ಇಂದು (ಮಾರ್ಚ್ 3) ವಿಶ್ವ ವನ್ಯಜೀವಿ ದಿನ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಹಾಗೂ ಸಸ್ಯವರ್ಗದ ಸಂರಕ್ಷಣೆಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಇಂದು ವಿಶ್ವ ವನ್ಯಜೀವಿ ದಿನ
♦ ಪ್ರಮಥ
newsics.com@gmail.com
ಮ ನುಷ್ಯ ತಮ್ಮ ಬಯಕೆ, ಆಸೆ, ದುರಾಸೆಗಳನ್ನು ಪೋಷಿಸಲು ವನ್ಯಜೀವಿಗಳ ಮೇಲೆ ದೌರ್ಜನ್ಯ ನಡೆಸುವ ಅಭ್ಯಾಸವನ್ನು ಯಾವತ್ತೂ ಹೊಂದಿದ್ದಾನೆ. ಪರಿಣಾಮವಾಗಿ, ಆಧುನಿಕ ಜಗತ್ತಿನಲ್ಲೂ ವನ್ಯಜೀವಿಗಳ ಅಕ್ರಮ ಮಾರಾಟ ವ್ಯಾಪಕವಾಗಿ ನಡೆಯುತ್ತಲೇ ಇದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೂ ಆತ ಬಿಡಲೊಲ್ಲ. ಆ ಪ್ರಾಣಿವರ್ಗ ನಶಿಸಿ ಹೋದರೂ ಸರಿ, ತಾನಿರುವಷ್ಟು ದಿನ ಅದು ಅವನಿಗೆ ಬೇಕು.
ಪ್ರಾಣಿಗಳ ಚರ್ಮ, ಕೊಂಬು, ಉಗುರು, ದಂತ, ಔಷಧ ತಯಾರಿಕೆ, ನಂಬಿಕೆ ಮುಂತಾದ ಹಲವು ಕಾರಣಗಳಿಂದ ಜಾಗತಿಕ ಮಟ್ಟದಲ್ಲಿ ವನ್ಯಜೀವಿಗಳ ಅಕ್ರಮ ಮಾರಾಟ ನಡೆಯುತ್ತದೆ. ಲಕ್ಷಾಂತರ ಕೋಟಿ ಡಾಲರ್ ವಹಿವಾಟಿನ ಅಕ್ರಮ ವ್ಯಾಪಾರಕ್ಕಾಗಿ ವನ್ಯಜೀವಿ, ಪಕ್ಷಿಗಳು ಹಾಗೂ ಹಲವಾರು ಬಗೆಯ ಸಸ್ಯಗಳನ್ನು ಅಕ್ರಮವಾಗಿ ಬೆಳೆಸಲಾಗುತ್ತದೆ. ಅತಿ ಹೆಚ್ಚು ಕಳ್ಳಸಾಗಣೆಯಾಗುವ ಪ್ಯಾಂಗೋಲಿನ್
ಪ್ರತಿವರ್ಷ ಜಗತ್ತಿನಲ್ಲಿ ಮಿಲಿಯನ್’ಗಟ್ಟಲೆ ಆಮೆ, ಮೊಸಳೆ, ಹಾವು ಮತ್ತು ಇತರ ಸರೀಸೃಪಗಳು, ಪ್ಯಾಂಗೋಲಿನ್’ನಂಥ ಸಸ್ತನಿಗಳು ಮತ್ತು ಕೆಲವು ಜಾತಿಯ ಕೀಟಗಳನ್ನು ವ್ಯಾಪಕವಾಗಿ ಅಕ್ರಮ ವ್ಯಾಪಾರ ಮಾಡಲಾಗುತ್ತದೆ ಎಂದರೆ ಅಚ್ಚರಿಯಾಗಬಹುದು. ಪ್ಯಾಂಗೋಲಿನ್ ಅಂತೂ ಅತಿ ಹೆಚ್ಚು ದೌರ್ಜನ್ಯಕ್ಕೆ, ಅಕ್ರಮ ಸಾಗಣೆಗೆ ಒಳಗಾದ ಸಸ್ತನಿ ವರ್ಗ ಎಂದು ಅಧ್ಯಯನಗಳು ಹೇಳುತ್ತವೆ. 2014ಕ್ಕಿಂತ ಮುಂಚಿನ ಹತ್ತು ವರ್ಷಗಳಲ್ಲಿ ಸುಮಾರು ಹತ್ತು ಲಕ್ಷಕ್ಕಿಂತ ಹೆಚ್ಚು ಪ್ಯಾಂಗೋಲಿನ್ ಗಳ ಅಕ್ರಮ ಸಾಗಣೆ ನಡೆದಿದೆ. ಪ್ರಕೃತಿ ಸಂರಕ್ಷಣೆಗಾಗಿನ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಕಾರ, ವನ್ಯಜೀವಿಗಳ ಅಕ್ರಮ ಸಾಗಣೆಯ ಶೇ.20ರಷ್ಟು ಭಾಗ ಇಂದಿಗೂ ಪ್ಯಾಂಗೋಲಿನ್’ಗಳೇ ಆಗಿವೆ.
ಪಕ್ಷಿಗಳನ್ನು ಸಹ ವ್ಯಾಪಕವಾಗಿ ಅಕ್ರಮ ಸಾಗಣೆ ಮಾಡಲಾಗುತ್ತದೆ. ಅಮೆರಿಕದಲ್ಲಿ ಪಕ್ಷಿಗಳ ಅಕ್ರಮ ವಹಿವಾಟು ಅತ್ಯಂತ ಹೆಚ್ಚು. ಅಲ್ಲಿ ಪ್ರತಿ ವರ್ಷ 20-50 ಲಕ್ಷ ಹಕ್ಕಿಗಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಹಮ್ಮಿಂಗ್ ಬರ್ಡ್’ಗಳಿಂದ ಹಿಡಿದು ಪಾರಿವಾಳ, ಹದ್ದುಗಳ ಕಳ್ಳಸಾಗಣೆ ಅತಿ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತದೆ.
ವನ್ಯಜೀವಿ ಉಳಿವಿಗೆ ಒಪ್ಪಂದ
ವನ್ಯಜೀವಿಗಳ ಅದರಲ್ಲೂ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಕಳ್ಳಸಾಗಣೆಗೆ ನಿಯಂತ್ರಣ ಹೇರಬೇಕೆಂದು 1975ರಲ್ಲಿಯೇ “ಅಳಿವಿನಂಚಿನಲ್ಲಿರುವ ಪ್ರಾಣಿವರ್ಗ ಮತ್ತು ಸಸ್ಯವರ್ಗದ ಅಂತಾರಾಷ್ಟ್ರೀಯ ವ್ಯಾಪಾರ’ ಒಪ್ಪಂದವನ್ನು ಜಾರಿಗೊಳಿಸಲಾಗಿದ್ದು, ನೂರಾರು ದೇಶಗಳು ಈ ಒಪ್ಪಂದವನ್ನು ಅನುಸರಿಸುತ್ತಿವೆ. ಇದರಡಿ, ಅಳಿವಿನಂಚಿನಲ್ಲಿರುವ ವನ್ಯಜೀವಿ ವರ್ಗವನ್ನು ರಕ್ಷಿಸಲಾಗುತ್ತಿದೆ. 1973ರ ಮಾರ್ಚ್ 3ರಂದು ಇದಕ್ಕೆ ಸಹಿ ಹಾಕಲಾಗಿತ್ತು. ಪರಿಣಾಮವಾಗಿ, 2013ರಿಂದ ಮಾರ್ಚ್ 3ರಂದು “ವಿಶ್ವ ವನ್ಯಜೀವಿ ದಿನ’ ಆಚರಿಸಲಾಗುತ್ತಿದೆ.
ಸಾವಿರಾರು ತಳಿ ಸಂರಕ್ಷಣೆ
ಅಳಿವಿನಂಚಿನಲ್ಲಿರುವ ಪ್ರಾಣಿವರ್ಗ ಮತ್ತು ಸಸ್ಯವರ್ಗದ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದದ ಪ್ರಮುಖ ಉದ್ದೇಶ, ಅಳಿವಿನಂಚಿನಲ್ಲಿರುವ ಪ್ರಾಣಿವರ್ಗದ ವ್ಯಾಪಾರವೆಂದರೆ, ಜೀವಿಗಳ ಅಸ್ತಿತ್ವಕ್ಕೇ ಕುಂದು ತರುವುದಲ್ಲ ಎನ್ನುವುದನ್ನು ಖಾತ್ರಿಗೊಳಿಸುವುದಾಗಿದೆ. ಈ ಒಪ್ಪಂದದಡಿ, 38,700 ಪ್ರಾಣಿ ಹಾಗೂ ಸಸ್ಯ ತಳಿಗಳನ್ನು ರಕ್ಷಿಸಲಾಗಿದೆ. ಇವುಗಳಲ್ಲಿ 5950 ವನ್ಯಜೀವಿ, 32,800 ಸಸ್ಯ ಪ್ರಭೇದಗಳನ್ನು ರಕ್ಷಿಸಲಾಗಿದೆ.