಕೇಳಿಬಂತು. ಆಕೆ ಈ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿದ್ದಾಳೆ.
ಧಾರ್ಮಿಕ, ಸಾಂಸ್ಕೃತಿಕ, ಸಂಪ್ರದಾಯ, ಪಾರಂಪರಿಕ ನಂಬಿಕೆಗಳನ್ನು ಬೆನ್ನೆಲುಬಾಗಿಸಿಕೊಂಡು ವಿಶ್ವಾದ್ಯಂತ ಬಹಳಷ್ಟು ವಿಕೃತ ಆಚರಣೆಗಳು ಚಾಲ್ತಿಯಲ್ಲಿವೆ. ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡುವ ಯೋನಿಛೇಧನದಂಥ ಕೆಲವು ಪದ್ಧತಿಗಳು ಮಾನವೀಯತೆಯನ್ನು ಬೆಚ್ಚಿ ಬೀಳಿಸುತ್ತವೆ. ಆಫ್ರಿಕಾದ ಮುಸ್ಲಿಂ ದೇಶಗಳಲ್ಲಂತೂ ಹೆಣ್ಣುಮಕ್ಕಳ ಮೇಲೆ ಹಲವಾರು ರೀತಿಯ ದೌರ್ಜನ್ಯಗಳು ಸಂಸ್ಕೃತಿಯ ಹೆಸರಿನಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಇಲ್ಲಿಯೂ ಬೊಹ್ರಾ ಮುಸ್ಲಿಂ ಸಮುದಾಯದಲ್ಲಿ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಸುನ್ನತಿ ಮಾಡುವ ಸಂಪ್ರದಾಯವಿದೆ.
ಸ್ತ್ರೀ ಸುನ್ನತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಫೆಬ್ರವರಿ 6ರಂದು “ಸ್ತ್ರೀ ಸುನ್ನತಿ ವಿರುದ್ಧ ಶೂನ್ಯ ಸಹನೆ ದಿನ’ವನ್ನು ಆಚರಿಸಲಾಗುತ್ತದೆ. “ಜಾಗತಿಕ ನಿಷ್ಕ್ರಿಯತೆಗೆ ಸಮಯವಿಲ್ಲ. ಸ್ತ್ರೀ ಸುನ್ನತಿ ಕೊನೆಗಾಣಿಸಲು ಒಂದಾಗಿ, ಕ್ರಿಯಾಶೀಲರಾಗಿ’ ಎನ್ನುವ ಘೋಷವಾಕ್ಯದಡಿ 2021ರ ದಿನವನ್ನು ಆಚರಿಸಲಾಗುತ್ತಿದೆ.
ಅಧಿಕೃತ ನಿಷೇಧ ಹೇರಬೇಕಿದೆ
ಭಾರತದಲ್ಲಿ ಸ್ತ್ರೀ ಸುನ್ನತಿಗೆ ಅಧಿಕೃತವಾದ ನಿಷೇಧವಿಲ್ಲ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2017ರ ಮೇ ತಿಂಗಳಲ್ಲಿ ಸ್ವಯಂಪ್ರೇರಿತವಾಗಿ ಈ ಪದ್ಧತಿಯನ್ನು ಕೈ ಬಿಡದಿದ್ದರೆ ಸರ್ಕಾರವೇ ನಿಷೇಧಿಸುವುದಾಗಿ ಪ್ರಕಟಿಸಿತ್ತು. ಆದರೆ, ಇದನ್ನು ಅನುಸರಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಅಧಿಕೃತವಾಗಿ ನಿಷೇಧ ಮಾಡಬೇಕಿದೆ. ಧರ್ಮದ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಅಂತ್ಯ ಹಾಡಬೇಕಿದೆ.
20 ಕೋಟಿ ಮಹಿಳೆಯರು!
ವಿಶ್ವಾದ್ಯಂತ ಯೋನಿಛೇದನ ಅನಿಷ್ಟ ಪದ್ಧತಿಗೆ ಒಳಗಾಗಿರುವ ಸರಿಸುಮಾರು 20 ಕೋಟಿಗೂ ಅಧಿಕ ಮಹಿಳೆಯರಿದ್ದಾರೆ ಎಂದು ಹೇಳಲಾಗಿದೆ. ಆಫ್ರಿಕಾ ಹಾಗೂ ಮಧ್ಯ ಪ್ರಾಚ್ಯ, ಏಷ್ಯಾ ರಾಷ್ಟ್ರಗಳಲ್ಲಿ ಇದು ಅಧಿಕ ಪ್ರಮಾಣದಲ್ಲಿದೆ. ಹೆಣ್ಣುಮಕ್ಕಳಿಗೆ ಸುಮಾರು 15 ವರ್ಷವಾದಾಗ ಅಥವಾ ಅದಕ್ಕೂ ಮುನ್ನ ಅವರ ಯೋನಿಯ ಕ್ಲಿಟೋರಿಸ್ ಭಾಗವನ್ನು ಕತ್ತರಿಸಿ, ಮೂತ್ರಕ್ಕೆಂದು ರಂಧ್ರವನ್ನು ಮಾತ್ರ ಬಿಟ್ಟು ಉಳಿದೆಲ್ಲವನ್ನೂ ಸೇರಿಸಿ ಹೊಲಿಗೆ ಹಾಕಲಾಗುತ್ತದೆ. ಎಷ್ಟೋ ಹೆಣ್ಣುಮಕ್ಕಳು ಈ ಪ್ರಕ್ರಿಯೆಯಿಂದಾಗಿ ಜೀವ ಕಳೆದುಕೊಳ್ಳುತ್ತಾರೆ. ಕಳೆದ ವರ್ಷ ಈಜಿಪ್ಟ್ ನಲ್ಲಿ ಹತ್ತು ವರ್ಷದ ಬಾಲೆಯೊಬ್ಬಳು ಇದರಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ಆಫ್ರಿಕಾದ ಮುಸ್ಲಿಂ ಬುಡಕಟ್ಟು ಜನಾಂಗದಲ್ಲಿ ಈ ಪದ್ಧತಿಯ ಕುರಿತು ಎಷ್ಟು ಬಲವಾದ ನಂಬಿಕೆ ಬೆಳೆದುಬಂದಿದೆ ಎಂದರೆ, ಇದಕ್ಕೆ ಒಳಗಾಗದ ಹೆಣ್ಣುಮಕ್ಕಳಿಗೆ ಮದುವೆಯೇ ಆಗುವುದಿಲ್ಲ.