Saturday, January 28, 2023

ಮಕ್ಕಳೇ, ಎಲ್ಲಿಂದ ಬಂತು ಆ ಸಿಟ್ಟು?

Follow Us

ಶಾಲಾ ಕಾಲೇಜಿನ ಕ್ಯಾಂಪಸ್ ಈಗ ಮೊದಲಿನಂತಿಲ್ಲ.‌ ಮೊದಲೆಲ್ಲ ವಿದ್ಯಾರ್ಥಿಗಳಿಗೆ ಹೊಡೆಯಲು, ಬೈಯಲು ಶಿಕ್ಷಕರಿಗೆ ಅಳುಕಿರಲಿಲ್ಲ‌. ಆದರೆ ಈಗ ಹಾಗಲ್ಲ.‌ ಶಾಲಾ ಅಡಳಿತ ಮಂಡಳಿಗಳ ಎಚ್ಚರಿಕೆ, ಪೋಷಕರ ಏಕಪಕ್ಷೀಯ ಧೋರಣೆಯಿಂದ ತಮ್ಮ ತಪ್ಪಿಲ್ಲದಿದ್ದರೂ ಶಿಕ್ಷಕರೇ ಕ್ಷಮೆ ಕೇಳಿ ಸುಮ್ಮನಾಗುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ಶೈಕ್ಷಣಿಕ ಅಂಗಳದಲ್ಲಿ ಏನೇನೋ ಬದಲಾವಣೆಗಳಾಗಿಬಿಟ್ಟಿವೆ.

ಪೃಥ್ವಿ ಬಿ.
ವಿದ್ಯಾರ್ಥಿ ಶಿಕ್ಷಕಿ,
ಸಂತ ಅಲೋಶಿಯಸ್ ಶಿಕ್ಷಕರ ತರಬೇತಿ ಸಂಸ್ಥೆ, ಮಂಗಳೂರು
newsics.com@gmail.com

ಶಿಕ್ಷಣ ವ್ಯವಸ್ಥೆ ಬೆಳೆದು ಬಂದ ಹಾದಿಯನ್ನು ನೋಡಿದರೆ, ಇಪ್ಪತ್ತು ವರ್ಷಗಳ ಹಿಂದೆ ಇದ್ದ ಶಿಕ್ಷಣ ವ್ಯವಸ್ಥೆಗೂ, ಇಂದಿನ ಶಿಕ್ಷಣ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸ ಎದ್ದು ಕಾಣುತ್ತದೆ. ಅಂದಿನ ಶಿಕ್ಷಕರಿಗೂ ಇಂದಿನ ಶಿಕ್ಷಕರಿಗೂ ಸಾಮ್ಯತೆಗಳಿಗಿಂತ ವ್ಯತ್ಯಾಸಗಳೇ ಹೆಚ್ಚು.
ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡದೇ, ಎಲ್ಲರನ್ನೂ ಒಂದೇ ಭಾವದಿಂದ ನೋಡುವುದಾದರೆ, ಹಿಂದೆ ಹೆಚ್ಚಿನ ಶಿಕ್ಷಕರು ಶಿಕ್ಷೆ, ಶಿಕ್ಷಣ ನೀಡುವವರಾದರೆ, ಇಂದಿನವರು ಶಿಕ್ಷಣವನ್ನು ನೀಡಿ, ಶಿಕ್ಷೆಯನ್ನೂ ಪಡೆಯುವಂತಾಗಿದೆ. ಕಳೆದೊಂದು ಎರಡು ಮೂರು ದಶಕಗಳ ಹಿಂದೆ ಚಾಟಿ, ಬೆತ್ತ, ಈ ರೀತಿ ಆಯುಧಗಳಿಲ್ಲದೇ ಯಾರೂ ತರಗತಿಗೆ ಬರುತ್ತಿರಲಿಲ್ಲವೇನೋ… ಗಣಿತದ ಶಿಕ್ಷಕರಲ್ಲಿ ಹೆಚ್ಚಿನವರು ಅವರವರು ನೀಡುತ್ತಿದ್ದ ಶಿಕ್ಷೆಗಳಿಗೇ ಪ್ರಸಿದ್ಧರು.
“ಬೆಂಚಿನ ಮೇಲೆ ನಿಂತುಕೋ”, “ಕ್ಲಾಸಿನಿಂದ ಹೊರಗೆ ನಿಲ್ಲು”, “ಕೈ ತೋರಿಸು”, “ಕುಕ್ಕರುಗಾಲಿನಲ್ಲಿ ಕೂರು”, “ಬಸ್ಕಿ ತೆಗೆ” ಇವೆಲ್ಲಾ ಅಂದಿನ ವಿದ್ಯಾರ್ಥಿಗಳಿಗೆ ಸರ್ವೇ ಸಾಮಾನ್ಯ. ಆದರೆ ಇಂದು ಆ ಶಿಕ್ಷಣ ವ್ಯವಸ್ಥೆ ಅತ್ಯಂತ ವಿಭಿನ್ನ ತಂತ್ರಗಳೊಂದಿಗೆ ವಿದ್ಯಾರ್ಥಿಗಳ ಹಿತವನ್ನು ಗುರಿಯಾಗಿರಿಸಿಕೊಂಡು, ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.
ಅಂದಿನ ಎಷ್ಟೋ ವಿದ್ಯಾರ್ಥಿಗಳು ಶಿಕ್ಷೆಗಳ ಭಯದಿಂದಲೇ, ಮನೆಗೆಲಸವನ್ನೋ, ತರಗತಿ ನೋಟ್ ಪುಸ್ತಕವನ್ನೋ ಪೂರ್ತಿಗೊಳಿಸಿಯೇ ತರಗತಿಯೊಳಗೆ ಬರುತ್ತಿದ್ದರೆಂದು ನನ್ನಮ್ಮ ಹೇಳಿದ್ದು ನೆನಪು. ಹುಡುಗ/ಹುಡುಗಿಯರೆನ್ನದೆ ಶಿಕ್ಷಕರು ಬೀಸುತ್ತಿದ್ದ ಪೆಟ್ಟುಗಳು ಇಂದಿಗೂ ಅವರ ಮನಸ್ಸಿನಲ್ಲಿ ಅಚ್ಚಳಿಯದ ಗುರುತಾಗಿ ಉಳಿದಿದೆ.
ಇಂದಿನ ವಿದ್ಯಾರ್ಥಿಗಳನ್ನೂ, ಶಾಲೆಯ ವಾತಾವರಣವನ್ನೂ, ಶಿಕ್ಷಕರ ಪರಿಸ್ಥಿತಿಯನ್ನೂ ಅವಲೋಕಿಸಿದರೆ ವಿದ್ಯಾರ್ಥಿಗಳೇನೋ ಆನೆ ನಡೆದದ್ದೇ ದಾರಿ ಎಂಬಂತೆ ತಮ್ಮದೇ ಶೈಲಿಯಲ್ಲಿ ಶಾಲೆಯ ಕಟ್ಟಡದೊಳಗಿದ್ದೂ, ಶಿಕ್ಷಕರ ಕೈಗೆ ಸಿಕ್ಕದ ಹಾಗಿದ್ದಾರೆ. ಶಾಲೆಯ ವಾತಾವರಣವನ್ನೂ ನೋಡುವುದಾದರೆ, ಆಡಳಿತ ಮಂಡಳಿ, ಪ್ರಾಂಶುಪಾಲರು ನೂರೊಂದು ಸಾರಿ ಮಕ್ಕಳಿಗೆ ಹೊಡೆಯಬೇಡಿ, ಗದರಬೇಡಿ, ದೊಡ್ಡ ಕಣ್ಣು ಮಾಡಬೇಡಿ, ಹಾಗೆ ಮಾಡಬೇಡಿ, ಹೀಗೆ ಮಾಡಬೇಡಿ ಎಂದು ಶಿಕ್ಷಕರಿಗೆ ಬುದ್ಧಿ ಹೇಳುತ್ತಾರೆ. ಶಿಕ್ಷಕರೋ ನುಂಗಲಾರದ ತುತ್ತಿನಂತೆ ತರಗತಿಯೊಳಗೆ ಗಲಭೆ, ಗದ್ದಲಗಳಾದರೂ ವಿದ್ಯಾರ್ಥಿಗಳ ತಪ್ಪಿದ್ದರೂ ಶಿಕ್ಷೆ ಕೊಡದೇ ಸೌಮ್ಯವಾಗಿ ತಿಳಿಹೇಳಿ ಸೋತುಹೋಗಿದ್ದಾರೆ.
ಇತ್ತೀಚೆಗೆ ನನ್ನ ವಿಜ್ಞಾನ ತರಗತಿಯಲ್ಲಿ ಒಂದು ಹುಡುಗ, ಮುಖ ಕೆಂಪಗೆ ಮಾಡಿಕೊಂಡು ನೆಲನೋಟಕನಾಗಿ ಕುಳಿತಿದ್ದ. ಏನಾಯಿತು ಎಂದು ಹೆಸರು ಕರೆದು ಕೇಳಿದಾಗ ಏನಿಲ್ಲ ಎಂದು ದೃಷ್ಟಿ ಭೂಮಿಗೆ ನೆಟ್ಟು ಹೇಳಿದ. ಬೇರೆಯವರಲ್ಲಿ ವಿಚಾರಿಸಿದಾಗ ಗಣಿತದ ಅವಧಿಯಲ್ಲಿ ಶಿಕ್ಷಕಿ ಅವನಿಗೆ ಬೈದರು ಎಂಬ ವಿಚಾರ ತಿಳಿಯಿತು. ಈ ಸಮಸ್ಯೆ ಇದ್ದದ್ದೇ, ಅವನು ಸ್ವಲ್ಪ ಹೊತ್ತಿನಲ್ಲಿ ಸರಿಯಾಗುತ್ತಾನೆ ಎಂದು ಪಾಠ ಮುಂದುವರಿಸಿದೆ. ಇಡೀ ತರಗತಿಯಲ್ಲಿ ಆ ಹುಡುಗ ಮುಖ ಟೊಮ್ಯಾಟೋ ಹಣ್ಣಿನಂತೆ ಮಾಡಿಕೊಂಡು ಕುಳಿತಿದ್ದು ಬಿಟ್ಟರೆ ಮತ್ತೇನೂ ಇಲ್ಲ.
ನಾನು ಶಿಕ್ಷಕರ ಕೊಠಡಿಗೆ ಬಂದು, ಹೀಗೇ ವಿಚಾರಿಸುವಾಗ, ಗಣಿತ ಶಿಕ್ಷಕಿ ಅವನು ಮಾಡಿದ ತಪ್ಪನ್ನು ಹೇಳಿ, ಅವನ ಪ್ರತಿಕ್ರಿಯೆ ನೋಡಿ, ಚಿಂತೆ ಮಾಡಿಕೊಂಡು ಹೋಗಿ ಅವನ ಬಳಿ ಕ್ಷಮೆ ಕೇಳಿದರು. ವಿದ್ಯಾರ್ಥಿಯ ತಪ್ಪಿದ್ದೂ, ಶಿಕ್ಷಕಿ ಅವನಿಗೆ ಬೈದದ್ದಕ್ಕೆ ಅವರೇ ಹೋಗಿ ಕ್ಷಮೆ ಕೇಳುವ ಕಾಲ ಬಂತೆಂದಾದರೆ, ಹೇಗಾಯ್ತು ಯೋಚಿಸಿ.
ಇನ್ನೊಂದು ತರಗತಿಯಲ್ಲಿ ಎಲ್ಲರಿಗೂ ಉಪದ್ರವ ಕೊಡುತ್ತಿದ್ದ ಒಂದು ಹುಡುಗನನ್ನು ಸ್ವಲ್ಪ ಜೋರಾಗಿ ವಿಚಾರಿಸಿದ್ದಕ್ಕೆ, ಆತ ಡೆಸ್ಕಿನೊಳಗೆ ತಲೆ ತುರುಕಿಸಿ ನೀರಿನ ಬಾಟಲಿಯನ್ನು ಬಡಿಯುತ್ತಾ ಇಡೀ ತರಗತಿಯಲ್ಲಿ ರಂಪಾಟ ಮಾಡಿಬಿಟ್ಟ.
ಈ ಮಕ್ಕಳಲ್ಲಿ ಇಷ್ಟು ಸಿಟ್ಟು ಎಲ್ಲಿಂದ ಎಂಬುದು ನನ್ನ ಪ್ರಶ್ನೆ. ಮಾಡಿದ್ದೆಲ್ಲವೂ ಸರಿ ಎಂಬ ಭಾವನೆ ಅವರಲ್ಲಿದೆ ಎನ್ನುವಾಗ ಶಿಕ್ಷಕರು ಎಷ್ಟು ಹೇಳಿದರೂ ಏನು ಪ್ರಯೋಜನವಿದೆ? ಕೆಲವರಂತೂ ಶಿಕ್ಷಕರಿಗೇ ಎದುರು ಮಾತನಾಡುವಷ್ಟು ಕೋಪಿಷ್ಟರು. ವಿಚಾರಿಸಿ, ವಿಮರ್ಶಿಸಿ ನೋಡಿದಾಗ ಹೆತ್ತವರ, ಪೋಷಕರ ನಿಲುವು, ಮಾತನಾಡುವ ವೈಖರಿ, ಧೋರಣೆಗಳು, ವ್ಯವಹಾರದ ರೀತಿ, ಪರಸ್ಪರ ಗೌರವ ನೀಡುವ ಕ್ರಮ ಇವೆಲ್ಲವೂ ಎಲ್ಲಿಯೋ ಮಕ್ಕಳ ಮೇಲೆ ತೀಕ್ಷ್ಣ ಪರಿಣಾಮವನ್ನು ಬೀರಿದೆ ಎಂಬ ನಿಲುವಿಗೆ ಬರಬಹುದಷ್ಟೇ.
ಹಾಗಾದರೆ ಹೆತ್ತವರಿಗೆ ಮಕ್ಕಳ ವರ್ತನೆಯ ಬಗ್ಗೆ ಅರಿವಿದೆಯೇ? ತರಗತಿಯಲ್ಲಿ ಶಿಕ್ಷಕರೇನು ಮಾಡಿದ್ದಾರೆ ಎನ್ನುವುದನ್ನು ಬಿಟ್ಟು, ನೀನೇನು ಮಾಡಿದೆ ಎಂದು ಕೇಳುವವರಿದ್ದಾರೆಯೇ? ಹೆತ್ತವರ ಜವಾಬ್ದಾರಿ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಮುಗಿಯಿತೇ? ಮಕ್ಕಳ ವರ್ತನೆಯಲ್ಲಿ ಬದಲಾವಣೆ ತರಲು ಶಿಕ್ಷಕರ ಕೈ ಕಟ್ಟಿ ಹಾಕಿದರೆ ಸಾಧ್ಯವುಂಟೇ? ಶಿಕ್ಷೆಯನ್ನೇ ಕೊಡಬೇಕೆಂದಿಲ್ಲ, ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆಯ ಪೆಟ್ಟು ಎಂಬ ಗಾದೆ ಸರಿಯಾಗಿದೆ. ನಾವು ನಮ್ಮ ಮಕ್ಕಳ ಮೇಲೆ ಕೈ ಮಾಡುವಾಗ ಅದು ನಮ್ಮ ಹಕ್ಕೆಂದು ಭಾವಿಸುತ್ತೇವೆ. ಅದೇ ಶಿಕ್ಷಕರು ಸ್ವಲ್ಪ ಗದರಿದರೂ ಅದು ಅಪರಾಧ. ಹೊಡೆದರಂತೂ ಜೈಲೇ ಗತಿ ಎನ್ನುವಷ್ಟು ಹೆದರಿಕೆ. ಅತೀ ಮುದ್ದಿನಿಂದ ಪೆಟ್ಟು ಹಾಕದೇ ಬೆಳೆಸಿದ ಮಕ್ಕಳಂತೂ ಗಾಜಿನಂತೆ ನಾಜೂಕು. ಸ್ವಲ್ಪ ಗದರಿದರೂ ಕಣ್ಣೀರಧಾರೆ.
ಮಕ್ಕಳನ್ನು ಇಷ್ಟು ಸೂಕ್ಷ್ಮ ಮನಸ್ಸಿನವರನ್ನಾಗಿಸಿದರೆ ಅವರಿಗೆ ಅವರ ತಪ್ಪಿನ ಅರಿವಾಗುವುದು ಯಾವಾಗ? ಹೆತ್ತವರೇ ಕೆಂಡಾಮಂಡಲವಾಗಿ ಗದರಾಡುತ್ತಿದ್ದರೆ ಮಕ್ಕಳು ಸೌಮ್ಯ ವ್ಯವಹಾರವನ್ನು ರೂಢಿಸಿಕೊಳ್ಳುವುದು ಹೇಗೆ?
ಈ ಎಲ್ಲಾ ಪ್ರಶ್ನೆಗಳು ಎಲ್ಲಾ ಶಿಕ್ಷಕರ ಮನಸ್ಸಿನಲ್ಲೂ ಇದೆ. ಕೇಳಲಾಗದೇ, ಹೇಳಲಾಗದೇ ತಮ್ಮ ಕೆಲಸವನ್ನಷ್ಟೇ ಮಾಡಿ, ಮನೆಗೆ ಹಿಂತಿರುಗುವ ಶಿಕ್ಷಕರನ್ನು ನೋಡಿದಾಗ “ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ” ಎನ್ನುವ ಮಾತು ನೆನಪಾಗುತ್ತದೆ.
ಶಿಕ್ಷಕ-ಶಿಕ್ಷಕಿಯರು ಎಂದರೆ ಅವರು ಬರೀ ವಿಜ್ಞಾನ, ಗಣಿತ ಮುಂತಾದ ವಿಷಯಗಳಿಗೆ ಮಾತ್ರ ಸೀಮಿತರಲ್ಲ. ಮೌಲ್ಯಗಳು, ವ್ಯವಹರಿಸುವ ರೀತಿ, ಪಶ್ಚಾತ್ತಾಪ ಮನೋಭಾವ, ಕೃತಜ್ಞತಾ ಮನೋಭಾವ, ಪರಸ್ಪರ ಹೊಂದಾಣಿಕೆ ಹೀಗೆ ಲೆಕ್ಕವಿಲ್ಲದಷ್ಟು ವಿಷಯಗಳನ್ನು ಮಕ್ಕಳಿಗೆ ತಿಳಿ ಹೇಳುವುದು ಗಣಿತ, ವಿಜ್ಞಾನಗಿಂತ ಮುಖ್ಯವಾದ ಕೆಲಸವಾಗಿರುತ್ತದೆ.
ಈ ನಿಟ್ಟಿನಲ್ಲಿ ಶಿಕ್ಷಕರನ್ನು ಗೌರವಿಸುವಲ್ಲಿ ಮಕ್ಕಳು ಎಡವುತ್ತಿದ್ದಾರಾದರೆ, ಅವರ ಮನ ಪರಿವರ್ತಿಸುವಲ್ಲಿ ಹೆತ್ತವರು ಶ್ರಮಿಸುತ್ತಾರೆ ಎನ್ನುವ ಆಶಾಭಾವನೆಯೊಂದಿಗೆ…

ಮತ್ತಷ್ಟು ಸುದ್ದಿಗಳು

vertical

Latest News

ನಟ ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್

newsics.com  ವಿಜಯವಾಡ: ತೀವ್ರ ಅಸ್ವಸ್ಥರಾಗಿರುವ ನಟ ನಂದಮೂರಿ ತಾರಕ ರತ್ನ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅವರನ್ನು ದಾಖಲಿಸಲಾಗಿದೆ. ಆಂಧ್ರ...

ಗಣರಾಜ್ಯೋತ್ಸವದಿನದಂದು ಪ್ರಧಾನಿ ಮೋದಿಯ ರಕ್ಷಣೆ ಹೊಣೆ ಹೊತ್ತ ಮಂಗಳೂರಿನ ಐಪಿಎಸ್ ಅಧಿಕಾರಿ

newsics..com  ಮಂಗಳೂರು: ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಹಿಂದೆ ನಿಂತು ಎಲ್ಲವನ್ನು ಹದ್ದು ಕಣ್ಣಿನಿಂದ ವೀಕ್ಷಿಸುತ್ತಿದ್ದ ಪೊಲೀಸ್ ಅಧಿಕಾರಿ ಮೂಲತ: ಮಂಗಳೂರಿನವರು. ಮಾಜಿ ಮೇಯರ್ ಶಂಕರ್ ಭಟ್...

ನನಗೆ ನಿದ್ದೆ ಬರುತ್ತಿದೆ, ದಯವಿಟ್ಟು ರೈಡ್ ಕ್ಯಾನ್ಸಲ್ ಮಾಡಿ ಎಂದ ಉಬರ್ ಚಾಲಕ

newsics.com ಬೆಂಗಳೂರು: ವೆಬ್ ಆಧಾರಿತ ಸೇವೆ ನೀಡುವ ಕಾರು ಚಾಲಕರು ದಿನದ 24 ಗಂಟೆಯೂ ಅಲರ್ಟ್ ಆಗಿರುತ್ತಾರೆ. ಕೆಲವೊಮ್ಮೆ ಇಲ್ಲದ ಕಾರಣ ನೀಡಿ ಅಂತಿಮ ಕ್ಷಣದಲ್ಲಿ ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಇದು...
- Advertisement -
error: Content is protected !!