ಬೆಂಗಳೂರು: ಅನರ್ಹ ಶಾಸಕರ ಕುರಿತ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿರುವ ಮಾಜಿ ವಿಧಾನಸಭಾ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಶಾಸಕರನ್ನು ಅನರ್ಹಗೊಳಿಸಿದ ತೀರ್ಪನ್ನು ನ್ಯಾಯಾಲಯ ಎತ್ತಿಹಿಡಿದಿರುವುದು ನಿರಾಳತೆ ತಂದಿದೆ ಎಂದಿದ್ದಾರೆ.

ಶಾಸಕರನ್ನು ಅನರ್ಹಗೊಳಿಸಿದ ತೀರ್ಪು ಸರಿಯಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟರೂ, ಇನ್ನೊಂದೆಡೆ ಅನರ್ಹತೆಯ ಅವಧಿ ನಿಗದಿಯನ್ನು ತಿರಸ್ಕರಿಸಿದೆ.
ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ನೀಡುವ ಮೂಲಕ ಅವರನ್ನು ಜನತಾ ನ್ಯಾಯಾಲಯದ ಮುಂದೆ ಪರೀಕ್ಷೆ ಎದುರಿಸುವಂತೆ ಸೂಚಿಸಿದೆ. ಜನರು ಏನು ನಿರ್ಧರಿಸುತ್ತಾರೋ ನೋಡೋಣ ಎಂದರು.
ರಾಜೀನಾಮೆ ಹಾಗೂ ಅನರ್ಹತೆಯನ್ನು ಒಂದೆ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ರಾಜೀನಾಮೆ ಒಂದು ಗೌರವಯುತ ಪ್ರಕ್ರಿಯೆ. ಅನರ್ಹತೆ ಒಂದು ಶಿಕ್ಷೆ ಎಂದು ತೀರ್ಪಿನಲ್ಲಿ ಹೇಳಿದ್ದೇನೆ . ಕೆಲವರು ಸಿದ್ಧಾಂತದ ಮೇಲೆ ರಾಜೀನಾಮೆ ಕೊಡುತ್ತಾರೆ. ಇನ್ನು ಕೆಲವರು ಸರ್ಕಾರದ ತೀರ್ಮಾನದ ಮೇಲೆ ರಾಜೀನಾಮೆ ಸಲ್ಲಿಸುತ್ತಾರೆ. ಕೇಂದ್ರ ರೈಲ್ವೇ ಸಚಿವರಾಗಿದ್ದ ಲಾಲ್ ಬಹದ್ದೂರು ಶಾಸ್ತ್ರಿ ಅವರು ರೈಲು ಅಪಘಾತದಲ್ಲಿ ಸಾಮಾನ್ಯ ಪ್ರಜೆಗಳು ಮೃತಪಟ್ಟ ಹಿನ್ನೆಲೆಯಲ್ಲಿ ಅವರು ನೊಂದು ರಾಜೀನಾಮೆ ನೀಡಿದ್ದರು. ಇದು ಗೌರವಯುತ ಪ್ರಕ್ರಿಯೆ. ಆದರೆ ಅನರ್ಹತೆ ಶಿಕ್ಷೆ . ಕಾನೂನು ಮೀರಿದಾಗ ಅನರ್ಹತೆ ಮಾಡಬೇಕಾಗುತ್ತದೆ. ಶಾಸಕರನ್ನು ಅನರ್ಹತೆ ಮಾಡಿ ವಿಧಿಸಿದ ಅವಧಿಯನ್ನು ಕೋರ್ಟ್ ಒಪ್ಪದೆ, ಅದನ್ನು ಜನತಾ ನ್ಯಾಯಾಲಯದ ಮುಂದೆ ಬಿಟ್ಟಿದೆ. ಚುನಾವಣೆಯಲ್ಲಿ ಅದನ್ನು ಮತದಾರರು ನಿರ್ಧರಿಸುತ್ತಾರೆ ಎಂದರು.